ಬೆಂಗಳೂರು; ಕೊರೊನಾ ವೈರಸ್ ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆ ಏರುಮುಖವಾಗುತ್ತಿರುವ ಆತಂಕದ ನಡುವೆಯೇ ಕರ್ನಾಟಕ ಇದೀಗ ಉತ್ತರ ಪ್ರದೇಶವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ದೇಶದ 7 ನಗರಗಳಲ್ಲಿ ಬೆಂಗಳೂರು ನಗರ ಸೇರ್ಪಡೆಯಾಗಿದ್ದರೂ ವೆಂಟಿಲೇಟರ್‌ಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಿಕೊಂಡಿಲ್ಲ. ತಪಾಸಣೆಗಳೂ ನಿರೀಕ್ಷಿತ ಮಟ್ಟದಲ್ಲಾಗುತ್ತಿಲ್ಲ.
ಹಾಗೆಯೇ ದೇಶದ ಒಟ್ಟು 25 ಹಾಟ್‌ಸ್ಪಾಟ್‌ಗಳ ಪಟ್ಟಿಯಲ್ಲಿ ಬೆಂಗಳೂರು, ಮೈಸೂರು ಮತ್ತು ಚಿಕ್ಕಬಳ್ಳಾಪುರವೂ ಸೇರಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಕಳೆದ 14 ದಿನದಲ್ಲಿ ಹಾಟ್‌ಸ್ಪಾಟ್ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರವೂ ಕಾಣಿಸಿಕೊಂಡಿರುವುದು ಇನ್ನಷ್ಟು ಕಳವಳಕ್ಕೆ ಕಾರಣವಾಗಿದೆ. ಕೋವಿಡ್ -19ನ್ನು ಎದುರಿಸುವ ಬಗ್ಗೆ ಬಹುದೊಡ್ಡಮಟ್ಟದ ಸಿದ್ಧತೆಗಳು ನಡೆಯದಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗುತ್ತಿದೆ.
ಕೋವಿಡ್-19ರ ಸದ್ಯದ ಸ್ಥಿತಿಗತಿ ಕುರಿತು ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಮಾರ್ಚ್ 31ರ ಅಂತ್ಯಕ್ಕೆ ಬಿಡುಗಡೆ ಮಾಡಿರುವ ದೇಶದ ರಾಜ್ಯಗಳ ಸ್ಥಿತಿಗತಿ ವರದಿ ಕೊರೊನಾ ಪ್ರಕರಣಗಳ ಸಂಖ್ಯೆ ಹೇಗೆ ಏರುಮುಖವಾಗುತ್ತಿವೆ ಎಂದು ವಿವರಿಸಿವೆ.
ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ದೇಶದ 7 ನಗರಗಳಲ್ಲಿ ಬೆಂಗಳೂರು ನಗರವೂ ಸೇರಿದೆ. ಇದೇ ಪಟ್ಟಿಯಲ್ಲಿ ಮುಂಬೈ, ಕಾಸರಗೋಡು, ಹೈದರಾಬಾದ್, ಕಣ್ಣೂರು, ಪುಣೆ, ಜಿ ಬಿ ನಗರವೂ ಇದೆ. ಈ ನಗರಗಳಲ್ಲಿ ಕನಿಷ್ಠ 30 ಪ್ರಕರಣಗಳು ದೃಢಪಟ್ಟಿರುವುದು ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ವರದಿಯಿಂದ ತಿಳಿದು ಬಂದಿದೆ.
ಮಾರ್ಚ್ 9ರಿಂದ ಮಾರ್ಚ್ 31ರ ಅಂತ್ಯಕ್ಕೆ ರಾಜ್ಯದಲ್ಲಿ ಒಟ್ಟು 105 ಪ್ರಕರಣಗಳು ದೃಢಪಟ್ಟಿವೆ. ಉತ್ತರ ಪ್ರದೇಶದಲ್ಲಿ ಈವರೆವಿಗೆ ಒಟ್ಟು 103 ಪ್ರಕರಣಗಳಿವೆ. ದೇಶದಲ್ಲಿನ ಕೋವಿಡ್-19 ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ದೆಹಲಿ, ಜಮ್ಮು ಕಾಶ್ಮೀರ, ತೆಲಂಗಾಣ, ಗುಜರಾತ್, ತಮಿಳುನಾಡು, ಪಂಜಾಬ್ ಸೇರಿ ಒಟ್ಟು 10 ರಾಜ್ಯಗಳು ಒಟ್ಟು ಸರಾಸರಿಯಲ್ಲಿ ಶೇ.80ರಷ್ಟು ಪ್ರಕರಣಗಳಿರುವುದು ಗೊತ್ತಾಗಿದೆ.
ಮಾರ್ಚ್ 31ರ ಅಂತ್ಯಕ್ಕೆ ಬೆಂಗಳೂರು ನಗರದಲ್ಲಿ 45 ಪ್ರಕರಣಗಳು, ಮೈಸೂರಿನಲ್ಲಿ 14 ಮತ್ತು ಚಿಕ್ಕಬಳ್ಳಾಪುರದಲ್ಲಿ 9 ಪ್ರಕರಣಗಳು ದೃಢಪಟ್ಟಿವೆ. ಕಳೆದ 14 ದಿನದಲ್ಲಿ ಬೆಂಗಳೂರು ನಗರದಲ್ಲಿ ದಾಖಲಾಗಿರುವ ಒಟ್ಟು ಪ್ರಕರಣಗಳಲ್ಲಿ 23 ಪ್ರಕರಣಗಳು ದೃಢಪಟ್ಟಿವೆ. ಪ್ರಕರಣಗಳನ್ನು ತಡೆಗಟ್ಟಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆಯಾದರೂ ವಲಸೆ ಮತ್ತು ಕಟ್ಟಡ ಕಾರ್ಮಿಕರ ಆಹಾರ ಭದ್ರತೆ ಸೇರಿದಂತೆ ಇನ್ನಿತರೆ ಸುರಕ್ಷಾ ಕ್ರಮಗಳ ಬಗ್ಗೆ ವಿವರಗಳನ್ನು ನಮೂದಿಸದಿರುವುದು ಅಚ್ಚರಿ ಮೂಡಿಸಿದೆ.
ಜಮ್ಮು ಕಾಶ್ಮೀರದಲ್ಲಿನ ಕಟ್ಟಡ ಕಾರ್ಮಿಕರಿಗೆ 17.65 ಕೋಟಿ ರು. ಬಿಡುಗಡೆಯಾಗಿದೆ. ಕೇರಳದಲ್ಲಿ ವಲಸಿಗರಿಗೆ 5,000 ಶಿಬಿರಗಳನ್ನು ತೆರೆದಿದೆ. ಆದರೆ ಕರ್ನಾಟಕದಲ್ಲಿ ಇಂತಹ ಪ್ರಕರಣಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಸೋಜಿಗಕ್ಕೆ ಕಾರಣವಾಗಿದೆ.
ಇನ್ನು 45 ಪ್ರಕರಣಗಳು ದೃಢಪಟ್ಟಿರುವ ಬೆಂಗಳೂರು ನಗರ ದೇಶದ 7 ಹಾಟ್‌ಸ್ಪಾಟ್‌ನಲ್ಲಿ ಕಾಣಿಸಿಕೊಂಡಿದ್ದರೂ ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ 20 ರ ಗಡಿ ದಾಟಿಲ್ಲ. ಆದರೆ ಗುಜರಾತ್‌ನ ಅಹಮದಾಬಾದ್‌ನಲ್ಲಿ 300 ಮತ್ತು ನೆರೆಯ ಹೈದರಾಬಾದ್‌ನಲ್ಲಿ 200 ವೆಂಟಿಲೇಟರ್‌ಗಳಿವೆ ಎಂದು ವರದಿ ಬಹಿರಂಗಪಡಿಸಿದೆ.
ಸೋಂಕಿಗೆ ತುತ್ತಾಗಿರಬಹುದಾದ ಶಂಕಿತರನ್ನು ಪ್ರತ್ಯೇಕಿಸುವ (Quarantine) ವ್ಯವಸ್ಥೆಯನ್ನು ಮನೆಯಲ್ಲಿಯೇ ಕಲ್ಪಿಸಿ ಅವರ ಚಲನ ವಲನಗಳ ಮೇಲೆ ನಿಗಾವಹಿಸಲು ತಂತ್ರಜ್ಞಾನ ಅಳವಡಿಸಿಕೊಂಡಿದೆಯಾದರೂ ಈ ಮನೆಗಳಿಂದ ತ್ಯಾಜ್ಯ ವಿಲೇವಾರಿ ತಂದೊಡ್ಡಿರುವ ಬಹುದೊಡ್ಡ ಸವಾಲನ್ನು ಹೇಗೆ ಎದುರಿಸಲಿದೆ ಎಂಬ ಪ್ರಶ್ನೆಯೂ ಎದುರಾಗಿದೆ.
‘ಈ ತ್ಯಾಜ್ಯ ವಿಲೇವಾರಿಯನ್ನು ಆಸ್ಪತ್ರೆಗಳ ಬಯೋ ಮೆಡಿಕಲ್ ವೇಸ್ಟ್ ವಿಲೇವಾರಿ ಮಾಡಿದಂತೆ ತ್ಯಾಜ್ಯ ವಿಲೇವಾರಿ ಮಾಡಬೇಕಾದದ್ದು ಮತ್ತು ಅದಕ್ಕೆ ಸೂಕ್ತವಾದಂತಹ ವ್ಯವಸ್ಥೆ ಕಲ್ಪಿಸಬೇಕಾದಂತದ್ದು ಅಗತ್ಯ. ಈ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದಿದ್ದರೆ ಮುಂಬರುವ ದಿನಗಳಲ್ಲಿ ಮಹಾಮಾರಿಯ ಸೋಂಕು ಇಲ್ಲಿಂದಲೇ ಹರಡುವ ಸಾಧ್ಯತೆಗಳು ಇಲ್ಲದಿಲ್ಲ,’ ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್ ಕೆ ಪಾಟೀಲ್ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು, ಶಂಕಿತರ ತಪಾಸಣೆಗಳು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಶೇ.85ರಷ್ಟು ನಿಖರ ಫಲಿತಾಂಶ ಮತ್ತು 10 ನಿಮಿಷದಲ್ಲಿ ವರದಿ ಕೈಗೆ ಸಿಗುವ ತಪಾಸಣೆ ಕಿಟ್‌ಗಳನ್ನು ಖರೀದಿಸುವ ಗೋಜಿಗೆ ಹೋಗದ ಸರ್ಕಾರ ಇನ್ನೂ ವಿಳಂಬ ಧೋರಣೆ ಅನುಸರಿಸುತ್ತಿದೆ. ಐಸಿಎಂಆರ್ ಅನುಮೋದಿಸಿರುವ ಪುಣೆಯ ಕಿಟ್ ಗಳನ್ನು ತರಿಸಿಕೊಂಡು ಸಾಮೂಹಿಕ ತಪಾಸಣೆಗಳನ್ನು ನಡೆಸುವುದರತ್ತ ಇನ್ನೂ ಗಮನಹರಿಸಿಲ್ಲ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದರಂತೆ (ಲ್ಯಾಬೊರೇಟರಿ) ಪ್ರಯೋಗಾಲಯ ಸ್ಥಾಪಿಸುವ ಅನಿವಾರ್ಯತೆ ಇದ್ದರೂ ರಾಜ್ಯ ಸರ್ಕಾರ ಇನ್ನೂ ಕಾರ್ಯೋನ್ಮುಖವಾಗಿಲ್ಲ.’ಗಡಿ ಜಿಲ್ಲೆ ಬೆಳಗಾವಿ ವಿಭಾಗದಲ್ಲಿ ಒಂದೂ ಪ್ರಯೋಗಾಲಯ ಇಲ್ಲ. ಎಲ್ಲಾ ತಪಾಸಣೆಗಳಿಗೂ ಬೆಂಗಳೂರಿಗೆ ಬರಬೇಕು. ಒಂದು ತಿಂಗಳ ನಂತರವೂ ಬೆಳಗಾವಿ/ಹುಬ್ಬಳ್ಳಿಯಲ್ಲಿ ಪ್ರಯೋಗಾಲಯ ಇಲ್ಲವೆಂದರೆ ಹೇಗೆ ಎಂದು ಎಚ್ ಕೆ ಪಾಟೀಲ್ ಅವರು ಪ್ರಶ್ನಿಸಿದ್ದಾರೆ.