ಮಾಲೀಕರು ಆಡಿದ್ದೇ ಆಟ, ಅಪೆಕ್ಸ್‌ ಬ್ಯಾಂಕ್‌ ಹೂಡಿದ್ದೇ ಲಗ್ಗೆ; 358 ಕೋಟಿ ರು. ಪಂಗನಾಮ?

ಬೆಂಗಳೂರು; ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಪೆಕ್ಸ್‌ ಬ್ಯಾಂಕ್‌ ನೀಡಿರುವ ವಿವಿಧ ಸ್ವರೂಪದ ಸಾಲದ ಒಳಸುಳಿಯನ್ನು ಹೊರಗೆಡವಿರುವ ಸಹಕಾರಿ ಸಂಘಗಳ ಜಂಟಿ ನಿಬಂಧಕರು, ಸಕ್ಕರೆ ಕಾರ್ಖಾನೆಗಳ ಮಾಲೀಕರೂ ಆಗಿರುವ ರಾಜಕೀಯ ಪ್ರಭಾವಿ ಮುಖಂಡರ ಮುಖವಾಡವನ್ನು ಕಳಚಿದ್ದಾರೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಆಡಿದ್ದೇ ಆಟ, ಬ್ಯಾಂಕ್‌ ಆಡಳಿತ ಮಂಡಳಿ ಹೂಡಿದ್ದೇ ಲಗ್ಗೆ ಎನ್ನುವಂತಾಗಿದೆ. 

ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಎಸ್‌ ಆರ್‌  ಪಾಟೀಲ್‌ ಒಡೆತನದ ಬೀಳಗಿ ಸಕ್ಕರೆ ಕಾರ್ಖಾನೆ, ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ ಒಡೆತನದ ಬಾದಾಮಿ ಸಕ್ಕರೆ ಕಾರ್ಖಾನೆ, ಸೋವರಿಯನ್‌ ಸಕ್ಕರೆ ಕಾರ್ಖಾನೆ, ಭವಾನಿ ಖಂಡಸಾರಿ, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ, ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆಗಳು ಪಡೆದಿರುವ ಒಟ್ಟು 358.18 ಕೋಟಿ ರು. ವಸೂಲಾಗದ ಆಸ್ತಿ ಎಂದು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಸಾಲ ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಅಪೆಕ್ಸ್‌ ಬ್ಯಾಂಕ್‌ನ ಆಡಳಿತ ಮಂಡಳಿಯು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹೇಳಿದಂತೆ ಕುಣಿದಿದೆಯಲ್ಲದೆ, ಅಡಮಾನ ಸಾಲವನ್ನು ಮುಂಗಡ ಬಂಡವಾಳದ ರೂಪದಲ್ಲಿ ಬಿಡುಗಡೆ ಮಾಡಿ ಸಕ್ಕರೆ  ಕಾರ್ಖಾನೆಗಳ ಮಾಲೀಕರ ಬೊಕ್ಕಸ ತುಂಬಿಸಿರುವುದು ವರದಿಯಿಂದ ತಿಳಿದು ಬಂದಿದೆ. 

ವಿಧಾನಪರಿಷತ್‌ನ ಪ್ರತಿಪಕ್ಷ ನಾಯಕ ಎಸ್‌ ಆರ್‌ ಪಾಟೀಲ್‌ ಅವರ ಒಡೆತನದಲ್ಲಿರುವ ಬೀಳಗಿ  ಸಕ್ಕರೆ ಕಾರ್ಖಾನೆಗೆ 75.00 ಕೋಟಿ ರು. ಸಾಲ ನೀಡುವ ಮುನ್ನ ಕಾರ್ಖಾನೆಯ ಯಾವುದೇ ಸ್ಥಿರಾಸ್ತಿ-ಚರಾಸ್ತಿಯನ್ನು ಅಡಮಾನ ಮಾಡಿಕೊಳ್ಳದೇ  ಬಿಡುಗಡೆ ಮಾಡಿರುವುದು ವರದಿಯಿಂದ ಗೊತ್ತಾಗಿದೆ. 

ಈ ಕಾರ್ಖಾನೆಗೆ 2018ರ ಜುಲೈ 27ರಂದು ಸಾಲ ಮಂಜೂರಾತಿ ಆದೇಶ ಹೊರಡಿಸಿದ್ದ ಬ್ಯಾಂಕ್‌ನ ಆಡಳಿತ ಮಂಡಳಿ ಸಕ್ಕರೆ ದಾಸ್ತಾನಿನ ಮೇಲೆ 75.00 ಕೋಟಿ ರು.ಗಳನ್ನು ದುಡಿಯುವ ಬಂಡವಾಳ ರೂಪದಲ್ಲಿ ಬಿಡುಗಡೆ ಮಾಡಿತ್ತು. ಅಲ್ಲದೆ ಶೇ 1/3ರಷ್ಟು ಮುಂಗಡ ಬಂಡವಾಳವಾಗಿ ಹಾಗೂ ಶೇ.2/3ರ  ಸಕ್ಕರೆ  ದಾಸ್ತಾನಿನ ಆಧಾರದ  ಮೇಲೆ ಬಿಡುಗಡೆ ಮಾಡಿತ್ತು. ಆದರೆ ಒಂದೇ ತಿಂಗಳಲ್ಲಿ ಅಂದರೆ  2018ರ ಆಗಸ್ಟ್‌ 18ರಂದು ಬ್ಯಾಂಕ್‌ನ ಆಡಳಿತ ಮಂಡಳಿ 75.00 ಕೋಟಿ ರು.ಗಳಲ್ಲಿ ಶೇ.2/3ರ ಅಡಮಾನ ಸಾಲ  ಎಂದು ಇರುವುದನ್ನು ತಿದ್ದುಪಡಿ  ಮುಂಗಡ  ಬಂಡವಾಳ ಎಂದು ಪರಿವರ್ತಿಸಿತ್ತು ಎಂಬ ಅಂಶ ತನಿಖಾ ವರದಿಯಿಂದ ತಿಳಿದು ಬಂದಿದೆ.  

ಅದೇ ರೀತಿ ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡ ಹಾಗೂ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ ಒಡೆತನದ ಬಾದಾಮಿ ಸಕ್ಕರೆ ಕಾರ್ಖಾನೆಯದ್ದು ಇದೇ ಕಥೆ. ಅಸಲು ಮತ್ತು ಬಡ್ಡಿ ಸೇರಿ ಒಟ್ಟು  37.08 ಕೋಟಿ ರು.ಬಾಕಿ ಇರಿಸಿಕೊಂಡಿರುವ ಈ ಕಾರ್ಖಾನೆಯು ಸುಸ್ತಿದಾರರ ಪಟ್ಟಿಯಲ್ಲಿದೆ. ಅಷ್ಟೇ ಅಲ್ಲ ಇದು ವಸೂಲಾಗದ ಆಸ್ತಿ ಎಂದು ಬ್ಯಾಂಕ್‌ ಪರಿಗಣಿಸಿದೆ. 

ಈ ಕಾರ್ಖಾನೆಗೆ  ಅವಧಿ ಸಾಲದ  ಹೆಸರಿನಲ್ಲಿ 2002ರಲ್ಲಿ 9.00 ಕೋಟಿ, 2005ರಲ್ಲಿ ಹೆಚ್ಚುವರಿ ಅವಧಿ ಸಾಲ ಎಂದು 1.66 ಕೋಟಿ ರು.ಬಿಡುಗಡೆ ಮಾಡಿ ಒಟ್ಟು 10.66 ಕೋಟಿ ರು. ಸಾಲ ನೀಡಿತ್ತು. ಸಾಲ ನೀಡುವ ಮುನ್ನ ಕಾರ್ಖಾನೆ ಹೊಂದಿರುವ ಭೂಮಿ ಮತ್ತು ಕಟ್ಟಡಗಳನ್ನು ಬ್ಯಾಂಕ್‌ ಜಾಮೀನು ಪಡೆದಿದೆ.

ಕಾರ್ಖಾನೆಗೆ 2500 ಟಿಸಿಡಿ ಯಂತ್ರೋಪಕರಣ ಮತ್ತು 18 ಮೆಗಾ ವ್ಯಾಟ್‌  ಜನರೇಟರ್‌ ಯಂತ್ರ ಅಳವಡಿಸಲು ಒಟ್ಟು 9.00 ಕೋಟಿ ರು., 2,500 ಟಿಸಿಡಿ ಯಂತ್ರೋಪಕರಣ ಮತ್ತು 18 ಮೆಗಾವ್ಯಾಟ್‌  ಜನರೇಟರ್‌ ಯಂತ್ರ ಅಳವಡಿಸುವ ಕಾರ್ಯ ಪೂರ್ಣಗೊಳಿಸಲು 1.66 ಕೋಟಿ ರು.ಬಿಡುಗಡೆ ಮಾಡಿತ್ತಾದರೂ ಈ  ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಕಾರ್ಖಾನೆಯಿಂದ ಯಾವುದೇ ದೃಢೀಕರಣ ಪತ್ರ ಪಡೆದಿರುವ ಬಗ್ಗೆ ಬ್ಯಾಂಕ್‌ನಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ. 

ಹಾಗೆಯೇ ಸೋವರಿಯನ್‌ ಸಕ್ಕರೆ ಕಾರ್ಖಾನೆಗೆ ಅವಧಿ ಸಾಲ, ದುಡಿಯುವ ಬಂಡವಾಳದ  ರೂಪದಲ್ಲಿ 2014ರಿಂದ 2017ರವರೆಗೆ ಒಟ್ಟು 106.04 ಕೋಟಿ ರು.ಸಾಲ ಮಂಜೂರು ಮಾಡಿದ್ದ ಬ್ಯಾಂಕ್‌, ಸಾಲಕ್ಕೆ ಪಡೆದಿದ್ದ ಭದ್ರತೆಯ ಮೌಲ್ಯವು ಕಡಿಮೆ ಇತ್ತು. ಅಂದರೆ ಸಾಲದ ಮೊತ್ತಕ್ಕೆ ಸ್ಥಿರಾಸ್ತಿ ಮಾರುಕಟ್ಟೆ  ಮೌಲ್ಯವು 20.48 ಕೋಟಿ ರು.ಭದ್ರತೆಯನ್ನಾಗಿ ಪಡೆದಿತ್ತು.

ಟಿಸಿಡಿ  ಯಂತ್ರೋಪಕರಣ,  ಕೆಎಲ್‌ಪಿಡಿ ಡಿಸ್ಟಲರಿ ಘಟಕ, ಜನರೇಟರ್‌  ಯಂತ್ರ ಅಳವಡಿಸುವ ಉದ್ದೇಶಕ್ಕೆ ಸಾಲ ನೀಡಿದ್ದ ಬ್ಯಾಂಕ್‌, ಆ ನಂತರ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಕಾರ್ಖಾನೆಯಿಂದ ದೃಢೀಕರಣ ಪತ್ರ ಪಡೆದಿರುವ ಬಗ್ಗೆ  ಯಾವುದೇ ದಾಖಲಾತಿಗಳನ್ನಿಟ್ಟಿಲ್ಲ ಎಂಬುದನ್ನು ತನಿಖಾ ತಂಡ ಹೊರಗೆಡವಿದೆ. 

ಭವಾನಿ ಖಂಡಸಾರಿ ಸಕ್ಕರೆ ಕಾರ್ಖಾನೆಗೆ ನೀಡಿದ್ದ ಒಟ್ಟು 12.70 ಕೋಟಿ ರು.ಸಾಲ ಸುಸ್ತಿಯಾಗಿದೆ. ಇಲ್ಲಿಯೂ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಕಾರ್ಖಾನೆಯಿಂದ ಯಾವುದೇ ದೃಢೀಕರಣ ಪತ್ರ ಪಡೆದಿರುವ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ದಾಖಲೆಗಳನ್ನಿಟ್ಟಿಲ್ಲ. 

ಅದೇ ರೀತಿ ಸಕ್ಕರೆ ದಾಸ್ತಾನು ಇರುವ ಬಗ್ಗೆ ಖಾತರಿಪಡಿಸಿಕೊಳ್ಳದೆ ಘಟಪ್ರಭಾ ಸಕ್ಕರೆ ಕಾರ್ಖಾನೆಗೆ 40.75 ಕೋಟಿ ರು. ಸಾಲ ಮಂಜೂರಾಗಿದೆ. ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆಗೆ 104.39 ಕೋಟಿ ರು.ಸಾಲ ಮಂಜೂರು ಮಾಡಿರುವ ಅಪೆಕ್ಸ್‌ ಬ್ಯಾಂಕ್‌, ಸಾಲ  ನೀಡುವ ಮುನ್ನ ಕಾರ್ಖಾನೆಯಿಂದ  ಯಾವುದೇ ಖಾತರಿ ಪಡೆಯದೇ ಸಾಲ ಮಂಜೂರು ಮಾಡಿದೆ. 

ಅಲ್ಲದೆ  ಕಬ್ಬು ಸರಬರಾಜು ಮಾಡಿರುವ ರೈತರಿಗೆ ಹಣ ಪಾವತಿ ಮಾಡುವ ಉದ್ದೇಶಕ್ಕೆ 25.00 ಕೋಟಿ ರು.  ಸಾಲ ಪಡೆದಿದ್ದ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ  ಕಾರ್ಖಾನೆ, ಈ ಹಣವನ್ನು ಕಾರ್ಖಾನೆ ಪಾವತಿ ಮಾಡಿದೆಯೇ ಇಲ್ಲವೇ ಎಂಬ ಬಗ್ಗೆ ಯಾವ ದಾಖಲೆಗಳನ್ನೂ ಬ್ಯಾಂಕ್‌ ಇಟ್ಟಿಲ್ಲ ಎಂಬ ಸಂಗತಿ  ತನಿಖಾ ವರದಿಯಿಂದ ತಿಳಿದು ಬಂದಿದೆ. 

ಬೀದರ್‌ ಸಹಕಾರಿ ಸಕ್ಕರೆ ಕಾರ್ಖಾನೆ ವಿಚಾರದಲ್ಲೂ ಅಪೆಕ್ಸ್‌ ಬ್ಯಾಂಕ್‌ನ ಹೊಣೆಗೇಡಿತನವನ್ನು ಪ್ರದರ್ಶಿಸಿದೆ. ಒಟ್ಟು 57.55 ಕೋಟಿ  ರು.  ಸಾಲ ನೀಡಿದ್ದ ಬ್ಯಾಂಕ್‌, ಸಾಲ ಪಡೆದ ಉದ್ದೇಶಗಳನ್ನು ಈಡೇರಿಸಿದೆಯೇ ಇಲ್ಲವೇ ಎಂಬ ಬಗ್ಗೆ  ಬ್ಯಾಂಕ್‌ ಯಥಾಪ್ರಕಾರ ಯಾವುದೇ ದಾಖಲೆಗಳನ್ನಿಟ್ಟಿಲ್ಲ. 

Your generous support will help us remain independent and work without fear.

Latest News

Related Posts