ಬೆಂಗಳೂರು; ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಐಎಂಎಸ್) ಆಮ್ಲಜನಕ ಪೂರೈಕೆಯಲ್ಲಿನ ಕೊರತೆಯಿಂದಾಗಿ ಮೇ 2ರ ರಾತ್ರಿ 10;30ರಿಂದ 2.20ರ ಮಧ್ಯದಲ್ಲಿ ಆಮ್ಲಜನಕ ಕೊರತೆಯಾಗಿತ್ತು. ಅಲ್ಲದೆ ಮೇ 3ರ ಬೆಳಗಿನ ಜಾವ 2;20ರಿಂದ ನಿರಂತರವಾಗಿ ಆಮ್ಲಜನಕ ಪೂರೈಕೆಯಾದ ನಂತರವೂ ಬೆಳಗ್ಗೆ 9ರವರಗೆ ಒಟ್ಟು 10 ಕೋವಿಡ್ ಮರಣ, ಕೋವಿಡ್ ಲಕ್ಷಣಗಳಿದ್ದ ಇಬ್ಬರು ರೋಗಿಗಳು ಸೇರಿದಂತೆ 15 ಸಾವು ಸಂಭವಿಸಿವೆ ಎಂದು ಚಾಮರಾಜನಗರ ಜಿಲ್ಲೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ವರದಿ ನೀಡಿದ್ದಾರೆ.
ಪ್ರಕರಣದ ತನಿಖೆ ಕುರಿತು ರಚಿಸಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ನೀಡಿದ್ದ ಮಾಹಿತಿಯನ್ನೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೂ ಒದಗಿಸಿದ್ದಾರೆ. ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಉಂಟಾದ ಸಾವಿನ ಪ್ರಕರಣ, ಆಕ್ಸಿಜನ್ ಪೂರೈಕೆಯಲ್ಲಿ ಇಲಾಖೆಯು ಅಳವಡಿಸಿಕೊಂಡಿದ್ದ ವಿಧಾನಗಳ ಕುರಿತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ 2021ರ ಸೆಪ್ಟಂಬರ್ 1ರಂದು 2 ಪುಟದ ವರದಿ ನೀಡಿದ್ದಾರೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘2021ರ ಮೆ 2ರಂದು ರಾತ್ರಿ 10-30ರಿಂದ 12;30ರವರೆಗೆ ಹಾಗೂ 12;50ರಿಂದ 2;20ರವರೆಗೆ ಆಮ್ಲಜನಕದ ಕೊರತೆಯಾಗಿರುತ್ತದೆ. ಈ ಸಮಯದಲ್ಲಿ 5 ಸಾವು ( 3 ಕೋವಿಡ್ ಮತ್ತು 2 ನಾನ್ ಕೋವಿಡ್ (ಸಿಎಲ್‌ಎಸ್) ಸಂಭವಿಸಿರುತ್ತದೆ. 2021ರ ಮೇ 3ರಂದು ಬೆಳಗಿನ ಜಾವ 2;20ರಿಂದ ನಿರಂತರವಾಗಿ ಆಕ್ಸಿಜನ್ ಪೂರೈಕೆಯಾಗಿರುತ್ತದೆ. ನಂತರ ಬೆಳಿಗ್ಗೆ 9 ಗಂಟೆವರೆಗೆ 10 ಕೋವಿಡ್ ಮರಣಗಳು ಹಾಗೂ ಕೋವಿಡ್ ಲಕ್ಷಣಗಳುಳ್ಳ ಇಬ್ಬರು ಸಾವನ್ನಪ್ಪಿದ್ದಾರೆ,’ ಎಂದು 2 ಪುಟದ ವರದಿಯಲ್ಲಿ ಮಾಹಿತಿ ಒದಗಿಸಿದ್ದಾರೆ.
‘ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿ ಸೆಂಟ್ರಲ್ ಆಕ್ಸಿಜನ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಮಾರ್ಚ್ 2021ರವರೆಗೆ 254 ಸಿಲಿಂಡರ್‌ಗಳನ್ನು ಖರೀದಿಸಲಾಗಿದೆ. 2021ರ ಏಪ್ರಿಲ್ 29ರವರೆಗೆ ಜಂಬೋ ಸಿಲಿಂಡರ್ ಮುಖಾಂತರ ಆಕ್ಸಿಜನ್ ಅನ್ನು ಸರಬರಾಜು ಮಾಡಲಾಗುತ್ತಿತ್ತು. ಚಾಮರಾಜನಗರದಲ್ಲಿ ಸಿಲಿಂಡರ್‌ಗಳನ್ನು ರಿಫಿಲ್ಲಿಂಗ್ ಮಾಡುವ ಏಜೆನ್ಸಿಗಳು ಇರುವುದಿಲ್ಲ. ಆದ್ದರಿಂದ ಜಂಬೋ ಸಿಲಿಂಡರ್‌ಗಳನ್ನು ಮೈಸೂರಿನಿಂದ ರೀಫಿಲ್ಲಿಂಗ್ ಮಾಡಿ ತರಲಾಗುತ್ತಿತ್ತು,’ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಮಾಹಿತಿ ಒದಗಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಅದೇ ರೀತಿ ಕೋವಿಡ್ ಆಸ್ಪತ್ರೆಗೆ ಹೆಚ್ಚುವರಿ 44 ಆಕ್ಸಿಜನ್ ಪೋರ್ಟಲ್‌ಗಳನ್ನು 2021ರ ಏಪ್ರಿಲ್ 4ರಂದು ಅಳವಡಿಸಲಾಗಿತ್ತು. ಆಕ್ಸಿಜನ್ ಪೋರ್ಟಲ್ ಸಂಖ್ಯೆ 99 ಆಗಿತ್ತು. ಸಿಸಿಯುನಲ್ಲಿ 10 ಆಕ್ಸಿಜನ್ ಹಾಸಿಗೆ ಮತ್ತು ತುರ್ತು ಚಿಕಿತ್ಸಾ ವಿಭಾಗದಲ್ಲಿ 12 ಆಕ್ಸಿಜನ್ ಹಾಸಿಗೆಗಳಿದ್ದು, ಇವುಗಳನ್ನು ಕೋವಿಡ್ ವಾರ್ಡ್‌ಗಳನ್ನಾಗಿ ಪರಿವರ್ತಿಸಲಾಗಿತ್ತು. ಹಾಗಾಗಿ 2021ರ ಏಪ್ರಿಲ್ ಕೊನೆಯ ವಾರದಲ್ಲಿ ಒಟ್ಟು 121 ಆಕ್ಸಿಜನ್ ಪೋರ್ಟಲ್‌ಗಳಾಗಿತ್ತು,’ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಆಕ್ಸಿಜನ್ ಸಿಲಿಂಡರ್ ಸರಬರಾಜಿನ ಬಗ್ಗೆ ನಿರಂತರವಾಗಿ ಜಿಲ್ಲಾಧಿಕಾರಿಳಿಗೆ ಮಾಹಿತಿ ಒದಗಿಸಿ ಮಾರ್ಗದರ್ಶನ ಪಡೆಯಲಾಗಿತ್ತು ಎಂದು ಮಾಹಿತಿ ಒದಗಿಸಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಹಾಗೂ ವೈದ್ಯಕೀಯ ಅಧೀಕ್ಷಕ, ಆಕ್ಸಿಜನ್ ಸರಬರಾಜಿನ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ (ಏಪ್ರಿಲ್ 29, 2021) ಪ್ರಸ್ತಾಪಿಸಲಾಗಿತ್ತು ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 29ರಂದು ಜಿಲ್ಲಾ ಆಸ್ಪತ್ರೆಯಲ್ಲಿ 6 ಕೆಎಲ್ ಸಾಮರ್ಥ್ಯದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಟ್ಯಾಂಕ್‌ನ್ನು ಮೊದಲ ಬಾರಿಗೆ ಅಳವಡಿಸಲಾಗಿತ್ತು. ಮತ್ತು ಅದೇ ದಿನ ಮೊದಲ ಬಾರಿಗೆ ತುಂಬಿಸಿ ಉಪಯೋಗಿಸಲಾಗಿತ್ತು. ಮೇ 1ರಂದು ಬೆಳಗ್ಗೆ 8 ಗಂಟೆಗೆ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ಎರಡನೇ ಸಲ ತುಂಬಿಸಲಾಗಿತ್ತು. ಇದನ್ನು ಮೇ 2ರ ಮಧ್ಯಾಹ್ನ 2 ಗಂಟೆಯವರಗೆ ಉಪಯೋಗಿಸಲಾಗಿತ್ತು ಎಂದು ವರದಿಯಲ್ಲಿ ಮಾಹಿತಿ ಒದಗಿಸಿದ್ದಾರೆ.
ನಿರ್ಣಾಯಕ ಸಮಯದಲ್ಲಿ ಅವರಿಗೆ ಆಮ್ಲಜನಕದ ಅಗತ್ಯವಿತ್ತು. ಆದರೆ, ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯೇ ಇರಲಿಲ್ಲ. ಮೃತಪಟ್ಟವರ ಕೇಸ್ ಶೀಟ್‌ಗಳನ್ನು ಗಮನಿಸಿದರೆ ಅವರಿಗೆ ಆಮ್ಲಜನಕದ ಅಭಾವವಿತ್ತು ಎಂಬುದನ್ನು ಸೂಚಿಸುತ್ತದೆ. ಆಮ್ಲಜನಕ ಕೊರತೆ ಕಾರಣಕ್ಕೆ ಮೆದುಳಿನ ಕೋಶಗಳಿಗೆ ಹಾನಿಯಾಗಿದೆ’ ಎಂದು ಹೈಕೋರ್ಟ್ ನೇಮಿಸಿದ್ದ ಸಮಿತಿ ಅಭಿಪ್ರಾಯಪಟ್ಟಿತ್ತು. ಅದೇ ರೀತಿ ಆಕ್ಸಿಜನ್ ಕೊರತೆಯಿಂದ ಕೇವಲ ಮೂವರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಸಚಿವ ಸುಧಾಕರ್ ಅವರು ವಾದಿಸಿದ್ದನ್ನು ಸ್ಮರಿಸಬಹುದು.
ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಸಿಐಎಂಎಸ್) ಆಮ್ಲಜನಕ ಕೊರತೆಯಿಂದ 24 ಜನರ ಸಾವನ್ನಪ್ಪಿದ್ದರೂ ರಾಜ್ಯ ಬಿಜೆಪಿ ಸರ್ಕಾರವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸದೇ ತನ್ನ ಭಂಡ ನಿರ್ಲಕ್ಷ್ಯತನವನ್ನು ಮೆರೆಯುವ ಮೂಲಕ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದೆ ಎಂಬ ಆರೋಪ ಕೇಳಿ ಬಂದಿತ್ತು.
ಕೋವಿಡ್ –19ರ ಎರಡನೇ ಅಲೆಯ ಸಂದರ್ಭದಲ್ಲಿ, ಆಮ್ಲಜನಕದ ಕೊರತೆಯಿಂದ ಕೋವಿಡ್ ರೋಗಿಗಳು ಮೃತಪಟ್ಟ ಬಗ್ಗೆ ರಾಜ್ಯಗಳಿಂದ ವರದಿಯಾಗಿಲ್ಲ ಎಂದು ಕಾಂಗ್ರೆಸ್ ಸದಸ್ಯ ಕೆ.ಸಿ. ವೇಣುಗೋಪಾಲ್ ಅವರ ಪ್ರಶ್ನೆಗೆ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪವಾರ್ ಅವರು ಉತ್ತರಿಸಿದ್ದರು.
2021ರ ಜೂನ್‌ನಲ್ಲಿಯೇ ಅತಿ ಹೆಚ್ಚು ಎಂದರೆ 99,665 ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ ಜನವರಿಯಲ್ಲಿ 50,319, ಫೆಬ್ರುವರಿಯಲ್ಲಿ 45,884, ಮಾರ್ಚ್‌ನಲ್ಲಿ 49,987, ಏಪ್ರಿಲ್‌ನಲ್ಲಿ 42,337, ಮೇನಲ್ಲಿ 77,221, ಜುಲೈನಲ್ಲಿ 65,530 ಮಂದಿ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಈ ಕುರಿತು ಅಂಕಿ ಅಂಶಗಳ ದಾಖಲೆಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಲ್ಲಿಸಿತ್ತು. ಇದರ ಪ್ರಕಾರ ಚಾಮರಾಜನಗರದಲ್ಲಿ 8,308 ಮಂದಿ ಕಳೆದ 7 ತಿಂಗಳಲ್ಲಿ ಸಾವನ್ನಪ್ಪಿದ್ದರು.
ರಾಜ್ಯದಲ್ಲಿ ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಆಯುಷ್ಮಾನ್ ಭಾರತ್ (ಎಬಿ) ಯೋಜನೆಯಡಿ ಕ್ಲೈಮ್ ಮಾಡಿರುವ 2,34,247 ಪ್ರಕರಣಗಳ ಪೈಕಿ ಕೇವಲ 14,371 ಮಂದಿಯಷ್ಟೇ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಒಟ್ಟು ಕ್ಲೈಮ್‌ಗಳ ಪೈಕಿ ಸಾವಿನ ಪ್ರಮಾಣ ಶೇಕಡವಾರು 6ರಷ್ಟಿದೆ. ಅದೇ ರೀತಿ ಕೋವಿಡ್ ಬುಲೆಟಿನ್‌ನಲ್ಲಿ (2021ರ ಆಗಸ್ಟ್ 2) ನಮೂದಿಸಿರುವ ಅಂಕಿ ಸಂಖ್ಯೆಗೂ ಡೆತ್ ಆಡಿಟ್‌ನಲ್ಲಿ ಒದಗಿಸಿರುವ ಸಾವಿನ ಸಂಖ್ಯೆ ನಡುವೆ 1,471ಯಷ್ಟೇ ವ್ಯತ್ಯಾಸವಿದೆ.