ಮಳೆ ಹಾನಿ ಪ್ರಮಾಣ ವರ್ಗೀಕರಣ; ಪರಿಹಾರದಲ್ಲೂ ವಂಚನೆ, ಹಾನಿ ಸಮರ್ಥಿಸಲು ದಾಖಲೆಗಳೂ ಇಲ್ಲ

ಬೆಂಗಳೂರು;  ಮಳೆ ಸುರಿದು ಹಾನಿಯಾಗಿದೆ ಎಂದು ಸಮರ್ಥಿಸುವ ದಾಖಲೆಗಳು ಇಲ್ಲದಿದ್ದರೂ ಸಹ ಹೆಚ್ಚಿನ ದರದಲ್ಲಿ ಪರಿಹಾರ ನೀಡಿರುವ ಪ್ರಕರಣಗಳನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.

 

ಅಲ್ಲದೇ ಮಳೆ ಹಾನಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರವು ಪದೇ ಪದೇ ಷರತ್ತುಗಳನ್ನು ವಿಧಿಸುತ್ತಿರುವುದು ಮತ್ತು ಷರತ್ತುಗಳನ್ನ ಕಾರಣಗಳಿಲ್ಲದೇ ಹಿಂಪಡೆದುಕೊಳ್ಳುತ್ತಿರುವುದನ್ನೂ ಸಹ ಸಿಎಜಿಯ ಲೆಕ್ಕ ಪರಿಶೋಧನೆಯಲ್ಲಿ ಬಹಿರಂಗವಾಗಿದೆ.

 

ಹಾಗೆಯೇ ಮಳೆಯಿಂದಾಗಿ ಮನೆಗಳಿಗೆ ಆಗಿರುವ ಹಾನಿಯ ವರ್ಗೀಕರಣದಲ್ಲಿಯೂ ವ್ಯತ್ಯಾಸಗಳಿವೆ. ಇಲಾಖೆಯ ಪ್ರಕಾರದಲ್ಲಿ ಶೇಕಡವಾರು ಹಾನಿಗೆ ವಿರುದ್ಧವಾಗಿ  ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿ ತಪ್ಪಾಗಿ ವರ್ಗೀಕರಣ ಮಾಡಿದೆ. ಅಲ್ಲದೇ ಕೆಲವೆಡೆ ವರ್ಗದ ಪರಿಷ್ಕರಣೆಯಿಂದಾಗಿ ಹೆಚ್ಚುವರಿಯಾಗಿ 1.08 ಕೋಟಿಯಷ್ಟು ಪರಿಹಾರವನ್ನು ಹೆಚ್ಚಿಗೆ ನೀಡಲು ದಾರಿಮಾಡಿಕೊಟ್ಟಿರುವ ಪ್ರಕರಣಗಳನ್ನೂ ಸಿಎಜಿಯು ಪತ್ತೆ ಹಚ್ಚಿದೆ.

 

2025ರ ಡಿಸೆಂಬರ್‍‌ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ಮಂಡನೆಯಾಗಿರುವ  ವಿಪತ್ತು ನಿರ್ವಹಣೆಯಲ್ಲಿ ಕರ್ನಾಟಕದ ನಿರ್ವಹಣೆಯ ಕುರಿತಾದ ವರದಿಯು ಮಳೆ ಹಾನಿ ಪರಿಹಾರ ಪಾವತಿಯಲ್ಲಿನ ಅನೇಕ ಸಂದೇಹಾಸ್ಪದ ಪ್ರಕರಣಗಳನ್ನು ಅನಾವರಣಗೊಳಿಸಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಮಳೆಯಿಂದಾಗಿ ಸಂಭವಿಸಿದ ಹಾನಿಗೆ ಸೂಕ್ತ ಪರಿಹಾರ ನೀಡಲು ರಾಜ್ಯ ಸರ್ಕಾರವು ಹಾನಿಯ ಪ್ರಮಾಣವನ್ನು ಆಧರಿಸಿ ವರ್ಗೀಕರಣ ಮಾಡಿತ್ತು. ಸಂಪೂರ್ಣವಾಗಿ ಹಾನಿಗೊಳಗಾದ ಅಂದರೇ ಶೇ. 75ಕ್ಕೂ ಹೆಚ್ಚು ಹಾನಿಯಾಗಿರುವ ಮನೆಗಳಿಗೆ ಎಸ್‌ಡಿಆರ್‍‌ಎಫ್‌ ಮಾನದಂಡಗಳ ಪ್ರಕಾರ 95,100 ರು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 4,04,900 ರು. ಸೇರಿ ಒಟ್ಟಾರೆ 5,00,000 ರು ಪರಿಹಾರ ಪಾವತಿಸಿದೆ.

 

 

ಅದೇ ರೀತಿ ತೀವ್ರ ಹಾನಿ (ಪುನರ್ ನಿರ್ಮಾಣ) ಅಂದರೇ ಶೇ. 25ರಿಂದ 75ರಷ್ಟು ಹಾನಿಯಾಗಿರುವ ಮನೆಗಳಿಗೆ ಎಸ್‌ಡಿಆರ್‍‌ಎಫ್‌ನಿಂದ 95,100 ರು ಮತ್ತು ರಾಜ್ಯ ಸರ್ಕಾರದಿಂದ 4,04,900 ರು ಸೇರಿ 5,00,000 ರು ಪರಿಹಾರ ಪಾವತಿಸಿದೆ. ಹಾಗೆಯೇ ತೀವ್ರ ಹಾನಿ (ದುರಸ್ತಿ) ಶೇ. 25ರಿಂದ 75ರಷ್ಟು  ಹಾನಿಯಾದ ಮನೆಗಳಿಗೆ 95,100 ರು, ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 2,04,900 ರು ಸೇರಿ 3,00,000 ರು, ಭಾಗಶಃ ಹಾನಿಯಾದ ಮನೆಗಳಿಗೆ ಅಂದರೇ ಶೇ. 15ರಿಂದ 25ರಷ್ಟು ಹಾನಿಯಾಗಿರುವ ಮನೆಗಳಿಗೆ 5,200 ರು ಮತ್ತು ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 44,800 ರು ಸೇರಿ ಒಟ್ಟಾರೆ 50,000 ರು ಪರಿಹಾರ ಪಾವತಿಸಿದೆ.

 

 

ಆದರೆ ಹಾನಿಗೊಳಗಾದ ಮನೆಗಳ ತಪಾಸಣೆಗೆ ರಾಜ್ಯ ಸರ್ಕಾರವು ಯಾವುದೇ ನಿರ್ದಿಷ್ಟ ಕಾರ್ಯವಿಧಾನವನ್ನು ಸೂಚಿಸಿಲ್ಲ. ಚಾಲ್ತಿಯಲ್ಲಿರುವ ಕಾರ್ಯವಿಧಾನದ ಪ್ರಕಾರ ಮನೆ ಹಾನಿ, ಕುಸಿತದ ಘಟನೆ ಆದ ನಂತರ ಗ್ರಾಮ ಮಟ್ಟದ ಕಂದಾಯ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸುತ್ತಾರೆ. ದೃಶ್ಯ ವಿಧಾನಗಳ ಮೂಲಕ ಹಾನಿಯನ್ನು ನಿರ್ಣಯಿಸುವ ವರದಿ ಸಿದ್ಧಪಡಿಸುತ್ತಾರೆ. ಇದಾದ ನಂತರ ಸ್ಥಳೀಯ ಸಂಸ್ಥೆಯ ಎಂಜಿನಿಯರ್ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಪಾವತಿಸಲು ಹಾನಿಯ ಪ್ರಮಾಣವನ್ನು ಪ್ರಮಾಣಿಕರಿಸುತ್ತಾರೆ.

 

ಈ ಎಲ್ಲಾ ಕಾರ್ಯವಿಧಾನಗಳನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆಯಲ್ಲದೇ ಹಲವು ಲೋಪಗಳನ್ನು ಪತ್ತೆ ಹಚ್ಚಿದೆ.

 

ರಾಜ್ಯ ಸರ್ಕಾರವು ಪರಿಹಾರ ಪಾವತಿಗಾಗಿ ವಿಧಿಸಿದ್ದ ಷರತ್ತುಗಳನ್ನು ಪದೇಪದೇ ವಿಧಿಸಿತ್ತು. ಅಲ್ಲದೇ ಷರತ್ತುಗಳನ್ನು ಹಿಂತೆಗೆದುಕೊಳ್ಳುವ ಆದೇಶಗಳು ಮತ್ತ ಸೂಚನೆಗಳನ್ನು ಹೊರಡಿಸಿತ್ತು. ಇದರ ಪರಿಣಾಮವಾಗಿ ಜಿಲ್ಲಾಡಳಿತವು ಮಾಹಿತಿಯನ್ನು ಪಡೆಯಲು ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ಸ್ವರೂಪಗಳನ್ನೇ ಹೊಂದಿಲ್ಲ. ಹೀಗಾಗಿ ಪಾವತಿಗಳನ್ನು ಬೇಕಾಬಿಟ್ಟಿಯಾಗಿ ಪಾವತಿಸಲಾಯಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

ಹಾಗೆಯೇ ಮಳೆಯ ತೀವ್ರತೆ ಆಧಾರದ ಮೇಲೆ ರಾಜ್ಯ ಸರ್ಕಾರವು ವಾರ್ಷಿಕವಾಗಿ ಘೋಷಿಸುವ ಹೆಚ್ಚಿನ ಪರಿಹಾರವನ್ನು ಒಂದು ವರ್ಷದಲ್ಲಿ ಒಂದು ನಿರ್ದಿಷ್ಟ ಅವಧಿಗೆ ಮಾತ್ರ ಸೀಮಿತಗೊಳಿಸಿತ್ತು. ವರ್ಷದ ಇತರ ಅವಧಿಯ, ತಿಂಗಳುಗಳಲ್ಲಿ ಮಳೆ, ಇತರೆ ಅಪಾಯಗಳಿಂದ ಹಾನಿಗೊಳಗಾದ ಮನೆಗಳು ಹೆಚ್ಚಿನ ಪರಿಹಾರಕ್ಕೆ ಅರ್ಹವಾಗಿರಲಿಲ್ಲ. ಕೆಲವು ವೈಯಕ್ತಿಕ ಪಾವತಿಗಳ ಕಡತಗಳನ್ನೂ ಸಿಎಜಿಯು ಪರಿಶೀಲನೆ ನಡೆಸಿತ್ತು. ಇದರ ಪ್ರಕಾರ ಜಿಪಿಎಸ್‌ ನಿರ್ದೇಶಾಂಕಗಳನ್ಣೂ ಹೊಂದಿರದ ಛಾಯಾಚಿತ್ರಗಳು ಕಡತದಲ್ಲಿದ್ದವು.

 

ಪರಿಹಾರಕ್ಕೆ ಕ್ಲೈಮ್‌ ಮಾಡಿದ್ದ ಪ್ರಕಾರ ಯಾವ ದಿನಾಂಕದಂದು ಹಾನಿ ಸಂಭವಿಸಿದೆ ಎಂದು ಸಮರ್ಥಿಸುವ ದಾಖಲೆಗಳೇ ಇರಲಿಲ್ಲ. ಹಾಗೂ ಪತ್ರಿಕಾ ತುಣುಕುಗಳೂ ಸಹ ಇರಲಿಲ್ಲ. ಹೀಗಾಗಿ ವಿಪತ್ತಿನ ಅವಧಿಯ ಹೊರಗಿನ ಅವಧಿಯಲ್ಲಿ ಹಾನಿಗೊಳಗಾದ ಮನೆಗಳಿಗೂ ಸಹ ಹೆಚ್ಚಿನ ದರದಲ್ಲಿ ಪರಿಹಾರ ಪಡೆದಿರುವುದು ಮತ್ತು ಪರಿಹಾರದ ಮೊತ್ತವನ್ನು ಪಾವತಿಸಿರುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗುವುದಿಲ್ಲ ಎಂದು ಸಿಎಜಿಯು  ಅಭಿಪ್ರಾಯಿಸಿರುವುದು ವರದಿಯಿಂದ ತಿಳಿದು ಬಂದಿದೆ.

 

ಕೆಲವು ಪ್ರಕರಣಗಳಲ್ಲಿ ಶೇ. 25ರಷ್ಟು ಹಾನಿಯನ್ನು ಸಿ ವರ್ಗ ಎಂದು ಪರಿಗಣಿಸಿ ಕಡಿಮೆ ಪರಿಹಾರ ಪಾವತಿಸಿದೆ. ಇತರ ಕೆಲವು ಪ್ರಕರಣಗಳಲ್ಲಿ ಅದನ್ನು ಬಿ ವರ್ಗ ಎಂದು ಪರಿಗಣಿಸಿ ಹೆಚ್ಚಿನ ಪರಿಹಾರ ಪಾವತಿಸಿದ ಹತ್ತು ನಿದರ್ಶನಗಳನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ.

 

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಫಲಾನುಭವಿಗೆ (ಐಡಿ 368424, 367593) ಇಲಾಖೆಯ ಪ್ರಕಾರ ಶೇ 25ರಷ್ಟು ಹಾನಿ ಸಂಭವಿಸಿದೆ. ಆದರೆ ಆರ್‍‌ಜಿಆರ್‍‌ಎಚ್‌ಸಿಎಲ್‌ ವೆಬ್‌ಸೈಟ್‌ನಲ್ಲಿ ಇದನ್ನು ಬಿ 1 ಮತ್ತು ಸಿ  ಎಂದು ವರ್ಗೀಕರಿಸಿದೆ. ಅದೇ ರೀತಿ ಮಾಗಡಿ ತಾಲೂಕಿನಲ್ಲಿ ಫಲಾನುಭವಿಯೊಬ್ಬರಿಗೆ (ಐ ಡಿ 367942) ಇಲಾಖೆ ಪ್ರಕಾರ ಶೇ.25ರಷ್ಟು ಹಾನಿ ಸಂಭವಿಸಿದೆ. ಆದರೆ ಆರ್‍‌ಜಿಆರ್‍‌ಎಚ್‌ಸಿಎಲ್‌ ವೆಬ್‌ಸೈಟ್‌ನಲ್ಲಿ ಸಿ ವರ್ಗ ಎಂದು ಮಾಡಲಾಗಿದೆ.

 

 

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಫಲಾನುಭವಿಯೊಬ್ಬರಿಗೆ (ಐ ಡಿ 589696) ಇಲಾಖೆ ಪ್ರಕಾರ ಶೇ.25ರಷ್ಟು  ಹಾನಿಯಾಗಿದ್ದರೆ ಆರ್‍‌ಜಿಆರ್‍‌ಎಚ್‌ಸಿಎಲ್‌ ವೆಬ್‌ಸೈಟ್‌ನಲ್ಲಿ ಬಿ 1 ಎಂದು ವರ್ಗೀಕರಣ ಮಾಡಲಾಗಿದೆ. ಶಿವಮೊಗ್ಗದ ಫಲಾನುಭವಿಗೆ (ಐ ಡಿ 579770) ಶೇ. 25ರಷ್ಟು ಹಾನಿಯಾಗಿದೆ ಎಂದು ಇಲಾಖೆಯು ಹೇಳಿದ್ದರೇ ಆರ್‍‌ಜಿಆರ್‍‌ಎಚ್‌ಸಿಎಲ್‌ ವೆಬ್‌ಸೈಟ್‌ನಲ್ಲಿ  ಸಿ ವರ್ಗ ಎಂದು ವರ್ಗೀಕರಿಸಲಾಗಿದೆ. ಸೊರಬ ತಾಲೂಕಿನ ಫಲಾನುಭವಿಯೊಬ್ಬರಿಗೆ (ಐ ಡಿ 577862, 577694) ಶೇ. 25ರಷ್ಟು ಹಾನಿಯಾಗಿದೆ ಎಂದು ಕಂದಾಯ ಇಲಾಖೆಯು ಹೇಳಿದ್ದರೇ ಆರ್‍‌ಜಿಆರ್‍‌ಎಚ್‌ಸಿಎಲ್‌ ವೆಬ್‌ಸೈಟ್‌ನಲ್ಲಿ ಸಿ ಮತ್ತು ಬಿ 1 ಎಂದು ವರ್ಗೀಕರಿಸಿದೆ.

 

 

ಅದೇ ರೀತಿ ಶಿಡ್ಲಘಟ್ಟದಲ್ಲಿ ಫಲಾನುಭವಿಯೊಬ್ಬರಿಗೆ ( ಐ ಡಿ 375741) ಶೇ.25ರಷ್ಟು ಹಾನಿಯಾಗಿದೆ ಎಂದು ಕಂದಾಯ  ಇಲಾಖೆಯು ಹೇಳಿತ್ತು. ಆದರೆ ಆರ್‍‌ಜಿಆರ್‍‌ಎಚ್‌ಸಿಎಲ್‌ ವೆಬ್‌ಸೈಟ್‌ನಲ್ಲಿ ಸಿ ವರ್ಗ ಎಂದು ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಫಲಾನುಭವಿಗಳಿಬ್ಬರಿಗೆ ( ಐ ಡಿ 693547, 676265) ಶೇ. 25ರಷ್ಟು ಹಾನಿಯಾಗಿದ್ದರೇ ಆರ್‍‌ಜಿಆರ್‍‌ಎಚ್‌ಸಿಎಲ್‌ ವೆಬ್‌ಸೈಟ್‌ನಲ್ಲಿ ಸಿ ಎಂದು ವರ್ಗೀಕರಿಸಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

ಶೇ.25ರಿಂದ 40ರಷ್ಟು ಆಗಿರುವ ಹಾನಿಯನ್ನು ಸಹ ಎ ಅಥವಾ ಬಿ 2 ಎಂದು ವರ್ಗೀಕರಿಸಿದೆ. ಬೆಳಗಾವಿ ಜಿಲ್ಲೆಯ  ರಾಮದುರ್ಗದ (ಫಲಾನುಭವಿ ಐ ಡಿ 1681085, 1678875, 16796, 1692912, 1678162)ದಲ್ಲಿ ಇಲಾಖೆ ಪ್ರಕಾರ ಶೇ. 26, 30, 35, 26, 40ರಷ್ಟು ಹಾನಿಯಾಗಿದ್ದರೂ ಸಹ ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿ ಬಿ 2 ಎಂದು ವರ್ಗೀಕರಿಸಲಾಗಿತ್ತು.  ಹಾಗೆಯೇ ಹುಕ್ಕೇರಿಯ ಫಲಾನುಭವಿಗಳಿಗೆ (ಐ ಡಿ 1681085, 1681220, 1679282, 1679447) ಇಲಾಖೆಯ ಪ್ರಕಾರ ಶೇ.26 ಮತ್ತು ಶೇ.28ರಷ್ಟು ಹಾನಿಯಾಗಿದ್ದರೂ ಸಹ ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿ ವರ್ಗೀಕರಿಸಿತ್ತು. ಬೈಲಹೊಂಗಲದ ಫಲಾನುಭವಿಗಳಿಗೆ ( ಐ ಡಿ 1680510, 1697380) ಶೇ. 30,35,30ರಷ್ಟು ಹಾನಿಯಾಗಿದೆ ಎಂದು ಇಲಾಖೆಯು ಹೇಳಿದ್ದರೂ ಸಹ ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿ ಬಿ 2 ಎಂದು ವರ್ಗೀಕರಿಸಿತ್ತು.

 

ಶಿವಮೊಗ್ಗದ ತಾಲೂಕಿನಲ್ಲಿ ಫಲಾನುಭವಿಗಳಿಗೆ (ಐ ಡಿ 587698, 587741, 58740) ಶೇ. 35ರಿಂದ ಶೇ.40ರಷ್ಟು ಹಾನಿಯಾಗಿದೆ ಎಂದು ಇಲಾಖೆಯು ಹೇಳಿತ್ತು. ಆದರೆ ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿ ಬಿ  2 ಎಂದು ವರ್ಗೀಕರಿಸಿದೆ. ಶಿಕಾರಿಪುರದ ಫಲಾನುಭವಿ (ಐ ಡಿ 588332), ಭದ್ರಾವತಿಯ ಫಲಾನುಭವಿಗಳಿಗೆ (587929) ಸೊರಬ ತಾಲೂಕಿನ ಫಲಾನುಭವಿಗೆ ( ಐ ಡಿ 580420), ಸಾಗರದ ಫಲಾನುಭವಿಗೆ ( ಐ ಡಿ 588216,588014) ಇಲಾಖೆ ಪ್ರಕಾರ ಶೇ. 28, ಶೇ.27, ಶೇ.22ರಷ್ಟು ಹಾನಿಯಾಗಿತ್ತು. ಆದರೆ ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿ ಬಿ 2 ಎಂದು ವರ್ಗೀಕರಿಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.

 

ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಫಲಾನುಭವಿಗಳಿಗೆ ( ಐ ಡಿ 374398, 374400, 374397, 374401, 374403, 374402) ಶೇ. 25,24,25,23ರಷ್ಟು ಹಾನಿಯಾಗಿದ್ದರೂ ಸಹ ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿ ಬಿ 2 ಎಂದು ವರ್ಗೀಕರಿಸಲಾಗಿದೆ. ರಾಮನಗರದ ಮಾಗಡಿ ಫಲಾನುಭವಿಗೆ ( ಐ ಡಿ 367882) ಶೆ. 40ರಷ್ಟು ಹಾನಿ, ದಾವಣಗೆರೆಯ ನ್ಯಾಮತಿ ಫಲಾನುಭವಿಗೆ ( ಐ ಡಿ 680248) ಶೇ. 30ರಷ್ಟು ಹಾನಿಯಾಗಿದೆ ಎಂದು ಇಲಾಖೆಯು ಹೇಳಿದ್ದರೇ ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿ ಬಿ 2 ಎಂದು ವರ್ಗೀಕರಿಸಿದೆ.

 

ಅದೇ ರೀತಿ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನಲ್ಲಿ ಫಲಾನುಭವಿಗಳಿಗೆ (ಐ ಡಿ 367512, 367514, 367713, 367551, 367434,367318) ಬಾಗೇಪಲ್ಲಿಯಲ್ಲಿ ಫಲಾನುಭವಿಗೆ ( ಐ ಡಿ 366436), ಗೌರಿಬಿದನೂರಿನಲ್ಲಿ ಫಲಾನುಭವಿಗಳಿಗೆ ( ಐ ಡಿ 366764, 366648, 366879,367151,374576,374176) ಇಲಾಖೆ ಪ್ರಕಾರ ಶೇ. 71ರಿಂದ ಶೇ. 74ರವರೆಗೆ ಹಾನಿಯಾಗಿತ್ತು. ಆದರೆ ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿ ಈ ಪ್ರಕರಣಗಳನ್ನೂ ಬಿ 1 ಎಂದು ವರ್ಗೀಕರಿಸಿದೆ.

 

ಹಾವೇರಿ ಜಿಲ್ಲೆಯ ಸವಣೂರು, ಹಾನಗಲ್, ಹಾವೇರಿ, ಹಿರೇಕೆರೂರು, ರಟ್ಟಿಹಳ್ಳಿ, ಶಿಗ್ಗಾಂವ್‌ನಲ್ಲಿ  28  ಫಲಾನುಭವಿಗಳಿಗೆ ಸಿ ಯಿಂದ ಬಿ 2 ಗೆ  ವರ್ಗವನ್ನು ಪರಿಷ್ಕರಣೆ ಮಾಡಿರುವುದರಿಂದ ಹೆಚ್ಚುವರಿಯಾಗಿ ತಲಾ 2,50,000, 4,50,000 ರು ವರೆಗೆ  ಪರಿಹಾರ ನೀಡಿದಂತಾಗಿದೆ. ಒಟ್ಟಾರೆ 1.08 ಕೋಟಿಯಷ್ಟು ಹೆಚ್ಚುವರಿಯಾಗಿ ಪರಿಹಾರ ನೀಡಿದಂತಾಗಿದೆ.

 

 

 

ಹಾವೇರಿ ಜಿಲ್ಲೆಯಲ್ಲಿ ಆರಂಭದಲ್ಲಿ ಸಿ ಎಂದು ವರ್ಗೀಕರಿಸಲಾದ 696 ಮನೆಹಾನಿಗಳನ್ನುನಂತರ ಬಿ 1, ಬಿ 2 ಎಂದು ವರ್ಗೀಕರಿಸಲಾಗಿದೆ. ಪ್ರತಿ ಯೂನಿಟ್‌ಗೆ ಹಣಕಾಸಿನ ನೆರವನ್ನು 50,500 ರು ನಿಂದ 3.00 ಲಕ್ಷ, 5.00 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಸಣಣ ದುರಸ್ತಿ ಮಟ್ಟದಿಂದ ಪುನರ್‍‌ ನಿರ್ಮಾಣ ಮಟ್ಟದವರೆಗೆ ಹಾನಿಯ ಮೌಲ್ಯಮಾಪನದಲ್ಲಿ ಭಾರೀ ವ್ಯತ್ಯಾಸಗಳು ಕಂಡು ಬಂದಿವೆ. ಆದರೆ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸಿಎಜಿಗೆ ವಿವರಿಸಿಲ್ಲ.

 

‘ಎರಡು ವರ್ಗಗಳ ನಡುವಿನ ಪರಿಹಾರ ಪ್ರಮಾಣದಲ್ಲಿನ ಗಮನಾರ್ಹ ವ್ಯತ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಹಾನಿ ವ್ಯಾಪ್ತಿಯನ್ನು ಪ್ರಮಾಣೀಕರಿಸುವಲ್ಲಿನ ವಂಚನೆಯ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಾಗಲಿಲ್ಲ,’ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

 

 

2020-21ನೇ ಸಾಲಿನಲ್ಲಿ ಹಾವೇರಿ ಜಿಲ್ಲೆಯ 8 ತಾಲೂಕುಗಳಲ್ಲಿ 2,503 ಮನೆಗಳು ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿತ್ತು. ಆದರೂ ಸಹ ವಿವಿಧ ವಿಭಾಗಗಳ ಅಡಿಯಲ್ಲಿ ಹಾನಿಗೊಳಗಾಗಿವೆ ಎಂದು ಗುರುತಿಸಿತ್ತು. ಈ ಪ್ರಕರಣಗಳಲ್ಲಿ 64.00 ಕೋಟಿ ರು ಪರಿಹಾರ ಪಾವತಿಸಿದೆ. ಆದರೆ ಈ ಪ್ರಕರಣಗಳಲ್ಲಿ ವೈಜ್ಞಾನಿಕ ಪುರಾವೆಗಳು ಮತ್ತು ಅಪಾಯದ ಸಂಖ್ಯೆ ಮಾಹಿತಿಯ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಲೆಕ್ಕ ಪರಿಶೋಧನೆಯಲ್ಲಿ ಹೇಳಲಾಗಿದೆ.

 

ಚಿಕ್ಕಬಳ್ಳಾಪುರದ ಗೌರಿಬಿದನೂರು, ಗುಡಿಬಂಡೆ, ಶಿವಮೊಗ್ಗದ ತೀರ್ಥಹಳ್ಳಿ, ಸಾಗರದಲ್ಲಿಯೂ ಸಹ 15 ಫಲಾನುಭವಿಗಳಿಗೆ ಆಗಿರುವ ಹಾನಿಯಲ್ಲಿನ ವರ್ಗೀಕರಣದ ಪರಿಷ್ಕರಣೆಯಿಂದಾಗಿ ತಲಾ 4,50,000 ರು ನಂತೆ ಒಟ್ಟಾರೆ 63,00,000 ಲಕ್ಷ ರು ಹೆಚ್ಚುವರಿಯಾಗಿ ಪರಿಹಾರ ನೀಡಲು ದಾರಿ ಮಾಡಿಕೊಟ್ಟಿದೆ.

 

 

ಹಾಗೆಯೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರಿನಲ್ಲಿ 14 ಫಲಾನುಭವಿಗಳಿಗೆ  ಬಿ 1 ವರ್ಗದಿಂದ ಬಿ 2 ಗೆ ವರ್ಗೀಕರಣದ ಪರಿಷ್ಕರಣೆಯಿಂದಾಗಿ ತಲಾ 2 ಲಕ್ಷ ರು ನಂತೆ 28.00 ಲಕ್ಷ ರು ಹೆಚ್ಚುವರಿಯಾಗಿ ನೀಡಲು ಅವಕಾಶವಾಗಿದೆ.

 

 

ರಾಮನಗರದ ಕನಕಪುರ, ಮಾಗಡಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರದ ಗುಡಿಬಂಡೆಯಲ್ಲಿ

 

 

ಇಲಾಖೆ ಮತ್ತು ಆರ್‍‌ಜಿಆರ್‍‌ಎಚ್‌ಸಿಎಲ್‌ ನ ವೆಬ್‌ಸೈಟ್‌ನಲ್ಲಿರುವ ಪ್ರಕಾರ ಹಾನಿ ವರ್ಗದಲ್ಲಿಯೂ ವ್ಯತ್ಯಾಸಗಳಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ.

Your generous support will help us remain independent and work without fear.

Latest News

Related Posts