ಬೆಂಗಳೂರು; ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್‌ನಿಂದಾಗಿ ಮೇ ತಿಂಗಳ ಆರಂಭದಲ್ಲಿಇಯೇ ಸುಮಾರು 60,000 ಕೋಟಿ ರು. (8 ಬಿಲಿಯನ್) ನಷ್ಟವಾಗಿದೆ. ಅಲ್ಲದೆ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಶೇ.3.75ನಷ್ಟು ನಷ್ಟವಾಗಿದೆ. ಮೇ 23ರ ಅಂತ್ಯಕ್ಕೆ ಕೊನೆಗೊಂಡ ವಾರದಲ್ಲಿ ನಿರುದ್ಯೋಗ ಮಟ್ಟವು ಶೇ.14.73ರಷ್ಟಿದೆ.
ಮೇ ತಿಂಗಳಲ್ಲಿ ಜಾರಿಗೊಳಿಸಿದ್ದ ಲಾಕ್‌ಡೌನ್ ತಂದೊಡ್ಡಿರುವ ಆರ್ಥಿಕ ಪರಿಣಾಮಗಳ ಕುರಿತು ಸೆಂಟರ್ ಫಾರ್ ಮಾನಿಟಿರಿಂಗ್ ಇಂಡಿಯನ್ ಎಕಾನಮಿ ಸಮೀಕ್ಷೆ ನಡೆಸಿದೆ. ಇದರ ಪ್ರಕಾರ ನಿರುದ್ಯೋಗ ಮಟ್ಟವು ನಗರ ಭಾರತದಲ್ಲಿ ಶೇ.17ಕ್ಕಿಂತ ಹೆಚ್ಚು ಹಾಗೂ ಗ್ರಾಮೀಣ ಭಾರತದಲ್ಲಿ ಸುಮಾರು ಶೇ.14ರಷ್ಟಿದೆ.
2021ರ ಏಪ್ರಿಲ್‌ನಲ್ಲಿ ನಿರುದ್ಯೋಗ ದರವು ಶೇ.8ಕ್ಕೇರಿತ್ತು. ಮಾರ್ಗಸೂಚಿಗಳ ಪೈಕಿ ಕೆಲವೊಂದನ್ನು ಸಡಿಲಿಸಿದ ಪರಿಣಾಮ ಕಾರ್ಮಿಕರ ಭಾಗವಹಿಸುವಿಕೆಯು ಶೇ.40ರಷ್ಟಿತ್ತು. ಆದರೆ ಮೇ ತಿಂಗಳಲ್ಲಿ ಇದರ ಪ್ರಮಾಣ ಕುಸಿಯಲಾರಂಭಿಸಿತು. ಹೀಗಾಗಿ ಮೇ ತಿಂಗಳಲ್ಲಿ ನಿರುದ್ಯೋಗ ದರ ಇಳಿದಿದೆ. ಮೇ 23ಕ್ಕೆ ಕೊನೆಗೊಂಡ ವಾರದಲ್ಲಿ ನಿರುದ್ಯೋಗ ದರವು ಶೇ.14.5ಕ್ಕೇರಿತು. ಏಪ್ರಿಲ್ 2020 ರಲ್ಲಿ ಭಾರತವು ಸಾಂಕ್ರಾಮಿಕ ರೋಗಕ್ಕೆ ತುತ್ತಾದಾಗ ಸುಮಾರು 126 ಮಿಲಿಯನ್ ಉದ್ಯೋಗ ನಷ್ಟವಾಗಿತ್ತು ಎಂಬುದನ್ನು ಸಮೀಕ್ಷೆಯು ಹೊರಗೆಡವಿದೆ.
2020ರಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದ ಉದ್ಯೋಗ ಮಾರುಕಟ್ಟೆ ಸೆಪ್ಟಂಬರ್‌ನಲ್ಲಿ ಚೇತರಿಕೆ ಕಂಡಿತ್ತಲ್ಲದೇ ಡಿಸೆಂಬರ್ ಹೊತ್ತಿಗೆ ಸ್ವಲ್ಪಮಟ್ಟಿಗೆ ಸುಧಾರಣೆ ಆಗಿತ್ತು. ಆದರೆ ಎರಡನೇ ಅಲೆ ಆರಂಭವಾದ ಜನವರಿಯಲ್ಲಿ ಕುಸಿಯಲಾರಂಭಿಸಿತು. ಮಾರ್ಚ್‌ವರೆಗೂ ಇದೇ ಸ್ಥಿತಿಯಲ್ಲಿತ್ತು ಎಂದು ಸಮೀಕ್ಷೆ ತಿಳಿಸಿದೆ.
ಸಂಬಳ ಪಡೆಯುವ ಉದ್ಯೋಗಗಳಲ್ಲಿ ಕುಸಿತ ಸ್ಥಿರವಾಗಿದೆ. ಕೋವಿಡ್ ಸಾಂಕ್ರಾಮಿಕ ಹರಡುವಿಕೆ ಮೊದಲು ದೇಶದಲ್ಲಿ 403.5 ಮಿಲಿಯನ್ ಉದ್ಯೋಗಗಳಿದ್ದವು. ಡಿಸೆಂಬರ್ 2020 ಮತ್ತು ಜನವರಿ 2021ರಲ್ಲಿ 400 ಮಿಲಿಯನ್‌ಗಿಳಿದಿತ್ತು. ಕೋವಿಡ್ 2ನೇ ಅಲೆ ಹೊಡೆತಕ್ಕೆ ಉದ್ಯೋಗ ಮಾರುಕಟ್ಟೆ ಸಿಲುಕಿದ ಪರಿಣಾಮ ಉದ್ಯೋಗಗಳ ಸಂಖ್ಯೆಯನ್ನು 3.5 ಮಿಲಿಯನ್‌ಗಿಳಿಸಲಾಗಿದೆ. ಇದೇ ಹೊತ್ತಿನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳ ಪ್ರಮಾಣವೂ ಕುಸಿಯಲಾರಂಭಿಸಿವೆ.