ವನ್ಯಜೀವಿ ಸಪ್ತಾಹ ಖರ್ಚು ವೆಚ್ಚ; ಸಂಬಂಧಿಸದ ಕಚೇರಿಗೆ ಅರ್ಜಿ ರವಾನೆ, ಮಾಹಿತಿ ನೀಡದ ಅರಣ್ಯ ಇಲಾಖೆ ಕಳ್ಳಾಟ

ಬೆಂಗಳೂರು; ರಾಜ್ಯಮಟ್ಟದ ವನ್ಯಜೀವಿ ಸಪ್ತಾಹ ಆಚರಣೆಗೆ ಸಂಬಂಧಿಸಿದಂತೆ ಸಂಪೂರ್ಣ ವೆಚ್ಚದ ಮಾಹಿತಿಯನ್ನು ಆರ್‍‌ಟಿಐ ಅಡಿ  ಬಹಿರಂಗಪಡಿಸದ ಇಲಾಖೆಯು, ಕಾಲಹರಣ ಮಾಡುತ್ತಿದೆ.

 

ಬೆಂಗಳೂರು ನಗರದಲ್ಲಿ 2025ರ ಅಕ್ಟೋಬರ್‍‌ 2ರಿಂದ 8ರವರೆಗೆ ವನ್ಯಜೀವಿ ಸಪ್ತಾಹ ಆಚರಿಸಿತ್ತು. ಈ ಕಾರ್ಯಕ್ರಮಕ್ಕೆ ತಗುಲಿರುವ ವೆಚ್ಚದ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿ ಮಾಹಿತಿ ಕೋರಿತ್ತು. ಆದರೆ ಅರಣ್ಯ ಇಲಾಖೆಯ ಮಾಹಿತಿ ಹಕ್ಕು ಅಧಿಕಾರಿಯು, ಸಂಬಂಧಿಸದ 13 ಕಚೇರಿಗಳಿಗೆ ವರ್ಗಾವಣೆ ಮಾಡಿದ್ದಾರೆ. ಮಾಹಿತಿ ಒದಗಿಸಲು ಅನಗತ್ಯ ವಿಳಂಬ ಮತ್ತು ಮಾಹಿತಿ ನೀಡದಂತೆ ಕುಟಿಲ ತಂತ್ರ ನಡೆಸಿದೆ. ಇದರಿಂದ ಕಚೇರಿ ಸಮಯವೂ ಪೋಲಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ವಿಶೇಷವಾಗಿ ಈ ವರ್ಷ 71 ನೇ ವನ್ಯಜೀವಿ ಸಪ್ತಾಹದ ಕಾರ್ಯಕ್ರಮವನ್ನು “ಮಾನವ-ವನ್ಯಜೀವಿ ಸಹಬಾಳ್ವೆಯ” ಮುಖ್ಯಧ್ಯೇಯ ಹೊಂದಿದ ಸಪ್ತಾಹವಾಗಿತ್ತು. ಸಪ್ತಾಹದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಅರಣ್ಯ ಸಚಿವರಾದ ಈಶ್ಚರ್‌ ಖಂಡ್ರೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ ಮೀನಾಕ್ಷಿ ನೇಗಿ, ಅರಣ್ಯ ಮತ್ತು ವನ್ಯಜೀವಿ ರಾಯಭಾರಿಯಾದ ಅನಿಲ್‌ ಕುಂಬ್ಳೆ, ಇತರ ಹಿರಿಯ ಅಧಿಕಾರಿಗಳೂ ಸೇರಿದಂತೆ ವಿಧಾನಸೌಧದಿಂದ ಲಾಲ್‌ಬಾಗ್‌ ವರೆಗಿನ ಕಾಲ್ನಡಿಗೆ ಮುಖಾಂತರ ನೆರವೇರಿಸಿದ್ದರು.

 

 


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ವಿಧಾನಸೌಧದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವನ್ಯಜೀವಿ ವಾರೋತ್ಸವದ ಸಂಬಂಧ ಜಾಗೃತಿ ಮೂಡಿಸಲು ಪ್ರಬಂಧ ಸ್ಪರ್ಧೆ, ಚಿತ್ರಕಲೆ, ಉಪನ್ಯಾಸಗಳು, ವನ ಭೋಜನ, ಪ್ರಕೃತಿ ನಡಿಗೆ, ಸೈಕಲ್‌ ರ್ಯಾಲಿ, ಕಾರ್ಯಾಗಾರಗಳು, ಹಲವು ವನ್ಯಜೀವಿ ಚಲನಚಿತ್ರಗಳ ವೀಕ್ಷಣೆ ಹೀಗೆ ಹತ್ತು ಹಲವು ಸಾಂಸ್ಕೃತಿಕ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಉತ್ಸವದ ಉದ್ದಕ್ಕೂ ಅರಣ್ಯ ಇಲಾಖೆ ಹಮ್ಮಿಕೊಂಡಿತ್ತು.

 

ಬನ್ನೇರುಘಟ್ಟ, ಆನೇಕಲ್, ಹಾರೋಹಳ್ಳಿ, ಕೋಡಿಹಳ್ಳಿ ವನ್ಯಜೀವಿ ಪ್ರದೇಶಗಳ ಹಳ್ಳಿಗಳಲ್ಲಿ ಹಲವು ಕಾರ್ಯಕ್ರಮಗಳು ನಡೆದಿದ್ದವು.  ಬನ್ನೇರುಘಟ್ಟ ಜೀವವೈವಿಧ್ಯ ಉದ್ಯಾನವನದಲ್ಲಿ ವಿಶೇಷ ಸಾಮರ್ಥ್ಯ ಹೊಂದಿದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಅರಣ್ಯ ಭವನದಿಂದ ಬನ್ನೇರುಘಟ್ಟಕ್ಕೆ ಸೈಕಲ್ ರ್ಯಾಲಿ (ಅಕ್ಟೋಬರ್ 5), ಪಕ್ಷಿ ವೀಕ್ಷಣೆ ಕಾರ್ಯಕ್ರಮ ನಡೆದಿತ್ತು.

 

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯಲ್ಲಿ  ವನ್ಯಜೀವಿ ಕಾನೂನು ಮತ್ತು ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆ ಕಾರ್ಯಾಗಾರ (ಅಕ್ಟೋಬರ್ 6) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಮಾರೋಪ ಸಮಾರಂಭ (ಅಕ್ಟೋಬರ್ 8) ನಡೆದಿತ್ತು.

 

ಕಾರ್ಯಕ್ರಮಗಳಿಗಾಗಿ ಬ್ಯಾನರ್‌ಗಳು, ಪೋಸ್ಟರ್‌ಗಳು, ಹೋರ್ಡಿಂಗ್ಸ್‌ಗಳಲ್ಲಿ ಕಾರ್ಯಕ್ರಮದ ಕುರಿತು ಪ್ರಚಾರ ನಡೆಸಿತ್ತು.  ಅಲ್ಲದೇ ಹಲವಡೆ ಸಾಕ್ಷ್ಯ ಮತ್ತು ಕಿರು ಚಿತ್ರ ಪ್ರದರ್ಶಿಸಿತ್ತು. ಉಪಾಹಾರ, ವಸತಿ, ಸಾರಿಗೆ ವ್ಯವಸ್ಥೆ, ಗೌರವಧನ, ಸನ್ಮಾನ, ಸ್ಮರಣಿಕೆ/ಪ್ರಸ್ತುತಿ ವೆಚ್ಚಗಳನ್ನು ಇಲಾಖೆಯು ಭರಿಸಿತ್ತು.

 

 

ವಿವಿಧ ಕಾರ್ಯಕ್ರಮಗಳಿಗೆ ಆಗಿರುವ ವೆಚ್ಚದ ಮಾಹಿತಿಯನ್ನು ‘ದಿ ಫೈಲ್‌’, ಆರ್‍‌ಟಿಐ ಅಡಿಯಲ್ಲಿ ಕೋರಿತ್ತು.

 

ಅರ್ಜಿ ವರ್ಗಾವಣೆ ಹಿಂದಿದೆಯೇ ಕುತಂತ್ರ?

 

ಪ್ರಧಾನ ಕಚೇರಿ ಮೂಲಕವೇ ಈ ಕಾರ್ಯಕ್ರಮ ನಡೆದಿರುವ ಕಾರಣ, ಇದಕ್ಕೆ ಸಂಬಂಧಿಸಿದ ಖರ್ಚು ವೆಚ್ಚದ ಮಾಹಿತಿಯೂ ಸಹ ಪ್ರಧಾನ ಕಚೇರಿಯಲ್ಲಿಯೇ ಲಭ್ಯವಿರುತ್ತದೆ. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳೂ ಸಹ ಅನುಮೋದಿಸಿರುತ್ತಾರೆ. ಆದರೂ ಖರ್ಚು ವೆಚ್ಚದ ಮಾಹಿತಿ ಕೋರಿದ್ದ ಅರ್ಜಿಯನ್ನು ಇಲಾಖೆಯ 13 ಕಚೇರಿಗಳಿಗೆ 2025ರ ನವೆಂಬರ್‍‌ 19ರಂದು ವರ್ಗಾವಣೆ  ಮಾಡಲಾಗಿದೆ.

 

 

ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಯ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

 

 

ರಾಜ್ಯದಲ್ಲಿರುವ 6 ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಹುಣಸೂರು ಸಂರಕ್ಷಿತ ಪ್ರದೇಶ, ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ, ಕಾಳಿ ಹುಲಿ ಸಂರಕ್ಷಿತ ಪ್ರದೇಶ, ದಾಂಡೇಲಿ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಚಿಕ್ಕಮಗಳೂರು, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬೆಂಗಳೂರು, ಮಡಿಕೇರಿ ವನ್ಯಜೀವಿ ವಿಭಾಗ, ಮಡಿಕೇರಿ, ಕಾವೇರಿ ವನ್ಯಜೀವಿ ವಿಭಾಗ, ಕೊಳ್ಳೇಗಾಲ, ಎಂ.ಎಂ. ಹಿಲ್ಸ್ ವನ್ಯಜೀವಿ ವಿಭಾಗ, ಕೊಳ್ಳೇಗಾಲ, ಮೈಸೂರು ವನ್ಯಜೀವಿ ವಿಭಾಗ, ಶಿವಮೊಗ್ಗ ವನ್ಯಜೀವಿ ವಿಭಾಗಕ್ಕೆ ಅರ್ಜಿಯನ್ನು ವರ್ಗಾವಣೆ ಮಾಡಿದೆ.

 

11 ಕಚೇರಿಗಳಲ್ಲಿ  ಶೂನ್ಯ ಮಾಹಿತಿ

 

ವರ್ಗಾವಣೆಗೊಂಡಿದ್ದ ಕಛೇರಿಗಳಲ್ಲಿ ನಿರ್ದಿಷ್ಟವಾಗಿ 11 ಕಛೇರಿಗಳಿಂದ ಬಂದಿರುವ ಉತ್ತರದಲ್ಲಿ, ಈ ವಿಷಯವು ತಮ್ಮ ಕಛೇರಿ ವ್ಯಾಪ್ತಿಗೆ ಬರುವುದಿಲ್ಲ, ತಮ್ಮ ಕಛೇರಿಯ ವ್ಯಾಪ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಯಾವುದೇ ವೆಚ್ಚ ಭರಿಸಿರುವುದಿಲ್ಲ, ತಮ್ಮ ಕಛೇರಿಯಲ್ಲಿ ಅರ್ಜಿ ಸಂಬಂಧ ಯಾವುದೇ ಮಾಹಿತಿ ಲಭ್ಯವಿಲ್ಲ” ಎಂದು ಉತ್ತರಿಸಿವೆ.

 

ಉಳಿದ 02 ಕಛೇರಿಗಳು ತಮ್ಮ ಅಧೀನ ಕಛೇರಿಗಳಿಗೆ ವರ್ಗಾವಣೆ ಮಾಡಿ, ಅಲ್ಲಿನ ಹಲವು ಕಛೇರಿಗಳಿಂದಲೂ ತಮ್ಮ ವ್ಯಾಪ್ತಿಗೆ ಅನ್ವಯಿಸುವುದಿಲ್ಲ ಎಂದು ಹಿಂಬರಹ  ನೀಡಿದೆ.  ಕೆಲವು ಕಛೇರಿಗಳು ತಮ್ಮ ವಲಯ ವ್ಯಾಪ್ತಿಯಲ್ಲಿ ನಡೆದ ಸಪ್ತಾಹದ ಖರ್ಚನ್ನು ಪ್ರಸ್ತಾಪಿಸಿವೆ. ಆದರೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ಖರ್ಚುವೆಚ್ಚ ಶೂನ್ಯವೆಂದು ಉತ್ತರಿಸಿವೆ.

 

ಶಿರಸಿ ವಲಯ ಅರಣ್ಯಾಧಿಕಾರಿ, ಕೃಷ್ಣರಾಜಪೇಟೆ ಅರಣ್ಯ ವಲಯ, ಆಗುಂಬೆ ವನ್ಯಜೀವಿ ವಲಯಗಳೂ ಸಹ ತಮ್ಮ ವಲಯಕ್ಕೆ ಅನ್ವಯಿಸುವುದಿಲ್ಲವೆಂದು ಉತ್ತರಿಸಿವೆ. ಅಲ್ಲದೆ ಅರ್ಜಿಯನ್ನು ಮಾಹಿತಿ ಲಭ್ಯವಿಲ್ಲದ ಮತ್ತು ಸಂಬಂಧವಿಲ್ಲದ ಕುದುರೆಮುಖ ವನ್ಯಜೀವಿ ವಿಭಾಗದಿಂದ ಕಾರ್ಕಳ, ಕೆರೆಕಟ್ಟೆ, ಕುದುರೆಮುಖ, ಬೆಳ್ತಂಗಡಿ, ಸೋಮೇಶ್ವರ, ಆಗುಂಬೆ, ಸಿದ್ಧಾಪುರ ಮತ್ತು ಕೊಲ್ಲೂರು ವಲಯ ಅರಣ್ಯಾಧಿಕಾರಿಗಳಿಗೆ, ಮೈಸೂರು ವೃತ್ತದಿಂದ ಮಂಡ್ಯ, ಮೈಸೂರು, ಹುಣಸೂರಿಗೆ ವರ್ಗಾವಣೆ ಮಾಡಿದೆ.

 

ಮಂಡ್ಯ ಉಪಅರಣ್ಯ ಕಛೇರಿಯಿಂದ ಮಂಡ್ಯ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ನಾಗಮಂಗಲ, ಪಾಂಡವಪುರ ಮತ್ತು ಕೆ.ಆರ್.ಪೇಟೆ ವಲಯ ಅರಣ್ಯಾಧಿಕಾರಿಗಳಿಗೆ, ಶಿರಸಿ ಉಪ ಅರಣ್ಯವಲಯದಿಂದ ಬನವಾಸಿ, ಹುಲೇಕಲ್‌, ಜಾನ್ಮನೆ, ಸಿದ್ದಾಪುರ & ಕ್ಯಾದಗಿ ವಲಯ ಅರಣ್ಯಾಧಿಕಾರಿಗಳಿಗೆ, ಯಲ್ಲಾಪುರದ ಉ ಪಅರಣ್ಯ ಕಛೇರಿಯಿಂದ ಯಲ್ಲಾಪುರ, ಕಿರವತ್ತಿ, ಮಂಚಿಕೇರಿ, ಇಡಗುಂದಿ, ಮುಂಡಗೋಡ ಮತ್ತು ಕಾತೂರ ಇಲ್ಲಿಗೆ ವರ್ಗಾವಣೆಗೊಂಡಿರುತ್ತವೆ. ಹೀಗೆ ವಲಯಗಳು ಉಪವಲಯಗಳಿಗೆ, ಉಪವಲಯಗಳು ವಿಭಾಗಗಳಿಗೆ ವರ್ಗಾವಣೆ ಮಾಡಿವೆ.

 

ವಿಭಾಗಗಳು ಉಪವಿಭಾಗಗಳಿಗೆ ಹೀಗೆ ಅನಗತ್ಯ ಸರಪಳಿಯಂತೆ ವರ್ಗಾವಣೆ ಮಾಡಿದೆ. ಇದು  ಸಾರ್ವಜನಿಕರ ತೆರಿಗೆಯ ಹಣ, ಅಂಚೆವೆಚ್ಚ ಮತ್ತು ಕಛೇರಿ ಸಮಯವನ್ನು ಅನಗತ್ಯ ಪೋಲು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಬನ್ನೇರುಘಟ್ಟ ವಲಯದಲ್ಲಿ 32.24 ಲಕ್ಷ ವೆಚ್ಚ

 

ಬನ್ನೇರುಘಟ್ಟ ವನ್ಯಜೀವಿ ವಲಯ, ಕಲ್ಕೆರೆಯಿಂದ ಮಾತ್ರ ಮಾಹಿತಿ ಬಂದಿದೆ. ಈ ಮಾಹಿತಿ ಪ್ರಕಾರ   32,24, 951.00 ರುಪಾಯಿಗಳ ವೆಚ್ಚವಾಗಿದೆ. ಶಿರಸಿ ವಿಭಾಗದ ಸಿದ್ದಾಪುರ ಮತ್ತು ಯಲ್ಲಾಪುರ ವಿಭಾಗದ ಕಾತೂರ ವಲಯದಿಂದ, ಮಂಡ್ಯ ವಿಭಾಗದ ನಾಗಮಂಗಲ ವಲಯದಿಂದಲೂ ಯಾವುದೇ ವೆಚ್ಚಗಳನ್ನು ಈ ಸಂಬಂಧ ಭರಿಸಿರುವುದಿಲ್ಲವೆಂದು ಉತ್ತರಿಸಿವೆ.

 

ಅರಣ್ಯ ಇಲಾಖೆಯ ಕಳ್ಳಾಟ

 

ಮಾಹಿತಿ ಹಕ್ಕಿನ ಅಡಿಯಲ್ಲಿ ಸಲ್ಲಿಸುವ ಅರ್ಜಿಗಳಿಗೆ ಮಾಹಿತಿ ಒದಗಿಸದ  ಅರಣ್ಯ ಇಲಾಖೆಯು ಕಳ್ಳಾಟ ನಡೆಸುತ್ತಿದೆ. ಈ ಹಿಂದೆಯೂ ಶರಾವತಿ ನದಿ ದಡ ಒತ್ತುವರಿ ಪ್ರಕರಣದಲ್ಲಿಯೂ ಸಹ ಮಾಹಿತಿ ಹಕ್ಕಿನಡಿ ಕೋರಿದ್ದ ಹಲವು ಅರ್ಜಿಗಳಿಗೆ ಮಾಹಿತಿ ನೀಡಿರಲಿಲ್ಲ.  ಯಾವ ಕಛೇರಿಯಲ್ಲಿ ಮಾಹಿತಿ ಇದೆ ಎಂಬುದನ್ನೂ ಸಹ ಗುರುತಿಸಲು ಅರ್ಜಿದಾರರಿಗೆ ಸಾಧ್ಯವಾಗಿಲ್ಲ.

 

ಒಂದೊಮ್ಮೆ ಸುಳ್ಳು ವರ್ಗಾವಣೆಯಾಗಿರುವ ಕಛೇರಿಯು ತಮ್ಮಲ್ಲಿ ಮಾಹಿತಿ ಲಭ್ಯವಿಲ್ಲವೆಂದು ಮಾಹಿತಿ ಆಯೋಗದ ಮುಂದೆ ಉತ್ತರಿಸಿದರೂ ಅರ್ಜಿದಾರರಿಗೆ ಮಾಹಿತಿಯೇ  ಇಲ್ಲದೆ ವಿಲೇಯಾದ ಪ್ರಕರಣಗಳು ಸಾಕಷ್ಟಿವೆ.
ಮಾಹಿತಿ ಹಕ್ಕು ಕಾಯ್ದೆಯ ಕಲಂ 6(3) ವರ್ಗಾವಣೆಯ ನಿಯಮದನ್ವಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿ ನಿಜವಾಗಿಯೂ ಲಭ್ಯವಿರುವ ಕಛೇರಿಗೆ ವರ್ಗಾವಣೆ ಮಾಡಬೇಕು.

 

ಅರ್ಜಿ ಸಲ್ಲಿಸಿದ 5 ದಿವಸಗಳೊಳಗೆ ವರ್ಗಾವಣೆ ಮಾಡಿ, ಅರ್ಜಿದಾರರಿಗೆ ತಿಳಿಸಬೇಕು.  ಮತ್ತು ತಮ್ಮ ಬಳಿ ಇರುವ ಮಾಹಿತಿಯನ್ನು ನೀಡಿ ನಂತರ ಲಭ್ಯವಿರದ ಮಾಹಿತಿಗೆ ವರ್ಗಾವಣೆ ಮಾಡಬೇಕು. ಕಾರ್ಯಕ್ರಮ ಸಂಬಂಧ ಮಾಹಿತಿ ಕೋರಿದ್ದ ಬೆಂಗಳೂರಿನ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿಗಳ ಕಛೇರಿಯು 13 ಕಛೇರಿಗಳಿಗೆ ವರ್ಗಾವಣೆ ಮಾಡಿ ಅಲ್ಲಿಂದ ನಿರಂತರ ವಿಭಾಗಗಳಿಗೆ ವರ್ಗಾವಣೆ ಮಾಡಿದೆ.

 

ಬಹುತೇಕ ಕಛೇರಿಗಳು “ಮಾಹಿತಿ ಇಲ್ಲ” ಎಂದು ಉತ್ತರಿಸಿರುವುದು, ವರ್ಗಾವಣೆಯು ದುರುದ್ದೇಶಪೂರಿತವಾಗಿತ್ತು ಎಂಬುದನ್ನು ಸಾಬೀತುಪಡಿಸಿದೆ. ಮಾಹಿತಿ ಹಕ್ಕು ಕಾಯ್ದೆಯ ಕಲಂ 5(5) ಅನ್ವಯ, ಸಾರ್ವಜನಿಕ ಮಾಹಿತಿ ಅಧಿಕಾರಿಯು ಸಹಾಯಕ್ಕಾಗಿ ಮಾಹಿತಿ ಕೇಳಿರುವ ಪ್ರತಿಯೊಬ್ಬ ಅಧಿಕಾರಿಯೂ ‘ಡೀಮ್ಡ್ ಪಿಐಒ’ ಆಗಿ ಪರಿಗಣಿಸಲ್ಪಡುತ್ತಾರೆ.

 

ಹೀಗಾಗಿ ಸುಳ್ಳು ವರ್ಗಾವಣೆ, ಮಾಹಿತಿ ತಡೆ ಅಥವಾ ವಿಳಂಬಕ್ಕೆ ಮೂಲ ಪಿಐಒ ಮಾತ್ರವಲ್ಲದೆ, ವರ್ಗಾವಣೆಯಾದ ಕಛೇರಿಗಳ ಅಧಿಕಾರಿಗಳೂ ವೈಯಕ್ತಿಕವಾಗಿ ಹೊಣೆಗಾರರಾಗುತ್ತಾರೆ. ಆದರೂ ಸಹ ಮಾಹಿತಿ ಹಕ್ಕು ಅಧಿಕಾರಿಯು, ಸಂಬಂಧಪಡದ ಕಚೇರಿಗಳಿಗೆ  ವರ್ಗಾವಣೆ ಮಾಡುವ ಮೂಲಕ ಮಾಹಿತಿಯನ್ನು ಬಚ್ಚಿಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಭಾಗವಹಿಸಿದ ರಾಜ್ಯಮಟ್ಟದ ಕಾರ್ಯಕ್ರಮದ ಸಾರ್ವಜನಿಕ ಹಣದ ಲೆಕ್ಕಪತ್ರಗಳನ್ನು ಮರೆಮಾಚುವ ಪ್ರಯತ್ನವು ಪ್ರಜಾಪ್ರಭುತ್ವದ ಪಾರದರ್ಶಕತೆಗೆ ಸವಾಲಾಗಿದೆ.

 


ಕಲಂ 8ನ್ನು  ಉಲ್ಲೇಖಿಸಿ ನಿರಾಕರಿಸುವುದು, ಗೌಪ್ಯತೆ ಪ್ರಸ್ತಾಪಿಸಿ, ಮೂರನೇ ವ್ಯಕ್ತಿ ವಿಷಯವೆಂದು ಸುಳ್ಳು ನಿರಾಕರಣೆ, ಮಾಹಿತಿ ಲಭ್ಯವಿಲ್ಲದ ಅಧಿಕಾರಿಗಳು ಮಾಹಿತಿ ನೀಡುವ ಬದಲು ಅರ್ಜಿದಾರರನ್ನು ಆಯಾಸಗೊಳಿಸುವ ಹತ್ತಾರು ಕಾರ್ಯವಿಧಾನಗಳನ್ನು ಬಳಸುತ್ತಿದ್ದಾರೆ.  ವರ್ಗಾವಣೆಯ ಮೂಲಕ ದಾರಿ ತಪ್ಪಿಸುವುದು ಸಾಮಾನ್ಯ ತಂತ್ರವಾಗಿರುವುದು ಸರ್ಕಾರದ ಪಾರದರ್ಶಕ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತರು.

Your generous support will help us remain independent and work without fear.

Latest News

Related Posts