ವಾಟ್ಸಾಪ್‌, ಎಸ್‌ಎಂಎಸ್‌ ಬಳಕೆಯಲ್ಲಿ ಹೆಚ್ಚಳ; ವೆಚ್ಚ ಪಾವತಿಗೂ ಸಂಕಷ್ಟ, ಸೇವೆ ಸ್ಥಗಿತಗೊಳ್ಳಲಿದೆಯೇ?

ಬೆಂಗಳೂರು; ಮೊಬೈಲ್‌ ಒನ್ ಯೋಜನೆಯಡಿ ವಾಟ್ಸಾಪ್‌, ಎಸ್‌ಎಂಎಸ್‌, ಐವಿಆರ್‍‌ಎಸ್‌ ಸೇವೆಗಳ ಬಳಕೆ ಮಾಡುತ್ತಿರುವ ಸರ್ಕಾರದ ಇಲಾಖೆಗಳು, ನಿಗಮ, ಮಂಡಳಿಗಳಿಗೀಗ ಅನುದಾನದ ಕೊರತೆ ಉಂಟಾಗಿದೆ. ನಿಗದಿ ಅವಧಿಯೊಳಗೆ ಅನುದಾನ ಒದಗಿಸದೇ ಇದ್ದಲ್ಲಿ ಸೇವಾದಾತ ಕಂಪನಿಯು ಒದಗಿಸುತ್ತಿರುವ ಈ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿದೆ. ಅಲ್ಲದೇ ಸರ್ಕಾರಿ ಇಲಾಖೆಗಳ ತಂತ್ರಾಂಶಗಳು ಕಾರ್ಯನಿರ್ವಹಿಸುವುದಿಲ್ಲ!

 

ಅಲ್ಲದೇ ಈ ಸೇವೆಗಳನ್ನು ಪೂರೈಸುತ್ತಿರುವ ಸೇವಾದಾತ ಕಂಪನಿಗಳಿಗೆ ವೆಚ್ಚ ಭರಿಸಲು ಹಣಕಾಸಿನ ಲಭ್ಯತೆಯಿಲ್ಲವಾಗಿದೆ. ಏಕೆಂದರೇ ಈ ಸೇವೆಗಳ ಬಳಕೆ ಮಾಡುತ್ತಿರುವ ಇಲಾಖೆಗಳ ವೆಚ್ಚವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅಲ್ಲದೆ ಈ ಸೇವೆಗಳಿಗೆ ಒದಗಿಸಿರುವ ಅನುದಾನ ಲಭ್ಯತೆ ಮತ್ತು ವೆಚ್ಚದ ಅನುಪಾತವೂ ಹೆಚ್ಚುತ್ತಿದೆ.

 

ಹೀಗಾಗಿ ವಿದ್ಯುನ್ಮಾನ ಸೇವಾ ವಿತರಣಾ ನಿರ್ದೇಶನಾಲಯದಿಂದ ಎಸ್‌ಎಂಎಸ್‌, ಐವಿಆರ್‍‌ಎಸ್‌, ವಾಟ್ಸಾಪ್‌ ಸೇವೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. 2025ರ ಅಕ್ಟೋಬರ್‍‌ 6ರಂದು ಆದೇಶ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮೊಬೈಲ್‌ ಒನ್‌ ಯೋಜನೆಯಡಿ ಈ ಸೌಲಭ್ಯ ಮತ್ತು ಸೇವೆಗಳನ್ನು ಅರ್ಹ ಸೇವಾದಾತ ಬಿಎಸ್‌ಎನ್‌ಎಲ್‌ ಸಂಸ್ಥೆಯಿಂದ ಕೇಂದ್ರೀಕೃತವಾಗಿ ಖರೀದಿಸಿರುವ ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯವು, ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಇಲಾಖೆಗಳ ಅಧೀನದಲ್ಲಿರುವ ನಿಗಮ ಮತ್ತು ಮಂಡಳಿಗಳ ಅಧಿಕಾರಿ, ನೌಕರರುಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ.

 

 

2023ರ ಡಿಸೆಂಬರ್‍‌ 15ರಿಂದ 2026ರ ಡಿಸೆಂಬರ್‍‌ 14ರವರೆಗೆ ಈ ಸೇವೆ ಒದಗಿಸಲು ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯವು 4(ಜಿ) ವಿನಾಯಿತಿ ಪಡೆದಿದೆ. ಇದರ ಪ್ರಕಾರ ಪ್ರತೀ ಎಸ್‌ಎಂಎಸ್‌ಗೆ 0.1, 0.075 ಪೈಸೆ, ವಾಟ್ಸಾಪ್‌ (ಸರ್ವಿಸ್‌ ಮೆಸೆಂಜರ್‍‌) 0.632 ಪೈಸೆ, ಟ್ರೂಲ್ ಕಾಲರ್‍‌ಗೆ 0.06 ಪೈಸೆ, ವಾಯ್ಸ್‌ ಮೆಸೇಜ್‌ಗೆ 30 ಸೆಕೆಂಡ್‌ಗಳಿಗೆ 0.29 ಪೈಸೆ ದರ ನಿಗದಿಪಡಿಸಿತ್ತು.

 

 

ಈ ಸಂಬಂಧ ಬಿಎಸ್‌ಎನ್‌ಎಲ್‌ ಸಂಸ್ಥೆಯು ಪ್ರತೀ ತಿಂಗಳು ಸೇವೆಯ ಸಂಖ್ಯೆಗೆ ಅನುಗುಣವಾಗಿ ಬಿಲ್‌ ನೀಡುತ್ತಿದೆ. ಈ ವೆಚ್ಚವನ್ನು ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯವು ಭರಿಸುತ್ತಿದೆ. ಈ ವೆಚ್ಚವನ್ನು ಇಲಾಖೆಗಳಿಂದ ಮರು ಭರಿಸಿಕೊಳ್ಳುತ್ತಿಲ್ಲ. ಈ ವೆಚ್ಚವನ್ನು ಸರ್ಕಾರವು ನೀಡುವ ವಾರ್ಷಿಕ ಅನುದಾನ ಮತ್ತು ನಿಗಮ, ಮಂಡಳಿಗಳು ಈ ಸೇವೆಗಳನ್ನು ಬಳಸುವ ಸಂಖ್ಯೆಗೆ ಅನುಗುಣವಾಗಿ ಅದಕ್ಕೆ ತಗುಲುವ ವೆಚ್ಚವನ್ನು ಈ ಸಂಸ್ಥೆಗಳಿಂದ ಮರು ಭರಿಸಿಕೊಳ್ಳುತ್ತಿದೆ.

 

 

ಶೇ.70ಕ್ಕೆ ಏರಿಕೆಯಾದ ವೆಚ್ಚ

 

ಬಿಎಸ್‌ಎನ್‌ಎಲ್‌ ಸಂಸ್ಥೆಯಿಂದ ಈ ಎಲ್ಲಾ ಸೇವೆಗಳನ್ನು ಪಡೆಯುತ್ತಿರುವ ಇಲಾಖೆಗೀಗ ಅನುದಾನದ ಕೊರತೆ ಎದುರಾಗಿದೆ. ಹೀಗಾಗಿ ನಿಗದಿತ ಅವಧಿಯಲ್ಲಿ ಈ ವೆಚ್ಚವನ್ನು ಬಿಎಸ್‌ಎನ್‌ಎಲ್‌ಗೆ ಭರಿಸುತ್ತಿಲ್ಲ. 2023-24, 2024-25ನೇ ಸಾಲಿನಲ್ಲಿ ವಾಟ್ಸಾಪ್‌, ಎಸ್‌ಎಂಎಸ್‌, ಐವಿಆರ್‍‌ಎಸ್‌ ಸೇವೆಗಳ ಬಳಕೆಗೂ ಪ್ರಸಕ್ತ ಸಾಲಿನ ಬಳಕೆಗೆ ತಾಳೆ ಮಾಡಿದಲ್ಲಿ ಈ ಸೇವೆಯ ಬಳಕೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಸೇವೆಗಳ ಬಳಕೆಯು ಶೇ.70ಕ್ಕೇರಿದೆ. ಅಲ್ಲದೇ ಅನುದಾನದ ಲಭ್ಯತೆ ಮತ್ತು ಈ ಸೇವೆಗಳ ವೆಚ್ಚದ ಅನುಪಾತವೂ ಸಹ ಹೆಚ್ಚಿದೆ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಚಿತ್ರ ಕೃಪೆ- ಚಾಟ್‌ ಜಿಪಿಟಿ

 

ಸ್ಥಗಿತಗೊಳ್ಳಲಿದೆಯೇ ಸೇವೆಗಳು?

 

ವಾಟ್ಸಾಪ್‌, ಎಸ್‌ಎಂಎಸ್‌, ವಾಯ್ಸ್‌ ಎಸ್‌ಎಂಎಸ್‌, ಐವಿಆರ್‍‌ಎಸ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡುತ್ತಿವೆಯಾದರೂ ಸೇವಾದಾತ ಕಂಪನಿಗೆ ನಿಗದಿತ ಅವಧಿಯೊಳಗೆ ವೆಚ್ಚವನ್ನು ಭರಿಸುತ್ತಿಲ್ಲ. ಸೂಕ್ತ ಅವಧಿಯೊಳಗೆ ವೆಚ್ಚ ಭರಿಸದಿದ್ದಲ್ಲಿ ಈ ಎಲ್ಲಾ ಸೇವೆಗಳೂ ಸ್ಥಗಿತಗೊಳಿಸಲಿದೆ ಎಂಬ ಸಂದೇಶವನ್ನೂ ಸಹ ವಿದ್ಯುನ್ಮಾನ ನಾಗರಿಕ ಸೇವೆಗಳ ವಿತರಣೆ ನಿರ್ದೇಶನಾಲಯವು ಸರ್ಕಾರಕ್ಕೆ ರವಾನಿಸಿರುವುದು ಆದೇಶದಿಂದ ತಿಳಿದು ಬಂದಿದೆ.

 

ಪೂರ್ವಪಾವತಿ ಮಾದರಿಗೆ ಮೊರೆ

 

ಬಿಎಸ್‌ಎನ್‌ಎಲ್‌ಗೆ ನಿಗದಿತ ಅವಧಿಯೊಳಗೆ ವೆಚ್ಚವನ್ನು ಭರಿಸದಿದ್ದಲ್ಲಿ ಸೇವೆಗಳು ಸ್ಥಗಿತಗೊಳ್ಳುವ ಆತಂಕದಿಂದ ಸರ್ಕಾರವೀಗ ಪೂರ್ವ ಪಾವತಿ (ಪ್ರೀಪೇಯ್ಡ್‌) ಮಾದರಿಗೆ ಮೊರೆ ಹೋಗಲು ನಿರ್ಧರಿಸಿದೆ. ಈ ಎಲ್ಲಾ ಸೇವೆಗಳಿಗೆ ತಗಲುವ ವೆಚ್ಚವನ್ನು ಪೂರ್ವ ಪಾವತಿ ಮಾದರಿಯಲ್ಲಿ ಮುಂಗಡವಾಗಿ ಜಮಾ ಮಾಡಲು ಮಾರ್ಗಸೂಚಿಗಳನ್ನು ಹೊರಡಿಸಲು ಆದೇಶದಲ್ಲಿ ಸೂಚಿಸಿರುವುದು ಗೊತ್ತಾಗಿದೆ.

 

 

ಕೇಂದ್ರೀಕೃತವಾಗಿ ಒದಗಿಸುತ್ತಿರುವ ಎಸ್‌ಎಂಎಸ್‌, ಐವಿಆರ್‍ಎಸ್‌ ವಾಟ್ಸಾಪ್‌ ಸೇವೆಗಳನ್ನ ಬಳಸುತ್ತಿರುವ ಇಲಾಖೆಗಳು, ಮಂಡಳಿಗಳು, ನಿಗಮಗಳು ಆಯಾ ಸಾಲಿನ ವರ್ಷದ ಅರಂಭಕ್ಕೂ ಮೊದಲೇ ಪ್ರಸಕ್ತ ಸಾಲಿನಲ್ಲಿ ಬಳಸಬಹುದಾದ ಎಸ್‌ಎಂಎಸ್‌, ಐವಿಆರ್‍‌ಎಸ್‌, ವಾಟ್ಸಾಪ್‌ ಸಂಖ್ಯೆಗಳನ್ನು ನಿರ್ಧರಿಸಬೇಕು ಎಂದು ಸೂಚಿಸಿದೆ.

 

ಹಿಂದಿನ ಸಾಲಿನಲ್ಲಿ ಪಡೆದಿರುವ ಈ ಎಲ್ಲಾ ಸೇವೆಗಳ ಸಂಖ್ಯಾಧಾರಿತ ಬಳಕೆ ಮಾಹಿತಿ ನೀಡಬೇಕು. ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ ನಿರ್ದೇಶನಾಲಯವು ಅಂದಾಜು ವೆಚ್ಚ ಮಾಡಬೇಕು. ಈ ವೆಚ್ಚದ ಮೊತ್ತವನ್ನು ಈ ನಿರ್ದೇಶನಾಲಯಕ್ಕೆ ಮುಂಗಡವಾಗಿ ಜಮೆ ಮಾಡಬೇಕು. ಸೆಂಡರ್‍‌ ಐಡಿ ಖಾತೆಗಳನ್ನು ಜಮಾಗೊಳಿಸಿದ ಮೊತ್ತಕ್ಕೆ ಸಮನಾಗಿ ಎಸ್‌ಎಂಎಸ್‌ , ಐವಿಆರ್‍‌ಎಸ್‌, ವಾಟ್ಸಾಪ್‌ ಸಂಖ್ಯೆಗಳನ್ನು ರಿ ಚಾರ್ಜ್‌ ಮಾಡಿಸಿಕೊಳ್ಳಬೇಕು. ರೂ ಚಾರ್ಜ್‌ಗೊಳಿಸಿಲ್ಲದ ಯಾವುದೇ ಸೆಂಡರ್‍‌ ಐ ಡಿ ಗಳಿಗೆ ಎಸ್‌ಎಂಎಸ್‌, ವಾಟ್ಸಾಪ್‌, ಐವಿಆರ್‍‌ಎಸ್‌ ಸೇವೆಗಳು ಲಭ್ಯವಿರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

 

 

ಈ ಸೇವೆಗಳ ಸಂಖ್ಯೆಗಿಂತ ಬಳಕೆ ಮೀರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಂದು ವೇಳೆ ರೀಚಾರ್ಜ್‌ ಪಡೆದಿರುವ ಎಸ್‌ಎಂಎಸ್‌, ವಾಟ್ಸಾಪ್‌, ಐವಿಆರ್‍‌ಎಸ್‌ ಗಳಿಗಿಂತ ಹೆಚ್ಚಿನ ಸಂಖ್ಯೆ ಅಗತ್ಯ ಬಿದ್ದಲ್ಲಿ ಹೆಚ್ಚಿನ ಮೊತ್ತವನ್ನು ಇ ಆಡಳಿತಕ್ಕೆ ಮುಂಗಡವಾಗಿ ಪಾವತಿಸಬೇಕು ಎಂದು ಸೂಚಿಸಿದೆ.

 

2024ರಲ್ಲೂ 36.29 ಕೋಟಿ ರು ಮೊತ್ತದ ಬಿಲ್‌ಗಳನ್ನು ಬಾಕಿ ಉಳಿಸಿಕೊಂಡಿತ್ತು. ಇದರಲ್ಲಿ 2023ರ ಮಾರ್ಚ್‌ ಅಂತ್ಯಕ್ಕೆ 21.74 ಕೋಟಿ ಹಾಗೂ 2024ರ ಏಪ್ರಿಲ್‌ನಿಂದ ಅಕ್ಟೋಬರ್‍‌ವರೆಗೆ 14.55 ಕೋಟಿ ರು ಬಾಕಿ ಇತ್ತು.

 

ಲಾಕ್‌ಡೌನ್‌ ಅವಧಿಯಲ್ಲಿಯೂ ಸರ್ಕಾರದ ಎಲ್ಲಾ ಇಲಾಖೆಗಳು ದೂರವಾಣಿ ಬಿಲ್‌ ನ ಒಟ್ಟು 38.54 ಕೋಟಿ ರು. ಬಾಕಿ ಇರಿಸಿಕೊಂಡಿದ್ದವು. ಇಲಾಖೆಗಳ ಕಚೇರಿಗಳಲ್ಲಿರುವ ಸ್ಥಿರ ದೂರವಾಣಿ ಬಳಕೆಗೆ ಸಂಬಂಧಿಸಿದಂತೆ 34.59 ಕೋಟಿ ರು., ಅಧಿಕಾರಿ, ನೌಕರರು ಬಳಸಿಕೊಂಡಿರುವ ಮೊಬೈಲ್‌ ಸೇವೆಗಳಿಗೆ ಸಂಬಂಧಿಸಿದಂತೆ 3.95 ಕೋಟಿ ರು. ಬಾಕಿ ಉಳಿದಿತ್ತು.

 

ದೂರವಾಣಿ ಮೊತ್ತವನ್ನು 2019ರ ಡಿಸೆಂಬರ್‌ 31 ಅಂತ್ಯಕ್ಕೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳಲ್ಲಿ ಇ-ಆಡಳಿತ ಇಲಾಖೆ ಅಗ್ರ ಸ್ಥಾನದಲ್ಲಿದ್ದವು. ಈ ಇಲಾಖೆ 11,77,59,953 ಕೋಟಿ ರು. ಬಾಕಿ ಉಳಿಸಿಕೊಂಡಿದ್ದರೆ ಪೊಲೀಸ್ ಇಲಾಖೆ 9,53,23,581 ಕೋಟಿ, ಪಿಡಿಒಗಳಿಂದ 5,47,60,039 ಕೋಟಿ, ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ನಾಡ ಕಚೇರಿಗಳು 2,81,06,219 ಕೋಟಿ ಬಾಕಿ ಉಳಿಸಿಕೊಳ್ಳುವ ಮೂಲಕ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದವು.

 

ಕೋವಿಡ್‌ ಸಂಕಷ್ಟ; ಬಿಎಸ್‌ಎನ್‌ಎಲ್‌ಗೆ 38.54 ಕೋಟಿ ರು. ಬಾಕಿ ಉಳಿಸಿಕೊಂಡ ಸರ್ಕಾರ

 

ಕಿಯೋನಿಕ್ಸ್‌ 82,96,553 ರು., ಕೃಷಿ ಇಲಾಖೆ 37,21,543 ರು., ಬಿಬಿಎಂಪಿ 38,29,622 ರು., ಶಿಕ್ಷಣ ಇಲಾಖೆ 34,92,708 ರು., ಆರೋಗ್ಯ ಇಲಾಖೆ 35,01,241 ರು., ಅರಣ್ಯ ಇಲಾಖೆ 19,51,259 ರು., ಕಾರ್ಮಿಕ ಇಲಾಖೆ  3,11,780 ರು., ಎಂ-ಗೌರ್ನೆನ್ಸ್‌ 9,06,066 ರು., ತಾಲೂಕು ಪಂಚಾಯ್ತಿಗಳಿಂದ 11,12,518 ರು., ಸಾರಿಗೆ ಇಲಾಖೆ 13,02,495 ರು., ನಗರಾಭಿವೃದ್ಧಿ ಇಲಾಖೆ 11,64,577 ರು., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 4,72,900 ರು., ಸೇರಿದಂತೆ ಇನ್ನಿತರೆ ಇಲಾಖೆಗಳು ಲಕ್ಷಾಂತರ ರು.ಮೊತ್ತವನ್ನು ಬಾಕಿ ಉಳಿಸಿಕೊಂಡಿದ್ದವು.

Your generous support will help us remain independent and work without fear.

Latest News

Related Posts