ಯುನೆಸ್ಕೋ ಸೂಚನೆ ಉಲ್ಲಂಘಿಸಿ ಅಂಜನಾದ್ರಿಯಲ್ಲಿ 24.54 ಕೋಟಿ ವೆಚ್ಚ; ಭೂ ದಾಖಲೆಗಳ ಪರಿಶೀಲನೆ ನಡೆಸಲಿಲ್ಲವೇಕೆ?

ಬೆಂಗಳೂರು; ಕೊಪ್ಪಳದ ಅಂಜನಾದ್ರಿ ಬೆಟ್ಟದ ಪಾರಂಪರಿಕ ತಾಣಗಳು ಪ್ರಭಾವ ಬೀರಿರುವ ಕುರಿತು ಮೌಲ್ಯಮಾಪನ ನಡೆಸದೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 21.54 ಕೋಟಿ ರು ಮೊತ್ತದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದನ್ನು ಇಂಡಿಯನ್ ಆಡಿಟ್‌ ಅಂಡ್‌ ಅಕೌಂಟೆಂಟ್‌ ಜನರಲ್‌ ಅವರು, ಪತ್ತೆ ಹಚ್ಚಿದ್ದಾರೆ.

 

ಅಲ್ಲದೇ ಯುನೆಸ್ಕೋ ಮತ್ತು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರವು ನೀಡಿದ್ದ ಸೂಚನೆಯನ್ನು ಉಲ್ಲಂಘಿಸಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದನ್ನು ಬಹಿರಂಗಗೊಳಿಸಿದೆ.

 

ಅಂಜನಾದ್ರಿ ಬೆಟ್ಟ ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರವಾಸೋದ್ಯಮ ಸ್ಥಳಗಳಲ್ಲಿ ಮೂಲ ಸೌಕರ್ಯಗಳ ಕಾಮಗಾರಿಯಲ್ಲಿಯೂ ನಡೆದಿದ್ದ ಲೋಪ ಮತ್ತು ನಿಯಮಬಾಹಿರವಾಗಿ ಮಾಡಿದ್ದ ಕೋಟ್ಯಂತರ ರುಪಾಯಿ ಖರ್ಚಿನ ವಿವರಗಳನ್ನು ಪ್ರಧಾನ ಮಹಾಲೇಖಪಾಲರು ಮತ್ತು ಲೆಕ್ಕ ಪರಿಶೋಧಕರು ಹೊರಗೆಡವಿದ್ದರು.

 

ಇದರ ಬೆನ್ನಲ್ಲೇ ಇದೇ ಅಂಜನಾದ್ರಿ ಬೆಟ್ಟದ ಪಾರಂಪರಿಕ ತಾಣಗಳು ಪ್ರಭಾವ ಬೀರಿರುವ ಮೌಲ್ಯಮಾಪನ ನಡೆಸದೇ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಮತ್ತು ಇದಕ್ಕಾಗಿ 21.54 ಕೋಟಿ ರು ವೆಚ್ಚದ ಮಾಹಿತಿಯೂ ಮುನ್ನೆಲೆಗೆ ಬಂದಿವೆ.

 

ಈ ಕುರಿತು ಇಂಡಿಯನ್‌ ಆಡಿಟ್‌ ಅಂಡ್‌ ಅಕೌಂಟ್ಸ್‌ ಜನರಲ್‌ ಅವರು 2025ರ ಆಗಸ್ಟ್‌ 20ರಂದೇ ಪ್ರವಾಸೋದ್ಯಮ ಇಲಾಖೆಯ ಕೊಪ್ಪಳ ಜಿಲ್ಲೆಯ ಸಹಾಯಕ ನಿರ್ದೇಶಕರಿಗೆ ಆಕ್ಷೇಪಣೆ ಪತ್ರ ಬರೆದಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಅಂದರೇ 2023ರ ಫೆ.10ರಂದು ಪ್ರವಾಸೋದ್ಯಮ ಇಲಾಖೆಯು 21.54 ಕೋಟಿ ರು ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು

 

ಅಂಜನಾದ್ರಿ ಬೆಟ್ಟದಲ್ಲಿ ವಸತಿ ನಿಲಯಗಳಿಗೆ 9.98 ಕೋಟಿ ರು., ಸಾರ್ವಜನಿಕ ಶೌಚಾಲಯ, ಶಾಪಿಂಗ್‌ ಕಾಂಪ್ಲೆಕ್ಸ್‌ ಗಳ ನಿರ್ಮಾಣಕ್ಕೆ 7.24 ಕೋಟಿ ರು., ಬೆಟ್ಟಕ್ಕೆ ಪ್ರದಕ್ಷಿಣೆ ಪಥ ನಿರ್ಮಾಣಕ್ಕೆ 4.32 ಕೋಟಿ ರು ಮೊತ್ತಕ್ಕೆ ಹಿಂದಿನ ಬಿಜೆಪಿ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಆದರೆ ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ನಿಗಮವು ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳುವ ಮೊದಲೇ 2022ರಲ್ಲೇ ಈ ಕಾಮಗಾರಿಗಳನ್ನು ನಡೆಸಲು ಗುತ್ತಿಗೆ ವಹಿಸಿತ್ತು.

 

ಬೆಂಗಳೂರಿನ ಗುತ್ತಿಗೆದಾರ ವಿ ಬಿ ಪ್ರಸಾದ್‌ ರೆಡ್ಡಿ ಅವರಿಗೆ 17.22 ಕೋಟಿ ರು ಮತ್ತು ಕೆ ವಿ ಪ್ರಸಾದ್‌ ರೆಡ್ಡಿ ಎಂಬುವರಿಗೆ 4.32 ಕೋಟಿ ರು ಮೊತ್ತದ ಗುತ್ತಿಗೆ ನೀಡಿತ್ತು. 12 ತಿಂಗಳು ಒಳಗೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಾಲಮಿತಿಯ ಷರತ್ತನ್ನೂ ವಿಧಿಸಿತ್ತು. ಆದರೆ ಗುತ್ತಿಗೆದಾರರು 2023ರ ಮಾರ್ಚ್‌ 27ರಂದು ಕಾಮಗಾರಿ ಆರಂಭಿಸಿದ್ದರು ಎಂದು ಎ ಜಿ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಯುನೆಸ್ಕೋ ಸೂಚನೆ ಉಲ್ಲಂಘನೆ

 

ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಕಾಮಾರಿಗಳನ್ನು ನಡೆಸುವ ಮೊದಲು ಪಾರಂಪರಿಕ ಪ್ರಭಾವದ ಮೌಲ್ಯಮಾಪನಗಳನ್ನು ನಡೆಸಬೇಕು ಎಂದು 2023ರ ನವೆಂಬರ್‍‌ 8ರಮದು ನಡೆದಿದ್ದ ವಿಶ್ವಪರಂಪರೆ ಸಮಿತಿಯ 45ನೇ ಅಧಿವೇಶನದಲ್ಲಿ ಸೂಚಿಸಿತ್ತು. ಎಚ್‌ಐಎ ವರದಿಗಳನ್ನು ವಿಶ್ವ ಪರಂಪರೆ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಮತ್ತು ಸಲಹಾ ಮಂಡಳಿಯಿಂದಲೂ ಆ ವರದಿಗಳನ್ನು ಪರಿಶೀಲಿಸಲಾಗಿತ್ತು.

 

 

ಆದಾಗ್ಯೂ, ಪ್ರವಾಸೋದ್ಯಮ ಇಲಾಖೆಯು ಇಲ್ಲಿಯವರೆಗೆ ಎಚ್‌ಐಎ ವರದಿಯನ್ನು ಪಡೆಯಲಿಲ್ಲ. ಮತ್ತು ಅದರಂತೆ ಕೆಲಸವನ್ನು ತಡೆಹಿಡಿಯಲಿಲ್ಲ. ಅಂಜನಾದ್ರಿ ಬೆಟ್ಟದಲ್ಲಿ ಕೈಗೆತ್ತಿಕೊಂಡಿದ್ದ ವಸತಿ ನಿಲಯಗಳು ಮತ್ತು ಶಾಪಿಂಗ್ ಸಂಕೀರ್ಣದಲ್ಲಿ ಕೆಲಸಗಳು ಪ್ರಗತಿಯಲ್ಲಿವೆ. ಆದ್ದರಿಂದ, ಇಲಾಖೆಯು ಯುನೆಸ್ಕೋ/ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರವು ನೀಡಿದ ಸೂಚನೆಯನ್ನು ಉಲ್ಲಂಘಿಸಿದಂತಾಗಿದೆ ಎಂದು ಎ ಜಿ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಭೂ ದಾಖಲೆಗಳ ಮೌಲ್ಯಮಾಪನ ಮಾಡಲಿಲ್ಲ

 

ಅಂಜನಾದ್ರಿ ಬೆಟ್ಟಕ್ಕೆ ಪ್ರದಕ್ಷಿಣೆ ಪಥ ನಿರ್ಮಾಣಕ್ಕೆ 4.32 ಕೋಟಿ ರು ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿತ್ತು. ಆದರೆ ಈ ನಿರ್ಮಾಣ ಕಾಮಗಾರಿಯು 2024ರ ಅಕ್ಟೋಬರ್‍‌ನಿಂದಲೇ ಸ್ಥಗಿತಗೊಂಡಿತ್ತು. ಪ್ರದಕ್ಷಿಣೆ ಪಥ ನಿರ್ಮಾಣ ಮಾಡಲು ಬಳಕೆ ಮಾಡಿಕೊಂಡಿದ್ದ ಜಾಗವು ಅರಣ್ಯ ಇಲಾಖೆಗೆ ಸೇರಿತ್ತು. ಈ ಕಾಮಗಾರಿಗೆ ಅರಣ್ಯ ಇಲಾಖೆಯು ತಕರಾರು ಎತ್ತಿದ್ದರಿಂದಾಗಿ ಈ ಕಾಮಗಾರಿಯು 2024ರ ಅಕ್ಟೋಬರ್‍‌ನಿಂದಲೇ ಸ್ಥಗಿತಗೊಂಡಿತ್ತು.

 

ಕಾಮಗಾರಿ ನಡೆಸುವ ಮುನ್ನ ಭೂ ದಾಖಲೆಗಳನ್ನು ಪರಿಶೀಲಿಸಿ ಮೌಲ್ಯಮಾಪನ ಮಾಡಬೇಕಿದ್ದ ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮವು ಕರ್ತವ್ಯಲೋಪ ಎಸಗಿತ್ತು. ಭೂ ದಾಖಲೆಗಳ ಇ ಸಿ ಗಳನ್ನು ಪರಿಶೀಲಿಸಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಕೆಲಸದ ಕಾರ್ಯಸಾಧ್ಯತೆ ಕುರಿತು ಸ್ಪಷ್ಟಪಡಿಸಲಿಲ್ಲ ಎಂದು ಎ ಜಿ ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಕಾಮಗಾರಿ ಪೂರ್ಣಗೊಳ್ಳುವಲ್ಲಿ ವಿಳಂಬ

 

ವಸತಿ ನಿಲಯ ಮತ್ತು ಶಾಪಿಂಗ್ ಸಂಕೀರ್ಣದ ನಿರ್ಮಾಣ ಕಾಮಗಾರಿಯು 2023ರ ಮಾರ್ಚ್‌ 27ರಿಂದಲೇ ಆರಂಭವಾಗಿತ್ತು. ಈ ಕಾಮಗಾರಿಯನ್ನು 12 ತಿಂಗಳ ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕಿತ್ತು. ಆದರೆ ಈ ಕಾಮಗಾರಿಗಳು ಈಗಲೂ ಪ್ರಗತಿಯಲ್ಲಿವೆ. ಅಲ್ಲದೇ ಶೇ. 50ರಷ್ಟು ಕಾಮಗಾರಿಗಳಷ್ಟೇ ಪೂರ್ಣಗೊಂಡಿವೆ.

 

 

ನೆಲಹಾಸು, 1 ನೇ ಮಹಡಿಯಲ್ಲಿ ಪ್ಲಾಸ್ಟರಿಂಗ್‌ ಕೆಲಸ, ಬಾಗಿಲು, ಕಿಟಕಿ, ಮೆಟ್ಟಿಲುಗಳನ್ನು ಸರಿಪಡಿಸುವುದು, ಪ್ಲಂಬಿಂಗ್, ವಿದ್ಯುತ್‌ ಕೆಲಸ ಸೇರಿದಂತೆ ಇನ್ನಿತರೆ ಕಾಮಗಾರಿಗಳು ಇನ್ನು ಆರಂಭವಾಗಿಲ್ಲ. ಈ ಕಾಮಗಾರಿಗಳು ಪೂರ್ಣಗೊಳ್ಳಲು ಇನ್ನೂ 15 ತಿಂಗಳು ವಿಳಂಬವಾಗಲಿದೆ ಎಂದು ಎ ಜಿ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಅಂಜನಾದ್ರಿ ಬೆಟ್ಟ ಮೂಲಸೌಕರ್ಯ; ಪುನರಾವರ್ತಿತ ಕಾಮಗಾರಿ, ಸುತ್ತೋಲೆ ಉಲ್ಲಂಘನೆ, ಕೋಟಿ ಲೂಟಿ?

 

ಅಂಜನಾದ್ರಿ ಬೆಟ್ಟದ ಸುತ್ತಲೂ ಮೂಲಸೌಕರ್ಯ ಕಾಮಗಾರಿಗಳ ಪೈಕಿ ಬಹುತೇಕ ಕಾಮಗಾರಿಗಳು ಪುನರಾವರ್ತಿತವಾಗಿದ್ದವು ಎಂದು ಪ್ರಧಾನ ಮಹಾಲೇಖಪಾಲರು ಬಯಲು ಮಾಡಿದ್ದರು. ಈ ಕುರಿತು ದಿ ಫೈಲ್‌ ವರದಿ ಮಾಡಿತ್ತು.

 

ಅಂಜನಾದ್ರಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ  ಸಿದ್ದರಾಮಯ್ಯ ನೇತೃತ್ವದಲ್ಲಿ ಈಚೆಗಷ್ಟೇ  ಉನ್ನತ ಮಟ್ಟದ ಸಭೆ ನಡೆದಿತ್ತು.  ಹನುಮಂತನ ಜನ್ಮಸ್ಥಳವೆಂದು ನಂಬಲಾಗಿರುವ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟವನ್ನು ವಿಶ್ವಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗಷ್ಟೇ  ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

 

ಅಂಜನಾದ್ರಿ ಬೆಟ್ಟದಲ್ಲಿ ಮೂಲಸೌಕರ್ಯಗಳ ಕುರಿತು ಸಿಎಂ ನಡೆಸಿದ್ದ ಅಧಿಕೃತ ಸಭೆಯ ಚಿತ್ರ

 

ಪ್ರವಾಸೋದ್ಯಮದ ಜೊತೆಗೆ ಈ ಸ್ಥಳದ ಪೌರಾಣಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಎತ್ತಿಹಿಡಿಯುವಂತೆ ಅಭಿವೃದ್ಧಿಪಡಿಸಲು ನಿರ್ದೇಶನ ನೀಡಿದ್ದರು.  ಹಿರಿಯ ನಾಗರಿಕರು ಸಹ ಅಂಜನಾದ್ರಿ ಬೆಟ್ಟದ ಮೇಲೆ ಹೋಗಿ ಆಂಜನೇಯನ ದರ್ಶನ ಪಡೆಯಲು ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಪ್ರದಕ್ಷಿಣೆ ಮಾರ್ಗದ ನಿರ್ಮಾಣದ ಬಗ್ಗೆ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಿಎಂ ಚರ್ಚಿಸಿದ್ದರು.

 

ಅಂಜನಾದ್ರಿ ಬೆಟ್ಟದ ಚಿತ್ರ

 

ಹನುಮ ಜಯಂತಿಯ ಸಮಯದಲ್ಲಿ ಲಕ್ಷಗಟ್ಟಲೆ ಜನರು ಈ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಉತ್ತರ ಭಾರತದ ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಆದ್ದರಿಂದ, ಇಲ್ಲಿ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಅತ್ಯಗತ್ಯ. ಈ ಬಗ್ಗೆ ಎಲ್ಲಾ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನವನ್ನೂ ನೀಡಿದ್ದರು.

 

ಯಾತ್ರಿಕರಿಗೆ ತಂಗಲು ವಸತಿ ಸೌಲಭ್ಯ, ಹಿರಿಯ ಭಕ್ತರು ಬೆಟ್ಟವನ್ನು ಹತ್ತಲು ಮೆಟ್ಟಿಲುಗಳು, ಸಮುದಾಯ ಭವನ ನಿರ್ಮಾಣ ಮತ್ತು ಇತರ ಪ್ರವಾಸಿ ಸೌಲಭ್ಯಗಳನ್ನು ಈ ಪ್ರದೇಶದಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಸಿದ್ದರಾಮಯ್ಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದರು.

 

ಹಂತ-1 ಮತ್ತು ಹಂತ-2 ರ ಅಡಿಯಲ್ಲಿ 200 ಕೋಟಿ ರೂ. ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು, ಇಲ್ಲಿಯವರೆಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.  ಉಳಿದ ಹಣವನ್ನು ಬಿಡುಗಡೆ ಮಾಡಲು ಹಣಕಾಸು ಇಲಾಖೆಯಿಂದ ಹೆಚ್ಚುವರಿ ಅನುದಾನ ನೀಡಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿತ್ತು.

 

ಅಂಜನಾದ್ರಿ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕಾಮಗಾರಿ ಮಾಡಿರುವುದು

 

ಮಂಜೂರಾಗಿರುವ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರಿ ಜಮೀನಿನ ಕೊರತೆ ಇದೆ. ಹೀಗಾಗಿ  ಪ್ರಸ್ತಾಪಿಸಿರುವ 77.28 ಖಾಸಗಿ ಜಮೀನನ್ನು ಅನುದಾನದ ಕೊರತೆಯಿರುವುದರಿಂದ ಈವರೆಗೂ ಭೂ-ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ.  ಆದ್ದರಿಂದ, ಹೆಚ್ಚುವರಿ ಜಮೀನು ಒಳಗೊಂಡಂತೆ ಒಟ್ಟು 101 ಎಕರೆ 30 ಗುಂಟೆ ಖಾಸಗಿ ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಅಗತ್ಯವಾಗಿರುವ ಅನುದಾನವನ್ನು ಆರ್ಥಿಕ ಇಲಾಖೆಯಿಂದ ಒದಗಿಸಲಾಗುವುದು ಎಂದು ಹೇಳಿದ್ದರು.

 

ಮಂಜೂರಾಗಿರುವ ಬಹುತೇಕ ಕಾಮಗಾರಿಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಜಮೀನುಗಳಲ್ಲಿ ಕೈಗೊಳ್ಳಬೇಕಿರುವುದರಿಂದ, ಈ ಎಲ್ಲಾ ಕಾಮಗಾರಿಗಳನ್ನು ಕೈಗೊಳ್ಳಲು ಅರಣ್ಯ ಇಲಾಖೆಯ ಎನ್‌ಒಸಿ  ನೀಡಬೇಕಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts