ಬೆಂಗಳೂರು; ಅಬಕಾರಿ ಇಲಾಖೆಯ ಜಂಟಿ ಆಯುಕ್ತರೊಬ್ಬರಿಂದ ವರ್ಗಾವಣೆಗೆ 1 ಕೋಟಿ ಲಂಚ ಕೇಳಿದ್ದಾರೆ ಎಂದು ಪ್ರಧಾನಿಗೆ ಸಲ್ಲಿಸಿದ್ದ ದೂರಿನ ಮೇರೆಗೆ ಹಿಂದಿನ ಸಚಿವ ಎಚ್ ನಾಗೇಶ್ ಅವರಿಂದ ರಾಜೀನಾಮೆ ಪಡೆದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೀಗ ಸಚಿವ ಕೆ ಗೋಪಾಲಯ್ಯ ಅವರು ಅಬಕಾರಿ ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲಿಗೆ ಸೂಚಿಸಿರುವ ಬಗ್ಗೆ ಅಧಿಕಾರಿಗಳಿಬ್ಬರ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ಬಹಿರಂಗವಾದರೂ ಮೌನ ವಹಿಸಿದ್ದಾರೆ.
ಅಬಕಾರಿ ಇಲಾಖೆಯ ಹಿಂದಿನ ಸಚಿವ ಎಚ್ ನಾಗೇಶ್ ಅವರು ಜಂಟಿ ಆಯುಕ್ತರ ವರ್ಗಾವಣೆಗೆ 1 ಕೋಟಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಪ್ರಕರಣವು ಸಾಕಷ್ಟು ಸದ್ದು ಮಾಡಿತ್ತು. ಇದೊಂದೇ ಪ್ರಕರಣವನ್ನು ಮುಂದಿಟ್ಟುಕೊಂಡು ದಲಿತ ಸಮುದಾಯದ ಎಚ್ ನಾಗೇಶ್ ಅವರಿಂದ ರಾಜೀನಾಮೆ ಪಡೆದಿದ್ದ ಸಂಘ ಪರಿವಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆ ಗೋಪಾಲಯ್ಯ ಅವರ ಪ್ರಕರಣದಲ್ಲಿ ತುಟಿ ಬಿಚ್ಚಿಲ್ಲ.
ದಲಿತ ಸಮುದಾಯಕ್ಕೆ ಸೇರಿದ ಸಚಿವರ ವಿರುದ್ಧ ಭ್ರಷ್ಟಾಚಾರ ಸಂಬಂಧಿತ ಕೇವಲ ದೂರು ಕೇಳಿ ಬಂದರೂ ಸಾಕು ಅವರಿಂದ ರಾಜೀನಾಮೆ ಪಡೆಯುವ ಆಡಳಿತ ಪಕ್ಷವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಬಲ ಸಮುದಾಯಕ್ಕೆ ಸೇರಿದ ಸಚಿವರ ವಿರುದ್ಧ ಸಾಕ್ಷ್ಯಾಧಾರಗಳ ಸಮೇತ ಆರೋಪ ಕೇಳಿ ಬಂದರೂ ರಾಜೀನಾಮೆ ಇರಲಿ, ಪ್ರಕರಣ ಸಂಬಂಧ ವಿವರಣೆಯನ್ನೂ ಕೇಳುವ ಧೈರ್ಯವೂ ಪ್ರದರ್ಶನವಾಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಆಡಳಿತ ಪಕ್ಷವು ಎಸಗುವ ತಾರತಮ್ಯ ನೀತಿಗೆ ಇವರಿಬ್ಬರ ಪ್ರಕರಣವು ಉತ್ತಮ ನಿದರ್ಶನವಾದಂತಿದೆ.
ಅಬಕಾರಿ ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲಿ ಮಾಡುವ ಸಂಬಂಧ ಸಚಿವ ಗೋಪಾಲಯ್ಯ ಅವರ ಮನೆಯಲ್ಲಿಯೇ ಸಭೆ ನಡೆಸಲಾಗಿತ್ತು ಎಂದು ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದ್ದ ಸಂಭಾಷಣೆಯಿಂದ ತಿಳಿದು ಬಂದಿತ್ತು. ಈ ಸಭೆಯಲ್ಲಿ ಮಂಜುನಾಥ್, ಕುಮಾರ್, ನಾಗರಾಜಪ್ಪ ಎಂಬ ಅಧಿಕಾರಿಗಳು ಹಾಜರಾಗಿದ್ದರು ಎಂದು ಸಂಭಾಷಣೆಯಲ್ಲಿ ಪ್ರಸ್ತಾಪವಾಗಿತ್ತು. ಗೋಪಾಲಯ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಲು ಇದಕ್ಕಿಂತ ಬೇರೆ ಸಾಕ್ಷ್ಯಗಳು ಬೇಕಿರಲಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಅಲ್ಲದೆ ಆಡಿಯೋದಲ್ಲಿ ‘ಮಿನಿಸ್ಟರ್‌ದು ಏನ್ ಮಾಡಿದ್ರಿ,’ ಎಂದು ಪ್ರಶ್ನಿಸುವ ಮಹಿಳಾ ಅಧಿಕಾರಿಯು ‘ನೀವು ಶಾಪ್‌ಗಳಿಂದ ಆ ಮೇಲೆ ಕಲೆಕ್ಷನ್ ಮಾಡ್ರಿ. ನೀವು ಕೈಯಿಂದ ಕೊಟ್ಟು ಶಾಪ್‌ನೋರ ಹತ್ರ ಆ ಮೇಲೆ ಕೇಳ್ರಿ. ಬೆಳಗಾಂ, ಗುಲ್ಬರ್ಗಾದವರು ಬಂದಿದ್ರು. ಅವರನ್ನು ಕೇಳಿ. ನೀವು ಅವರು ಟಾರ್ಗೇಟ್ ಆಗ್ತೀರಿ. ನಾನೇನು ಕೊಟ್ಟು ಕೈ ತೊಳ್ಕೋತ್ತೀನಿ, ಆ ಮೇಲೆ ನಿಮ್ ಸ್ಟೋರಿಗಳು ಹೊರಗ್ ಬರ್ತಾವೆ. ನಾನೇನು ಮಾಡಕ್ಕಾಗಲ್ಲ,’ಎಂದು ಮಹಿಳಾ ಅಧಿಕಾರಿ ಮಾತನಾಡಿದ್ದರೂ ಕಡೇ ಪಕ್ಷ ಆ ಮಹಿಳಾ ಅಧಿಕಾರಿಯನ್ನೂ ವಿಚಾರಣೆಗೆ ಗುರಿಪಡಿಸಿಲ್ಲ.
ಬದಲಿಗೆ ಆಡಿಯೋ ಹರಿಬಿಟ್ಟರು ಎಂಬ ಕಾರಣದಿಂದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಗೋಪಾಲಯ್ಯ ಅವರ ರಕ್ಷಣೆಗೆ ಸರ್ಕಾರ ನಿಂತಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಇನ್ನು, ರಾಜ್ಯದ ಚಾಮರಾಜನಗರ, ದಾವಣಗೆರೆ ಜಿಲ್ಲೆಯಿಂದಲೂ ಅಲ್ಲಿನ ಅಬಕಾರಿ ಅಧಿಕಾರಿಗಳು ಮದ್ಯದ ಅಂಗಡಿಗಳಿಂದ ಹಣ ವಸೂಲಿ ಮಾಡಿ ಸಚಿವರಿಗೆ ತಲುಪಿಸಿದ್ದಾರೆ ಎಂದು ಅಧಿಕಾರಿಗಳಿಬ್ಬರು ಸಂಭಾಷಿಸಿದ್ದನ್ನು ಸ್ಮರಿಸಬಹುದು.