ಪಂಚಾಯ್ತಿ ಮೀಸಲಾತಿ ವಿಚಾರದಲ್ಲಿ ಹಸ್ತಕ್ಷೇಪ; ಕಾರ್ಯವ್ಯಾಪ್ತಿ ಮೀರಿದ್ದರೇ ಮಹಾದೇವ ಪ್ರಕಾಶ್‌?

ಬೆಂಗಳೂರು; ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಪರಿಗಣಿಸಿದ್ದಾರೆಂದು ತಿಳಿದು ಬಂದಿದೆ. ಆದರೆ ನಾನು ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಮಾಧ್ಯಮ ಸಲಹೆಗಾರ ಆಗಿರುವುದರಿಂದ ಈ ಪ್ರಶಸ್ತಿ ಸ್ವೀಕರಿಸುವುದು ನೈತಿಕವಾಗಿ ಸರಿಯಲ್ಲ ಎಂಬುದು ನನ್ನ ಭಾವನೆ ಎಂದು ನೈತಿಕ ವಿಚಾರವನ್ನು ಮುಂದಿಟ್ಟು ಪಟ್ಟಿ ಅಂತಿಮಗೊಳ್ಳುವ ಮುನ್ನವೇ ಪ್ರಶಸ್ತಿಯನ್ನು ಮಹಾದೇವ ಪ್ರಕಾಶ್‌ ಅವರು ಕೆಲ ದಿನಗಳ ಹಿಂದೆ ತಿರಸ್ಕರಿಸಿದ್ದರು.

ಇದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಗೂ ಕಾರಣವಾಗಿತ್ತು. ನೈತಿಕತೆ ಮತ್ತು ಹಿತಾಸಕ್ತಿ ಸಂಘರ್ಷದ ಬಗ್ಗೆ ಬರೆದುಕೊಂಡಿದ್ದ ಮಹಾದೇವ ಪ್ರಕಾಶ್‌ ಅವರು ತಮ್ಮ ಕಾರ್ಯವ್ಯಾಪ್ತಿ ಮತ್ತು ಅಧಿಕಾರ ವ್ಯಾಪ್ತಿ ಮೀರಿ ಪಂಚಾಯ್ತಿ ಕ್ಷೇತ್ರವೊಂದರ ಮೀಸಲಾತಿ ಬದಲಾಯಿಸಲು ಜಿಲ್ಲಾಧಿಕಾರಿಗೆ ಪತ್ರವನ್ನು ಬರೆದಿದ್ದಾರೆ ಎಂಬುದು ಗೊತ್ತಾಗಿದೆ.

ಕೋಲಾರ ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರದಲ್ಲೇನಿದೆ?

‘ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐನೂರು ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಕಾರಮಂಗಲ ಗ್ರಾಮದಲ್ಲಿ ಪ್ರಸ್ತುತ ಪ್ರಕಟವಾಗಿರುವ ಮೀಸಲಾತಿ ಅನುಸೂಚಿತ ಜಾತಿ (ಮಹಿಳೆ) ಮತ್ತು (ಸಾಮಾನ್ಯ) ವರ್ಗಕ್ಕೆ ಮೀಸಲಾಗಿದೆ. ಸಾಮಾನ್ಯ ವರ್ಗಕ್ಕೆ ಕಳೆದ 3 ಅವಧಿಯಿಂದ ನಿರಂತರ ಮೀಸಲಾತಿ ನೀಡಲಾಗಿದೆ. ಇದರಿಂದಾಗಿ ಹಿಂದುಳಿದ ವರ್ಗದವರಿಗೆ ಅವಕಾಶ ಇಲ್ಲದಂತಾಗಿದೆ. ಪ್ರಸಕ್ತ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗಕ್ಕೆ ನೀಡಿರುವ ಮೀಸಲಾತಿ ಬದಲಿಗೆ ಹಿಂದುಳಿದ ವರ್ಗ (ಅ) ಮೀಸಲಾತಿ ಬದಲಾಯಿಸಿ ಕೊಡಬೇಕು,’ ಎಂದು 2020ರ ಜುಲೈ 31ರಂದು ಪತ್ರದಲ್ಲಿ ಕೋರಿದ್ದರು. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಮೀಸಲಾತಿ ವಿಚಾರದಲ್ಲಿ ಇವರು ಬರೆದಿರುವ ಪತ್ರ, ಕಾನೂನನ್ನು ಬದಲಾಯಿಸಿ ಎಂದು ಹೇಳಿದಂತಿದೆ. ಒಂದೊಮ್ಮೆ ಮೀಸಲಾತಿ ವಂಚನೆಯಾಗಿದ್ದಲ್ಲಿ ರಾಜ್ಯ ಸರ್ಕಾರವೇ ಬದಲಾಯಿಸಬೇಕು. ಅಥವಾ ಬಾಧಿತ ವ್ಯಕ್ತಿ, ಸಂಬಂಧಿಸಿದ ವರ್ಗದ ಮುಖಂಡರು ಸರ್ಕಾರಕ್ಕೆ ಮೊರೆ ಹೋಗಬೇಕು. ಅಲ್ಲದೆ ಮೀಸಲಾತಿ ಬದಲಾಯಿಸುವ ಸಂಬಂಧ ಮುಖ್ಯಮಂತ್ರಿ ಗಮನಕ್ಕೆ ತರಲು ಆರ್‌ಡಿಪಿಆರ್‌ ಸಚಿವರಿದ್ದಾರೆ. ಆದರೂ ಮೀಸಲಾತಿ ಬದಲಾಯಿಸುವ ವಿಚಾರಕ್ಕೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು ಕೈ ಹಾಕಿದ್ದೇಕೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಮುಖ್ಯಮಂತ್ರಿಗಳ ಆದೇಶವಿತ್ತೇ?

ಮೀಸಲಾತಿ ಬದಲಾಯಿಸುವ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ಮುಖ್ಯಮಂತ್ರಿಗಳ ಆದೇಶವಿತ್ತೇ ಅಥವಾ ಸಂಬಂಧಿಸಿದ ಸಚಿವರು ಈ ಕುರಿತು ಅವರಿಗೆ ಹೇಳಿದ್ದರೇ? ಕೋಲಾರ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರದಲ್ಲಿ ಎಲ್ಲಿಯೂ ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಸಚಿವರ ಉಲ್ಲೇಖಿಸಿಲ್ಲ. ಹೀಗಾಗಿ ಈ ವಿಚಾರದಲ್ಲಿ ಮಾಧ್ಯಮ ಸಲಹೆಗಾರರ ಕಾರ್ಯ ಮತ್ತು ಅಧಿಕಾರ ವ್ಯಾಪ್ತಿ ಮೀರಿ ಮಹಾದೇವ ಪ್ರಕಾಶ್‌ ಅವರು ನಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ರಾಜ್ಯೋತ್ಸವ ಪ್ರಶಸ್ತಿ ತಿರಸ್ಕಾರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದು ನೈತಿಕ ಗೊಂದಲಗಳನ್ನು ಮುಂದಿಟ್ಟಿದ್ದ ಇವರು ಮೀಸಲಾತಿ ಬದಲಾಯಿಸುವ ಬಗ್ಗೆ ಪತ್ರ ಬರೆಯುವಾಗ ನೈತಿಕ ಗೊಂದಲಗಳು ಕಾಣಿಸಿಕೊಳ್ಳಲಿಲ್ಲವೇ ಎಂಬ ಮಾತು ಕೇಳಿ ಬಂದಿವೆ.
ಮಾಧ್ಯಮ ಮತ್ತು ಸಂವಹನ ಕುರಿತಾಗಿ ಮುಖ್ಯಮಂತ್ರಿಗಳಿಗೆ ಕೇವಲ ಸಲಹೆ ಮಾತ್ರ ನೀಡುವದಷ್ಟೇ ಇವರ ಕೆಲಸವಾಗಿದೆಯೇ ವಿನಃ ಕಾರ್ಯಾಂಗದ ವಿಚಾರದಲ್ಲಿ ಸೂಚನೆಗಳನ್ನು ಕೊಡುವುದು ಇವರ ವ್ಯಾಪ್ತಿಗೆ ಬರುವುದಿಲ್ಲ.

ಪ್ರಶಸ್ತಿಗಾಗಿ ನಾನು ಎಂದಿಗೂ ಲಾಬಿ ಮಾಡಿಲ್ಲ. ಈ ಬಾರಿ ಅಧಿಕಾರದ ಬಲದಿಂದ ಪ್ರಶಸ್ತಿ ಪಡೆದೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಮೂಡಬಾರದು. ನಮ್ಮ ನಡೆ ನುಡಿ ಇತರರಿಗೆ ಮಾದರಿಯಾಗಬೇಕೇ ಹೊರತು ಮಾರಕವಾಗಬಾರದು ಎನ್ನುವ ದೃಷ್ಟಿಯಿಂದ ಪ್ರಶಸ್ತಿ ನಿರಾಕರಿಸುವ ನಿರ್ಧಾರ ಮಾಡಿದ್ದೇನೆಂದು ತಿಳಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts