ಬೆಂಗಳೂರು; ರಾಜ್ಯದಲ್ಲಿ ಮಾಧ್ಯಮಿಕ ಶಾಲೆ ಬಿಡುವ ಮಕ್ಕಳ ಸಂಖ್ಯೆ ಶೇ.14.7 ರಷ್ಟಿದ್ದು, ಇದರಲ್ಲಿ ಗಂಡು ಮಕ್ಕಳ ಸಂಖ್ಯೆ ಹೆಚ್ಚಿದೆ. ಎಸ್ ಟಿ ಸಮುದಾಯದ ದಾಖಲಾತಿ ಅನುಪಾತ ಒಟ್ಟಾರೆ ರಾಜ್ಯಮಟ್ಟದಲ್ಲಿ ಕಡಿಮೆಯಾಗಿದೆ ಎಂದು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಅಧ್ಯಯನ ವರದಿ ಆತಂಕ ವ್ಯಕ್ತಪಡಿಸಿದೆ. ಸುಧಾರಣೆ ನಿಟ್ಟಿನಲ್ಲಿ ಹಲವು ಶಿಫಾರಸುಗಳನ್ನು ಮಾಡಿದೆ.
ಪ್ರಾಧಿಕಾರದ ಸೂಚನೆ ಮೇರೆಗೆ ಶಾಲಾ ಮತ್ತು ಸಾಕ್ಷರತಾ ಇಲಾಖೆಯಲ್ಲಿನ “ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ 2018-19 ರಿಂದ 2020-21 ರ ವರೆಗಿನ ಮೌಲ್ಯಮಾಪನʼ ನಡೆಸಿದ ಮೈಸೂರಿನ ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕಸಿ ಮೂವ್ ಮೆಂಟ್ (ಜಿಆರ್‌ಎಎಎಂ) ಕಳೆದ ಜುಲೈನಲ್ಲಿ ನೀಡಿರುವ ವರದಿಯು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಮಹತ್ವದ ಸಂಗತಿಗಳ ಮೇಲೆ ಬೆಳಕು ಚೆಲ್ಲಿದೆ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಲ್ಲಿ ನಿಗದಿಪಡಿಸಿದ ಉದ್ದೇಶಗಳ ಈಡೇರಿಕೆ ಹಾಗೂ ಅನುಷ್ಠಾನದ ಕುರಿತ ಪ್ರತಿಕ್ರಿಯೆ ಮತ್ತು ಸವಾಲುಗಳನ್ನು ಅರಿಯುವ ಗುರಿಯೊಂದಿಗೆ ನಡೆದ ಈ ಅಧ್ಯಯನವು, ಶಿಕ್ಷಣ ಹಕ್ಕು ಕಾಯಿದೆ (ಆರ್ ಟಿ ಇ -2009)ಯ ಸಫಲತೆಯನ್ನು ವಿಶೇಷವಾಗಿ ಶಾಲಾ ಕಲಿಕೆಯ ಅವಕಾಶಗಳು, ಶಾಲೆಯಲ್ಲಿ ದಾಖಲಾತಿಯ ಮುಂದುವರಿಕೆ ಮತ್ತು ಕುಟುಂಬದ ಆರ್ಥಿಕ ಸುಸ್ಥಿರತೆಯ ಅಂಶಗಳನ್ನು ಕೇಂದ್ರೀಕರಿಸಿಕೊಂಡು ಮೌಲ್ಯಮಾಪನ ನಡೆಸಿದೆ.
ಈ ವರದಿ ಆಧರಿಸಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳು ಈಚೆಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ದಾಖಲಾತಿ ಅನುಪಾತವು (ಜಿಇಆರ್) 107.1 ಪ್ರೌಢಶಾಲೆಗಳಲ್ಲಿ 94.7 ರ ಅನುಪಾತವನ್ನು ಹೊಂದಿದೆ. 2021-22ರ ಸಾಲಿನಲ್ಲಿ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಮೌಲ್ಯಮಾಪನ ಅವಧಿಯ ಎಲ್ಲಾ ಹಂತಗಳಲ್ಲಿ ಜಿಇಆರ್ ಏರಿಕೆಯಾಗಿದ್ದು, ಪ್ರೌಢಶಾಲೆಯ ಜಿಇಆರ್ ಕೂಡ 83.7 ರಿಂದ 94.7 ಕ್ಕೆ ವೃದ್ಧಿಯಾಗಿದೆ.
ಇದರಲ್ಲಿ ಬಾಲಕಿಯರ ದಾಖಲಾತಿ ಅನುಪಾತ 82.8 ರಿಂದ 94.9ಕ್ಕೆ ಏರಿಕೆಯಾಗಿದೆ. ಆದಾಗ್ಯೂ, ಪ್ರಾಥಮಿಕ, ಪ್ರೌಢ ಮತ್ತು ಪಿಯು ಹಂತಗಳಲ್ಲಿ ಎಸ್ ಟಿ ಸಮುದಾಯದ ದಾಖಲಾತಿ ಅನುಪಾತ ಒಟ್ಟಾರೆ ರಾಜ್ಯಮಟ್ಟದಲ್ಲಿ ಕಡಿಮೆಯಾಗಿದೆ. ಎಸ್ಸಿ, ಎಸ್ಟಿ ಸಮುದಾಯಗಳ ಒಟ್ಟು ಜಿಇಆರ್ ನಲ್ಲಿ ಗಮನಾರ್ಹ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.

ಪ್ರಾಥಮಿಕ ಹಂತದಲ್ಲಿ ಶಾಲೆ ಬಿಡುವವರ ಪ್ರಮಾಣ ಕಡಿಮೆ ಇದ್ದರೂ, ಪ್ರೌಢಶಾಲೆಯ ಹಂತದಲ್ಲಿ ಈ ಪ್ರಮಾಣವು ಒಟ್ಟು ಶೇ. 14.7 ರಷ್ಟಿದೆ. ಇದರಲ್ಲಿ ಬಾಲಕರ ಪಾಲು ಶೇ.16.2 ಮತ್ತು ಬಾಲಕಿಯರು ಶಾಲೆ ತೊರೆಯುವ ಪ್ರಮಾಣ ಶೇ.13. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರ ಅಭಿಪ್ರಾಯದ ಪ್ರಕಾರ ವಿದ್ಯಾರ್ಥಿಗಳ ಕುಟುಂಬದ ಆರ್ಥಿಕ ಅಗತ್ಯತೆ, ವಲಸೆ, ಅರಿವಿನ ಕೊರತೆ ಅಥವಾ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡದಿರುವಂತ ಕೌಟುಂಬಿಕ ಪರಿಸರಗಳು ಶಾಲೆ ತೊರೆಯಲು ಪ್ರಮುಖ ಕಾರಣ ಎಂದು ವರದಿ ಹೇಳಿದೆ.

ವರ್ಷದಿಂದ ವರ್ಷಕ್ಕೆ ಶಾಲೆಯಿಂದ ಹೊರಗುಳಿಯುವವರ ಅಂಕಿ ಸಂಖ್ಯೆ
ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುತ್ತಿರುವುದರ ಹಿಂದಿನ ಕಾರಣಗಳನ್ನು ಅರಿಯಲು ಅಧ್ಯಯನ ತಂಡ ಸಿಆರ್ ಪಿ , ಬಿಇಒ, ಬಿಆರ್ ಸಿ, ಮುಖ್ಯಶಿಕ್ಷಕರು, ಡಿಡಿಪಿಐ ಮತ್ತು ಡಯಟ್ ಅಧಿಕಾರಿಗಳು ಸಹಿತ ಇಲಾಖೆಯ ವಿವಿಧ ಹಂತದ ಅಧಿಕಾರಿಗಳ ಸಂದರ್ಶನ ಮತ್ತು ಪೋಷಕರು, ಸಮುದಾಯ ಸದಸ್ಯರ ಜೊತೆಗೆ ಕೇಂದ್ರೀಕೃತ ಗುಂಪು ಚರ್ಚೆಗಳನ್ನು ನಡೆಸಿದೆ. 2,046 ವಿದ್ಯಾರ್ಥಿಗಳು ಮತ್ತು 462 ಶಿಕ್ಷಕರ ಸಮೀಕ್ಷೆಯ ಮೂಲಕ ಅಧ್ಯಯನಕ್ಕೆ ಪರಿಮಾಣಾತ್ಮಕ ದತ್ತಾಂಶವನ್ನು ಸಂಗ್ರಹಿಸಲಾಗಿದೆ.

ಯೂಡೈಸ್ ಪ್ಲಸ್ ನಂತಹ ಮೂಲಗಳಿಂದ ದ್ವಿತೀಯ ದತ್ತಾಂಶವನ್ನು ಬಳಸಿಕೊಳ್ಳಲಾಗಿದೆ. ದಾಖಲಾತಿ, ಹಾಜರಾತಿ ಮುಂತಾದ ಪ್ರಮುಖ ಅಂಶಗಳ ಮೇಲೆ ವಿಶ್ಲೇಷಣೆಯನ್ನು ಕೈಗೊಳ್ಳಲಾಗಿದೆ ಎಂದು ವರದಿಯ ಸಾರಾಂಶದಲ್ಲಿ ಹೇಳಲಾಗಿದೆ. ಬೆಂಗಳೂರು, ಹೈದರಾಬಾದ್ ನಂತಹ ನಗರಗಳಿಗೆ ಕುಟುಂಬಗಳ ವಲಸೆ ಮತ್ತು ವಲಸೆ ಮಕ್ಕಳ ಶಿಕ್ಷಣದಲ್ಲಿ ಅಡಚಣೆ, ಅಸಂಘಟಿತ ಮತ್ತು ಅಲೆಮಾರಿ ಕುಟುಂಬಗಳ ಜೀವನ ಶೈಲಿ, ಮುಟ್ಟಿನ ಸಂದರ್ಭ ಮತ್ತಿತರ ಕಾರಣಗಳಿಂದ ಕೆಲವು ಮಕ್ಕಳಲ್ಲಿ ಅನಾರೋಗ್ಯ ಸಂಬಂಧಿ ದೀರ್ಘಾವಧಿ ಗೈರು ಹಾಜರಿ, ಪೋಷಕರಲ್ಲಿ ಶೈಕ್ಷಣಿಕ ಅರಿವಿನ ಕೊರತೆ, ಕೃಷಿ ಚಟುವಟಿಕೆಗಳ ಋತುಗಳಲ್ಲಿ ವಿದ್ಯಾರ್ಥಿಗಳು ಕೆಲಸಕ್ಕೆ ಹೋಗುವುದು, ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಮುಂತಾದವನ್ನು ಮಕ್ಕಳು ಶಾಲೆಯಿಂದ ಹೊರಗುಳಿಯುವಿಕೆಗೆ ಕಾರಣಗಳನ್ನಾಗಿ ಗುರುತಿಸಲಾಗಿದೆ.
ಕೂಲಿಗಾಗಿ ಮಕ್ಕಳ ಬಳಕೆ
ಬಾಲಕಾರ್ಮಿಕ ಪದ್ಧತಿಯೂ ಮತ್ತೊಂದು ಕಾರಣ. ವಾರಾಂತ್ಯದಲ್ಲಿ ಮಕ್ಕಳನ್ನು ಕೂಲಿಗಾಗಿ ಬಳಸಿಕೊಳ್ಳುತ್ತಾರೆ. ಇದರಿಂದ ಕುಟುಂಬದ ಆದಾಯ ಹೆಚ್ಚುತ್ತದೆ. ಹೆಚ್ಚು ಗಳಿಸುವ ಆಸಕ್ತಿ ಬೆಳೆದರೆ ಓದುವ ಆಸಕ್ತಿ ಕಳೆದು ಹೋಗುತ್ತದೆ ಎನ್ನುವ ಬ್ಲಾಕ್ ಮಟ್ಟದ ಅಧಿಕಾರಿಯೊಬ್ಬರ ಮಾತನ್ನು ಅಧ್ಯಯನ ತಂಡ ವರದಿಯಲ್ಲಿ ಉಲ್ಲೇಖಿಸಿದೆ. ಕೋವಿಡ್ ನಂತರ ಪ್ರೌಢಶಾಲಾ ವಿದ್ಯಾರ್ಥಿಗಳ ಬಾಲ್ಯ ವಿವಾಹ ಹೆಚ್ಚಿರುವುದನ್ನು ಮತ್ತು “ಅನೇಕ ದಾರಿ ತಪ್ಪಿದ ಮಕ್ಕಳು ಬೇರೆಯವರ ಜೊತೆ ಓಡಿಹೋಗುತ್ತಾರೆ ಎಂದು ವಿಶ್ಲೇಷಿಸಿರುವುದು ವರದಿಯಿಂದ ಗೊತ್ತಾಗಿದೆ.

ಸಮಾಜದಲ್ಲಿ ತಮ್ಮ ಗೌರವ ಉಳಿಸಿಕೊಳ್ಳಲು ಅಂತಹ ಮಕ್ಕಳ ಪೋಷಕರು ತಮ್ಮ ಮಕ್ಕಳ ಮದುವೆಯನ್ನು ತರಾತುರಿಯಲ್ಲಿ ಏರ್ಪಡಿಸುತ್ತಿದ್ದಾರೆ. ಇದು ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿದೆ,ʼʼ ಎನ್ನುವುದನ್ನೂ ಅಧಿಕಾರಿಗಳು ಗುರುತಿಸಿದ್ದಾರೆ. ಏಕ ಪೋಷಕ ಅಥವಾ ಅನಾಥ ಬದುಕಿನ ಹಿನ್ನೆಲೆಯ ಅನೇಕ ಮಕ್ಕಳು ಗಣನೀಯ ಸವಾಲುಗಳನ್ನು ಎದುರಿಸುತ್ತಿದ್ದಾರೆ ಮತ್ತು ಶಾಲೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎನ್ನುವುದನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಮಂಡಳಿ (ಎಸ್ ಸಿಪಿಸಿಆರ್) ಗಮನಿಸಿದೆ. ಹತ್ತನೆ ತರಗತಿಯಲ್ಲಿ ಅನುತ್ತೀರ್ಣರಾದ ಕೆಲವು ಮಕ್ಕಳು ಪರೀಕ್ಷೆಯನ್ನು ಪುನರಾವರ್ತಿಸಲು ಹಿಂಜರಿಯುತ್ತಾರೆ.
ಮೊಬೈಲ್ ಚಟಗಳಿಂದಲೂ ವಿಚಲಿತ
ಕೆಲವು ಪೋಷಕರೂ ಈ ಬಗ್ಗೆ ಗಮನಹರಿಸುವುದಿಲ್ಲ. ವಯಸ್ಸು ಹೆಚ್ಚಿದಂತೆ ಕೆಲವು ಮಕ್ಕಳು ಪ್ರಕ್ಷುಬ್ಧರಾಗುತ್ತಾರೆ. ನಕಾರಾತ್ಮಕ ಸಹಪಾಠಿಗಳ ಒತ್ತಡದಿಂದ ಪ್ರಭಾವಿತರಾಗುತ್ತಾರೆ. ಅಂಥವರು ಶಾಲೆಯಿಂದ ಹೊರಗುಳಿಯುತ್ತಾರೆ. ಮೊಬೈಲ್ ಚಟ ಮತ್ತಿತರ ದುಶ್ಚಟಗಳಿಂದಲೂ ಕೆಲವು ಮಕ್ಕಳು ವಿಚಲಿತರಾಗುತ್ತಾರೆ ಎನ್ನುವ ಅಂಶಗಳನ್ನೂ ವರದಿ ಗುರುತಿಸಿದೆ.

ದತ್ತಾಂಶದ ಪ್ರಕಾರ ಬಾಲಕಿಯರ ಒಟ್ಟಾರೆ ಮಾಧ್ಯಮಿಕ ಶಾಲೆಯಿಂದ ಹೊರಗುಳಿಯುವಿಕೆ ಕಡಿಮೆ ಇದ್ದರೂ, ಕೆಲವು ಸವಾಲುಗಳಿಂದ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. “ಪುತ್ರರೇ ನಮ್ಮ ಭವಿಷ್ಯವಾಗುತ್ತಾರೆ ಎಂಬ ಮಾತು ಹಿಂದೆ ಇತ್ತು. ಆದರೆ ಈಗ ಅಂಥದ್ದೇನೂ ಇಲ್ಲ. ಇಂದು ಗಂಡು ಮತ್ತು ಹೆಣ್ಣು ಇಬ್ಬರೂ ನಮ್ಮ ಭವಿಷ್ಯ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ಹುಡುಗರು ಹೇಗಾದರೂ ಯಾವುದೇ ಕಾರ್ಖಾನೆ ಅಥವಾ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಬಹುದು.
ಆದರೆ, ಹುಡುಗಿಯರಿಗೆ ಇದು ಕಷ್ಟ. ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರು ಯಾರನ್ನೂ ಅವಲಂಬಿಸದೆ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗುತ್ತದೆ,ʼʼ ಎಂದು ಕೆಲವು ಪೋಷಕರು ಜವಾಬ್ದಾರಿಯುತ ಹೇಳಿಕೆ ನೀಡಿದ್ದಾರಾದರೂ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಬಗೆಗಿನ ಇನ್ನು ಕೆಲವು ಪೋಷಕರ ಋಣಾತ್ಮಕ ವರ್ತನೆಯನ್ನೂ ವರದಿ ಉಲ್ಲೇಖಿಸಿದೆ. ಮಹಿಳಾ ಶಿಕ್ಷಕರಿದ್ದರಷ್ಟೆ ಹುಡುಗಿಯರು ಶಾಲೆಗೆ ಹಾಜರಾಗುವ ನಿದರ್ಶನಗಳನ್ನು ಗುರುತಿಸಲಾಗಿದೆ.
ಶೌಚಾಲಯ ಸಮಸ್ಯೆ
ಶಾಲೆಗಳಲ್ಲಿ ಶೌಚಾಲಯ ಸಮಸ್ಯೆ, ಹಾಸ್ಟೆಲ್ ಸೌಲಭ್ಯ ಇಲ್ಲದಿರುವುದು, ಮಾಧ್ಯಮಗಳಲ್ಲಿ ವರದಿಯಾಗುವ ಹುಡುಗಿಯರ ಅಪಹರಣ, ಅತ್ಯಾಚಾರ, ಕಿರುಕುಳದಂತಹ ಪ್ರಕರಣಗಳು ವಿದ್ಯಾರ್ಥಿನಿಯರ ಮತ್ತು ಅವರ ಪೋಷಕರ ಶಿಕ್ಷಣದ ಉತ್ಸಾಹವನ್ನು ಕುಗ್ಗಿಸುತ್ತಿವೆ. ಕೆಲವು ಪೋಷಕರು ತಮ್ಮ ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಭಯ ವ್ಯಕ್ತಪಡಿಸಿದ್ದಾರೆ.
ಈ ಕಾಲದಲ್ಲೂ ತಮ್ಮ ಹೆಣ್ಣುಮಕ್ಕಳನ್ನು ಮನೆಯ ಕೆಲಸಕ್ಕೆ ಹಚ್ಚಿ, ಗಂಡುಮಕ್ಕಳನ್ನಷ್ಟೆ ಶಾಲೆಗೆ ಕಳುಹಿಸುವ ಪೋಷಕರ ಬದಲಾಗದ ಮನಸ್ಥಿತಿಯನ್ನೂ ವರದಿ ಗುರುತಿಸಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ರೂಪಿಸಿದ ಯೋಜನೆಗಳು ಮತ್ತು ಸೌಲಭ್ಯಗಳನ್ನು ತಳಮಟ್ಟದಲ್ಲಿ ಜಾರಿಗೊಳಿಸಲು ವಿವಿಧ ಸಂಸ್ಥೆಗಳು, ಸಮುದಾಯದ ಸದಸ್ಯರು ಸೋತಿರುವುದು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತಿದೆ ಎಂದು ಸಂದರ್ಶನದಲ್ಲಿ ಪಾಲ್ಗೊಂಡ ಸಿಆರ್ ಪಿ ಗಳೇ ಹೇಳಿದ್ದಾರೆ.
ಪ್ರೌಢಶಾಲಾ ಹಂತದಲ್ಲಿ ಮಕ್ಕಳು ಶಾಲೆಯಿಂದ ಹೊರಗುಳಿಯುವಿಕೆ ಸವಾಲಾಗಿದೆ ಮತ್ತು ಪ್ರೌಢಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸಲು ಹೆಚ್ಚು ಹೆಚ್ಚು ಪ್ರೌಢಶಾಲೆಗಳನ್ನು ವ್ಯವಸ್ಥಿತವಾಗಿ ಸ್ಥಾಪಿಸಬೇಕು. ವಸತಿ ಸೌಲಭ್ಯವಿರುವ ಶಾಲೆಗಳ ಅಗತ್ಯವಿದ್ದು, ನವೋದಯ ಮಾದರಿಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ಶಾಲೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸುವ ಅಗತ್ಯವಿದೆ.
ಆಶ್ರಮ ಶಾಲೆಗಳು ಕೇವಲ 5ನೇ ತರಗತಿವರೆಗೆ ಆದಿವಾಸಿ ಮಕ್ಕಳ ಶಿಕ್ಷಣವನ್ನು ನೀಡುತ್ತಿರುವುದರಿಂದ , ಎಸ್ ಟಿ ಪ್ರದೇಶಗಳ/ ಎಸ್ ಟಿ ವಿದ್ಯಾರ್ಥಿಗಳ ಪ್ರೌಢಶಾಲಾ ಪ್ರವೇಶ ಹೆಚ್ಚಿಸಲು ಸೂಕ್ತ ಕ್ರಮಗಳನ್ನು ರೂಪಿಸುವ ಅಗತ್ಯವಿದೆ. ಪ್ರತಿ ಪಂಚಾಯಿತಿಯಲ್ಲಿ ಮಾದರಿ ಶಾಲೆಯನ್ನು ಸ್ಥಾಪಿಸಿ, ತಳಮಟ್ಟದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪ್ರವೇಶ ಹೆಚ್ಚಿಸಬೇಕು. ಪೂರ್ವ ಪ್ರಾಥಮಿಕದಿಂದ ೧೨ನೇ ತರಗತಿ ವರೆಗೆ ಇರುವ ಸಂಯುಕ್ತ ಶಾಲೆಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ವರದಿ ಶಿಫಾರಸು ಮಾಡಿದೆ.
ಪಶ್ಚಿಮ ಬಂಗಾಳ, ರಾಜಸ್ತಾನ ಮಾದರಿಗೆ ಸಲಹೆ
ರಾಜಸ್ಥಾನದಲ್ಲಿ ಎಲ್ಲ ಗ್ರಾಮಪಂಚಾಯಿತಿಗಳಲ್ಲಿ ಆದರ್ಶ ಶಾಲೆಯನ್ನು (ಮಾದರಿ ಶಾಲೆ) ಸ್ಥಾಪಿಸಲಾಗಿದ್ದು, ಇದು ತಳಮಟ್ಟದಲ್ಲಿ ಗುಣಮಟ್ಟದ ಶಿಕ್ಷಣದ ಲಭ್ಯತೆ ಹೆಚ್ಚಿಸಲು ಸಹಾಯಕವಾಗಿದೆ.ಈ ಶಾಲೆಗಳು ಸುತ್ತಮುತ್ತಲಿನ ಇತರ ಶಾಲೆಗಳಿಗೆ ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುವ ಉದ್ದೇಶ ಹೊಂದಿವೆ. ಈ ಸುಧಾರಣೆಯನ್ನು ಬೆಂಬಲಿಸಲು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ ಪ್ರಾಥಮಿಕ ಶಿಕ್ಷಣ ಅಧಿಕಾರಿಗಳನ್ನು ನೇಮಿಸಲಾಗಿದೆ ಎನ್ನುವುದನ್ನು ಶಿಫಾರಸಿನಲ್ಲಿ ಉಲ್ಲೇಖಿಸಲಾಗಿದೆ.
ಮನೆಯಲ್ಲಿ ಕಲಿಯುವ ಅವಕಾಶಗಳನ್ನು ಒದಗಿಸುವುದು ಮತ್ತು ಭಾಷೆ ಸುಧಾರಣೆಯ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸಲು ಅಭಿಯಾನ ನಡೆಸಬೇಕು. ದೂರದ ಮತ್ತು ಕಷ್ಟಕರ ಸ್ಥಳಗಳಿಂದ ಬರುವ ಮಕ್ಕಳಿಗೆ ಸರಿಯಾದ ಸಾರಿಗೆ ಸೌಲಭ್ಯ ಕಲ್ಪಿಸಬೇಕು. ಶಾಲೆಗಳಲ್ಲಿ ಮಹಿಳಾ ಶಿಕ್ಷಕರನ್ನು ನೇಮಿಸಬೇಕು ಮತ್ತು ಹೆಣ್ಣುಮಕ್ಕಳಿಗೆ ಸುರಕ್ಷಿತ ಶಾಲಾ ವಾತಾವರಣವನ್ನು ಒದಗಿಸಬೇಕು.
ಶಾಲೆಯಿಂದ ಹೊರಗುಳಿಯುವಿಕೆಗೆ ಆರ್ಥಿಕ ಅಂಶಗಳ ಕಾರಣವೂ ಇರುವುದರಿಂದ, ಪಶ್ಚಿಮ ಬಂಗಾಳದ ಶಿಕ್ಷಾಶ್ರೀ ಮತ್ತು ಕನ್ಯಾಶ್ರೀ ಯಂತಹ ಯೋಜನೆಗಳನ್ನು ಕರ್ನಾಟಕದಲ್ಲಿಯೂ ಪರಿಗಣಿಸಬೇಕು. ಈ ಯೋಜನೆಗಳು ಪ್ರಾಥಮಿಕವಾಗಿ ಅನುಸೂಚಿತ ಜಾತಿಯ ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣ ಮುಂದುವರಿಸಲು ಆರ್ಥಿಕ ಸಹಾಯ ಹಾಗೂ ಷರತ್ತುಬದ್ಧ ನಗದು ಪರಿಹಾರಗಳನ್ನು ಒದಗಿಸುತ್ತವೆ ಎಂದು ಶಿಫಾರಸಿನಲ್ಲಿ ಗಮನಸೆಳೆಯಲಾಗಿದೆ.
9,10, 11 ಮತ್ತು 12 ನೇ ತರಗತಿಗಳಿಗೆ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನಗಳನ್ನು ಹೆಚ್ಚಿಸಬೇಕು ಮತ್ತು ಈ ನೆರವುಗಳನ್ನು ಬಾಲಕಿಯರಿಗೆ ಮಾತ್ರವಲ್ಲ, ಬಾಲಕರಿಗೂ ವಿಸ್ತರಿಸಬೇಕು. ಮೆರಿಟ್ ಆಧಾರಿತ ವಿದ್ಯಾರ್ಥಿವೇತನ ಹಾಗೂ ಅಲ್ಪಸಂಖ್ಯಾತರ ಮೆರಿಟ್ -ಕಮ್- ನೀಡ್ ಆಧಾರಿತ ಯೋಜನೆಗಳನ್ನು ಬಲಪಡಿಸಬೇಕು ಎಂದು ಶಿಫಾರಸು ಮಾಡಲಾಗಿದೆ.
ಈ ಅಧ್ಯಯನ ವರದಿಯನ್ನು ಸ್ವತಂತ್ರ ಮೌಲ್ಯಮಾಪಕರಿಂದ ಪರಿಶೀಲನೆಗೆ ಒಳಪಡಿಸಲಾಗಿದ್ದು, ಅಂತಿಮ ವರದಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ತಾಂತ್ರಿಕ ಸಮಿತಿಯ 63ನೇ ಸಭೆಯಲ್ಲಿ ವರದಿಯನ್ನು ಅನುಮೋದಿಸಲಾಗಿದೆ ಎಂದು ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರದ ಮುಖ್ಯ ಮೌಲ್ಯಮಾಪನ ಅಧಿಕಾರಿ ಮನೋಜ್ ಜೈನ್ ಹೇಳಿದ್ದಾರೆ.
“ ಪೂರ್ವ ಪ್ರಾಥಮಿಕ ಹಂತದಿಂದ ಪಿಯುಸಿವರೆಗೂ ಎಲ್ಲರನ್ನೂ ಒಳಗೊಳ್ಳುವ ,ಸಮಾನ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಈ ಅಧ್ಯಯನದ ಫಲಿತಾಂಶಗಳು ಸಹಕಾರಿಯಾಗಲಿವೆ ಎಂದು ಭಾವಿಸಲಾಗಿದೆ, ಇದು ಶಿಕ್ಷಣ ಕ್ಷೇತ್ರದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಸಾಲಿಗೆ ಸೇರುತ್ತದೆ,ʼʼ ಎಂದೂ ಅವರು ವರದಿಯ ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.





