ಬೆಂಗಳೂರು; ನಗರಾಭಿವೃದ್ಧಿ, ವಸತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 2023-24ನೇ ಆರ್ಥಿಕ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಒದಗಿಸಿದ್ದ ಒಟ್ಟು ಅನುದಾನದಲ್ಲಿ 22,114.08 ಕೋಟಿ ಉಳಿತಾಯವಾಗಿತ್ತು. ಈ ಪೈಕಿ 19,376.87 ಕೋಟಿ ಬಳಕೆ ಮಾಡುವಲ್ಲಿ ವಿಫಲವಾಗಿದ್ದ ಇಲಾಖೆಗಳು, ಈ ಹಣವನ್ನು ಸರ್ಕಾರಕ್ಕೆ ವಾಪಸ್ ನೀಡಿತ್ತು.
ರಾಜಸ್ವ ಪುರಸ್ಕೃತ ಅಡಿಯಲ್ಲಿ ಸಮಾಜ ಕಲ್ಯಾಣ, ಒಳಾಡಳಿತ, ಸಾರಿಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ ನಾಗರಿಕ ಸರಬರಾಜು, ಕಂದಾಯ, ಶಿಕ್ಷಣ, ನಗರಾಭಿವೃದ್ಧಿ ವಸತಿ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗೆ ಅನುದಾನ ಒದಗಿಸಿತ್ತು. ಆದರೆ ಈ ಇಲಾಖೆಗಳು ಅನುದಾನವನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದ್ದರೂ ಬಳಸಿಕೊಂಡಿಲ್ಲ. ಬದಲಿಗೆ ಸರ್ಕಾರಕ್ಕೆ ವಾಪಸ್ ಮಾಡಿವೆ.
ಯಾವ ಕಾರಣಗಳಿಗಾಗಿ ಕೋಟ್ಯಂತರ ರುಪಾಯಿಗಳನ್ನು ವಾಪಸ್ ಮಾಡಿವೆ ಎಂಬ ಕುರಿತು ಇಲಾಖೆಗಳು ಸಿಎಜಿಗೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ.
2024ರ ಮಾರ್ಚ್ 31ರ ಅಂತ್ಯಕ್ಕೆ ರಾಜ್ಯ ಹಣಕಾಸಿನ ವ್ಯವಹಾರಗಳ ಲೆಕ್ಕ ಪರಿಶೋಧನೆ ವರದಿಯಲ್ಲಿ ಇಲಾಖೆಗಳು ಮಾಡಿರುವ ಉಳಿತಾಯದ ಹಣದ ಕುರಿತು ವಿಶ್ಲೇಷಣೆ ಮಾಡಿದೆ.
2025ರ ಆಗಸ್ಟ್‌ನಲ್ಲಿ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ಈ ವರದಿಯು ಮಂಡನೆಯಾಗಿದೆ.
ಉಳಿಕೆ ಮಾಡಿಕೊಂಡಿದ್ದ ಇಲಾಖೆಗಳ ಪೈಕಿ ನಗರಾಭಿವೃದ್ಧಿ, ವಸತಿ, ಆಹಾರ ನಾಗರೀಕ ಸರಬರಾಜು ಮತ್ತು ಶಿಕ್ಷಣ ಇಲಾಖೆಯಲ್ಲಿಯೇ 2,000 ಕೋಟಿಗೂ ಹೆಚ್ಚು ಅನುದಾನವನ್ನು ಉಳಿಕೆ ಮಾಡಿಕೊಂಡಿತ್ತು.
ಕರ್ನಾಟಕ ಆಯವ್ಯಯ ಕೈಪಿಡಿ ನಿಯಮ 264ರ ಪ್ರಕಾರ ನಿಯಂತ್ರಣಾಧಿಕಾರಿಗಳು ನಿರೀಕ್ಷಿಸಿದ ಎಲ್ಲಾ ಉಳಿಕೆಗಳನ್ನು ಸಂಪೂರ್ಣ ವಿವರ ಮತ್ತು ಕಾರಣಗಳೊಂದಿಗೆ ಉಳಿತಾಯದ ಕುರಿತು ತಕ್ಷಣವೇ ಆರ್ಥಿಕ ಇಲಾಖೆಗೆ ವರದಿ ಮಾಡಬೇಕು. ಆದರೂ ಈ ಇಲಾಖೆಗಳು 19,376.87 ಕೋಟಿ ರು ಉಳಿಕೆಯಾಗಿರುವ ಕುರಿತು ಸೂಕ್ತವಾಗಿ ವಿವರಿಸಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
28 ಅನುದಾನಗಳಲ್ಲಿ 22 ಅನುದಾನಗಳ ವಿನಿಯೋಗವು ಅದರ ಹಂಚಿಕೆಯ ಶೇ. 70ಕ್ಕಿಂತ ಹೆಚ್ಚು ಬಳಸಿಕೊಂಡಿತ್ತು. 22 ಅನುದಾನಗಳಲ್ಲಿ 15 ಅನುದಾನಗಳು ಅದರ ಹಂಚಿಕೆಯ ಶೇ. 90ಕ್ಕಿಂತಲೂ ಹೆಚ್ಚು ಬಳಸಿಕೊಂಡಿವೆ. 2023-24ರಲ್ಲಿ ಒಟ್ಟಾರೆ 22,114.08 ಕೋಟಿ ಉಳಿತಾಯವಾಗಿದೆ. ಸಮಯಕ್ಕೆ ಸರಿಯಾಗಿ ವಾಪಸ್ ಮಾಡಬೇಕಾದ ಉಳಿತಾಯವನ್ನು ಉಳಿಸಿಕೊಳ್ಳುವ ಮೂಲಕ ಯಾವುದೇ ಉದ್ದೇಶವನ್ನು ಪೂರೈಸಲಾಗಲಿಲ್ಲ ಎಂದು ಸಿಎಜಿ ವರದಿಯು ವಿಶ್ಲೇಷಣೆ ಮಾಡಿರುವುದು ಗೊತ್ತಾಗಿದೆ.
2023-24ರ ಅವಧಿಯಲ್ಲಿ 19, 262.62 ಕೋಟಿ ಒಟ್ಟು ಬಳಕೆ ಮಾಡಲು ಅವಕಾಶವಿತ್ತು. ಆದರೆ ಇಲಾಖೆಗಳು ಅದನ್ನು ಬಳಕೆ ಮಾಡಿಕೊಳ್ಳಲಿಲ್ಲ.
ಉಳಿತಾಯದ ಮೊತ್ತದ ವಿವರ
ಒಳಾಡಳಿತ ಮತ್ತು ಸಾರಿಗೆ ಇಲಾಖೆಯು 979.72 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ 1,234.65 ಕೋಟಿ, ಸಮಾಜ ಕಲ್ಯಾಣ ಇಲಾಖೆ 504.55 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 1,325.30 ಕೋಟಿ, ಆಹಾರ ಮತ್ತು ನಾಗರೀಕ ಸರಬರಾಜು 2,958.72 ಕೋಟಿ, ಕಂದಾಯ 788.47 ಕೋಟಿ, ಶಿಕ್ಷಣ 2,433.03 ಕೋಟಿ, ನಗರಾಭಿವೃದ್ಧಿ , ವಸತಿ ಇಲಾಖೆ 2,767.54 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 1,898.14 ಕೋಟಿಯನ್ನು ಉಳಿತಾಯ ಮಾಡಿತ್ತು.
9 ಅನುದಾನ,ವಿನಿಯೋಗಗಳ 11 ಪ್ರಕರಣಗಳಲ್ಲಿ 839.18 ಕೋಟಿಯನ್ನು ಸರ್ಕಾರಕ್ಕೆ ವಾಪಸ್ ಮಾಡಿತ್ತು.
ಪಶು ಸಂಗೋಪನೆ ಮತ್ತು ಮೀನುಗಾರಿಕೆಯಲ್ಲಿ 6.30 ಕೋಟಿ, ಆರ್ಥಿಕ ಇಲಾಖೆ 367.53 ಕೋಟಿ, ಅರಣ್ಯ ಜೀವಿಶಾಸ್ತ್ರ ಪರಿಸರ ಇಲಾಖೆ 0.40 ಕೋಟಿ, ವಾರ್ತಾ, ಪ್ರವಾಸೋದ್ಯಮ ಯುವಜನ ಸೇವೆ 87.81 ಕೋಟಿ, ಆಹಾರ ನಾಗರೀಕ ಸರಬರಾಜು ಇಲಾಖೆ 0.01 ಕೋಟಿ, ಕನ್ನಡ ಸಂಸ್ಕೃತಿ 5.31 ಕೋಟಿ, ಯೋಜನೆ, ಸಾಂಖ್ಯಿಕ, ವಿಜ್ಞಾನ ತಂತ್ರಜ್ಞಾನ 9.50 ಕೋಟಿ, ಕಾನೂನು 355.51 ಕೋಟಿ, ಸಂಸದೀಯ ವ್ಯವಹಾರಗಳು ಶಾಸನ ರಚನೆ 4.68 ಕೋಟಿ ರು ಸೇರಿ 839.18 ಕೋಟಿ ಉಳಿಕೆಯಾಗಿತ್ತು.
ಇದಲ್ಲದೇ 22 ಅನುದಾನಗಳ, ವಿನಿಯೋಗಗಳಲ್ಲಿಯೂ ನಿರೀಕ್ಷಿತ ಪ್ರಮಾಣದಲ್ಲಿ ಬಳಕೆಯಾಗಿರಲಿಲ್ಲ. ಒಟ್ಟು 19,432.00 ಕೋಟಿ ರು ಪೈಕಿ 15,801.88 ಕೋಟಿಯನ್ನು ಸರ್ಕಾರಕ್ಕೆ ವಾಪಸ್ ಮಾಡಿತ್ತು. ಉಳಿದ 3,630.12 ಕೋಟಿ ವಾಪಸ್ ಮಾಡಿರಲಿಲ್ಲ.
ಕೃಷಿ ಮತ್ತು ತೋಟಗಾರಿಕೆಯಲ್ಲಿ 0,60 ಕೋಟಿ, ಪಶು ಸಂಗೋಪನೆ ಮತ್ತು ಮೀನುಗಾರಿಕೆಯಲ್ಲಿ 16.23 ಕೋಟಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 106.61 ಕೋಟಿ, ಒಳಾಡಳಿತ ಮತ್ತು ಸಾರಿಗೆ 275.37 ಕೋಟಿ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ 949.58 ಕೋಟಿ, ಅರಣ್ಯ ಜೀವಿಶಾಸ್ತ್ರ ಪರಿಸರ 5.69 ಕೋಟಿ, ಸಹಕಾರ 388.51 ಕೋಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ 73.45 ಕೋಟಿ, ವಾರ್ತಾ ಮತ್ತು ಪ್ರವಾಸೋದ್ಯಮ, ಯುವಜನ ಸೇವೆಗಳು 1.77 ಕೋಟಿ, ಆಹಾರ ನಾಗರೀಕ ಸರಬರಾಜು 40.10 ಕೋಟಿ, ಕಂದಾಯ 3.40 ಕೋಟಿ, ಮಾಹಿತಿ ತಂತ್ರಜ್ಞಾನ 0.48 ಕೋಟಿ ರು ಸರ್ಕಾರಕ್ಕೆ ವಾಪಸ್ ಮಾಡಿರಲಿಲ್ಲ.
ಶಿಕ್ಷಣ 522.83 ಕೋಟಿ, ನಗರಾಭಿವೃದ್ಧಿ ಮತ್ತು ವಸತಿ 251.45 ಕೋಟಿ, ಲೋಕೋಪಯೋಗಿ ಕಾಮಗಾರಿಗಳು 11.41 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 805.87 ಕೋಟಿ, ಕಾರ್ಮಿಕ ಮತ್ತು ಕೌಶಲ್ಯ ಅಭಿವೃದ್ಧಿ 2.19 ಕೋಟಿ, ಕನ್ನಡ ಮತ್ತು ಸಂಸ್ಕೃತಿ 0.13 ಕೋಟಿ, ಯೋಜನೆ, ಸಾಂಖ್ಯಿಕ ವಿಜ್ಞಾನ ತಂತ್ರಜ್ಞಾನ 0.73 ಕೋಟಿ, ಸಂಸದೀಯ ವ್ಯವಹಾರಗಳು ಶಾಸನ ರಚನೆ ಇಲಾಖೆ 0.24 ಕೋಟಿ ರುಪಾಯಿಗಳನ್ನು ವಾಪಸ್ ಮಾಡಿರಲಿಲ್ಲ.
ವಾಪಸ್ ಮಾಡಿದ್ದಕ್ಕೆ ಕಾರಣ ನೀಡದ ಇಲಾಖೆಗಳು
113 ಪ್ರಕರಣಗಳಲ್ಲಿ ಗಣನೀಯವಾಗಿ ಅಂದರೇ 8,197.18 ಕೋಟಿಯಷ್ಟು ಸರ್ಕಾರಕ್ಕೆ ವಾಪಸ್ ಆಗಿತ್ತು. ವಿವಿಧ ಲೆಕ್ಕ ಶೀರ್ಷಿಕೆಗಳಲ್ಲಿನ ಕೋಟ್ಯಂತರ ರುಪಾಯಿಗಳನ್ನು ವಾಪಸ್ ಮಾಡಿದ್ದಕ್ಕೆ ಇಲಾಖೆಗಳು ಹಲವು ಇಲಾಖೆಗಳು ನಿರ್ದಿಷ್ಟವಾದ ಕಾರಣವನ್ನೇ ನೀಡಿರಲಿಲ್ಲ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯು ಸರ್ಕಾರಕ್ಕೆ 53.16 ಕೋಟಿ ರುಗಳನ್ನು ವಾಪಸ್ ಮಾಡಿತ್ತು. ಆದರೆ ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿರಲಿಲ್ಲ. ಅದೇ ರೀತಿ ಕಡಿಮೆ ಸಂಖ್ಯೆಯ ಫಲಾನುಭವಿಗಳ ಕಾರಣದಿಂದಾಗಿ 37.24 ಕೋಟಿಯನ್ನು ವಾಪಸ್ ಮಾಡಿತ್ತು. ಪರಿಶಿಷ್ಟ ಜಾತಿ ಉಪಯೋಜನೆ ಇತರೆ ಭತ್ಯೆಗಳ ಲೆಕ್ಕ ಶೀರ್ಷಿಕೆಯಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸದ ಕಾರಣಗಳಿಂದಾಗಿ 8.46 ಕೋಟಿ ವಾಪಸ್ ಮಾಡಿತ್ತು.
ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು 65.58 ಕೋಟಿ ರುಪಾಯಿಗಳನ್ನು ವಾಪಸ್ ಮಾಡಿದ್ದಕ್ಕೆ ನಿರ್ದಿಷ್ಟ ಕಾರಣಗಳನ್ನು ನೀಡಿರಲಿಲ್ಲ. ಆರ್ಥಿಕ ಇಲಾಖೆಯೂ ಸಹ 355 ಕೋಟಿ ರು.ಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿತ್ತಾದರೂ ಇದಕ್ಕೆ ನಿರ್ದಿಷ್ಟ ಕಾರಣಗಳನ್ನು ನೀಡಿರಲಿಲ್ಲ. ಒಳಾಡಳಿತ ಮತ್ತು ಸಾರಿಗೆ ಇಲಾಖೆಯೂ ಸಹ 369.04 ಕೋಟಿ ರು.ಗಳನ್ನು ವಾಪಸ್ ಮಾಡುತ್ತಿರುವುದೇಕೆ ಎಂಬುದಕ್ಕೆ ನಿರ್ದಿಷ್ಟ ಕಾರಣಗಳನ್ನು ಸಿಎಜಿಗೆ ನೀಡಿರಲಿಲ್ಲ.
ಮೂಲಭೂತ ಸೌಕರ್ಯ ಮತ್ತು ಅಭಿವೃದ್ಧಿ ಇಲಾಖೆಯು 10.00 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು 80.53 ಕೋಟಿ, ಸಹಕಾರ ಇಲಾಖೆಯು 32.57 ಕೋಟಿ, ಸಮಾಜ ಕಲ್ಯಾಣ ಇಲಾಖೆಯು 393.91 ಕೋಟಿ, ವಾರ್ತಾ , ಪ್ರವಾಸೋದ್ಯಮ ಮತ್ತು ಯುವಜನಸೇವೆಗಳು 6.97 ಕೋಟಿ, ಕಂದಾಯ ಇಲಾಖೆ 304.24 ಕೋಟಿ, ಶಿಕ್ಷಣ ಇಲಾಖೆಯು 67.66 ಕೋಟಿ, ವಾಣಿಜ್ಯ ಮತ್ತು ಕೈಗಾರಿಕೆ 97.01 ಕೋಟಿ, ನಗರಾಭಿವೃದ್ಧಿ ಇಲಾಖೆ 1,770.09 ಕೋಟಿ ವಾಪಸ್ ಮಾಡಿದ್ದಕ್ಕೆ ಕಾರಣಗಳೇ ಇರಲಿಲ್ಲ.
ಜಲ ಸಂಪನ್ಮೂಲ 25.98 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು 268.65 ಕೋಟಿ, ಕಾರ್ಮಿಕ ಕೌಶಲ್ಯ ಅಭಿವೃದ್ಧಿ 59.18 ಕೋಟಿ, ಯೋಜನೆ ಸಾಂಖ್ಯಿಕ 11.32 ಕೋಟಿ, ಕಾನೂನು 20.11 ಕೋಟಿ, ಋಣ ಮೇಲುಸ್ತುವಾರಿ 2,803.04 ಕೋಟಿ ರು.ಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿದಕ್ಕೆ ನಿರ್ದಿಷ್ಟ ಕಾರಣಗಳನ್ನೇ ನೀಡಿರಲಿಲ್ಲ ಎಂದು ಸಿಎಜಿಯು ಪಟ್ಟಿ ಮಾಡಿರುವುದು ಗೊತ್ತಾಗಿದೆ.