ವಿಜಯೇಂದ್ರ ಪ್ರಕರಣ; ಸಿಬಿಐ ತನಿಖೆ ಕೋರಿ ಪಿಐಎಲ್‌ ದಾಖಲಿಸಿದ ಜನಾಧಿಕಾರ ಸಂಘರ್ಷ ಪರಿಷತ್‌

ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಹಣ ಸುಲಿಗೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣ ಹಾಗೂ ಕೋಲ್ಕತ್ತಾ ಮೂಲದ 7 ಶೆಲ್‌ ಕಂಪನಿಗಳು ವಿಜಯೇಂದ್ರ ಮತ್ತು ಮೊಮ್ಮಗ ಶಶಿಧರ್‌ ಮರಡಿ ಎಂಬುವರ ಕಂಪನಿಯ ಖಾತೆಗಳಿಗೆ ಹಣ ವರ್ಗಾವಣೆ ಆಗಿರುವ ಪ್ರಕರಣ ಇದೀಗ ಹೈಕೋರ್ಟ್‌ ಮೆಟ್ಟಿಲೇರಿದೆ.

ಹಣ ಸುಲಿಗೆ ಪ್ರಕರಣ ಸಂಬಂಧ ಆರಂಭದಿಂದಲೂ ಕಾನೂನು ಹೋರಾಟ ನಡೆಸುತ್ತಿರುವ ಜನಾಧಿಕಾರ ಸಂಘರ್ಷ ಪರಿಷತ್‌ ಈ ಕುರಿತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ( FR NO. 869/2021) ದಾಖಲಿಸಿದೆ. ಪ್ರಕರಣದಲ್ಲಿ ರಾಜ್ಯ ಸರ್ಕಾರ, ಸಿಬಿಐ ಮತ್ತು ಭ್ರಷ್ಟಾಚಾರ ನಿಗ್ರಹ ದಳವನ್ನು ಪ್ರತಿವಾದಿಯನ್ನಾಗಿಸಿದೆ.

ರಾಜ್ಯದ ಉನ್ನತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳ ಕುಟುಂಬವು ಅಕ್ರಮವಾಗಿ ನಡೆದಿರುವ ಹಣದ ವಹಿವಾಟಿನಲ್ಲಿ ಭಾಗಿಯಾಗಿದೆ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಅರ್ಜಿಯಲ್ಲಿ ಜನಾಧಿಕಾರ ಸಂಘರ್ಷ ಪರಿಷತ್‌ ಕೋರಿದೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಎಫ್‌ಐಆರ್‌ ದಾಖಲಿಸದೆ ಕುಂಟು ನೆಪವೊಡ್ಡಿ ನ್ಯಾಯಾಲಯದ ದಿಕ್ಕುತಪ್ಪಿಸಲು ಶೇಷಾದ್ರಿಪುರಂನ ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ಅವರು ನ್ಯಾಯಾಲಯಕ್ಕೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದ ಜನಾಧಿಕಾರ ಸಂಘರ್ಷ ಪರಿಷತ್‌ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದರ ಬೆನ್ನಲ್ಲೇ ಇಡೀ ಪ್ರಕರಣವನ್ನು ತನಿಖೆಗೊಳಪಡಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವ ಮೂಲಕ ಪ್ರಕರಣವನ್ನು ಇನ್ನಷ್ಟು ವಿಸ್ತರಿಸಿದೆ.

ಬಹುಮಹಡಿ ವಸತಿ ಸಮುಚ್ಛಯ ಕಂಪನಿ ನಿರ್ದೇಶಕ ಚಂದ್ರಕಾಂತ್‌ ರಾಮಲಿಂಗಂ ಎಂಬುವರಿಂದ 7.40 ಕೋಟಿಯನ್ನು ಸುಲಿಗೆ ಮಾಡಿದ್ದಾರೆ ಎಂದು ಐಪಿಸಿ ಸೆಕ್ಷನ್‌ 384, 120(ಬಿ) ಮತ್ತು 34ನ್ನು ಉಲ್ಲೇಖಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ಈ ಹಿಂದೆಯೂ ದೂರು ದಾಖಲಿಸಿತ್ತು.

ಶಶಿಧರ್‌ ಮರಡಿ ಅವರು ಹೊಂದಿರುವ ಬ್ಯಾಂಕ್‌ ಖಾತೆಗೆ 7.4 ಕೋಟಿ ರು.ಗಳನ್ನು ನಿರ್ಮಾಣ ಕಂಪನಿ ಆರ್‌ಟಿಜಿಎಸ್‌ ಮೂಲಕ ಸಂದಾಯ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು. ಅದೇ ರೀತಿ ವಾಟ್ಸಾಪ್‌ ಸಂಭಾಷಣೆಯಲ್ಲಿ ನಮೂದಿಸಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶೇಷಾದ್ರಿಪುರಂ ಶಾಖೆಯಲ್ಲಿ ಶಶಿಧರ್‌ ಮರಡಿ ಹೊಂದಿರುವ ಉಳಿತಾಯ ಖಾತೆಗೆ ಜನಾಧಿಕಾರ ಸಂಘರ್ಷ ಪರಿಷತ್‌ 100 ರು. ನಗದನ್ನು ಪಾವತಿಸಿ ಖಾತೆಯನ್ನು ಖಚಿತಪಡಿಸಿಕೊಂಡಿರುವುದನ್ನೂ ದೂರಿನಲ್ಲಿ ಉಲ್ಲೇಖಿಸಿತ್ತು.

ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಬಳಸಿಕೊಂಡು ನಿರ್ಮಾಣ ಕಂಪನಿಯಿಂದ ಲಂಚ ಪಡೆದಿರುವುದು ತಿಳಿದಿದ್ದರೂ ಸಹ ಆ ಅಧಿಕಾರಿ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸದಿರುವುದು ಬಿ ವೈ ವಿಜಯೇಂದ್ರ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ನಿರ್ಮಾಣ ಕಂಪನಿಗೆ ಬೆದರಿಕೆ ಹಾಕಿ ಹಣ ನೀಡಲು ಒತ್ತಡ ಹೇರಿ ನಿರ್ಮಾಣ ಕಾರ್ಯಕ್ಕೆ ತಡೆ ಹಾಕಿರುವುದು ಸುಲಿಗೆ ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿತ್ತು.

ವಾಟ್ಸಾಪ್‌ ಚಾಟ್‌ಗಳಲ್ಲಿ ಶಶಿಧರ್‌ ಮರಡಿ ಎಂಬುವರು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನಂತರ ಹಣ ಪಡೆದಿರುವುದು, ನಗದು ಹಾಗೂ ಆರ್‌ಟಿಜಿಎಸ್‌ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮತ್ತು ತಮ್ಮ ಸಹಚರರ ಮೂಲಕ ಸಮನ್ವಯ ಮಾಡಲು ತಿಳಿಸಿರುವುದು ಹಾಗೂ ಹಣ ಪಡೆದಿರುವ ಬಗ್ಗೆಯೂ ಖಚಿತಪಡಿಸಿರುವುದು ಈ ಪ್ರಕರಣಕ್ಕೆ ಹೆಚ್ಚಿನ ಪುಷ್ಠಿ ನೀಡಿತ್ತು.

SUPPORT THE FILE

Latest News

Related Posts