ನಿಷ್ಕ್ರೀಯ ವೈಯಕ್ತಿಕ ಠೇವಣಿ ಖಾತೆಗಳಲ್ಲಿದೆ 338 ಕೋಟಿ; 8,663.87 ಕೋಟಿ ವಿವೇಚನಾರಹಿತ ಬಳಕೆ?

ಬೆಂಗಳೂರು;  ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರ ಹೆಸರಿನಲ್ಲಿರುವ ವೈಯಕ್ತಿಕ ಠೇವಣಿ ಖಾತೆಗಳ ಪೈಕಿ  ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮವೊಂದರಲ್ಲೇ ಅತೀ ಹೆಚ್ಚು ಎಂದರೇ 26,192.09 ಕೋಟಿ ರು.ಗಳಷ್ಟಿತ್ತು. ಅಲ್ಲದೇ ವಿವಿಧ ಲೆಕ್ಕಶೀರ್ಷಿಕೆ ಮತ್ತು ವಿವಿಧ ಮುಖ್ಯಸ್ಥರ ಹೆಸರಿನಲ್ಲಿರುವ ವೈಯಕ್ತಿಕ ಠೇವಣಿ ಖಾತೆಗಳನ್ನು ಆಯಾ ಆರ್ಥಿಕ ವರ್ಷದ ಕೊನೆಯಲ್ಲಿ ಮುಕ್ತಾಯಗೊಳಿಸಿಲ್ಲ.

 

ಅಲ್ಲದೇ ನಿಷ್ಕ್ರೀಯ ವೈಯಕ್ತಿಕ ಠೇವಣಿ ಖಾತೆಗಳಲ್ಲಿ   338 ಕೋಟಿಯನ್ನು ಇರಿಸಲಾಗಿದೆ. ಮತ್ತೊಂದು ವಿಶೇಷವೆಂದರೇ 12,833 ಕೋಟಿ ರು ಒಟ್ಟು ಖರ್ಚಿನ ಪೈಕಿ 8,663.87 ಕೋಟಿ ರು.ಗಳನ್ನು ಕಿರು ಶೀರ್ಷಿಕೆ 800 ರ ಅಡಿಯಲ್ಲಿ ವಿವೇಚನಾ ರಹಿತವಾಗಿ ಬಳಕೆ ಆಗಿದೆ.

 

ಆರ್ಥಿಕ ವರ್ಷ ಪೂರ್ಣಗೊಂಡ ನಂತರವೂ ವೈಯಕ್ತಿಕ ಠೇವಣಿ ಖಾತೆಗಳಲ್ಲಿರುವ ಹಣವನ್ನು ಮುಂದುವರೆಸುವ ಮೂಲಕ ಕರ್ನಾಟಕ ಆರ್ಥಿಕ ಸಂಹಿತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿಲ್ಲ ಎಂದು ಸಿಎಜಿ ಲೆಕ್ಕ ಪರಿಶೋಧನೆ ವೇಳೆ ಬಯಲಾಗಿದೆ.

 

2025ರ ಆಗಸ್ಟ್‌ ನಲ್ಲಿ ನಡೆದ ಕರ್ನಾಟಕ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿರುವ ಕರ್ನಾಟಕ ಹಣಕಾಸಿನ ವ್ಯವಹಾರಗಳ ಕುರಿತಾದ  ಸಿಎಜಿ ವರದಿಯು ವೈಯಕ್ತಿಕ ಠೇವಣಿ ಖಾತೆಗಳ ಸ್ಥಿತಿಗತಿಯನ್ನು ವಿವರಿಸಿದೆ. ಈ ವೈಯಕ್ತಿಕ ಠೇವಣಿಗಳ ಮಾಹಿತಿಯು ಸಿದ್ದರಾಮಯ್ಯ ಅವರ ಮೊದಲ ಮತ್ತು ಎರಡನೇ  ಅವಧಿಯನ್ನೂ ಒಳಗೊಂಡಿದೆ.

 

ಸರ್ಕಾರದ ಅನುಮತಿಯೊಂದಿಗೆ ವೈಯಕ್ತಿಕ ಠೇವಣಿ ಖಾತೆಗಳನ್ನು ತೆರೆಯಲು ಅವಕಾಶವಿದೆ. ಇದನ್ನು ರಾಜ್ಯದ ಸಂಚಿತ ನಿಧಿಗೆ ಖರ್ಚು ಹಾಕುವ ಮೂಲಕ ವೈಯಕ್ತಿಕ ಠೇವಣಿ ಖಾತೆಗಳನನ್ನು ಆರ್ಥಿಕ ವರ್ಷದ ಕೊನೆಯಲ್ಲಿ ಮುಕ್ತಾಯಗೊಳಿಸಬೇಕು. ಆಧರೂ ಇದನ್ನು ಮುಂದುವರೆಸಲಾಗಿದೆ. ಹೀಗಾಗಿ ಕರ್ನಾಟಕ ಆರ್ಥಿಕ ಸಂಹಿತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಅಭಿಪ್ರಾಯಿಸಿದೆ.

 

ವೈಯಕ್ತಿಕ ಠೇವಣಿ ಖಾತೆಗಳ ಆಡಳಿತಾಧಿಕಾರಿಗಳು ಸಂಚಿತ ನಿಧಿಗೆ ವರ್ಗಾಯಿಸಬೇಕಾದ ಮೊತ್ತದ ಬಗ್ಗೆ ಖಜಾನೆ ಅಧಿಕಾರಿಗೆ ತಿಳಿಸಬೇಕು. ತಮ್ಮ ವೈಯಕ್ತಿಕ ಠೇವಣಿ ಖಾತೆಗಳನ್ನು ನಿಗದಿತ ಅವಧಿಯನ್ನು ಮೀರಿ ಮುಂದುವರೆಸಲು ಆಡಳಿತಾಧಿಕಾರಿಗಳು ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕು. ಆದರೆ ಈ ಯಾವ ಪ್ರಕ್ರಿಯೆಗಳು ಕಟ್ಟುನಿಟ್ಟಾಗಿ ನಡೆದಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಮಹಾಲೇಖಪಾಲರ ದಾಖಲೆಗಳ ಪ್ರಕಾರ ಪ್ರಾರಂಭಿಕ ಶಿಲ್ಕಿನ ಮೊತ್ತವೇ  29,509.54 ಕೋಟಿ ರುನಷ್ಟಿತ್ತು.   2023-24ರ ಅವಧಿಯಲ್ಲಿ ಒಟ್ಟು 6 ವೈಯಕ್ತಿಕ ಠೇವಣಿ ಖಾತೆಗಳನ್ನು ನಿರ್ವಹಿಸಲಾಗಿತ್ತು. ಈ ವೈಯಕ್ತಿಕ ಠೇವಣಿ ಖಾತೆಗಳಲ್ಲಿ 11,055.28 ಕೋಟಿ ರುಪಾಯಿಗಳನ್ನು ವರ್ಗಾಯಿಸಲಾಗಿತ್ತು. ನಂತರ ಈ ಠೇವಣಿ ಖಾತೆಗಳಿಂದ 7,730.13 ಕೋಟಿ ರು.ಗಳನ್ನು ಹಿಂಪಡೆದಿತ್ತು.

 

2019-20ರಿಂದ 2023-24ವರೆಗೆ ವೈಯಕ್ತಿಕ ಠೇವಣಿ ಖಾತೆಗಳಲ್ಲಿ ಪ್ರಾರಂಭಿಕ ಶಿಲ್ಕಿನ ಮೊತ್ತವೇ 29,509.54 ಕೋಟಿಯಷ್ಟಿತ್ತು. 2019-20ರಲ್ಲಿ 4,085.14 ಕೋಟಿ, 2020-21ರಲ್ಲಿ 4,421.56 ಕೋಟಿ, 2021-22ರಲ್ಲಿ 3,989.23 ಕೋಟಿ, 2022-23ರಲ್ಲಿ 4,105.61 ಕೋಟಿ, 2023-24ರಲ್ಲಿ 29,509.54 ಕೋಟಿ ಸೇರಿ ಒಟ್ಟಾರೆ 46,111.08 ಕೋಟಿ ರು ಪ್ರಾರಂಭಿಕ ಶಿಲ್ಕಿನ ರೂಪದಲ್ಲಿತ್ತು. ಇದರಲ್ಲಿ ಒಟ್ಟಾರೆ  59,31268 ಕೋಟಿ ರು.ಗಳು ಸ್ವೀಕೃತಿ ಅಥವಾ ಠೇವಣಿ ಹೊಂದಿತ್ತು. ಇದೇ ಅವಧಿಯಲ್ಲಿ 30,563.13 ಕೋಟಿ ಗಳನ್ನು ಹಿಂಪಡೆದಿತ್ತು.

 

2022-23ಕ್ಕಿಂತ 2023-24ರ ಅವಧಿಯಲ್ಲಿ 3,325.15 ಕೋಟಿಗಳಷ್ಟು ಏರಿಕೆಯಾಗಿತ್ತು ಎಂದು ಸಿಎಜಿ ವರದಿಯು ವಿವರಿಸಿದೆ. ಹಾಗೆಯೆ 2023-24ರ ಅವಧಿಯಲ್ಲಿ ವೈಯಕ್ತಿಕ ಠೇವಣಿ ಖಾತೆಗಳ ಅಂತಿಮ ಶಿಲ್ಕಿನಲ್ಲಿನ ಬಾಕಿ ಹೆಚ್ಚಳವು ಮುಖ್ಯವಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಲ್ಲಿತ್ತು.

 

 

ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಆಡಳಿತಾಧಿಕಾರಿಗಳ ಹೆಸರಿನಲ್ಲಿದ್ದ ವೈಯಕ್ತಿಕ ಠೇವಣಿ ಖಾತೆಗಳ ಪೈಕಿ 2023-24ರ ಅವಧಿಯಲ್ಲಿ 91 ವೈಯಕ್ತಿಕ ಠೇವಣಿ ಖಾತೆಗಳಲ್ಲಿ 28 ವೈಯಕ್ತಿಕ ಠೇವಣಿ ಖಾತೆಗಳು ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ನಿಷ್ಕ್ರೀಯವಾಗಿದ್ದವು. ಇದರಲ್ಲಿ ನಾಲ್ಕು ವೈಯಕ್ತಿಕ ಠೇವಣಿ ಖಾತೆಗಳು ಶೂನ್ಯ ಮೊತ್ತವನ್ನು ಹೊಂದಿತ್ತು.

 

ನಿಷ್ಕ್ರೀಯ ವೈಯಕ್ತಿಕ ಠೇವಣಿ ಖಾತೆಗಳಲ್ಲಿತ್ತು 338 ಕೋಟಿ

 

ತಹಶೀಲ್ದಾರ್‍‌ಗಳ ವೈಯಕ್ತಿಕ ಠೇವಣಿ ಖಾತೆಗಳಲ್ಲಿ 31.55 ಕೋಟಿ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ವಿದ್ಯಾರ್ಥಿ ವೇತನ ಖಾತೆಯಲ್ಲಿ 22.99 ಲಕ್ಷ, ವಿಶೇಷ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ 49.41 ಕೋಟಿ, ಲೋಕೋಪಯೋಗಿ ಇಲಾಖೆಯಲ್ಲಿ 62.22 ಲಕ್ಷ, ನೋಂದಣಾಧಿಕಾರಿ, ಕೈಗಾರಿಕೆ  ನಿಗಮದಲ್ಲಿ 23,307 ರು., ಲೇವಾದೇವಿಗಾರರು ಮತ್ತು ಗಿರವಿದಾರರು 14.22 ಕೋಟಿ, ಸಕ್ಕರೆ ಬೆಲೆ ಸಮತೋಲನ ನಿಧಿ 11.65 ಕೋಟಿ, ಸಣ್ಣ ಉಳಿತಾಯ, ರಾಜ್ಯ ಲಾಟರಿ ನಿರ್ದೇಶಕರ ಹೆಸರಿನಲ್ಲಿ 35.43 ಲಕ್ಷ, ಖಾಯಂ ಮತ್ತು ಹಂಗಾಮಿ ಠೇವಣಿಗಳಲ್ಲಿ 28.31 ಲಕ್ಷ, ರಾಮಕುಮಾರ ಲಾಲ ಸ್ಮಾರಕ ನಿಧಿಯಲ್ಲಿ 195 ರು. ಇತ್ತು.

 

 

ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ 49.41 ಲಕ್ಷ, ಸಹಕಾರಿ ಸಂಘಗಳ ನೋಂದಣಾಧಿಕಾರಿಗಳ ಹೆಸರಿನಲ್ಲಿ 10,000 ರು., ವಿತ್ತೀಯ ಸಂಸ್ಥೆಯ ನಿರ್ದೇಶಕರ ಹೆಸರಿನಲ್ಲಿ 13,057 ರು., ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ಹೆಸರಿನಲ್ಲಿ 59.98 ಕೋಟಿ, ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರ ಹೆಸರಿನಲ್ಲಿ 783 ರು., ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಹೆಸರಿನಲ್ಲಿ 197.41 ಕೋಟಿ, ತಾಂತ್ರಿಕ ಶಿಕ್ಷಣ ಇಲಾಖೆಯ ಟೆಕ್ವಿಪ್‌ ಯೋಜನೆ ವಿಶೇಷ ಕರ್ತವ್ಯಾಧಿಕಾರಿ ಹೆಸರಿನಲ್ಲಿ 1.03 ಕೋಟಿ ರು ಸೇರಿ ಒಟ್ಟಾರೆ 338.86 ಕೋಟಿ ರು ಇತ್ತು.

 

ವಿವೇಚನಾ ರಹಿತ ಬಳಕೆ

 

ಸರ್ಕಾರದ ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳು ಕಿರು ಶೀರ್ಷಿಕೆ-800ರಲ್ಲಿನ 32 ಪ್ರಮುಖ ಲೆಕ್ಕ ಶೀರ್ಷಿಕೆಗಳಡಿಯಲ್ಲಿರುವ ಕೋಟ್ಯಂತರ ರುಪಾಯಿಗಳನ್ನು ವಿವೇಚನಾ ರಹಿತವಾಗಿ ಬಳಕೆ ಮಾಡಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.

 

ಕಿರು ಶೀರ್ಷಿಕೆ 800 ನ್ನು ವಾಡಿಕೆಯಂತೆ ಕಾರ್ಯಾಚರಣೆ ಮಾಡುವುದನ್ನು ಉತ್ತೇಜಿಸಬಾರದು ಎಂದು ಲೆಕ್ಕ ಪರಿಶೋಧಕರು ಕಟ್ಟುನಿಟ್ಟಾಗಿ ನೀಡಿದ್ದ ಸೂಚನೆಯನ್ನೂ ಉಲ್ಲಂಘಿಸಿತ್ತು.  2023-24ರಲ್ಲಿ ಕಿರು ಶೀರ್ಷಿಕೆಯಲ್ಲಿ 10,836.47 ಕೋಟಿಯನ್ನು ಇತರೆ ವೆಚ್ಚಗಳಡಿಯಲ್ಲಿ ವರ್ಗೀಕರಿಸಲಾಗಿತ್ತು ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ.

 

ಮಂತ್ರಿ ಮಂಡಲಕ್ಕೆ (ಲೆಕ್ಕ ಶೀರ್ಷಿಕೆ 2013) ಒಟ್ಟು 27,17,99,332 ರು ಒಟ್ಟು ಖರ್ಚಾಗಿತ್ತು. ಇದರಲ್ಲಿ ಕಿರು ಶೀರ್ಷಿಕೆ 800 ರಡಿಯಲ್ಲಿ 5.79 ಕೋಟಿ ರು ಗಳನ್ನು ಖರ್ಚು ಮಾಡಲಾಗಿತ್ತು. ಇದು ಒಟ್ಟು ವೆಚ್ಚಕ್ಕೆ ಶೇ. 21.31ರಷ್ಟಿತ್ತು. ಅದೇ ರೀತಿ (ಲೆಕ್ಕ ಶೀರ್ಷಿಕೆ 2216) ವಸತಿ ಇಲಾಖೆಯಲ್ಲಿ 23,53,82,83,139 ರು ಗಳನ್ನು ಖರ್ಚು ಮಾಡಿತ್ತು. ಇದರಲ್ಲಿ ಕಿರು ಶೀರ್ಷಿಕೆ ಅಡಿಯಲ್ಲಿ 8.40 ಕೋಟಿ, ನಗರಾಭಿವೃದ್ಧಿ (2217) ಯಲ್ಲಿ 18,78,94,24,796 ರು ಪೈಕಿ ಕಿರು ಶೀರ್ಷಿಕೆ ಅಡಿಯಲ್ಲಿ 6.10 ಕೋಟಿ, ಇತರೆ ಸಾಮಾನ್ಯ ಆರ್ಥಿಕ ಸೇವೆಗಳಲ್ಲಿ 34,37,52,58,525 ರು ಒಟ್ಟು ಖರ್ಚಿನ ಪೈಕಿ 22.09 ಕೋಟಿ ರುಗಳನ್ನು ಕಿರು ಶೀರ್ಷಿಕೆ ಅಡಿಯಲ್ಲಿ ಖರ್ಚಾಗಿತ್ತು.

 

ಇತರೆ ಆಡಳಿತಾತ್ಮಕ ಸೇವೆಗಳ ಮೇಲಿನ ಬಂಡವಾಳ ವೆಚ್ಚದದಲ್ಲಿ (ಲೆಕ್ಕ ಶೀರ್ಷಿಕೆಯಲ್ಲಿ 4070) 24,36,35,837 ರು ಒಟ್ಟು ಖರ್ಚಿನ ಪೈಕಿ 23.70 ಕೋಟಿ ರು, ಸಸ್ಯ ಸಂಗೋಪನೆ ಮೇಲಿನ ಬಂಡವಾಳ ವೆಚ್ಚವಾಗಿದ್ದ 63,12,47,465 ರು ಪೈಕಿ 48.45 ಕೋಟಿ, ಇತರೆ ವಿಶೇಷ ಪ್ರದೇಶಗಳ ಕಾರ್ಯಕ್ರಮಗಳ ಮೇಲಿನ ಬಂಡವಾಳ ವೆಚ್ಚ 35,95,49,98,00 ರು ಪೈಕಿ 35.90 ಕೋಟಿ, ಕಮಾಂಡ್‌ ಏರಿಯಾ ಅಭಿವೃದ್ದಿ ಮೇಲಿನ ಬಂಡವಾಳ ವೆಚ್ಚ 63,31,57,143 ರು ನಲ್ಲಿ 63.31 ಕೋಟಿ (ಶೇ.100ರಷ್ಟು) ರು ಖರ್ಚು ಮಾಡಲಾಗಿತ್ತು.

 

ನಿಗಮಕ್ಕೆ ಸಾಲಗಳ ರೂಪದಲ್ಲಿ 1,19,73,704 ರುನಲ್ಲಿ 77.69 ಲಕ್ಷ, ವಿದ್ಯುತ್‌ ಯೋಜನೆಗಳಿಗೆ ಸಾಲದ ರೂಪದಲ್ಲಿ 376.47 ಕೋಟಿ ರು ಒಟ್ಟು ಖರ್ಚಿನಲ್ಲಿ 258.14 ಕೋಟಿ, ಕಬ್ಬಿಣ ಮತ್ತು ಉಕ್ಕಿನ ಉದ್ಯಮಗಳಿಗೆ ಸಾಲದ ರೂಪದಲ್ಲಿ 10,11,82,72,720 ರು ಒಟ್ಟು ಖರ್ಚಿನಲ್ಲಿ 10,11,40,37,279 ರು.ಗಳನ್ನು ಕಿರು ಶೀರ್ಷಿಕೆ ಅಡಿಯಲ್ಲಿ ಖರ್ಚು ಮಾಡಿರುವುದನ್ನು ಲೆಕ್ಕ ಪರಿಶೋಧನೆಯು ವರದಿಯಲ್ಲಿ ಉಲ್ಲೇಖಿಸಿದೆ.

 

 

ಒಟ್ಟಾರೆ 12, 833.27 ಕೋಟಿ ರು ಒಟ್ಟು ಖರ್ಚಿನ ಪೈಕಿ  8,6,63. 87 ಕೋಟಿ  ರು ಗಳನ್ನು ಕಿರು ಶೀರ್ಷಿಕೆ 800ರ ಅಡಿಯಲ್ಲಿ ಖರ್ಚಾಗಿತ್ತು.

 

ಇದಲ್ಲದೇ 49 ಪ್ರಧಾನ ಲೆಕ್ಕ ಶೀರ್ಷಿಕೆ ಖಾತೆಗಳ ಅಡಿಯಲ್ಲಿ 2,000 ಕೋಟಿ, ಒಟ್ಟು ಆದಾಯದ ಸ್ವೀಕೃತಿಗಳಗಾದ 2,33,342.93 ಕೋಟಿ ರುನಲ್ಲಿ  ಶೇ. 0.86ರಷ್ಟನ್ನು ಕಿರು ಶೀರ್ಷಿಕೆ 800 ರ ಇತರೆ ರಸೀದಿಗಳ ಅಡಿಯಲ್ಲಿ ವರ್ಗೀಕರಿಸಲಾಗಿತ್ತು.

Your generous support will help us remain independent and work without fear.

Latest News

Related Posts