ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 11 ನಿಗಮಗಳ ಪೈಕಿ 8 ನಿಗಮಗಳಿಗೆ 2 ವರ್ಷವಾದರೂ ಅಧ್ಯಕ್ಷರೇ ನೇಮಕಗೊಂಡಿಲ್ಲ. ಆದರೂ ಕಳೆದ ಆರ್ಥಿಕ ಸಾಲಿನಲ್ಲಿ ಅಧ್ಯಕ್ಷರ ಸಿಬ್ಬಂದಿ ವೇತನವೆಂದು 40.74 ಲಕ್ಷ ರು. ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.
ಇದಲ್ಲದೆ, ಇತರೆ ಖರ್ಚು ಎಂದು 5.25 ಲಕ್ಷ ರು. ಹಾಗೂ ವಾಹನ ಭತ್ಯೆ ಎಂದು 7.37 ಲಕ್ಷ ರು. ಖರ್ಚು ಮಾಡಲಾಗಿದೆ. ವಾಹನ ನಿರ್ವಹಣೆಗೆಂದು 5.10 ಲಕ್ಷ ರು. ಬಳಸಲಾಗಿದೆ.
ಕಳೆದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಡಿ.ಟಿ. ಶ್ರೀನಿವಾಸ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್ ತಂಗಡಗಿ ನೀಡಿರುವ ಲಿಖಿತ ಉತ್ತರದಲ್ಲಿ ಈ ಬಗ್ಗೆ ಮಾಹಿತಿ ಇದೆ.
ಇಲಾಖೆಯಡಿ ಬರುವ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ನಿಜ ಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಮಾತ್ರ ಅಧ್ಯಕ್ಷರು ನೇಮಕಗೊಂಡಿದ್ದಾರೆ. ಉಳಿದ ನಿಗಮಗಳ ಅಧ್ಯಕ್ಷರು ನೇಮಕಗೊಳ್ಳದೇ ಇರುವುದರಿಂದ ಇಲಾಖಾ ಸಚಿವರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಈ ನಿಗಮಗಳಿಗೆ ಅಧ್ಯಕ್ಷರನ್ನು ನೇಮಿಸಲಾಗಿಲ್ಲ.
ಈ ಅಭಿವೃದ್ಧಿ ನಿಗಮಗಳಿಗೆ ಮೂರು ವರ್ಷಗಳಿಂದ ನೀಡಿರುವ ಅನುದಾನದಲ್ಲಿ ಅಧ್ಯಕ್ಷರ ಭತ್ಯೆ, ವಾಹನ ಭತ್ಯೆ, ಬಾಡಿಗೆ ಹಾಗೂ ಇತರೆ ಖರ್ಚುಗಳೆಷ್ಟು ಎಂದು ಡಿ.ಟಿ. ಶ್ರೀನಿವಾಸ್ ಕೇಳಿದ ಪ್ರಶ್ನೆಗೆ ವಿವರವಾಗಿ ಸಚಿವರು ಲಿಖಿತ ಉತ್ತರ ನೀಡಿದ್ದು, ಅಧ್ಯಕ್ಷರೇ ಇಲ್ಲದ ನಿಗಮಗಳ ಕಚೇರಿಗಳ ನಿರ್ವಹಣೆಗೆ ಲಕ್ಷಾಂತರ ರು. ಖರ್ಚು ಮಾಡುತ್ತಿರುವುದು ಬಹಿರಂಗಗೊಂಡಿದೆ.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷರ ಸಿಬ್ಬಂದಿ ವೇತನಕ್ಕೆಂದು 3.8 ಲಕ್ಷ ರು. ಖರ್ಚು ಮಾಡಿದೆ. ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಅಧ್ಯಕ್ಷರೇ ಇಲ್ಲದಿದ್ದರೂ ಅವರ ವಾಹನ ಭತ್ಯೆಯೆಂದು 7.37 ಲಕ್ಷ ರು. ಖರ್ಚು ಮಾಡಿದೆ. ಮಾತ್ರವಲ್ಲದೆ, ಸಿಬ್ಬಂದಿ ವೇತನವೆಂದು 9.60 ಲಕ್ಷ ರು. ಖರ್ಚು ಮಾಡಲಾಗಿದೆ.
ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ವರ್ಗಗಳ ಅಭಿವೃದ್ಧಿ ನಿಗಮ ವೇತನಕ್ಕೆಂದು 3.31 ಲಕ್ಷ ರು. ಖರ್ಚು ಮಾಡಿದೆ. ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮದಲ್ಲಿ ಸಿಬ್ಬಂದಿ ವೇತನವೆಂದು 3,96 ಲಕ್ಷ ರು. ಖರ್ಚು ಮಾಡಲಾಗಿದೆ ಎಂದು ಸಚಿವರು ನೀಡಿದ ಉತ್ತರದಲ್ಲಿ ವಿವರಿಸಲಾಗಿದೆ.
ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದಲ್ಲಿ ಅಧ್ಯಕ್ಷರ ಸಿಬ್ಬಂದಿ ವೇತನವೆಂದು 3.80 ಲಕ್ಷ ರು. ಖರ್ಚು ಮಾಡಲಾಗಿದ್ದರೆ, ಕರ್ನಾಟಕ ಒಕ್ಕಲಿಗರ ಅಭಿವೃದ್ಧಿ ನಿಗಮದಲ್ಲಿ ನೇಮಕಗೊಳ್ಳದೇ ಇರುವ ಅಧ್ಯಕ್ಷರ ಸಿಬ್ಬಂದಿ ವೇತನವೆಂದು 8.78 ಲಕ್ಷ ರು. ವಾಹನ ನಿರ್ವಹಣೆಗೆಂದು 36,324 ರು. ಹಾಗೂ ಇತರೆ ಖರ್ಚೆಂದು 4.95 ಲಕ್ಷ ರು. ಖರ್ಚು ಮಾಡಿರುವುದು ಸಚಿವರ ಈ ಉತ್ತರದಿಂದ ಗೊತ್ತಾಗಿದೆ.
ಸಚಿವರಿಗೇ ಅಧ್ಯಕ್ಷರ ಭತ್ಯೆ !
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಇನ್ನೂ ಅಧ್ಯಕ್ಷರು ನೇಮಕವಾಗಿಲ್ಲ. ಇಲಾಖೆಯ ಸಚಿವರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಚಿವ ಹುದ್ದೆಗಾಗಿ ವೇತನ ಪಡೆಯುತ್ತಿರುವ ಶಿವರಾಜ ಎಸ್. ತಂಗಡಗಿ ಅವರಿಗೇ ಅಧ್ಯಕ್ಷರ ಭತ್ಯೆ ಎಂದು ಕಳೆದ ಸಾಲಿನಲ್ಲಿ 17, 500 ರು. ನೀಡಿರುವುದು ಸಚಿವರು ನೀಡಿದ ಉತ್ತದಲ್ಲಿಯೇ ದಾಖಲಾಗಿದೆ.
ಈ ನಿಗಮವು ಅಧ್ಯಕ್ಷರ ಸಿಬ್ಬಂದಿ ವೇತನವೆಂದು 7.46 ಲಕ್ಷ ರು. ಖರ್ಚು ಮಾಡಿದ್ದರೆ, ವಾಹನ ನಿರ್ವಹಣೆಗೆಂದು 4.74 ಲಕ್ಷ ರು. ಹಾಗೂ ಇತ್ಯಾದಿ ಖರ್ಚುಗಳೆಂದು 29,567 ರು. ಖರ್ಚು ಮಾಡಿರುವುದು ಸಚಿವರ ಉತ್ತರದಿಂದ ಬಹಿರಂಗಗೊಂಡಿದೆ.
ಕೊಟ್ಟ ಅನುದಾನವೂ ಕಡಿಮೆ
ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಸಚಿವರು ಕಳೆದ ಮೂರು ವರ್ಷಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 11 ನಿಗಮಗಳಿಗೆ ನೀಡಲಾಗಿರುವ ಅನುದಾನದ ಮಾಹಿತಿಯನ್ನೂ ನೀಡಿದ್ದಾರೆ.
2024-25ನೇ ಸಾಲಿನಲ್ಲಿ ಈ ನಿಗಮಗಳಿಗೆ ಕೊಟ್ಟ ಅನುದಾನವೂ ಕಡಿಮೆಯಾಗಿತ್ತು. ಒಟ್ಟು 337 ಕೋಟಿ ರು. ನೀಡಲಾಗಿತ್ತು. ಇದರಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅನುದಾನದ ಹೆಚ್ಚಿನ ಪಾಲು ಸಂದಾಯವಾಗಿದೆ. ಒಟ್ಟು ನೂರು ಕೋಟಿ ರು. ಒದಗಿಸಲಾಗಿತ್ತು.ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ತಲಾ 60 ಕೋಟಿ, ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 50 ಕೋಟಿ ನೀಡಲಾಗಿತ್ತು ಎಂದು ಸಚಿವರ ಉತ್ತರದಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ 15 ಕೋಟಿ, ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮಕ್ಕೆ 5 ಕೋಟಿ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮಕ್ಕೆ 9 ಕೋಟಿ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ 12 ಕೋಟಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ 5 ಕೋಟಿ, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮಕ್ಕೆ 8 ಕೋಟಿ ಹಾಗೂ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 13 ಕೋಟಿ ರು. ಅನುದಾನವನ್ನು ಸರ್ಕಾರ ನೀಡಿತ್ತು ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ, 2023-24ನೇ ಸಾಲಿನಲ್ಲಿ ಈ ಎಲ್ಲ ನಿಗಮಗಳಿಗೆ ಒಟ್ಟು 345 ಕೋಟಿ ನೀಡಿತ್ತು.
ಅದಕ್ಕೂ ಮೊದಲು ಬಿಜೆಪಿ ಅಧಿಕಾರಾವಧಿಯಲ್ಲಿ ಅಂದರೆ 2022-23ನೇ ಸಾಲಿನಲ್ಲಿ ಒಟ್ಟು 546 ಕೋಟಿ ಅನುದಾನ ಒದಗಿಸಲಾಗಿತ್ತು. ಬಹಳ ಮುಖ್ಯವಾಗಿ ಬಿಜೆಪಿ ಸರ್ಕಾರವು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 100.01 ಕೋಟಿ ಅನುದಾನ ಘೋಷಿಸಿತ್ತು.
ಅಲ್ಲದೆ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 70 ಕೋಟಿ ಹಾಗೂ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ 60 ಕೋಟಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಮತ್ತು ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ತಲಾ 25 ಕೋಟಿ ರು. ಅನುದಾನ ನೀಡಿತ್ತು ಎಂದು ಉತ್ತರದಲ್ಲಿ ತಿಳಿಸಲಾಗಿದೆ.
2025-26 ಸಾಲಿನ ಬಜೆಟ್‌ನಲ್ಲಿ, ʻಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಗೆ 422 ಕೋಟಿ ರು. ಒಗದಿಸಲಾಗುವುದುʼ ಎಂದು ವಿತ್ತ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ನಿಗಮಗಳಿಂದ ಸರ್ಕಾರಕ್ಕೆ ಜಮೆಯಾಗದ 14,549.91 ಕೋಟಿ ರುಪಾಯಿ; ಬಡ್ಡಿ ಹಣವೆಲ್ಲಿ ಹೋಗಿದೆ?
ವಿವಿಧ ನಿಗಮಗಳು ಗಳಿಸಿದ್ದ ಬಡ್ಡಿಯ ಮೊತ್ತವಾದ 14,549.91 ಕೋಟಿ ರು.ಗಳನ್ನು ಸರ್ಕಾರಕ್ಕೆ ಜಮೆ ಮಾಡಲಾಗಿರಲಿಲ್ಲ. ಈ ಕುರಿತು ಸಿಎಜಿ ಗಮನ ಸೆಳೆದಿತ್ತು. ಈ ಬಗ್ಗೆ ʻದಿ ಫೈಲ್ʼ ಇತ್ತೀಚೆಗೆ ವಿವರವಾದ ವರದಿ ಪ್ರಕಟಿಸಿತ್ತು.