ಇವಿಎಂ ನಿಖರತೆ: ಕಲ್ಬುರ್ಗಿಯಲ್ಲಿ ಶೇ. 94.98, ಮೈಸೂರಲ್ಲಿ ಶೇ. 88.59 ರಷ್ಟು ಭರ್ಜರಿ ವಿಶ್ವಾಸಾರ್ಹತೆ

ಬೆಂಗಳೂರು;  ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಮತ್ತು ನಿಖರತೆ ಬಗ್ಗೆ ರಾಜ್ಯದಲ್ಲಿ ಬಹುಪಾಲು ಜನರು ಅಂದರೆ, ಶೇಕಡಾ 83.61ರಷ್ಟು ಮತದಾರರು ವಿಶ್ವಾಸ ಹೊಂದಿದ್ದಾರೆ  ಎಂದು  ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ್ದ ಅಧ್ಯಯನವು  ಹೊರಗೆಡವಿದೆ.

 

ವಿಶೇಷವೆಂದರೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ತವರು ಜಿಲ್ಲೆ ಕಲ್ಬುರ್ಗಿಯಲ್ಲಿ ಶೇ.94.08ರಷ್ಟು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು ವಿಭಾಗದಲ್ಲಿ ಶೇ. 88.59ರಷ್ಟು ಮತದಾರರು, ಇವಿಎಂಗಳ ವಿಶ್ವಾಸಾರ್ಹತೆ ಮತ್ತು  ನಿಖರತೆಯ ಕುರಿತು ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

 

ಕೇಂದ್ರ ಚುನಾವಣಾ ಆಯೋಗದ ಮಹತ್ವಾಕಾಂಕ್ಷಿ ‘ಸ್ವೀಪ್’ (ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಷನ್ ಆಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್) ಉಪಕ್ರಮದಿಂದ ಚುನಾವಣಾ ಸಾಕ್ಷರತೆ, ಮತದಾರರ ಪಾಲ್ಗೊಳ್ಳುವಿಕೆ ಹಾಗೂ ವರ್ತನಾ ಬದಲಾವಣೆಗಳಲ್ಲಿ ಆಗಿರುವ ಬದಲಾವಣೆಗಳ ಪ್ರಮಾಣ ಅರಿಯಲು ನಡೆಸಿದ ಸಮೀಕ್ಷಾ ಅಧ್ಯಯನ ಈ ಬಗ್ಗೆ ಬೆಳಕು ಚೆಲ್ಲಿದೆ.

 

ಇವಿಎಂ ಪ್ರಸ್ತುತ ಕಪ್ಪು ಪೆಟ್ಟಿಗೆಯಾಗಿದೆ, ಚುನಾವಣೆ ಆಯೋಗವು ಯಂತ್ರಗಳು ಮತ್ತು ಪ್ರಕ್ರಿಯೆಗಳ ಬಗ್ಗೆ ಸಂಪೂರ್ಣವಾಗಿ ಪಾರದರ್ಶಕತೆ ಖಚಿತಪಡಿಸಿಕೊಳ್ಳಬೇಕು ಅಥವಾ ಅವುಗಳನ್ನು ರದ್ದುಗೊಳಿಸಬೇಕು ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು  ಆಯೋಗವನ್ನು ಒತ್ತಾಯಿಸಿದ್ದರು. ರಾಹುಲ್‌ ಗಾಂಧಿ ತಳೆದಿದ್ದ ನಿಲುವನ್ನೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಬೆಂಬಲಿಸಿತ್ತು. ಅಲ್ಲದೇ ಮುಂಬರುವ  ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂಗಳ ಬದಲಿಗೆ ಬ್ಯಾಲೆಟ್‌ ಪೇಪರ್‍‌ಗಳನ್ನು ಬಳಸಲಾಗುವುದು ಎಂದು ಈಗಾಗಲೇ ಘೋಷಿಸಿದೆ.

 

ಇವಿಎಂಗಳ ವಿಶ್ವಾಸಾರ್ಹತೆ ಕುರಿತು ಅವಿಶ್ವಾಸ ವ್ಯಕ್ತಪಡಿಸಿರುವ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳನ್ನು ನಿಷೇಧಿಸಿ ಕಾಗದದ ಮತಪತ್ರಗಳಿಗೆ ಮರಳುತ್ತಿರುವುದು ಮತ್ತು  ಚುನಾವಣಾ ಸಮಗ್ರತೆಯ ಕುರಿತಾದ ರಾಷ್ಟ್ರೀಯ ಚರ್ಚೆಗೆ ತಿರುವು ಸಿಕ್ಕಿದೆ. ಇದರ  ಬೆನ್ನಲ್ಲೇ  ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ (ಕೆಎಎಂಎ) ವು ಗ್ರಾಸ್ ರೂಟ್ಸ್ ರಿಸರ್ಚ್ ಆಂಡ್ ಅಡ್ವೊಕೆಸಿ ಮೂವ್ ಮೆಂಟ್ ಸಂಸ್ಥೆಯ ಮೂಲಕ ನಡೆಸಿದ್ದ ಅಧ್ಯಯನ ವರದಿಯೂ ಮುನ್ನೆಲೆಗೆ ಬಂದಿದೆ.   ಈ ವರದಿಯು  ಇವಿಎಂಗಳ ಕುರಿತಾದ  ಚರ್ಚೆಯನ್ನು ಮತ್ತಷ್ಟು ವಿಸ್ತರಿಸಿದೆ.

 

ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು  2025ರ ಆಗಸ್ಟ್‌ನಲ್ಲಿಯೇ ಈ ವರದಿಯನ್ನು ಪ್ರಕಟಿಸಿದೆ.  ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ತಿಳಿವಳಿಕೆ, ದೃಷ್ಟಿಕೋನ ಮತ್ತು ಅನುಸರಣೆಗಳ (ಕೆಎಪಿ) ಸರ್ವೆ ವಿಧಾನದಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ಗ್ರಾಸ್ ರೂಟ್ಸ್ ರಿಸರ್ಚ್ ಆಂಡ್ ಅಡ್ವೊಕೆಸಿ ಮೂವ್ ಮೆಂಟ್ ಸಂಸ್ಥೆಯ ಮೂಲಕ ಸಮೀಕ್ಷೆ, ಸಂದರ್ಶನ ಆಧರಿತ  ಅಧ್ಯಯನ ನಡೆಸಿತ್ತು.   ಅಧ್ಯಯನ ತಂಡವು ನಡೆಸಿದ್ದ ಸಮೀಕ್ಷೆ ಮತ್ತು ಸಂದರ್ಶನದಲ್ಲಿ ಭಾಗವಹಿಸಿದ್ದ ಮತದಾರರ ಪೈಕಿ   ರಾಜ್ಯದ ಶೇಕಡಾ 83.61ರಷ್ಟು ಮತದಾರರು ಇವಿಎಂಗಳ ಮೇಲೆ  ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶೇ.83.61ರಷ್ಟು ಮತದಾರರು ಇವಿಎಂಗಳ ಮೇಲೆ ಇರಿಸಿರುವ ವಿಶ್ವಾಸವು,  ರಾಹುಲ್ ಗಾಂಧಿ ಸೇರಿದಂತೆ ಇಂಡಿ ಒಕ್ಕೂಟವನ್ನು  ಹಿನ್ನೆಲೆಗೆ ಸರಿಸಿದಂತಾಗಿದೆ.

 

‘ಲೋಕಸಭಾ ಚುನಾವಣೆ 2024- ನಾಗರಿಕರ ತಿಳಿವಳಿಕೆ, ದೃಷ್ಟಿಕೋನ ಮತ್ತು ಅನುಸರಣೆ (ಕೆಎಪಿ)ಗಳ ಸಮೀಕ್ಷೆಯ ಅವಲೋಕನ’  ಎಂಬ ಈ ಅಧ್ಯಯನಕ್ಕಾಗಿ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ವಿಭಾಗಗಳ 34 ಚುನಾವಣಾ ಜಿಲ್ಲೆಗಳ102 ವಿಧಾನಸಭಾ ಕ್ಷೇತ್ರಗಳಲ್ಲಿ 5,100 ಮತದಾರರನ್ನು ಮಾದರಿ ಸಮೀಕ್ಷೆಗೆ ಒಳಪಡಿಸಲಾಗಿತ್ತು.

 

ಬೆಂಗಳೂರು ವಿಭಾಗದ 12 ಚುನಾವಣಾ ಜಿಲ್ಲೆಗಳು, ಬೆಳಗಾವಿ ವಿಭಾಗದ 8 ಚುನಾವಣಾ ಜಿಲ್ಲೆಗಳು, ಕಲಬುರಗಿ ವಿಭಾಗದ 7 ಚುನಾವಣಾ ಜಿಲ್ಲೆಗಳು, ಮೈಸೂರು ವಿಭಾಗದ 7 ಚುನಾವಣಾ ಜಿಲ್ಲೆಗಳಲ್ಲಿ ಪ್ರಶ್ನಾವಳಿಗೆ ಪಡೆಯಲಾದ ಉತ್ತರಗಳು, 23 ವಿಸ್ತೃತ ಸಂದರ್ಶನಗಳು , ವಿವಿಧ ಮತದಾರರ ಸಮೂಹಗಳೊಂದಿಗೆ ನಡೆಸಲಾದ 57 ಗುರಿ ಕೇಂದ್ರಿತ ಸಂವಾದಗಳು, 16 ಬೂತ್ ಮಟ್ಟದ ಪ್ರಕರಣ ಅಧ್ಯಯನಗಳನ್ನು ಇದು ಒಳಗೊಂಡಿರುವುದು ವರದಿಯಿಂದ ಗೊತ್ತಾಗಿದೆ.

 

ಪ್ರತಿ ಜಿಲ್ಲೆಯ ಒಂದು ನಗರ ಕ್ಷೇತ್ರ (ಸಾಮಾನ್ಯ), ಒಂದು  ಗ್ರಾಮೀಣ ಕ್ಷೇತ್ರ (ಸಾಮಾನ್ಯ) ಮತ್ತು ಒಂದು ಮೀಸಲು ಕ್ಷೇತ್ರದಂತೆ  ಹಾಗೂ ಪ್ರತಿ ಕ್ಷೇತ್ರದಲ್ಲಿ 50 ಮತದಾರರನ್ನು ಸಮೀಕ್ಷೆಗಾಗಿ ಆಯ್ಕೆ ಮಾಡಲಾಗಿತ್ತು, . ಗ್ರಾಮೀಣ, ಅರೆಪಟ್ಟಣ ಹಾಗೂ ನಗರ ಪ್ರದೇಶಗಳನ್ನು ಗಮನದಲ್ಲಿರಿಸಿಕೊಂಡು ಅಧ್ಯಯನ ನಡೆಸಲಾಗಿದೆ ಎಂದು ವಿವರಿಸಲಾಗಿದೆ.

 

ಇವಿಎಂ ನಿಖರತೆಯ ವಿಶ್ವಾಸಾರ್ಹತೆ

 

ಇವಿಎಂಗಳ   ವಿಶ್ವಾಸಾರ್ಹತೆ ವ್ಯಕ್ತಪಡಿಸಿದವರನ್ನು ಅಧ್ಯಯನ ತಂಡವು  ಎರಡು ರೀತಿಯಾಗಿ ವರ್ಗೀಕರಿಸಿತ್ತು.  ಶೇ. 69.39 ರಷ್ಟು ಮತದಾರರಿಂದ ಸಾಧಾರಣ ಮಟ್ಟದ ವಿಶ್ವಾಸ  ಹಾಗೂ ಶೇ. 14.22 ರಷ್ಟು ಜನರಿಂದ ಪ್ರಬಲ ವಿಶ್ವಾಸ  ಕಂಡುಬಂದಿದೆ.

 

ಕಲ್ಬುರ್ಗಿ ಮತದಾರರಲ್ಲಿ  ಶೇ. 94.98ರಷ್ಟು ವಿಶ್ವಾಸ

 

ಕಲಬುರಗಿ ವಿಭಾಗದಲ್ಲಿ ಒಟ್ಟಾರೆ  ಅತ್ಯಧಿಕ ಶೇ. 94.48 ರಷ್ಟು ಮತದಾರರು ಇವಿಎಂ ಫಲಿತಾಂಶಗಳ ನಿಖರತೆಗೆ ಸಹಮತ ಸೂಚಿಸಿದ್ದಾರೆ. ಈ ಪೈಕಿ ಶೇ.11.24 ರಷ್ಟು ಮತದಾರರು ಪ್ರಬಲವಾಗಿ ನಿಖರತೆಯನ್ನು ವ್ಯಕ್ತಪಡಿಸಿದ್ದರೇ, ಶೇ. 83.24ರಷ್ಟು ಮಂದಿ ನಿಖರತೆಯನ್ನು ಒಪ್ಪಿಕೊಂಡಿದ್ದಾರೆ.

 

 

ಮೈಸೂರು ವಿಭಾಗದಲ್ಲಿ ಶೇ. 17.92ರಷ್ಟು ಮಂದಿ ಮತದಾರರು ಬಲವಾಗಿ ವಿಶ್ವಾಸ ವ್ಯಕ್ತಪಡಿಸಿದ್ದರೇ ಶೇ.70.67ರಷ್ಟು ಮಂದಿ ಇವಿಎಂಗಳನ್ನು ಒಪ್ಪಿಕೊಂಡಿದ್ದಾರೆ.  ಬೆಳಗಾವಿ ವಿಭಾಗದಲ್ಲಿ ಪ್ರಬಲವಾಗಿ ಶೇ. 21.43ರಷ್ಟು ಮತ್ತು ಶೆ.63.90ರಷ್ಟು ಮಂದಿ ಮತದಾರು ಇವಿಎಂಗಳ ನಿಖರತೆಗೆ ತಮ್ಮ ವಿಶ್ವಾಸ ಸೂಚಿಸಿದ್ದಾರೆ.

 

ಬೆಂಗಳೂರು ವಿಭಾಗದಲ್ಲಿ ಇದಕ್ಕೆ ಬಲವಾಗಿ  ಒಪ್ಪಿಗೆ ಸೂಚಿಸಿದವರ ಪ್ರಮಾಣ ಶೇ. 9.28ರಷ್ಟಿದ್ದರೇ ಶೇ. 63.67ರಷ್ಟು ಮಂದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಇದು ಬೇರೆ ವಿಭಾಗಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂಬುದು ವರದಿಯಿಂದ ಗೊತ್ತಾಗಿದೆ.

 

 

 

 

ಇವಿಎಂ ವಿಶ್ವಾಸಾರ್ಹವಲ್ಲ ಎಂದವರ ಪ್ರಮಾಣವು ಕಡಿಮೆಯಿದೆ.  ಅಂದರೆ, 7.04%ರಷ್ಟಿದೆ ಎಂಬುದು ತಿಳಿದು ಬಂದಿದೆ. ತಟಸ್ಥ ನಿಲುವು ತಳೆದವರ ಪ್ರಮಾಣ ಶೇ. 7.65ರಷ್ಟಿದೆ. ಇದು, ಬೆಳಗಾವಿ ವಿಭಾಗದಲ್ಲಿ ಶೇ.  4.29 ಮೈಸೂರು ವಿಭಾಗದಲ್ಲಿ ಶೇ. 3.33 ಹಾಗೂ ಕಲಬುರಗಿ ವಿಭಾಗದಲ್ಲಿ ಶೇ. 2.19ರಷ್ಟಿದೆ. ಬೆಂಗಳೂರು ವಿಭಾಗದಲ್ಲಿ ತಟಸ್ಥ ನಿಲುವು ಹೊಂದಿರುವವರ ಪ್ರಮಾಣವು ಶೇ. 15.67ರಷ್ಟಿದ್ದು, ಇದು ಕೂಡ ಬೇರೆ ವಿಭಾಗಗಳಿಗೆ ಹೋಲಿಸಿದರೆ ಜಾಸ್ತಿಯಾಗಿದೆ.

 

ವಿವಿ ಪ್ಯಾಟ್ ಅರಿವು

 

ನಿಖರ ಮತ ಚಲಾವಣೆಯನ್ನು ಖಾತರಿಪಡಿಸುವ ವಿ.ವಿ.ಪ್ಯಾಟ್ ಬಗ್ಗೆ ತಿಳಿವಳಿಕೆ ಹೊಂದಿದ ಮತದಾರರ ಪ್ರಮಾಣ ಶೇ.  85.39ರಷ್ಟಿದ್ದರೆ, ಇದನ್ನು ಅರಿಯದವರ ಸಂಖ್ಯೆ ಶೇ.  14.61ರಷ್ಟಿದೆ.

 

 

ವಿ.ವಿ.ಪ್ಯಾಟ್ ಕುರಿತು ಗೊತ್ತಿಲ್ಲದವರು ಬೆಂಗಳೂರು ವಿಭಾಗದಲ್ಲಿ ಶೇ. 19.33ರಷ್ಟಿದ್ದರೆ, ಬೆಳಗಾವಿ ವಿಭಾಗದಲ್ಲಿ ಶೇ. 15.52, ಕಲಬುರಗಿಯಲ್ಲಿ ಶೇ.  8.10 ಹಾಗೂ ಮೈಸೂರಿನಲ್ಲಿ ಶೇ.  12.42ರಷ್ಟಿರುವುದು ಅಧ್ಯಯನ ವರದಿಯಿಂದ ಗೊತ್ತಾಗಿದೆ.

 

 

ಇವಿಎಂ ಕಪ್ಪು ಪೆಟ್ಟಿಗೆಯೆಂದಿದ್ದ ರಾಹುಲ್‌ ಗಾಂಧಿ

 

ಇವಿಎಂ ಪ್ರಸ್ತುತ ಕಪ್ಪು ಪೆಟ್ಟಿಗೆಯಾಗಿದೆ. ಚುನಾವಣಾ ಆಯೋಗವು ಯಂತ್ರಗಳು ಮತ್ತು ಪ್ರಕ್ರಿಯೆಗಳ ಸಂಪೂರ್ಣ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಬೇಕು ಅಥವಾ ಅವುಗಳನ್ನು ರದ್ದುಗೊಳಿಸಬೇಕು” ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದ್ದರು.  ಮೊಬೈಲ್ ಫೋನ್ ಮೂಲಕ ಇವಿಎಂ ದುರ್ಬಳಕೆ ಆರೋಪದ ವರದಿಯ ನಂತರ ಮುಂಬೈ ಚುನಾವಣಾ ಅಧಿಕಾರಿಗಳು ಸಹ ರಾಹುಲ್‌ ಗಾಂಧಿ ಪ್ರತಿಪಾದನೆಗೆ   ಸ್ಪಷ್ಟೀಕರಣವನ್ನು ನೀಡಿದ್ದರು.

 

ಇವಿಎಂಗಳು ವಿಶ್ವಾಸಾರ್ಹವಲ್ಲವೆಂದಿದ್ದ ಪಾಟೀಲ್‌

 

ಇವಿಎಂಗಳು  ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಘೋಷಿಸಿದ್ದರು.  ಮಹಾರಾಷ್ಟ್ರ ಚುನಾವಣೆಯ ಬಗ್ಗೆ ವಿವರಿಸಿದ್ದ ಎಚ್‌ ಕೆ ಪಾಟೀಲ್‌ ಅವರು  ಅಂತಿಮ ಹಂತದಲ್ಲಿ ಅಸಹಜವಾಗಿ ಹೆಚ್ಚಿನ ಸಂಖ್ಯೆಯ ಮತಗಳು ಚಲಾವಣೆಯಾಗಿವೆ ಎಂದು ವರದಿಯಾಗಿದೆ ಎಂದಿದ್ದರು.

 

ಭಾರತದ ಚುನಾವಣಾ ಆಯೋಗ (ಇಸಿಐ) “ದಪ್ಪ ಚರ್ಮದ ಮತ್ತು ದುರಹಂಕಾರಿ”ಯಾಗಿ ಬೆಳೆಯುತ್ತಿದೆ ಎಂದು ಪಾಟೀಲ್ ಆರೋಪಿಸಿದ್ದರು.  ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ, ಕರ್ನಾಟಕದ ಸುಮಾರು ಶೇ. 60 ರಷ್ಟು ಮತದಾರರು ಕೈಯಿಂದ ಮತ ಚಲಾಯಿಸಲಿದ್ದಾರೆ. ಇವಿಎಂ ಯಂತ್ರಗಳ ಬಳಕೆ ನಂತರದಶಕದಲ್ಲಿಯೇ ಭಾರತದಲ್ಲಿ ಮೊದಲ ಬಾರಿ ಕಾಗದದ ಮತದಾನದ ಪ್ರಯೋಗ ಇದಾಗಿದೆ.   ಇವಿಎಂಗಳ ಮೇಲಿನ ಅಪನಂಬಿಕೆ ಈಗಾಗಲೇ ಹೆಚ್ಚಿರುವ ಸಮಯದಲ್ಲಿ ತಾವು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದರು.

 

ಇವಿಎಂಗಳು ಚುನಾವಣೆಗಳಿಗೆ ಪಾರದರ್ಶಕತೆಯನ್ನು ತಂದಿತ್ತು.  ವಿಪಕ್ಷಗಳ ಇವಿಎಂ ಅಪಪ್ರಚಾರವು ಅವರ ಸೋಲಿಗೆ ಒಂದು ನೆಪವಷ್ಟೇ.  ಪ್ರಜಾಪ್ರಭುತ್ವದ ಅಪಖ್ಯಾತಿಗೆ ಕಾರಣವಾಗಿರುವ ಇಂಡಿ ಒಕ್ಕೂಟದ ಇವಿಎಂ ಪ್ರಚಾರದ ಪಿತೂರಿ ಈಗ ಬಹಿರಂಗಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡ ತಿರುಗೇಟು ನೀಡಿದ್ದರು.

 

ಚುನಾವಣೆ ಹತ್ತಿರ ಬಂದಂತೆಲ್ಲ ವಿಪಕ್ಷಗಳು, ಸಾಮಾಜಿಕ ಕಾರ್ಯಕರ್ತರು, ತಜ್ಞರು ಇವಿಎಂಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಲೇ ಇದ್ದಾರೆ. ಕಳೆದ ಬಾರಿ ನಡೆದಿದ್ದ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆ ತೀವ್ರಗೊಂಡಿತ್ತು.

 

ಇವಿಎಂ ಬಳಕೆಗೆ ಆಡಳಿತ ಪಕ್ಷ ಅಥವಾ ಚುನಾವಣಾ ಆಯೋಗದ ಸಮರ್ಥನೆ, ವಿಪಕ್ಷಗಳ ದೂಷಣೆ ನಡೆಯುತ್ತಲೇ ಬಂದಿದೆ.  ಇವಿಎಂನಲ್ಲಿ ಸಮಸ್ಯೆಯಿಲ್ಲ ಎಂದು ಚುನಾವಣೆ ಆಯೋಗವೂ  ಹೇಳುತ್ತಿದೆ.   ಕಳೆದ ಜನವರಿಯಲ್ಲಿ 112 ತಾಂತ್ರಿಕ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಮಾಜಿ ಅಧಿಕಾರಿಗಳು ಮುಖ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸಿದ್ದ ಮನವಿಯಲ್ಲಿ ಹಲವು ಅನುಮಾನಗಳನ್ನು ಎತ್ತಿದ್ದರು.

 

ಅನುಮಾನಗಳೇನು?

 

1. ಗುಂಡಿ ಒತ್ತುವ ಮೂಲಕ ಮತ ದಾಖಲಿಸುವ ಮತದಾರ, ತಾನು ಅಂದುಕೊಂಡಂತೆಯೇ ಮತ ಚಲಾವಣೆ ಆಗಿದೆಯೇ ಎಂದು ಪರಿಶೀಲಿಸಲು ಸಾಧ್ಯವಿಲ್ಲ. ಇದು ಹ್ಯಾಕಿಂಗ್, ಟ್ಯಾಂಪರಿಂಗ್ ಮತ್ತು ನಕಲಿ ಮತದಾನದ ವಿರುದ್ಧ ಯಾವುದೇ ಖಾತರಿ ಕೊಡುವುದಿಲ್ಲ. ಇವಿಎಂಗಳನ್ನು ತಿರುಚಬಹುದು ಮತ್ತು ಫಲಿತಾಂಶಗಳನ್ನು ಬದಲಾಯಿಸಬಹುದು ಎಂಬ ಅನುಮಾನಕ್ಕೆ ಆಸ್ಪದವಿದೆ. ಹಾಗಿದ್ದಲ್ಲಿ, ಇವಿಎಂ ಮೂಲಕ ನಡೆಸುವ ಚುನಾವಣೆಗಳು ಹೇಗೆ ಪ್ರಜಾಸತ್ತಾತ್ಮಕವಾಗಲು ಸಾಧ್ಯ?

 

2. ಇವಿಎಂಗಳ ವಿನ್ಯಾಸ ಮತ್ತು  ಬಳಕೆಯು  ಸಾರ್ವಜನಿಕ ಪರಿಶೀಲನೆ ಮತ್ತು ಸ್ವತಂತ್ರ ವಿಮರ್ಶೆಗೆ ಮುಕ್ತವಾಗಿಲ್ಲ. ಹೀಗಿರುವಾಗ ಚುನಾವಣೆಗಳನ್ನು ನ್ಯಾಯಸಮ್ಮತವೆಂದು ಪರಿಗಣಿಸುವುದು ಹೇಗೆ?

 

3. ಎಲ್ಲಾ ಇವಿಎಂಗಳಲ್ಲಿ ವಿವಿಪ್ಯಾಟ್ ಪರಿಚಯಿಸುವುದರೊಂದಿಗೆ ಈಗ ಎರಡು ಮತಗಳಿವೆ ಒಂದು ಇವಿಎಂ ಮೆಮೊರಿಯಲ್ಲಿ ದಾಖಲಾಗುತ್ತದೆ ಮತ್ತು ಇನ್ನೊಂದು ವಿವಿಪ್ಯಾಟ್‌ನಿಂದ ಮುದ್ರಿಸಲ್ಪಡುತ್ತದೆ. ಪಾರದರ್ಶಕತೆಗೋಸ್ಕರವೇ ವಿವಿಪ್ಯಾಟ್ ತರಲಾಗಿದ್ದರೂ, ಆಯೋಗ ಯಾಕೆ ಶೇ. 100ರಷ್ಟು ವಿವಿಪ್ಯಾಟ್ ಸ್ಲಿಪ್ ಎಣಿಕೆಯನ್ನು ನಿರಾಕರಿಸುತ್ತದೆ ಮತ್ತು ನಿಜವಾದ ಮತವಲ್ಲದ ಇವಿಎಂ ಮೆಮೊರಿಯನ್ನಷ್ಟೇ ಎಣಿಸುವುದಕ್ಕೆ ಒತ್ತು ಕೊಡುತ್ತದೆ?

4. ಚುನಾವಣೆ ಘೋಷಣೆ ಬಳಿಕ ಇವಿಎಂ – ವಿವಿಪ್ಯಾಟ್ ಯಾವುದೇ ಬಾಹ್ಯ ಸಾಧನಕ್ಕೆ ಸಂಪರ್ಕಗೊಂಡಿದೆಯೇ? ಹಾಗಿದ್ದಲ್ಲಿ ಆ ಬಾಹ್ಯ ಸಾಧನಗಳು ಯಾವುವು ಮತ್ತು ಯಾವ ಸಂವಹನ ಪ್ರೋಟೋಕಾಲ್ ಬಳಸಲಾಗುತ್ತದೆ?

 

5. ವಿವಿಪ್ಯಾಟ್ ಪ್ರೊಗ್ರಾಮೆಬಲ್ ಮೆಮೊರಿಯನ್ನು ಹೊಂದಿದೆಯೇ? ಹೌದಾದರೆ, ಚುನಾವಣಾ ಪ್ರಕ್ರಿಯೆಯ ಯಾವ ಹಂತಗಳಲ್ಲಿ ಅದನ್ನು ಬಾಹ್ಯ ಸಾಧನದಿಂದ ತೆಗೆದುಕೊಳ್ಳಲಾಗುತ್ತದೆ? ಇಲ್ಲವೆಂದಾದರೆ, ವಿವಿಪ್ಯಾಟ್ ಸ್ಲಿಪ್‌ನಲ್ಲಿ ಮುದ್ರಿಸಲು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಗಳನ್ನು ಎಲ್ಲಿ ಸಂಗ್ರಹಿಸಲಾಗಿದೆ?

6. ತಾನು ಹಾಕಿದ ಮತ ಸರಿಯಾಗಿಲ್ಲ ಎನ್ನಿಸಿದರೆ ಮತದಾರ ಅದನ್ನು ರದ್ದುಗೊಳಿಸಲು ಅವಕಾಶವಿಲ್ಲ. ತಕರಾರು ಎತ್ತಿದರೂ, ತಾನು ಸುಳ್ಳು ಹೇಳುತ್ತಿಲ್ಲವೆಂದು ಸಾಬೀತುಪಡಿಸಲು ಮತದಾರನಿಗೆ ಸಾಧ್ಯವೇ ಇಲ್ಲ. ಸಾಬೀತುಪಡಿಸದಿದ್ದರೆ ಜೈಲು ಎಂಬುದಂತೂ ಕ್ರೂರವಾಗಿದೆ. ಇದು ನಾಗರಿಕರ ಸಾರ್ವಭೌಮತ್ವದ ಕಲ್ಪನೆಯ ವಿರುದ್ಧವಲ್ಲವೇ?

 

7. ಈಗ ಇವಿಎಂಗಳನ್ನು ತಯಾರಿಸುವ ಸಾರ್ವಜನಿಕ ವಲಯದ ಸಂಸ್ಥೆಗಳಾದ ಬೆಂಗಳೂರಿನ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಮತ್ತು ಹೈದರಾಬಾದ್‌ನ ಇಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಇವುಗಳ ಇವಿಎಂ ಪೇಟೆಂಟ್ ಅವಧಿ ಮುಗಿದಿದೆ. ಈ ಹಂತದಲ್ಲಿ ಮುಂದಿನ ವ್ಯವಸ್ಥೆ ಬಗ್ಗೆ ಆಯೋಗ ಪಾರದರ್ಶಕವಾಗಿರುತ್ತದೆಯೆ?

 

8. ಬಿಇಎಲ್ ಮತ್ತು ಇಸಿಐಎಲ್ ಚುನಾವಣಾ ಆಯೋಗದ ನಿಯಂತ್ರಣ ಅಥವಾ ಮೇಲ್ವಿಚಾರಣೆಯಲ್ಲಿಲ್ಲ. ವಿದೇಶಿ ಚಿಪ್ ತಯಾರಕರೊಂದಿಗೆ ಗೌಪ್ಯ ಸಾಫ್ಟ್‌ವೇರ್ ಪ್ರೋಗ್ರಾಂ ಹಂಚಿಕೊಳ್ಳುವುದರ ಬಗ್ಗೆ ಆರೋಪಗಳಿವೆ. ಹಾಗಾದರೆ, ಚುನಾವಣಾ ಪ್ರಕ್ರಿಯೆ ಮತ್ತು ಕಾರ್ಯವಿಧಾನದ ಮೇಲೆ ಆಯೋಗದ ನಿಯಂತ್ರಣ ಮತ್ತು ಮೇಲ್ವಿಚಾರಣೆ ಎಲ್ಲಿದೆ?

 

ಇದಲ್ಲದೆ, ಯಾವ ಚಿಹ್ನೆಗೆ ಮತ ಹಾಕಿದರೂ ಅದು ಬಿಜೆಪಿಗೇ ಬೀಳುತ್ತಿವೆ ಎಂದು ದೂರು ಸಲ್ಲಿಕೆಯಾಗಿದ್ದವು.  ಅದನ್ನು ತಾಂತ್ರಿಕ ದೋಷವೆನ್ನಲಾಗಿತ್ತು.  ಆದರೂ ತಾಂತ್ರಿಕ ದೋಷ ಬಿಜೆಪಿ ಪರವೇ ಇದ್ದುದು ಹೇಗೆಂಬ ಪ್ರಶ್ನೆಗಳೂ ಎದ್ದಿದ್ದವು. ಇವೆಲ್ಲದರ ಬಗ್ಗೆ ಆಯೋಗ ಮೌನವಾಗಿತ್ತು.  ಈ ಸಂಬಂಧ ಸಲ್ಲಿಸಲಾದ ಆರ್‌ಟಿಐ ಅರ್ಜಿಗೂ ಪ್ರತಿಕ್ರಿಯಿಸಿರಲಿಲ್ಲ.

 

ಇವೆಲ್ಲದರ ನಡುವೆಯೇ, 2019ರ ಲೋಕಸಭಾ ಚುನಾವಣೆಯಲ್ಲಿಯೂ  370ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಚಲಾವಣೆಯಾದ ಮತಕ್ಕೂ ಇವಿಎಂನಲ್ಲಿ ಎಣಿಕೆಯಾದ ಮತಕ್ಕೂ ತಾಳೆ ಆಗಿರಲಿಲ್ಲ.  ಅದಕ್ಕೆ ಸೂಕ್ತ ವಿವರಣೆ ನೀಡುವಲ್ಲಿ ಚುನಾವಣಾ ಆಯೋಗ ವಿಫಲವಾಗಿತ್ತು. ಇದು ಕೊನೆಗೆ ಸುಪ್ರೀಂ ಕೋರ್ಟ್‌ಗೂ ತಲುಪಿತ್ತು.

 

ಆ ಲೋಕಸಭಾ ಚುನಾವಣಾ ಪ್ರಕ್ರಿಯೆಯುದ್ದಕ್ಕೂ ಇವಿಎಂ-ವಿವಿಪ್ಯಾಟ್ ತಪಾಸಣೆಯಲ್ಲಿ ಖಾಸಗಿ ಸಿಬ್ಬಂದಿ ಬಳಸಲಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಖಾಸಗಿ ಸಂಸ್ಥೆ ಭಾಗಿಯಾಗಿರುವುದಿಲ್ಲ ಮತ್ತು ಹೊರಗುತ್ತಿಗೆ ನೀಡಲಾಗಿರುವುದಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಲೇ ಬಂದಿದೆ. ಆದರೆ ಇದು ಸುಳ್ಳೆಂಬುದು ನಂತರ ಬಯಲಾಗಿತ್ತು.

 

ಇವಿಎಂ ಮತ್ತು ವಿವಿಪ್ಯಾಟ್ ತಯಾರಿಸುವ ಇಸಿಐಎಲ್ ಮುಂಬೈ ಮೂಲದ ಖಾಸಗಿ ಸಂಸ್ಥೆಯಾಗಿರುವ ಟಿ ಆ್ಯಂಡ್ ಎಂ ಸರ್ವಿಸ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯಿಂದ ಇಂಜಿನಿಯರ್‌ಗಳನ್ನು ಕನ್ಸಲ್ಟಂಟ್ಸ್ ಎಂದು ನೇಮಿಸಿಕೊಂಡಿತ್ತು.  ಆದರೆ ಚುನಾವಣಾ ಆಯೋಗ ಮಾತ್ರ ಇಲ್ಲವೆಂದೇ ಹೇಳಿತ್ತು. ಚುನಾವಣೆ ನಡೆಯುವುದಕ್ಕೆ ಕೇವಲ ಹದಿನೈದು ದಿನಗಳಿರುವವರೆಗೂ ಈ ಖಾಸಗಿ ಕನ್ಸಲ್ಟಂಟ್‌ಗಳಿಗೆ ಇವಿಎಂ ಮತ್ತು ವಿವಿಪ್ಯಾಟ್ ತೆರೆಯುವ ಅವಕಾಶವಿತ್ತು.   ಅವರು ಅಭ್ಯರ್ಥಿಗಳ ಹೆಸರು, ಚಿಹ್ನೆ ಮುಂತಾದವುಗಳನ್ನು ಅಳವಡಿಸಬೇಕಾಗಿರುತ್ತದೆ.

 

ಇಂಥ ಸೂಕ್ಷ್ಮ ಕೆಲಸಕ್ಕೆ ಹೊರಗಿನವರನ್ನು ನೇಮಿಸುವುದರಿಂದ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಾಗಲಿಲ್ಲವೆ? ಚುನಾವಣೆ ನಡೆಯುತ್ತಿರುವಾಗಲೂ, ನಡೆದ ಬಳಿಕವೂ ಇವರನ್ನು ಬಳಸಲಾಗಿರುವಾಗ ಚುನಾವಣಾ ಆಯೋಗಕ್ಕೆ ಗೊತ್ತಿಲ್ಲದೇ ಇರುವುದು ಹೇಗೆ ಸಾಧ್ಯ ಎಂಬಂತಹ  ಹಲವು ಪ್ರಶ್ನೆಗಳೆದ್ದಿದ್ದವು.

 

ಯಾವುದೇ ಚುನಾವಣೆಗೆ ಬಳಸಿದ ವಿವಿಪ್ಯಾಟ್ ಸ್ಲಿಪ್‌ಗಳನ್ನು ಒಂದು ವರ್ಷ ಇಟ್ಟುಕೊಳ್ಳಬೇಕು. ಆ ಬಳಿಕವೇ ಅವುಗಳನ್ನು ನಾಶ ಮಾಡಬೇಕು ಎಂದು ನಿಯಮವಿದ್ದರೂ 2019ರ ಲೋಕಸಭಾ ಚುನಾವಣೆ ಮುಗಿದ ನಾಲ್ಕೇ ತಿಂಗಳೊಳಗೆ ಚುನಾವಣಾ ಆಯೋಗ ಅಲ್ಲಿ ಬಳಸಿದ ವಿವಿಪ್ಯಾಟ್ ಸ್ಲಿಪ್‌ಗಳನ್ನು ನಾಶ ಮಾಡಿತ್ತು.  ಎಲ್ಲ ಪಾರದರ್ಶಕವಾಗಿ ನಡೆದಿದ್ದರೆ ಅಷ್ಟು ತುರ್ತಿನಲ್ಲಿ ವಿವಿಪ್ಯಾಟ್ ಸ್ಲಿಪ್‌ಗಳನ್ನು ನಾಶ ಏಕೆ ಮಾಡಬೇಕಿತ್ತು ಎಂಬ ಪ್ರಶ್ನೆಗಳು ಕೇಳಿ ಬಂದಿದ್ದವು.

 

2019ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾಧಿಕಾರಿ ಯಾಗಿಯೂ ಕರ್ತವ್ಯ ನಿರ್ವಹಿಸಿದ್ದ ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಅವರು ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ತಿರುಚುವುದು ಸಾಧ್ಯವಿದೆ ಎಂದು ಚುನಾವಣಾ ಆಯೋಗಕ್ಕೆ ದೂರಿದ್ದರು. ಇದರ ತನಿಖೆಗಾಗಿ ಆಯೋಗ ತಾಂತ್ರಿಕ ಸಮಿತಿಯೊಂದನ್ನು ರಚಿಸಿತ್ತು.

 

ಇನ್ನು ಚುನಾವಣೆ ವೇಳೆ ಇವಿಎಂಗಳನ್ನು ಖಾಸಗಿ ವಾಹನಗಳಲ್ಲಿ ಸಾಗಿಸಿದ್ದ ಹಲವಾರು ನಿದರ್ಶನಗಳು ಕಂಡು ಬಂದಿದ್ದವು. ಜಗತ್ತಿನ ಹಲವಾರು ಪ್ರಮುಖ ದೇಶಗಳು ಇವಿಎಂಗಳನ್ನು ದೂರವಿಟ್ಟಿವೆ.  ಇಂಗ್ಲೆಂಡ್, ಫ್ರಾನ್ಸ್ ಮೊದಲಾದ ದೇಶಗಳು ಇದನ್ನು ಬಳಸಿಯೇ ಇಲ್ಲ. ಅತ್ಯಂತ ತಾಂತ್ರಿಕ ಸ್ನೇಹಿ ದೇಶ ಅಮೆರಿಕ ಕೂಡ ಇದನ್ನು ಬ್ಯಾನ್ ಮಾಡಿದೆ. ಜರ್ಮನಿ, ನೆದರ್‌ಲ್ಯಾಂಡ್ಸ್ ಕೂಡ ಇದನ್ನು ಬದಿಗೆಸೆದಿದ್ದವು.   ಆದರೆ ಭಾರತದಲ್ಲಿ ಮಾತ್ರ ಇದನ್ನು ಬಳಸಲಾಗುತ್ತಿದೆ.

 

ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿರುವ ಬಗ್ಗೆಯಂತೂ ನಿರಂತರ ಆರೋಪಗಳಿವೆ. 2014ರ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿಯ ಅತ್ಯಂತ ಹಿರಿಯ ನಾಯಕರೇ ಇವಿಎಂಗಳ ದಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.  ಆರೋಪ ಮಾಡಿ ಪುಸ್ತಕಗಳನ್ನೇ ಬರೆದಿದ್ದಾರೆ. ಆದರೆ 2014ರ ಬಳಿಕ ಅವರೆಲ್ಲರೂ ಈ ಬಗ್ಗೆ ಮೌನವಾಗಿದ್ದರು.

Your generous support will help us remain independent and work without fear.

Latest News

Related Posts