ಹೂಡಿಕೆ ಖರೀದಿಯಲ್ಲಿಯೂ ಅಪರಾತಪರಾ; ಅಪೆಕ್ಸ್‌ ಬ್ಯಾಂಕ್‌ಗೆ ಆದ ನಷ್ಟ 33.21 ಕೋಟಿ

ಬೆಂಗಳೂರು; ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿರುವ ವಿಚಾರದಲ್ಲಿ ವಿವಿಧ ಲೋಪಗಳನ್ನು ಎಸಗಿರುವ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನಲ್ಲಿ ಭದ್ರತಾ ಪತ್ರಗಳ ಮಾರಾಟ , ಖರೀದಿ ಸೇರಿದಂತೆ ಇನ್ನಿತರೆ ಹೂಡಿಕೆಗಳ ಖರೀದಿ ವ್ಯವಹಾರದಲ್ಲಿಯೂ ಸಾಕಷ್ಟು ನ್ಯೂನತೆಗಳು ಕಂಡು ಬಂದಿವೆ. 

ಭದ್ರತಾ ಹೂಡಿಕೆಗಳ  ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳಲ್ಲಿ ಅಪೆಕ್ಸ್‌ ಬ್ಯಾಂಕ್‌ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಆಡಳಿತ ಮಂಡಳಿ  ಇತರೆ ನಿರ್ದೇಶಕರು ಖಾಸಗಿ ಏಜೆನ್ಸಿಗಳಿಗೆ ಲಾಭ ಮಾಡಿಕೊಟ್ಟು ಬ್ಯಾಂಕ್‌ಗೆ ಕೋಟ್ಯಂತರ ರು.ಪ್ರಮಾಣದಲ್ಲಿ ನಷ್ಟವನ್ನುಂಟು ಮಾಡಿರುವುದು ಬಯಲಾಗಿದೆ. 

ಹೂಡಿಕೆ ಖರೀದಿಗಳ ವ್ಯವಹಾರಗಳನ್ನು ಪರಿಶೀಲಿಸಿರುವ ಸಹಕಾರ ಸಂಘಗಳ ಜಂಟಿ ನಿಬಂಧಕರ ನೇತೃತ್ವದ ತನಿಖಾ ತಂಡ ಫಿಮ್ಡಾ (FIMDA) ದರ ಮತ್ತು ನೈಜ ಖರೀದಿ ದರದ ಮಧ್ಯೆ ಸಾಕಷ್ಟು ವ್ಯತ್ಯಾಸ ಇರುವುದನ್ನು ಪತ್ತೆ ಹಚ್ಚಿದೆ. ಅಲ್ಲದೆ ಆಡಳಿತ ಮಂಡಳಿಯ ಏಕಪಕ್ಷೀಯ ತೀರ್ಮಾನದಿಂದ ಬ್ಯಾಂಕ್‌ಗೆ 33.21 ಕೋಟಿ ರು.ನಷ್ಟ ಸಂಭವಿಸಿರುವುದು ವರದಿಯಿಂದ ತಿಳಿದು ಬಂದಿದೆ. 

ಬ್ಯಾಂಕಿನ 6 ವರ್ಷ ಅಂದರೆ 2013-14ರಿಂದ 2018-19ನೇ ಸಾಲಿನಲ್ಲಿ ಸೆಕೆಂಡರಿ  ಮಾರ್ಕೆಟ್‌ನಲ್ಲಿ ಆಪ್ಕೋ (AFCO) ಟ್ರೆಂಡ್‌ ವಿತ್‌ ಕನ್ಸಲ್ಟನ್ಸಿ ಲಿಮಿಟೆಡ್‌, ಆರ್‌ ಎಸ್‌  ಕೋ ಆಪರೇಟೀವ್‌ ಬ್ಯಾಂಕ್‌ನ ಹೂಡಿಕೆಗಳನ್ನು ಅಪೆಕ್ಸ್‌ ಬ್ಯಾಂಕ್‌ ಖರೀದಿಸಿತ್ತು. 2013-14ರಲ್ಲಿ ಆರ್‌ ಎಂ ಮಂಜುನಾಥಗೌಡ ಅವರು ಬ್ಯಾಂಕ್‌ನಲ್ಲಿ ಅಧ್ಯಕ್ಷರಾಗಿದ್ದರು. ವಿಶೇಷವೆಂದರೆ ಈ ಪ್ರಕರಣ ನಡೆದ ಅವಧಿಯಲ್ಲಿ ಹಾಲಿ ಉಪ ಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ ಸವದಿ ಅವರು ಸಹಕಾರ ಸಚಿವರು ಮಾತ್ರವಲ್ಲದೆ ಅಪೆಕ್ಸ್‌ ಬ್ಯಾಂಕ್‌ಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 

ಭದ್ರತಾ ಹೂಡಿಕೆಗಳನ್ನು ಸೆಕೆಂಡರಿ ಮಾರ್ಕೆಟ್‌ನಲ್ಲಿ ಖರೀದಿ ಮಾಡುವಾಗ ಬ್ರೋಕರ್‌ಗಳ ಆಯ್ಕೆ  ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ ಎಂಬ ಸಂಗತಿಯನ್ನು ಹೊರಗೆಡವಿರುವ ತನಿಖಾ ತಂಡ ಫಿಮ್ಡಾ ದರಕ್ಕೆ ಸಮೀಪ ಇರುವ ದರವನ್ನು ಪಡೆಯಲು ಬ್ಯಾಂಕ್‌ನಿಂದ ಯಾವ ಪ್ರಯತ್ನವೂ ನಡೆದಿಲ್ಲ ಎಂದು ತನ್ನ ತನಿಖಾ ವರದಿಯಲ್ಲಿ ವಿವರಿಸಿದೆ. 

ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ಆರ್‌ಬಿಐ ಸುತ್ತೋಲೆಗಳ ಉಲ್ಲಂಘನೆ ಮಾಡುವ ಸಂದರ್ಭದಲ್ಲಿ ಅನುಸಮರ್ಥನೆ ಮಾಡುವಾಗ ಅನಿವಾರ್ಯ ಕಾರಣಗಳನ್ನು ಪಟ್ಟಿ ಮಾಡಬೇಕು. ಆದರೆ ಬ್ಯಾಂಕ್‌ನ ಆಡಳಿತ ಮಂಡಳಿ ಅನಿವಾರ್ಯ ಕಾರಣಗಳನ್ನು ಪಟ್ಟಿ ಮಾಡಿಲ್ಲ ಎಂಬ ಅಂಶ ತನಿಖಾ ವರದಿಯಿಂದ ತಿಳಿದು ಬಂದಿದೆ. ಅಲ್ಲದೆ ಭದ್ರತಾ ಹೂಡಿಕೆಗಳ  ಖರೀದಿ ವಿಚಾರದಲ್ಲಿ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ ಎಂಬುದು ದಾಖಲೆಗಳಿಂದ ಗೊತ್ತಾಗಿದೆ. 

2013-14ನೇ ಸಾಲಿನಲ್ಲಿ ಒಟ್ಟು 500.23 ಕೋಟಿ ರು.ಗಳ ಎಸ್‌ಎಲ್‌ಆರ್‌ಗಳನ್ನು 2013ರ ಮೇ, ಜೂನ್‌, ಜುಲೈನಲ್ಲಿ ಖರೀದಿ ಮಾಡಿತ್ತು. ಇದನ್ನು ಸೆಕೆಂಡರಿ ಮಾರ್ಕೆಟ್‌ನಲ್ಲಿ ಆಪ್ಕೋ, ಟ್ರೆಂಡ್‌ ವಿತ್‌ ಕನ್ಸಲ್ಟೆನ್ಸಿ ಲಿಮಿಟೆಡ್‌, ಆರ್‌ ಎಸ್‌ ಕೋ ಆಪರೇಟೀವ್‌ ಬ್ಯಾಂಕ್‌ನಿಂದ ಖರೀದಿಸಿತ್ತು. ಆದರೆ ಇದು ಫಿಮ್ಡಾ ದರ ಮತ್ತು ನೈಜ ಖರೀದಿ ದರಕ್ಕೂ ಕ್ರಮವಾಗಿ ಶೇ.2.39, ಶೇ.2.70, ಶೇ.2.55, ಶೇ.3.78, ಶೇ.3.63ರಷ್ಟು ವ್ಯತ್ಯಾಸವಿತ್ತು ಎಂದು ತನಿಖಾ ತಂಡ ಬಯಲು ಮಾಡಿದೆ. 

2015-16ನೇ ಸಾಲಿನಲ್ಲಿ ಒಟ್ಟು 104.98 ಕೋಟಿ ರು.ಗಳ  ಎಸ್‌ಎಲ್‌ಆರ್‌ನ್ನು ನಾನ್‌ ಎಸ್‌ಎಲ್‌ಆರ್‌ ಅಡಿ 212.88 ಕೋಟಿ  ರು.ಗಳನ್ನು  ಟ್ರೆಂಡ್‌  ವಿತ್‌ ಕನ್ಸಲ್ಟೆನ್ಸಿ ಮೂಲಕ ಖರೀದಿಸಿತ್ತು. ಇವೆರಡನ್ನೂ ಸೆಕೆಂಡರಿ ಮಾರ್ಕೆಟ್‌ನಲ್ಲಿ ಖರೀದಿ ಮಾಡಿತ್ತಲ್ಲದೆ, ಫಿಮ್ಡಾ ದರಕ್ಕೂ ನೈಜ ಖರೀದಿ ದರಕ್ಕೂ ವ್ಯತ್ಯಾಸವಿದ್ದರಿಂದಾಗಿ ಬ್ಯಾಂಕ್‌ಗೆ 1.36 ಕೋಟಿ ರು.ನಷ್ಟ  ಸಂಭವಿಸಿದೆ ಎಂಬುದು ವರದಿಯಿಂದ ತಿಳಿದು ಬಂದಿದೆ. 

2016-17ನೇ ಸಾಲಿನಲ್ಲಿ ಎಸ್‌ಎಲ್‌ಆರ್‌ ಅಡಿಯಲ್ಲಿ ಒಟ್ಟು 851.82 ಕೋಟಿ ರು.ವ್ಯವಹಾರ ಮಾಡಿದ್ದ ಬ್ಯಾಂಕ್‌, ಈ ಪೈಕಿ 12 ಪ್ರಕರಣಗಳಲ್ಲಿ ಪ್ರೈಮರಿ ಖರೀದಿದಾರರಿಂದ  ಖರೀದಿಸಿತ್ತು. ಕೇವಲ 2 ಪ್ರಕರಣಗಳಲ್ಲಿ ಮಾತ್ರ ಸೆಕೆಂಡರಿ ಖರೀದಿದಾರರಿಂದ  ಒಟ್ಟು 105.24 ಕೋಟಿ  ರು.ಮೊತ್ತದಲ್ಲಿ ಜೆಎಂ ಗ್ಲೋಬಲ್‌ ಈಕ್ವಿಟಿ ಪ್ರೈವೈಟ್‌ ಲಿಮಿಟೆಡ್‌ನಿಂದ 2016ರ ಮೇ ಮತ್ತು ಜುಲೈನಲ್ಲಿ ಖರೀದಿಸಿತ್ತು. ಇಲ್ಲಿಯೂ ಫಿಮ್ಡಾ ದರಕ್ಕೂ ನೈಜ ಖರೀದಿ ದರಕ್ಕೂ ಶೇಕಡವಾರು ವ್ಯತ್ಯಾಸವಿತ್ತು. ಇದರಿಂದ ಬ್ಯಾಂಕ್‌ಗೆ 19.91 ಕೋಟಿ ರು.ನಷ್ಟವಾಗಿರುವುದು ವರದಿಯಿಂದ ಗೊತ್ತಾಗಿದೆ. 

2017-18ನೇ ಸಾಲಿನಲ್ಲಿ ಒಟ್ಟು 1,088.42 ಕೋಟಿ ರು.ಗಳ ಎಸ್‌ಎಲ್‌ಆರ್‌ ಅಡಿ 8 ಪ್ರತ್ಯೇಕವಾಗಿ ಖರೀದಿ ಮಾಡಿತ್ತು. ಈ ಪೈಕಿ 418.80 ಕೋಟಿ ಗಳನ್ನು 2 ಪ್ರಕರಣಗಳಲ್ಲಿ ಸೆಕೆಂಡರಿ ಮಾರುಕಟ್ಟೆಯಲ್ಲಿ  ಆಫ್ಕೋ ಇನ್ವೆಸ್ಟ್‌ಮೆಂಟ್ಸ್‌ ಸರ್ವಿಸ್‌ ಲಿಮಿಟೆಡ್‌ನಿಂದ  2017ರ ಏಪ್ರಿಲ್‌ 3ರಂದು ಖರೀದಿಸಿದ್ದ ಬ್ಯಾಂಕ್‌, ಟ್ರೆಂಡ್‌ ವಿತ್‌ ಕನ್ಸಲ್ಟೆನ್ಸಿಯಿಂದಲೂ 2017ರ ಮೇ  19ರಂದು ಖರೀದಿಸಿತ್ತು. ಇಲ್ಲಿಯೂ ಯಥಾ ಪ್ರಕಾರ ಫಿಮ್ಡಾ ದರಕ್ಕೂ ನೈಜ ಖರೀದಿ ದರಕ್ಕೂ ವ್ಯತ್ಯಾಸವಿದೆ. ಇದೇ  ಸಾಲಿನಲ್ಲಿ 400 ಕೋಟಿ  ಎಸ್‌ಎಲ್‌ಆರ್‌ಹೂಡಿಕೆಯಲ್ಲಿ ಬ್ಯಾಂಕ್‌ಗೆ 11.94 ಕೋಟಿ  ರು.ನಷ್ಟ ಸಂಭವಿಸಿದೆ. 

2018-19ನೇ ಸಾಲಿನಲ್ಲಿ ಒಟ್ಟು 194.36 ಕೋಟಿಗಳ ನಾನ್‌ ಎಸ್‌ಎಲ್‌ಆರ್‌ಗಳನ್ನು ಸೆಕೆಂಡರಿ ಮಾರುಕಟ್ಟೆಯಿಂದ ಟ್ರೆಂಡ್‌ ವಿತ್‌ ಕನ್ಸಲ್ಟೆನ್ಸಿ ಲಿಮಿಟೆಡ್‌ನಿಂದ 2018ರ  ಜುಲೈ 6ರಂದು ಖರೀದಿ ಮಾಡಿತ್ತು. ಇದೇ ಸಾಲಿನಲ್ಲಿ 200 ಕೋಟಿ ನಾನ್‌ ಎಸ್‌ಎಲ್‌ಆರ್‌ ಹೂಡಿಕೆಯಲ್ಲಿ ಬ್ಯಾಂಕ್‌ಗೆ 7.61 ಕೋಟಿ ರು.ನಷ್ಟವಾಗಿದೆ. 

‘2015-16 ಮತ್ತು 2018-19ನೇ ಸಾಲಿನಲ್ಲಿ ಸೆಕೆಂಡರಿ ಮಾರುಕಟ್ಟೆಯಲ್ಲಿ ಖರೀದಿ ಮಾಡಿದ ಒಟ್ಟು ಹೂಡಿಕೆಗಳನ್ನು ಶೇ.100ರಷ್ಟನ್ನು ಟ್ರೆಂಡ್‌ ವಿತ್‌ ಕನ್ಸಲ್ಟೆನ್ಸಿ ಏಜೆನ್ಸಿಯಿಂದಲೇ ಖರೀದಿಸಿರುವುದು ಆಕ್ಷೇಪಣಗೊಳಾಗಿದೆ. ಆದರೂ ಈ ಉಲ್ಲಂಘನೆಗಳನ್ನು ಆಡಳಿತ ಮಂಡಳಿ ಸಭೆಯಲ್ಲಿ ಅನುಸಮರ್ಥನೆ ಮಾಡಿಕೊಂಡಿರುವುದನ್ನು ಗಮನಿಸಲಾಗಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ. 

2019ರ ಮಾರ್ಚ್‌ ಅಂತ್ಯಕ್ಕೆ ಬ್ಯಾಂಕ್‌ನ 11.23 ಕೋಟಿ ಮೌಲ್ಯ ಕಡಿಮೆಯಾಗಿದೆ. ಭದ್ರತಾ ಹೂಡಿಕೆಗಳ ಖರೀದಿ ಮತ್ತು ಮಾರಾಟಗಳು ವ್ಯವಸ್ಥಿತವಾಗಿ ಬ್ಯಾಂಕ್‌ಗೆ ಲಾಭದಾಯಕವಾಗುವ ವಿಧಾನದಲ್ಲಿ ಮಾಡಿಲ್ಲ ಎಂಬುದನ್ನು ತನಿಖಾ ತಂಡ ಹೊರಗೆಡವಿದೆ. 

SUPPORT THE FILE

Latest News

Related Posts