ಬೆಂಗಳೂರು; ರಾಜ್ಯದಲ್ಲಿ ಕರೊನಾ ವೈರಾಣು ಸೋಂಕು ಹೊಂದಿರವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸುತ್ತಿಲ್ಲ. ಕರ್ನಾಟಕದಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ 98ಕ್ಕೇರಿದೆಯಲ್ಲದೆ ಸಮುದಾಯಗಳಲ್ಲಿ ವೈರಸ್ ಅತ್ಯಂತ ವೇಗವಾಗಿ ಪ್ರಸರಣವಾಗುತ್ತಿರುವ ಸೂಚನೆಗಳು ಕಂಡು ಬರುತ್ತಿದ್ದರೂ ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಪ್ರಯೋಗಾಲಯಗಳ ಸಂಖ್ಯೆ 7 ರ ಗಡಿ ದಾಟಿಲ್ಲ.
ಪ್ರಕರಣವನ್ನು ನಿಭಾಯಿಸುವಲ್ಲಿ ನೆರೆಯ ರಾಜ್ಯಗಳಿಗಿಂತ ಹಿಂದೆ ಬಿದ್ದಿರುವ ರಾಜ್ಯ ಸರ್ಕಾರ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಆರೋಗ್ಯ ಸುರಕ್ಷಾ ಕವಚ ಸೇರಿದಂತೆ ರಕ್ಷಣಾ ಸಾಧನಗಳನ್ನು ಸಮರ್ಪಕವಾಗಿ ಪೂರೈಕೆ ಮಾಡುವಲ್ಲಿ ನಿರ್ಲಕ್ಷ್ಯವನ್ನು ಮೆರೆದಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಮುಂದಿನ ದಿನಗಳಲ್ಲಿ ಕೋವಿಡ್-19 ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಇಡೀ ದೇಶವನ್ನೇ ಮುನ್ನೆಡೆಸುವುದರಲ್ಲಿ ಯಾವುದೇ ಅನುಮಾನಗಳೂ ಇಲ್ಲ.
ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಳ ಮಾಡುವ ಮಾತು ಒತ್ತಟ್ಟಿಗಿರಲಿ. ಆರೋಗ್ಯ ಕಾರ್ಯಕರ್ತರಿಗೆ ಗುಣಮಟ್ಟದ ಸುರಕ್ಷಾ ಕವಚ, ರಕ್ಷಣಾ ಸಾಧನಗಳನ್ನೂ ಪೂರೈಸಿಲ್ಲ ಎಂದು ಆರೋಗ್ಯ ಕಾರ್ಯಕರ್ತರೊಬ್ಬರು ‘ದಿ ಫೈಲ್’ಗೆ ಮಾಹಿತಿ ನೀಡಿದ್ದಾರೆ.
ಅಲ್ಲದೆ, ಈ ಬಗ್ಗೆ ಬಾಗಲಕೋಟೆಯ ಗ್ರಾಮೀಣ ಪ್ರದೇಶವೊಂದಕ್ಕೆ ತೆರಳಿದ್ದ ಸರ್ಕಾರಿ ವೈದ್ಯಾಧಿಕಾರಿಗಳೊಬ್ಬರು ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಾಧಿಕಾರಿಗಳಿಗೂ ರಕ್ಷಣಾ ಕವಚಗಳನ್ನು ಪೂರೈಸಿಲ್ಲ ಎಂದು ಹೇಳಿರುವ ವಿಡಯೋ ವೈರಲ್ ಆಗಿದೆ. ಇಂತಹ ಪ್ರಕರಣಗಳನ್ನು ರಾಜ್ಯ ಸರ್ಕಾರ ಹೇಗೆ ನಿಭಾಯಿಸುತ್ತಿದೆ ಎಂಬುದಕ್ಕೆ ಈ ಎಲ್ಲವೂ ಪದೇ ಪದೇ ನಿದರ್ಶನವನ್ನು ಒದಗಿಸುತ್ತಿದ್ದರೂ ಇನ್ನೂ ಎಚ್ಚೆತ್ತುಕೊಂಡಿಲ್ಲ.
ಹೆಚ್ಚಿನ ಪ್ರಯೋಗಾಲಯಗಳನ್ನು ಹೊಂದಿರುವ ರಾಜ್ಯಗಳಷ್ಟೇ ಹೆಚ್ಚು ಪರೀಕ್ಷಿಸುತ್ತಿವೆ ಮತ್ತು ಹೆಚ್ಚಿನ ಪ್ರಕರಣಗಳನ್ನು ಪತ್ತೆ ಮಾಡುತ್ತಿವೆ. ಕರ್ನಾಟಕದಲ್ಲಿ ಈವರೆವಿಗೆ ಒಟ್ಟು 1,637 ಮಾದರಿಗಳನ್ನು ಪರೀಕ್ಷಿಸಿದ್ದರೆ, ಕೇರಳದಲ್ಲಿ 4,516, ಮಹಾರಾಷ್ಟ್ರದಲ್ಲಿ 2,144 ಮಾದರಿಗಳನ್ನು ಪರೀಕ್ಷಿಸಿದೆ. ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಪೈಕಿ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಶೇ.37ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಿಸಿರುವುದು ಐಸಿಎಂಆರ್ ಜಾಲತಾಣದಿಂದ ಗೊತ್ತಾಗಿದೆ.
ಇನ್ನು ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳು ಕಡಿಮೆ ಪರೀಕ್ಷೆಗಳನ್ನು ನಡೆಸುತ್ತಿವೆ. ಕರ್ನಾಟಕದಲ್ಲಿ ಪ್ರತಿ ಮಿಲಿಯನ್‌ಗೆ 27 ಮಂದಿಯನ್ನು ಪರೀಕ್ಷಿಸಿರುವುದು ತಿಳಿದು ಬಂದಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಇತ್ತೀಚಿನ ನವೀಕರಣದ ಪ್ರಕಾರ ಮಾರ್ಚ್ 24 ರ ಹೊತ್ತಿಗೆ 21,804 ವ್ಯಕ್ತಿಗಳಿಂದ 22,694 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಸುಮಾರು 41.5% (9,409) ಕಳೆದ ಐದು ದಿನಗಳಲ್ಲಿ (ಮಾರ್ಚ್ 20-24) ನಡೆಸಲಾಗಿದೆ.ದಿನಕ್ಕೆ ಸರಾಸರಿ 1,882 ಸಂಖ್ಯೆಯಲ್ಲಿ ಪರೀಕ್ಷೆಗಳು ನಡೆದಿವೆ.
ಅದೇ ರೀತಿ ಕರ್ನಾಟಕದಲ್ಲಿ ಕೋವಿಡ್ 19 ದೃಢಪಟ್ಟಿರುವ ಒಟ್ಟು ಪ್ರಕರಣಗಳಲ್ಲಿ 20-30 ವಯೋಮಾನದವರ ಸಂಖ್ಯೆ ಅಗ್ರ ಪಂಕ್ತಿಯಲ್ಲಿದೆ. ಈ ವಯೋಮಾನದವರಲ್ಲಿ ಒಟ್ಟು 20 ಪ್ರಕರಣಗಳಿದ್ದರೆ, 5-10 ವರ್ಷದವರಲ್ಲಿ 2, 10-20ರ ವಯೋಮಾನದವರಲ್ಲಿ 4, 30-40 ವಯೋಮಾನದವರ ಪಟ್ಟಿಯಲ್ಲಿ 17 ಪ್ರಕರಣಗಳು, 40-50 ವಯೋಮಾನದವರಲ್ಲಿ 8, 50-60ರವರಲ್ಲಿ 7, 60-70ರಲ್ಲಿ 12 ಮತ್ತು 70ರ ವಯೋಮಾನದವರಲ್ಲಿ 4 ಪ್ರಕರಣಗಳಿರುವುದು ಕರ್ನಾಟಕ ಸರ್ಕಾರದ ಆರೋಗ್ಯ, ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.