ಟೋಲ್‌ಗಳಲ್ಲಿ 13,702 ಕೋಟಿ ಸಂಗ್ರಹವಾಗಿದ್ದರೂ 232 ಕೋಟಿ ರು ಮುದ್ರಾಂಕ ಶುಲ್ಕ ಪಾವತಿಗೆ ಬಾಕಿ; ನಷ್ಟ

ಬೆಂಗಳೂರು; ಕರ್ನಾಟಕದಲ್ಲಿ ಹಾದು ಹೋಗಿರುವ  ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಳೆದ ಐದು ವರ್ಷಗಳಲ್ಲಿ 13,702.61 ಕೋಟಿ ರು ಶುಲ್ಕ ಸಂಗ್ರಹಿಸಿರುವ ಟೋಲ್‌ ಪ್ಲಾಜಾಗಳು, ರಾಜ್ಯಕ್ಕೆ  232 ಕೋಟಿ ರು ಮೊತ್ತದ ಮುದ್ರಾಂಕ ಶುಲ್ಕ ಬಾಕಿ ಇರಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ದೆಹಲಿಯಲ್ಲಿಯೇ ಟೋಲ್ ಏಜೆನ್ಸಿಗಳು/ಗುತ್ತಿಗೆದಾರರೊಂದಿಗಿನ ಒಪ್ಪಂದಗಳು ಕಾರ್ಯಗತಗೊಂಡಿವೆ. ಹೀಗಾಗಿ ದೆಹಲಿಯಲ್ಲಿಯೇ ಮುದ್ರಾಂಕ ಶುಲ್ಕವನ್ನು ಪಾವತಿಸಲಾಗಿದೆ ಎಂಬ ಕಾರಣವನ್ನು ಮುಂದಿರಿಸಿರುವ ಟೋಲ್‌ ಏಜೆನ್ಸಿಗಳು ರಾಜ್ಯ ಸರ್ಕಾರಕ್ಕೆ ಮುದ್ರಾಂಕ ಶುಲ್ಕವನ್ನು ಪಾವತಿಸುತ್ತಿಲ್ಲ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿನಷ್ಟು ನಷ್ಟ ಸಂಭವಿಸುತ್ತಿದೆ.

 

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ ಪ್ಲಾಜಾ, ಟೋಲ್‌ಗೇಟ್‌ಗಳಿಂದ ಬಾಕಿ ಇರುವ ಕೋಟ್ಯಂತರ ರುಪಾಯಿ ಮೊತ್ತದ ಮುದ್ರಾಂಕ ಶುಲ್ಕವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರವು ಇದುವರೆಗೂ ಬಿಗಿಯಾದ ಕ್ರಮಗಳನ್ನು ಕೈಗೊಂಡಿಲ್ಲ.

 

ಟೋಲ್‌ ಏಜೆನ್ಸಿಗಳಿಂದ ಮುದ್ರಾಂಕ ಶುಲ್ಕ ವಸೂಲು ಮಾಡುವ ಸಂಬಂಧ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

ಟೋಲ್‌ ಪ್ಲಾಜಾಗಳಿಂದ ಮುದ್ರಾಂಕ ಶುಲ್ಕ ಬಾಕಿ ಇರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2025ರ ಫೆ.17ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಬಾಕಿ ಇರುವ ಮುದ್ರಾಂಕ ಶುಲ್ಕ ವಸೂಲು ಮಾಡುವ ಕುರಿತು ಚರ್ಚೆ ನಡೆದಿದೆ.

 

ಈ ಸಂಬಂಧ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ  ಪ್ರಶಾಂತ್‌ ಅಶೋಕ್‌ ಬುರ್ಗೆ ಅವರು ಆರ್‍‌ಟಿಐ ಅಡಿಯಲ್ಲಿ ಪಡೆದಿರುವ ಮಾಹಿತಿಯಲ್ಲಿ  ಮುದ್ರಾಂಕ ಶುಲ್ಕ ಪಾವತಿಯಾಗದಿರುವ ಸಂಗತಿಯು ಬಯಲಾಗಿದೆ.

 

ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಅನುಸಾರ ರಾಜ್ಯದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಟೋಲ್‌ ಏಜೆನ್ಸಿಗಳು ಮುದ್ರಾಂಕ ಶುಲ್ಕವನ್ನು ಪಾವತಿಸಬೇಕು. ಆದರೆ ಬಹುತೇಕ ಏಜೆನ್ಸಿಗಳು ಮುದ್ರಾಂಕ ಶುಲ್ಕವನ್ನು ಪಾವತಿಸಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗುತ್ತಿದೆ ಎಂದು ಗೊತ್ತಾಗಿದೆ.

 

ಶೇ 0.5 ಕ್ಕಿಂತ 1 ವರ್ಷದ ಕೆಳಗೆ, ಒಂದು ವರ್ಷದಿಂದ 10 ವರ್ಷದವರೆಗೆ ಶೆ. 1, 10ರಿಂದ 20 ವರ್ಷದವರೆಗೆ ಶೆ.2ರಷ್ಟು ಮತ್ತು 20 ರಿಂದ 30 ವರ್ಷದವರೆಗೆ ಶೇ. 3ರಷ್ಟು ಮುದ್ರಾಂಕ ಶುಲ್ಕವನ್ಜು ವಿಧಿಸಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಕ್ಷಮ ಪ್ರಾಧಿಕಾರಗಳೊಂದಿಗೆ ಒಪ್ಪಂದ, ಕರಾರು ಪತ್ರವನ್ನು ಮಾಡಿಕೊಂಡಿವೆ.

 

 

ಆದರೆ ಏಜೆನ್ಸಿಗಳೂ ಮುದ್ರಾಂಕ ಶುಲ್ಕವನ್ನು ಪಾವತಿಸಿಲ್ಲ. ಮುದ್ರಾಂಕ ಶುಲ್ಕವನ್ನು ವಸೂಲು ಮಾಡುವುದು ಸಹ ಸವಾಲಾಗಿದೆ. ಹೀಗಾಗಿ ರಾಜ್ಯ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟವುಂಟಾಗುತ್ತಿದೆ.

 

ಟೋಲ್ ಏಜೆನ್ಸಿಗಳು/ಗುತ್ತಿಗೆದಾರರೊಂದಿಗಿನ ಒಪ್ಪಂದಗಳು ದೆಹಲಿಯಲ್ಲಿ ಕಾರ್ಯಗತಗೊಂಡಿವೆ. ಹೀಗಾಗಿ ದೆಹಲಿಯಲ್ಲಿಯೇ ಮುದ್ರಾಂಕ ಶುಲ್ಕವನ್ನು ಪಾವತಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.

 

ಮೂರು ತಿಂಗಳು ಅಥವಾ ಒಂದು ವರ್ಷದ ಅವಧಿಗೆ ಟೋಲ್‌ ಏಜೆನ್ಸಿಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಈ ಏಜೆನ್ಸಿಗಳು ಭಾರತ ಸರ್ಕಾರದ ಪರವಾಗಿ ಟೋಲ್‌ ಶುಲ್ಕವನ್ನು ಸಂಗ್ರಹಿಸುತ್ತವೆ. ವಸೂಲಿಯಾದ ಶುಲ್ಕವನ್ನು ಭಾರತದ ಏಕೀಕೃತ ನಿಧಿಯಲ್ಲಿ ಠೇವಣಿ ರೂಪದಲ್ಲಿ ಇರಿಸಲಾಗುತ್ತದೆ.

 

ಅದೇ ರೀತಿ ಭಾರತೀಯ ಸ್ಟ್ಯಾಂಪ್ ಕಾಯ್ದೆ, 1899 ರ ಸೆಕ್ಷನ್‌ 3ರ ಪ್ರಕಾರ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡಿದೆ. ಈ ಕುರಿತು ಭಾರತ ಸರ್ಕಾರದೊಂದಿಗೆ ಚರ್ಚಿಸಬಹುದು. ಇತರ ರಾಜ್ಯಗಳು ಸಹ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕು ಎಂದು ಒತ್ತಾಯಿಸುತ್ತಿಲ್ಲ.

 

ಬಿಒಟಿ ರಿಯಾಯಿತಿ ಒಪ್ಪಂದಗಳಿಗೆ ಸಂಬಂಧಿಸಿದಂತೆ, ಬಿಒಟಿ ಒಪ್ಪಂದಗಳು ಮುದ್ರಾಂಕ ಶುಲ್ಕವನ್ನ ಪಾವತಿಸಲು ಬಾಧ್ಯಸ್ಥರಲ್ಲ ಎಂದು 2011ರಲ್ಲೇ ಭಾರತದ ಅಟಾರ್ನಿ ಜನರಲ್‌ ಅವರೂ ಸಹ ಅಭಿಪ್ರಾಯಿಸಿದ್ದಾರೆ ಎಂಬ ಮಾಹಿತಿಯನ್ನು ಸಭೆಗೆ ನೀಡಿರುವುದು ತಿಳಿದು ಬಂದಿದೆ.

 

ಟೋಲ್‌ ಪ್ಲಾಜಾಗಳಿಂದ ಅಂದಾಜು 232 ಕೋಟಿ ರು ಮುದ್ರಾಂಕ ಶುಲ್ಕ ಪಾವತಿಗೆ ಬಾಕಿ ಇದೆ ಎಂದು ನೋಂದಣಿ ಮತ್ತು ಮುದ್ರಾಂಕ ಆಯುಕ್ತರು ಸಭೆಗೆ ಅಂಕಿ ಅಂಶಗಳನ್ನು ಒದಗಿಸಿದ್ದಾರೆ.

 

 

 

ಆದರೂ ಸಹ ಈ ಮೊತ್ತವನ್ನು ನಿಖರವಾಗಿ ಅಂದಾಜಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ಅಂಕಿ ಅಂಶಗಳನ್ನು ಪಡೆಯಬೇಕು. ಇದನ್ನು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯು ಪಡೆಯಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ನಿರ್ದೇಶಿಸಿರುವುದು ಗೊತ್ತಾಗಿದೆ.

 

ಕಳೆದ ಐದು ವರ್ಷಗಳಲ್ಲಿ ಕರ್ನಾಟಕವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹದಲ್ಲಿ ಗಣನೀಯ ಹೆಚ್ಚಳವನ್ನು ಕಂಡಿದೆ. 2019-20 ರಿಂದ 2023-24 ರವರೆಗೆ ಒಟ್ಟು 13,702.61 ಕೋಟಿ ಸಂಗ್ರಹವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ಒದಗಿಸಿತ್ತು.

 

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ 14 ಹೊಸ ಟೋಲ್ ಪ್ಲಾಜಾಗಳನ್ನು ಸ್ಥಾಪಿಸಿದೆ. ಇದರಲ್ಲಿ ಮಾರ್ಚ್ 2023 ರಲ್ಲಿ ಪ್ರಾರಂಭವಾದ ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿಯೂ ಸೇರಿದೆ.

 

ಕರ್ನಾಟಕದ ಟೋಲ್ ಸಂಗ್ರಹವು ಪ್ರತಿ ವರ್ಷವೂ ಸ್ಥಿರವಾಗಿ ಬೆಳೆಯುತ್ತಿದೆ. 2019-20ರ ಆರ್ಥಿಕ ವರ್ಷದಲ್ಲಿ, ರಾಜ್ಯವು ₹1,881.99 ಕೋಟಿ ಟೋಲ್ ಶುಲ್ಕವನ್ನು ಸಂಗ್ರಹಿಸಿತ್ತು, ಇದು 2020-21ರಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದಿಂದಾಗಿ ₹1,866.39 ಕೋಟಿಗೆ ಸ್ವಲ್ಪ ಕಡಿಮೆಯಾಯಿತು.ಕೋವಿಡ್‌ ನಿಯಂತ್ರಣಕ್ಕೆ ಬಂದ ನಂತರ ಟೋಲ್‌ ಸಂಗ್ರಹದಲ್ಲಿ ಹೆಚ್ಚಿನ ಪ್ರಗತಿಯಾಗಿದೆ. 2021-22ರಲ್ಲಿ ₹2,351.26 ಕೋಟಿ, 2022-23ರಲ್ಲಿ ₹3,516.79 ಕೋಟಿ ಮತ್ತು 2023-24ರಲ್ಲಿ ದಾಖಲೆಯ ₹4,086.18 ಕೋಟಿ ತಲುಪಿತ್ತು.

 

ಜನವರಿ 31, 2025 ರ ಹೊತ್ತಿಗೆ ಕರ್ನಾಟಕವು ತನ್ನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಸ್ತುತ 58 ಟೋಲ್ ಪ್ಲಾಜಾಗಳನ್ನು ಹೊಂದಿದೆ. ಕಳೆದ ಮೂರು ವರ್ಷಗಳಲ್ಲಿ, ರಾಜ್ಯವು 14 ಹೊಸ ಟೋಲ್ ಪ್ಲಾಜಾಗಳನ್ನು ಸೇರಿಸಿದೆ.

 

2019ರಿಂದ 2024ರವರೆಗೆ ಒಟ್ಟಾರೆ 13,702.61 ಕೋಟಿ ರು ಮೊತ್ತದ ಟೋಲ್‌ ಸಂಗ್ರಹವಾಗಿದೆ. 2019-2020ರಲ್ಲಿ 1,881.99 ಕೋಟಿ 2020-2021ರಲ್ಲಿ 1,866.39 ಕೋಟಿ 2021-2022ರಲ್ಲಿ 2,351.26 ಕೋಟಿ, 2022-2023ರಲ್ಲಿ 3,516.79 ಕೋಟಿ, 2023-2024ರಲ್ಲಿ 4,086.18 ಕೋಟಿ ರ ಸಂಗ್ರಹಿಸಿದೆ.

 

ಕರ್ನಾಟಕದಲ್ಲಿ ಒಟ್ಟು 58 ಟೋಲ್‌ ಪ್ಲಾಜಾಗಳು ಕಾರ್ಯನಿರ್ವಹಿಸುತ್ತಿವೆ. ಕಾರ್ಯಾಚರಣೆಯ ಟೋಲ್ ಪ್ಲಾಜಾಗಳು (ಜನವರಿ 31, 2025 ರಂತೆ) 58 ಕಳೆದ ಮೂರು ವರ್ಷಗಳಲ್ಲಿ 14 ಹೊಸ ಟೋಲ್ ಪ್ಲಾಜಾಗಳು ಸೇರ್ಪಡೆಯಾಗಿವೆ.

 

ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು, 2008 ರ ನಿಬಂಧನೆಯ ಪ್ರಕಾರ, ರಿಯಾಯಿತಿ ಒಪ್ಪಂದದ ಪ್ರಕಾರ ಸೂಚಿಸಲಾದ ಶುಲ್ಕವನ್ನು ರಿಯಾಯಿತಿ ಅವಧಿಯ ಅಂತ್ಯದವರೆಗೆ ವಿಧಿಸಬಹುದು. ರಿಯಾಯಿತಿ ಅವಧಿ ಮುಗಿದ ನಂತರ, ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008 ರ ನಿಯಮ 4 ರ ಉಪ-ನಿಯಮ (2) ರ ಅಡಿಯಲ್ಲಿ ಶುಲ್ಕವನ್ನು ನಿರ್ದಿಷ್ಟಪಡಿಸಿದೆ.

 

ಈ ಶುಲ್ಕದ ಪ್ರಕಾರ, ರಾಷ್ಟ್ರೀಯ ಹೆದ್ದಾರಿ, ಸೇತುವೆ, ಸುರಂಗ ಅಥವಾ ಬೈಪಾಸ್‌ನ ಅಂತಹ ವಿಭಾಗದ ವರ್ಗಾವಣೆಯ ದಿನಾಂಕದಂದು, ವಾರ್ಷಿಕವಾಗಿ ಪರಿಷ್ಕರಿಸಬೇಕಾದ ದಿನಾಂಕದಂದು ಕೇಂದ್ರ ಸರ್ಕಾರ ಅಥವಾ ಕಾರ್ಯನಿರ್ವಾಹಕ ಪ್ರಾಧಿಕಾರವು ಶುಲ್ಕವನ್ನು ಸಂಗ್ರಹಿಸುತ್ತದೆ. ಸಾರ್ವಜನಿಕ ಅನುದಾನಿತ ಯೋಜನೆಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಹೆದ್ದಾರಿ, ಸೇತುವೆ, ಸುರಂಗ ಅಥವಾ ಬೈಪಾಸ್‌ನ ಅಂತಹ ವಿಭಾಗಕ್ಕೆ, ಸಂದರ್ಭಾನುಸಾರ, ಈ ನಿಯಮಗಳಿಗೆ ಅನುಸಾರವಾಗಿ ವಾರ್ಷಿಕವಾಗಿ ಪರಿಷ್ಕರಿಸಬೇಕಾದ ಶುಲ್ಕವನ್ನು ಶಾಶ್ವತವಾಗಿ ಸಂಗ್ರಹಕ್ಕೆ ಅವಕಾಶ ನೀಡಿದೆ.

 

ರಾಜ್ಯದಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳ ವಿವರಗಳು, ಸಂಗ್ರಹಿಸಿದ ಮೊತ್ತಗಳು, ಒಪ್ಪಂದದ ಅವಧಿ ಮತ್ತು ಏಜೆನ್ಸಿ ವಿವರಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಒದಗಿಸಬೇಕು. ಮುದ್ರಾಂಕ ಶುಲ್ಕ ಸಂಗ್ರಹಕ್ಕೆ ಆಧಾರವನ್ನು ರೂಪಿಸಬೇಕು. ಕಂದಾಯ ಇಲಾಖೆಗೆ ನಿರ್ದಿಷ್ಟ ಬಾಕಿ ಪಾವತಿ ವಿವರಗಳನ್ನು ಒದಗಿಸಬೇಕು. ರಾಜ್ಯ ನಿಯಮಗಳು, ನಿಬಂಧನೆಗಳು ಮತ್ತು ಪಾವತಿಸಬೇಕಾದ ಮೊತ್ತಗಳನ್ನು ಉಲ್ಲೇಖಿಸಬೇಕು. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮತ್ತು ಕೇಂಧ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರವನ್ನು ಬರೆಯಬೇಕು ಎಂದು ಸಭೆಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.

 

ರಾಜ್ಯಾದ್ಯಂತ ಒಟ್ಟಾರೆ ಟೋಲ್‌ ಪ್ಲಾಜಾ ನಡೆಸುವ 53 ಖಾಸಗಿ ಏಜೆನ್ಸಿಗಳಿವೆ. ಈ ಏಜೆನ್ಸಿಗಳಿಂದ ಮುದ್ರಾಂಕ ಶುಲ್ಕವನ್ನು ವಸೂಲಿ ಮಾಡಿದರೆ ಅಂದಾಜು 500 ಕೋಟಿಗೂ ಹೆಚ್ಚು ಆದಾಯ ಬರಲಿದೆ. ಆದರೆ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್‌ಗಳನ್ನು ನಿರ್ವಹಿಸುತ್ತಿರುವ ಖಾಸಗಿ ಏಜೆನ್ಸಿಗಳು ದೀರ್ಘಾವಧಿಯಿಂದ ಮುದ್ರಾಂಕ ಶುಲ್ಕವನ್ನು ಪಾವತಿಸುತ್ತಿಲ್ಲ.

 

ಗುತ್ತಿಗೆದಾರನು ಸ್ಟ್ಯಾಂಪ್ ಡ್ಯೂಟಿಗಾಗಿ ಎನ್​ಹೆಚ್​ಎಐನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಲ್ಲಿ ನಮೂದಿಸಿದ ಮೊತ್ತದ ಶೇ1ರಷ್ಟನ್ನು (ಒಪ್ಪಂದ ಪಡೆಯಲು ಉಲ್ಲೇಖಿಸಿದ ಮೊತ್ತ) ಇಲಾಖೆಗೆ ಪಾವತಿಸಬೇಕು. ಇದು ಆರ್ಟಿಕಲ್ 32 (A) (i) ಅಡಿಯಲ್ಲಿ ಕರ್ನಾಟಕ ಸ್ಟ್ಯಾಂಪ್ ಆಕ್ಟ್ 1957 ಗೆ ಅನುಗುಣವಾಗಿದೆ. ಆದರೆ, ಈವರೆಗೆ ಇದು ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ.

 

ಏಜೆನ್ಸಿಗಳು ಬಾಕಿ ಉಳಿಸಿಕೊಂಡಿರುವ ಮುದ್ರಾಂಕ ಶುಲ್ಕವನ್ನು ಪಾವತಿಸುವಂತೆ ಕರ್ನಾಟಕದ ಮುದ್ರಾಂಕ ಮತ್ತು ನೋಂದಣಿಯ ಹಿಂದಿನ ಆಯುಕ್ತರಾದ ಬಿ ಆರ್ ಮಮತಾ ಅವರು ಟೋಲ್ ಗೇಟ್ ಆಪರೇಟಿಂಗ್ ಫರ್ಮ್‌ಗಳಿಗೆ ಹಾಗೂ ಎನ್‌ಎಚ್‌ಎಐಗೆ ಪತ್ರ ಬರೆದಿದ್ದರು.

 

ಕೆಲವು ಏಜೆನ್ಸಿಗಳು ಅಲ್ಪ ಮೊತ್ತದ ಮುದ್ರಾಂಕ ಶುಲ್ಕವನ್ನು ಪಾವತಿಸಿವೆ. ಆದರೆ ಇದು ಒಪ್ಪಂದದಲ್ಲಿ ಉಲ್ಲೇಖಿಸಿದ ಮೊತ್ತಕ್ಕಿಂತ ಇದು ಕಡಿಮೆಯಾಗಿತ್ತು. ಇನ್ನು ಬಾಕಿ ಉಳಿಸಿಕೊಂಡಿರುವ ಏಜೆನ್ಸಿಗಳಿಂದ ಮುದ್ರಾಂಕ ಶುಲ್ಕವನ್ನು ಸಂಗ್ರಹಿಸುವಂತೆ ಜಿಲ್ಲೆಗಳಲ್ಲಿರುವ ಇಲಾಖೆಯ ಕಚೇರಿಗಳಿಗೆ ಸೂಚಿಸಿದ್ದರು.

SUPPORT THE FILE

Latest News

Related Posts