ವೈದ್ಯರ ಅನುಮತಿ ಇಲ್ಲದೇ ಔಷಧ ಮಾರಾಟ; ಕೇವಲ 10 ಪ್ರಕರಣ ದಾಖಲು, ಇಲಾಖೆ ನಿಷ್ಕ್ರೀಯವಾಯಿತೇ?

ಬೆಂಗಳೂರು; ವೈದ್ಯರ ಅನುಮತಿ ಮತ್ತು ಶಿಫಾರಸ್ಸು ಇಲ್ಲದೆಯೇ ಔಷಧಗಳ ಮಾರಾಟ ಮಾಡಲು ತಡೆಯಲು ಸರ್ಕಾರವು ನಿರ್ದಿಷ್ಟವಾಗಿ ಸೂಚನೆ ನೀಡಿದ್ದರೂ ಸಹ ಔಷಧ ನಿಯಂತ್ರಣ ಇಲಾಖೆಯು ಕೇವಲ 10 ಪ್ರಕರಣಗಳನ್ನು ಮಾತ್ರ ದಾಖಲಿಸಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯಮಟ್ಟದ 6ನೇ ನಾರ್ಕೋ ಸಮನ್ವಯ ಕೇಂದ್ರ ಸಮಿತಿಯು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2025ರ ಜುಲೈ 16 ಎಂದು ನಡೆದಿದ್ದ ಸಭೆಯಲ್ಲಿ ಈ ಸಂಗತಿಯು ಬಯಲಾಗಿದೆ.
2025ರ ಜುಲೈ 16ರಂದು ಸಮಿತಿ ನಡೆಸಿದ್ದ ಸಭೆ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಔಷಧ ಮಳಿಗೆಗಳಲ್ಲಿ ವೈದ್ಯರ ಅನುಮತಿ ಇಲ್ಲದೇ ಔಷಧಗಳನ್ನು ನಿರಂತರವಾಗಿ ಮಾರಾಟ ಮಾಡಲಾಗುತ್ತಿದೆ. ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಔಷಧ ಮಳಿಗೆಗಳನ್ನು ತಪಾಸಣೆಗೊಳಪಡಿಸಬೇಕು. ಆದರೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಯನ್ನು ಬಿರುಸುಗೊಳಿಸಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಂತೆ ಪ್ರಕರಣಗಳೂ ದಾಖಲಾಗುತ್ತಿಲ್ಲ. ಹೀಗಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಭೆಯಲ್ಲಿ ಈ ಕುರಿತು ಮತ್ತಷ್ಟು ಸ್ಪಷ್ಟವಾಗಿ ಸೂಚನೆಗಳನ್ನು ನೀಡಿರುವುದು ಗೊತ್ತಾಗಿದೆ.

 

‘ಕೆಮ್ಮು, ನೋವು ನಿವಾರಣೆ, ಆತಂಕ ಹಾಗೂ ಖಿನ್ನತೆಗಳಿಗೆ ಬಳಸಲಾಗುವ ಔಷಧಗಳನ್ನು ವೈದ್ಯರ ಅನುಮತಿಯಿಲ್ಲದೇ ಮಾರಾಟ ಮಾಡುವುದನ್ನು ತಡೆಯಲು ಔಷಧ ನಿಯಂತ್ರಣ ಇಲಾಖೆಗೆ ಸೂಚನೆ ನೀಡಲಾಗಿತ್ತು. ಆದರೆ ಇತ್ತೀಚಿನ ವರದಿಯಂತೆ ಕೇವಲ 10 ಪ್ರಕರಣಗಳನ್ನು ಮಾತ್ರ ದಾಖಲಿಸಲಾಗಿದೆ. ಆದ್ದರಿಂದ ಇನ್ನಷ್ಟು ತಪಾಸಣೆಯನ್ನು ಕೈಗೊಳ್ಳುವ ಅಗತ್ಯವಿದೆ, ‘ ಎಂದು ಸಮಿತಿಯು ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.

 

 

ವೈದ್ಯರ ಅನುಮತಿ ಇಲ್ಲದೇ ನಿಷೇಧಿತ ಔಷಧಗಳನ್ನು ಮಾರಾಟ ಮಾಡುವುದನ್ನು ತಡೆಯಲು ಎಲ್ಲಾ ಔಷಧ ಅಂಗಡಿಗಳ ಮುಂದೆ ವೈದ್ಯರ ನಿರ್ದೇಶನವಿಲ್ಲದೆ ಔಷಧ ಮಾರಾಟ ನಿಷೇಧ ಎಂಬ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಹಾಕಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಬೇಕು ಎಂದು ಸಮಿತಿಯು ನಿರ್ದೇಶಿಸಿರುವುದು ಗೊತ್ತಾಗಿದೆ.

 

ವೈದ್ಯಕೀಯ ಬಳಕೆಗೆ ಪೂರ್ವಾನುಮತಿಯಿಲ್ಲದೆ ಅಕ್ರಮವಾಗಿ ಮಾದಕ ಔಷಧಗಳನ್ನು ತಯಾರಿಸುತ್ತಿರುವ ಅಥವಾ ಮಾರಾಟ ಮಾಡುತ್ತಿರುವ ನೋಂದಾಯಿಸದ ಕಂಪನಿಗಳು ಹಾಗೂ ಔಷಧಾಲಯಗಳನ್ನು ಗುರುತಿಸಲು ಔಷಧ ನಿಯಂತ್ರಣ ಇಲಾಖೆಗೆ ಜಿಲ್ಲೆಯ ಎಲ್ಲಾ ಅಧಿಕಾರಿಗಳೂ ಅಗತ್ಯ ಸಹಾಯ ಒದಗಿಸಬೇಕು ಎಂದೂ ಸಭೆಯು ಸೂಚಿಸಿದೆ.

 

 

ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ಪ್ರಾಥಮಿಕ ಶಿಕ್ಷಣ, ಸಾಕ್ಷರತೆ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಗಳ ವಸತಿ ನಿಲಯ, ಹಾಸ್ಟೆಲ್‌ಗಳಲ್ಲ ಡ್ರಗ್‌ ಟೆಸ್ಟಿಂಗ್‌ ಕಿಟ್‌ಗಳ ಮೂಲಕ ಪರೀಕ್ಷೆ ನಡೆಸಬೇಕು. ಮಾದಕ ವಸ್ತು ಬಳಕೆಯ ಪ್ರಕರಣಗಳು ಪತ್ತೆಯಾಗಿದ್ದಲ್ಲಿ ಸಂಬಂಧಪಟ್ಟ ಹಾಸ್ಟೆಲ್‌ ವಾರ್ಡನ್‌ ಅಥವಾ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಭೆಯು ನಿರ್ದೇಶಿಸಿರುವುದು ಗೊತ್ತಾಗಿದೆ.

 

ವೈದ್ಯರ ಅನುಮತಿ ಇಲ್ಲದೆ ಔಷಧಿ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ. ವೈದ್ಯರು ಬರೆದುಕೊಟ್ಟಿರುವ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಔಷಧಾಲಯ ಅಥವಾ ವ್ಯಕ್ತಿ ಔಷಧಿಗಳನ್ನು ಮಾರಾಟ ಮಾಡುವಂತಿಲ್ಲ. ಕಾನೂನುಬಾಹಿರವಾಗಿ ಔಷಧಿ ಮಾರಾಟ ಮಾಡಿದರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲು ಅವಕಾಶಗಳಿವೆ.

 

ಔಷಧಿಗಳ ಮಾರಾಟಕ್ಕೆ ಸಂಬಂಧಿಸಿದಂತೆ, ಭಾರತದಲ್ಲಿ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯಿದೆ, 1940 ಮತ್ತು ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ರೂಲ್ಸ್, 1945 ರ ಅಡಿಯಲ್ಲಿ ಕಟ್ಟುನಿಟ್ಟಾದ ನಿಯಮಗಳಿವೆ. ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುವುದನ್ನು ಈ ಕಾಯ್ದೆಗಳು ನಿಷೇಧಿಸುತ್ತವೆ. ಔಷಧಿಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಈ ನಿಯಮಗಳನ್ನು ಜಾರಿಗೊಳಿಸಿದೆ.

 

ಔಷಧ ಮಾರಾಟ ಮಾಡುವವರು ಪರವಾನಗಿ ಪಡೆದಿರಬೇಕು ಮತ್ತು ಔಷಧಿಗಳ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಿರಬೇಕು. ವೈದ್ಯರು ಮಾತ್ರ ರೋಗಿಯ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಸೂಕ್ತವಾದ ಔಷಧಿಯನ್ನು ಶಿಫಾರಸು ಮಾಡಬಹುದು ಮತ್ತು ಪ್ರಿಸ್ಕ್ರಿಪ್ಷನ್ ನೀಡಬಹುದು. ಯಾವುದೇ ವೈದ್ಯಕೀಯ ಸಲಹೆ ಅಥವಾ ಔಷಧಿಗಳಿಗಾಗಿ ಯಾವಾಗಲೂ ನೋಂದಾಯಿತ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ಹೇಳಲಾಗಿದೆ.
ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳು ಜನರಿಗೆ ದೊರೆಯದಂತೆ ತಡೆಯಲು ದಾಸ್ತಾನುಗಳನ್ನು ಹಿಂಪಡೆಯಲು ಪ್ರತ್ಯೇಕ ನೀತಿ ರೂಪಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಅವರು ಈಚೆಗಷ್ಟೇ ಹೇಳಿದ್ದರು.

 

ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜನರ ಆರೋಗ್ಯದ ದೃಷ್ಟಿಯಿಂದ ನಿಯಮಿತವಾಗಿ ಔಷಧಗಳ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತಿದ್ದಾರೆ. 2025ರ ಜನವರಿಯಲ್ಲಿ 1,133 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಗುರಿಪಡಿಸಲಾಗಿತ್ತು. ಅವುಗಳ್ಲಿ 106 ಔಷಧ ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎನ್ನುವುದು ಪರೀಕ್ಷೆಯಿಂದ ದೃಢಪಟ್ಟಿತ್ತು.ಫೆಬ್ರುವರಿಯಲ್ಲಿ 1,841 ಔಷಧ ಮಾದರಿಗಳನ್ನು ವಿಶ್ಲೇಷಣೆಗೆ ಪಡೆಯದಿತ್ತು. ಅವುಗಳಲ್ಲಿ 598 ಮಾದರಿಗಳು ಪ್ರಮಾಣಿತ ಗುಣಮಟ್ಟ ಹೊಂದಿಲ್ಲ ಎಂಬ ವರದಿಗಳೂ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು.

 

ಜೀವ ನಿರೋಧಕ ಔಷಧಗಳ ದುರ್ಬಗಳಕೆಗೆ ಸಂಬಂಧಿಸಿದಂತೆ ರಾಜ್ಯಾದಾದ್ಯಂತ ಔಷಧಧ ಮಳಿಗೆಗಳಲ್ಲಿ ಅಧಿಕಾರಿಗಳು ವಿಶೇಷ ತಪಾಸಣೆ ನಡೆಸಿದ್ದರು. 52 ಔಷಧ ಮಳಿಎಗೆಗಳಲ್ಲಿ ವೈದ್ಯರ ಶಿಫಾರಸ್ಸು ಇಲ್ಲದೆ ಆಂಟಿಬಯಾಟಿಕ್‌ ಔಷಧ ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು.

 

ಮಾದಕ ಬೆಳೆಗಳನ್ನು ಗುರುತಿಸಲು ಮ್ಯಾಪ್‌ ಡ್ರಗ್ಸ್‌ ಆಪ್‌ ಕುರಿತು ಎಲ್ಲಾ ಪೊಲೀಸ್‌ ಠಾಣೆಗಳಿಗೆ ಹಾಗೂ ಜಿಲ್ಲೆಯ ಎಲ್ಲಾ ಇಲಾಖೆಗಳಿಗೂ ಮುಂದಿನ 6 ತಿಂಗಳ ಒಳಗಾಗಿ ಕಡ್ಡಾಯ ತರಬೇತಿ ನೀಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಅಕ್ರಮ ಮಾದಕ ವಸ್ತುಗಳ ಪೂರೈಕೆಯನ್ನು ತಡೆಯಲು ಅನುಸರಿಸಲಾದ ಮಾದರಿಯನ್ನು ಇತರ ಎಲ್ಲ ಜಿಲ್ಲೆಗಳು ಅಳವಡಿಸಿಕೊಳ್ಳಬೇಕು ಎಂದು ಸಮಿತಿಯು ಸೂಚಿಸಿರುವುದು ಗೊತ್ತಾಗಿದೆ.

 

ಮಾದಕದ್ರವ್ಯ ಜಾರಿ ಘಟಕಗಳ ಅನುಸರಣೆಯಲ್ಲಿ ಎಎನ್‌ಟಿಎಫ್‌ ಮಾದರಿಯಲ್ಲಿ ಪ್ರತಿ ಜಿಲ್ಲೆಗಳಲ್ಲೂ ಉಪ ಸಮಿತಿಗಳನ್ನು ರಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವ ಸಭೆಯು ಗಾಂಜಾ, ಅಫೀಮು, ತಂಬಾಕು ಮತ್ತು ಇತರ ಅಕ್ರಮ ಬೆಳೆಗಳ ಕೃಷಿಯನ್ನು ನಿಲ್ಲಿಸಲು ಹೊಸ ರೀತಿಯ ಬೆಳೆಗಳ ಕೃಷಿಯನ್ನು ಉತ್ತೇಜಿಸಬೇಕು ಎಂದು ಸಮಿತಿಯು ಸಲಹೆ ನೀಡಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts