ಬೆಂಗಳೂರು; 612 ಕೋಟಿ ರು ಅಂದಾಜು ವೆಚ್ಚದ ಸೇಫ್ ಸಿಟಿ ಯೋಜನೆಯ ಟೆಂಡರ್‌ನ್ನು ಸಚಿವ ಸಂಪುಟಕ್ಕೆ ಮಂಡಿಸದೆಯೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪಕ್ಕೆ ಗುರಿಯಾಗಿರುವ ಟೆಂಡರ್ ಅಂಗೀಕಾರ ಸಮಿತಿಯ ಅಧ್ಯಕ್ಷ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸದ ಬಿಜೆಪಿ ಸರ್ಕಾರ, ಅವರನ್ನು ಆಂತರಿಕ ಭದ್ರತೆ ವಿಭಾಗಕ್ಕೆ ವರ್ಗಾಯಿಸಿ ಕೈ ತೊಳೆದುಕೊಂಡಿದೆ.
ಟೆಂಡರ್ ಅಕ್ರಮಗಳ ವಿರುದ್ಧ ದನಿ ಎತ್ತಿದ್ದ ರಾಜ್ಯ ಗೃಹ ಕಾರ್ಯದರ್ಶಿ ರೂಪ ಮೌದ್ಗಿಲ್ ಅವರನ್ನು ಎತ್ತಂಗಡಿ ಮಾಡಿ ಅಕ್ರಮಗಳನ್ನು ಮುಚ್ಚಿ ಹಾಕಲು ಹೊರಟಿದೆ ಎಂಬ ಆರೋಪಕ್ಕೂ ಬಿಜೆಪಿ ಸರ್ಕಾರ ಗುರಿಯಾಗಿದೆ. ಇದು ಒಂದು ರೀತಿ ಯಾರದೋ ತಪ್ಪಿಗೆ ಇನ್ನಾರಿಗೋ ಶಿಕ್ಷೆ ಎಂಬಂತಾಗಿದೆ.
ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳದೆಯೇ ಟೆಂಡರ್ ಪ್ರಕ್ರಿಯೆ ನಡೆಸುವ ಕ್ರಮಕ್ಕೆ ಪರೋಕ್ಷವಾಗಿ ಕುಮ್ಮಕ್ಕು ಕೊಟ್ಟಂತಾಗಿದೆಯಲ್ಲದೆ ಇದು ಭ್ರಷ್ಟ ಅಧಿಕಾರಿಗಳ ಪರ ಸರ್ಕಾರವೇ ನಿಂತಂತಿದೆ. ಅದೇ ರೀತಿ ಈ ಪ್ರಕರಣ ಹಾದಿ ರಂಪ ಬೀದಿ ರಂಪವಾಗಿದ್ದರೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಕಾರ್ಯದರ್ಶಿ ಮೇಲೆ ಜವಾಬ್ದಾರಿ ಹೊರಿಸಿ ನುಣುಚಿಕೊಂಡಿರುವುದು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ಐಎಂಎ ವಂಚನೆ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ದೋಷಾರೋಪಣೆ ಪಟ್ಟಿಯಲ್ಲಿ ಹೇಮಂತ್ ನಿಂಬಾಳ್ಕರ್ ಅವರ ಹೆಸರಿದೆಯಲ್ಲದೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಎಂದು ಮಾಡಿದ್ದ ಶಿಫಾರಸ್ಸನ್ನು ಕಡೆಗಣಿಸಿರುವ ಸರ್ಕಾರ ಏಕಕಾಲಕ್ಕೆ ಟೆಂಡರ್ ಅಕ್ರಮ ಮತ್ತು ಐಎಂಎ ವಂಚನೆ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಹೊರಟಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆದಿದ್ದ ಅಕ್ರಮಗಳನ್ನು ಬಯಲಿಗೆಳೆದಿದ್ದ ಇದೇ ರೂಪ ಮೌದ್ಗಿಲ್ ಅವರನ್ನು ವರ್ಗಾವಣೆ ಮಾಡಿತ್ತು. ಆಗ ಪ್ರತಿಪಕ್ಷದಲ್ಲಿದ್ದ ಬಿಜೆಪಿಯು ಇದನ್ನು ಪ್ರತಿಭಟಿಸಿತ್ತು. ಆದರೀಗ ತಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಟೆಂಡರ್ ಅಕ್ರಮಗಳ ವಿರುದ್ಧ ದನಿ ಎತ್ತಿದ್ದ ಅದೇ ಅಧಿಕಾರಿಯನ್ನು ಪೊಲೀಸ್‌ಯೇತರ ನಿಗಮಕ್ಕೆ ವರ್ಗಾಯಿಸುವ ಮೂಲಕ ಹಿಂದಿನ ಕಾಂಗ್ರೆಸ್ ಸರ್ಕಾರ ತುಳಿದ ಹಾದಿಯನ್ನೇ ಈಗಿನ ಬಿಜೆಪಿ ಸರ್ಕಾರವೂ ತುಳಿದಿದೆ.
ವರ್ಗಾವಣೆ ಕುರಿತು ರೂಪ ಮೌದ್ಗಿಲ್ ಅವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಯಾರದೋ ತಪ್ಪಿಗೆ ಇನ್ನಾರಿಗೋ ಶಿಕ್ಷೆ ನೀಡಿದ ಸರ್ಕಾರ. ನನ್ನ ವರ್ಗಾವಣೆ ಬಂದಿದೆ. ಕರಕುಶಲ ನಿಗಮದ ಎಂಡಿ ಎಂದು. ಸಿಬಿಐ ಈಗಾಗಲೇ ದೋಷಾರೋಪಣೆ ಸಲ್ಲಿಸಿ ನಿಂಬಾಳ್ಕರ್ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಕಳೆದ ಡಿಸೆಂಬರ್ (1 ವರ್ಷದ ಹಿಂದೆ) ಶಿಫಾರಸ್ಸು ಮಾಡಿದ್ದರೂ ಇನ್ನೂ ಶಿಸ್ತು ಕ್ರಮ ಕೈಗೊಂಡಿಲ್ಲ. ಈ ವರ್ಗಾವಣೆ ನನ್ನನ್ನೂ ಮತ್ತು ದೋಷಾರೋಪಣೆ ಎದುರಿಸುತ್ತಿರುವ ಅಧಿಕಾರಿಯನ್ನೂ ಒಂದೇ ತಕ್ಕಡಿಯಲ್ಲಿ ಅಳೆದಂತೆ,’ ಎಂದು ಟ್ವೀಟ್ ಮಾಡಿ ಸರ್ಕಾರವನ್ನು ತಿವಿದಿದ್ದಾರೆ.
ಪ್ರಕರಣ ಹಿನ್ನೆಲೆ
ಬೆಂಗಳೂರು ನಗರದಲ್ಲಿ ನಿರ್ಭಯ ಯೋಜನೆಯಡಿ ಸೇಫ್ ಸಿಟಿ ಪ್ರಾಜೆಕ್ಟ್‌ನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು 667.00 ಕೋಟಿ ರು.ಗೆ ಮಂಜೂರಾತಿ ನೀಡಿತ್ತು. ಇದರಲ್ಲಿ ಕೇಂದ್ರದ ಪಾಲಿನ 167.26 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 111.56 ಕೋಟಿ ಒಟ್ಟು 278.76 ಕೋಟಿ ರು. ಅನುದಾಕ್ಕೆ ಮಂಜೂರಾತಿ ದೊರೆತಿದೆ.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯ ಉನ್ನತ ಮಟ್ಟದ ಸಭೆ ನಡೆದಿತ್ತು. ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು 2019ರ ಸೆಪ್ಟಂಬರ್ 7ರಂದು ಟೆಂಡರ್ ಆಹ್ವಾನ ಸಮಿತಿ, ಟೆಂಡರ್ ಪರಿಶೀಲನಾ ಸಮಿತಿ ಮತ್ತು ಅಂಗೀಕಾರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ಪೈಕಿ ಟೆಂಡರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿಗೆ ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಹೊರಡಿಸಿತ್ತು.
ಪ್ರಧಾನಿ ಕಚೇರಿ ಮೆಟ್ಟಿಲೇರಿತ್ತು ಟೆಂಡರ್ ಪ್ರಕರಣ
ಈ ಯೋಜನೆಗೆ ಆರಂಭದಲ್ಲಿ ಪೊಲೀಸ್ ಇಲಾಖೆ ಕರೆದಿದ್ದ ಟೆಂಡರ್ ಪ್ರಕ್ರಿಯೆ ಮತ್ತು ಕಂಪನಿಯನ್ನು ಅಯ್ಕೆ ಮಾಡಿದ್ದ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂದು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಪ್ರಧಾನಿ ಕಚೇರಿಗೆ 2020ರ ಜೂನ್ 29ರಂದು ದೂರು ಸಲ್ಲಿಸಿತ್ತು. ಟೆಂಡರ್‌ನಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಲಾರ್ಸನ್ ಅಂಡ್ ಟೋಬ್ರೋ (ಎಲ್ ಅಂಡ್ ಟಿ), ಮಾಟ್ರಿಕ್ಸ್ ಸೆಕ್ಯುರಿಟಿ ಅಂಡ್ ಸರ್ವೇಲೆಯನ್ಸ್ ಪ್ರೈವೈಟ್ ಲಿಮಿಟೆಡ್, ಎನ್‌ಸಿಸಿ ಲಿಮಿಟೆಡ್ ಭಾಗವಹಿಸಿದ್ದವು.
ಹಿತಾಸಕ್ತಿ ಸಂಘರ್ಷ ಆರೋಪ
ಟೆಂಡರ್‌ನಲ್ಲಿ ಭಾಗವಹಿಸಿದ್ದ ಮ್ಯಾಟ್ರಿಕ್ಸ್ ಮತ್ತು ಎನ್‌ಸಿಸಿ ನಿರ್ದೇಶಕರೊಬ್ಬರು ಎರಡೂ ಕಂಪನಿಯಲ್ಲಿ ಶೇ.5ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಷೇರು ಹೊಂದಿದ್ದರು. ಹೀಗಾಗಿ ಎರಡೂ ಕಂಪನಿಗಳಿಗೆ ಅವಕಾಶಕೊಟ್ಟಲ್ಲಿ ಇದು ಹಿತಾಸಕ್ತಿ ಸಂಘರ್ಷವಾಗಲಿದೆ. ಹಾಗೆಯೇ ಆರ್‌ಎಫ್‌ಪಿ ಷರತ್ತುಗಳನ್ನು ನೇರವಾಗಿ ಉಲ್ಲಂಘಿಸಿದೆ ಎಂದು ಬಿಇಎಲ್ ಕಂಪನಿ ಪ್ರಧಾನಿಗೆ ಸಲ್ಲಿಸಿದ್ದ ದೂರಿನಲ್ಲಿ ವಿವರಿಸಿತ್ತು ಎಂಬುದು ತಿಳಿದು ಬಂದಿದೆ.
ಅನರ್ಹಗೊಂಡಿದ್ದ ಎನ್‌ಸಿಸಿ
ಆರ್‌ಎಫ್‌ಪಿ ಪ್ರಕಾರ ದಾಖಲೆಗಳನ್ನು ನೀಡದ ಕಾರಣ ಟೆಂಡರ್ ಸಮಿತಿಯು ಎನ್‌ಸಿಸಿ ಲಿಮಿಟೆಡ್‌ನ್ನು ಅನರ್ಹಗೊಳಿಸಿತ್ತು. ಹೀಗಾಗಿ ಮ್ಯಾಟ್ರಿಕ್ಸ್ ಕಂಪನಿಯನ್ನು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು ಎಂಬುದು ದೂರಿನಿಂದ ಗೊತ್ತಾಗಿದೆ.
ಚೀನಾ ಉತ್ಪನ್ನ ನಮೂದಿಸಿದ್ದ ಮ್ಯಾಟ್ರಿಕ್ಸ್
ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಂಡಿದ್ದ ಮ್ಯಾಟ್ರಿಕ್ಸ್ ಕಂಪನಿಯು ಚೀನಾ ತಯಾರಿಸಿರುವ ಕ್ಯಾಮರಾ, ಸರ್ವರ್, ಸಂಗ್ರಹಣಾ ಕೋಶ ಉಪಕರಣಗಳ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಮೂದಿಸಿತ್ತು. ಟೆಂಡರ್ ಮೌಲ್ಯಮಾಪನ ಸಮಿತಿ ಮುಂದೆ ಇದೇ ಉಪಕರಣಗಳ ಮಾದರಿಯನ್ನು ಪ್ರದರ್ಶಿಸಿತ್ತು.
ಚೀನಾ ತಯಾರಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಬಳಸಿದಲ್ಲಿ ಸಾರ್ವಜನಿಕ ಭದ್ರತೆ, ಸುರಕ್ಷತೆಗೆ ಧಕ್ಕೆ ಆಗಲಿದೆ ಎಂದು ದೂರಿದ್ದ ಬಿಇಎಲ್, ನಿವಾಸಿಗಳ ದತ್ತಾಂಶವೂ ಸೋರಿಕೆಯಾಗಲಿದೆ. ಹಾಗೆಯೇ ಖಾಸಗಿತನದ ಮಹತ್ವ ಕಳೆದುಕೊಳ್ಳಲಿದೆ. ಹೀಗಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸುವ ಮೂಲಕ ಟೆಂಡರ್ ಪ್ರಾಧಿಕಾರವು ಮ್ಯಾಟ್ರಿಕ್ಸ್ ಕಂಪನಿಯನ್ನು ಅನರ್ಹಗೊಳಿಸಲು ಟೆಂಡರ್ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ದೂರಿನಲ್ಲಿ ಕೋರಿತ್ತು.
ಆದರೆ ಇದನ್ನು ಮರೆಮಾಚಿದ್ದ ಅಧಿಕಾರಿಗಳ ಗುಂಪೊಂದು 612 ಕೋಟಿ ಮೊತ್ತದ ಟೆಂಡರ್ ಪ್ರಕ್ರಿಯೆಯನ್ನು ಸಚಿವ ಸಂಪುಟದ ಗಮನಕ್ಕೂ ತಂದಿರಲಿಲ್ಲ ಎನ್ನಲಾಗಿದೆ. ಇಡೀ ಟೆಂಡರ್ ಪ್ರಕ್ರಿಯೆಯನ್ನು ಹಿರಿಯ ಐಪಿಎಸ್ ಅಧಿಕಾರಿಗಳ ಹಂತದಲ್ಲೇ ನಡೆಸಲು ಪೂರ್ಣಗೊಳಿಸಲು ಮುಂದಾಗಿತ್ತು.
ಈ ಹಿಂದೆ ಇದೇ ಯೋಜನೆಗೆ ಕರೆದಿದ್ದ ಟೆಂಡರ್ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಪ್ರಧಾನಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೀಡಿದ್ದರಿಂದ ಮರು ಟೆಂಡರ್ ಪ್ರಕ್ರಿಯೆ ನಡೆದಿದೆ. ಯೋಜನೆ ಮೊತ್ತ 10 ಕೋಟಿ ರು. ಮೀರಿರುವುದರಿಂದ ಸಚಿವ ಸಂಪುಟಕ್ಕೆ ಟೆಂಡರ್ ಪ್ರಕ್ರಿಯೆಗಳನ್ನು ಮಂಡಿಸಬೇಕು. ಈ ಕುರಿತು ರಾಜ್ಯ ಸರ್ಕಾರವು ಈ ಹಿಂದೆ ಆದೇಶ ಹೊರಡಿಸಿತ್ತು.
ಆದರೆ ಟೆಂಡರ್ ಆಹ್ವಾನ ಸಮಿತಿಯ ಅಧ್ಯಕ್ಷ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಸಚಿವ ಸಂಪುಟಕ್ಕೆ ಮಂಡಿಸದೆಯೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದರು.
ಅಲ್ಲದೆ ಐಎಂಎ ವಂಚನೆ ಪ್ರಕರಣದಲ್ಲಿ ಗುರುತರ ಆರೋಪ ಮತ್ತು ಸಿಬಿಐ ವಿಚಾರಣೆಗೊಳಪಟ್ಟಿರುವ ಹೇಮಂತ್ ನಿಂಬಾಳ್ಕರ್ ಅವರನ್ನೇ ಟೆಂಡರ್ ಆಹ್ವಾನ ಮತ್ತು ಪರಿಶೀಲನಾ ಸಮಿತಿ ಅಧ್ಯಕ್ಷರನ್ನಾಗಿ ಮುಂದುವರೆಸಿರುವುದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ವಲಯದಲ್ಲಿಯೂ ಅಸಮಾಧಾನಕ್ಕೆ ಕಾರಣವಾಗಿತ್ತು.