ಗಡಿ ಜಿಲ್ಲೆಯಿಂದ ಆರ್‍‌ಐಡಿಎಫ್‌ ಅನುದಾನ ಹಿಂಪಡೆದ ಸರ್ಕಾರ; ನಬಾರ್ಡ್‌ ಕೊಟ್ಟಿದ್ದನ್ನು ಕಿತ್ತುಕೊಂಡಿದ್ದೇಕೆ?

ಬೆಂಗಳೂರು; ನಬಾರ್ಡ್‌ ಸಂಸ್ಥೆಯು ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿ (ಆರ್‍‌ಐಡಿಎಫ್‌) ಅಡಿಯಲ್ಲಿ ಗಡಿ ಜಿಲ್ಲೆ ಚಾಮರಾಜನಗರಕ್ಕೆ ನೀಡಿದ್ದ 60.87 ಲಕ್ಷ ರು.ಗಳನ್ನು ಆರ್ಥಿಕ ಇಲಾಖೆಯು ಹಿಂಪಡೆದಿದೆ.

 

ಈಚೆಗಷ್ಟೇ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗಡಿ ಜಿಲ್ಲೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಳ್ಳುವ ಬದಲು ನನ್ನ ಅಧಿಕಾರ ಮತ್ತಷ್ಟು ಗಟ್ಟಿಯಾಗುತ್ತಿದೆ. ಎರಡು ಬಾರಿ ಮುಖ್ಯಮಂತ್ರಿ ಅವಧಿಯಲ್ಲಿ 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ, ಅಭಿವೃದ್ದಿಗೆ ಹೆಚ್ಚಿನ ಅನುದಾನ ನೀಡಲಾಗುವುದು  ಎಂದು  ಹೇಳಿಕೆ ನೀಡಿದ್ದರು.

 

ಆದರೀಗ ಇದೇ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಧಿಯಡಿಯಲ್ಲಿ ಮಂಜೂರಾಗಿದ್ದ  ಅನುದಾನವನ್ನೂ ಸಿದ್ದರಾಮಯ್ಯ ಅವರು ಸಚಿವರೂ ಆಗಿರುವ ಆರ್ಥಿಕ ಇಲಾಖೆಯು ಹಿಂಪಡೆದಿರುವುದು ಮುನ್ನೆಲೆಗೆ ಬಂದಿದೆ.

 

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ಸಂಬಂಧಿಸಿದಂತೆ 2024-25ನೇ ಸಾಲಿನ ಪ್ರಗತಿ ಕುರಿತು ಅಧಿಕಾರಿಗಳ ಸಭೆ ಇತ್ತೀಚೆಗಷ್ಟೇ ನಡೆದಿತ್ತು. ಈ ವೇಳೆ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲೆಗೆ ನೀಡಿದ್ದ ಅನುದಾನವನ್ನು ಆರ್ಥಿಕ ಇಲಾಖೆಯು ಹಿಂಪಡೆದಿರುವ ಸಂಗತಿ ಕುರಿತು ಚರ್ಚೆಯಾಗಿದೆ. ಆದರೆ ಯಾವ ಕಾರಣಕ್ಕೆ ಅನುದಾನವನ್ನು ಹಿಂಪಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

 

ಇದಕ್ಕೆ ಸಂಬಂಧಿಸಿದ ಕೆಲ ದಾಖಲೆಗಳು ಮತ್ತು ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.
ಆರ್‍‌ಐಡಿಎಫ್‌ ಅನುದಾನದ ಅಡಿಯಲ್ಲಿ 2024-25ನೇ ಸಾಲಿಗೆ ನಬಾರ್ಡ್‌ ಒಟ್ಟಾರೆ 366.089 ಲಕ್ಷ ರು.ಗಳ ಅನುದಾನವನ್ನು ಬಿಡುಗಡೆ ಮಾಡಿತ್ತು. ಚಾಮರಾಜನಗರ, ಕೋಲಾರ, ಚಿಕ್ಕಮಗಳೂರು, ದಾವಣಗೆರೆ ಮತ್ತು ಕೊಪ್ಪಳ ಸೇರಿ 5 ಜಿಲ್ಲೆಗಳಿಗೆ ಯೋಜನಾ ಬಾಕಿ ಅನುದಾನ ಬಿಡುಗಡೆ ಮಾಡಿತ್ತು.

 

‘ಆದರೆ ಆರ್ಥಿಕ ಇಲಾಖೆರವರು 60.87 ಲಕ್ಷ ರು. ಅನುದಾನವನ್ನು ಚಾಮರಾಜನಗರ ಜಿಲ್ಲೆಯಿಂದ ಹಿಂಪಡೆದಿರುತ್ತಾರೆ. ಆದ್ದರಿಂದ ಯೋಜನಾ ಮೊತ್ತದ ಬಾಕಿ ಅನುದಾನ 305.21 ಲಕ್ಷ ರು.ಗಳ ಲಭ್ಯತೆ ಇರುತ್ತದೆ,’ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿರುವುದು ಗೊತ್ತಾಗಿದೆ.

 

 

ನಬಾರ್ಡ್‌ ನೀಡಿದ್ದ ಒಟ್ಟು ಅನುದಾನದ ಪೈಕಿ 176.07 ಲಕ್ಷ ರು. ಖರ್ಚಾಗಿದೆ. ಈ ಸಂಬಂಧ 2024ರ ನವೆಂಬರ್‍‌ 30ರ ಅಂತ್ಯಕ್ಕೆ 136.38 ಲಕ್ಷ ರು ಗಳು ಕ್ಲೈಮ್‌ ಸಲ್ಲಿಕೆಯಾಗಿವೆ. ಕ್ಲೈಮ್ಸ್‌ ಸಲ್ಲಿಸಬೇಕಾದ ಅನುದಾನದ ಬಾಕಿ 39.69 ಲಕ್ಷ ರು. ಬಾಕಿ ಇರುವುದು ತಿಳಿದು ಬಂದಿದೆ.

 

ಈ ಯೋಜನೆಯಡಿ ಬೆಳಗಾವಿ, ಹಾಸನ, ಹಾವೇರಿ, ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಯೋಜನೆಗಳು ಮುಕ್ತಾಯಗೊಂಡಿವೆ. ಹಾಸನ, ಹಾವೇರಿ, ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪಿಸಿಆರ್‍‌ ವರದಿಗಳನ್ನು ನಬಾರ್ಡ್‌ ಸಂಸ್ಥೆಗೆ ಸಲ್ಲಿಸಿದೆ. ಬೆಳಗಾವಿ ಜಿಲ್ಲೆಯ ಪಿಸಿಆರ್‍‌ ವರದಿ ವರದಿ ಸಲ್ಲಿಸಲು ಬಾಕಿ ಇರುವುದು ಗೊತ್ತಾಗಿದೆ.
ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಬಿಡುಗಡೆ ಮಾಡಿದ್ದ 90.945 ಲಕ್ಷ ರು.ಗಳ ಪೈಕಿ 60.94 ಲಕ್ಷ ರುಗ.ಳನ್ನು ಸರ್ಕಾರಕ್ಕೆ ವಾಪಸ್‌ ನೀಡಿದೆ.

 

 

ಅದೇ ರೀತಿ ಕೃಷಿ ಇಲಾಖೆಗೆ 3.05 ಕೋಟಿ ರು. ಹಂಚಿಕೆಯಾಗಿತ್ತು. 2025ರ ಜನವರಿ 2ರ ಅಂತ್ಯಕ್ಕೆ 2.2 ಕೋಟಿ ಬಿಡುಗಡೆಯಾಗಿದೆ. ಅದೇ ರೀತಿ ಜಲಾನಯನ ಅಭಿವೃದ್ಧಿ ಇಲಾಖೆಗೆ 24.83 ಕೋಟಿ ರು. ಅನುದಾನದ ಪೈಕಿ 2025ರ ಜನವರಿ 2ರ ಅಂತ್ಯಕ್ಕೆ ಕೇವಲ 3.66 ಕೋಟಿ ರು ಮಾತ್ರ ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನೂ 21.16 ಕೋಟಿ ರು ಬಾಕಿ ಇರುವುದು ತಿಳಿದು ಬಂದಿದೆ.

 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ 13.22 ಕೋಟಿ ರು ಪೈಕಿ 3.3 ಕೋಟಿ ರು. ಬಿಡುಗಡೆಯಾಗಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ 5.35 ಕೋಟಿ ರು ಅನುದಾನ ಹಂಚಿಕೆಯಾಗಿದೆಯಾದರೂ 2025ರ ಜನವರಿ 2ರ ಅಂತ್ಯಕ್ಕೆ ಬಿಡಿಗಾಸೂ ಬಂದಿಲ್ಲ. ರಾಯಚೂರು ಕೃಷಿ ವಿಶ್ವವಿದ್ಯಾಲಯಕ್ಕೆ 10.00 ಕೋಟಿ ರು. 5 ಕೋಟಿ ರು ಬಿಡುಗಡೆಯಾಗಿದೆ. ಅದೇ ರೀತಿ ಶಿವಮೊಗ್ಗದ ಕೃಷಿ ವಿಶ್ವವಿದ್ಯಾಲಯಕ್ಕೆ 15.55 ಕೋಟಿ ರು ಅನುದಾನದ ಪೈಕಿ 7.7 ಕೋಟಿ ರು. ಬಿಡುಗಡೆಯಾಗಿದೆ.

 

 

ಒಟ್ಟಾರೆ 72 ಕೋಟಿ ರು ಅನುದಾನದ ಪೈಕಿ 2025ರ ಜನವರಿ 2ರ ಅಂತ್ಯಕ್ಕೆ 22.03 ಕೋಟಿ ರು ಮಾತ್ರ ಬಿಡುಗಡೆಯಾಗಿದೆ. ಬಿಡುಗಡೆಗೆ ಇನ್ನು 49.97 ಕೋಟಿ ರು. ಬಾಕಿ ಇರುವುದು ಗೊತ್ತಾಗಿದೆ.

 

ಹಾಗೆಯೇ ಚಿಕ್ಕಮಗಳೂರು ಕಡೂರು ತಾಲೂಕಿಗೆ 90.94 ಲಕ್ಷ ರು. ಬಿಡುಗಡೆಯಾಗಿತ್ತು. ಈ ಪೈಕಿ ನಯಾಪೈಸೆಯನ್ನೂ ಖರ್ಚು ಮಾಡಿಲ್ಲ. ವೆಚ್ಚಕ್ಕೆ 90.94 ಲಕ್ಷ ರು. ಬಾಕಿ ಇದೆ. ಬದ್ಧತಾ ವೆಚ್ಚ 9.86 ಲಕ್ಷ ಹೊರತುಪಡಿಸಿ ಉಳಿದ 60.94 ಲಕ್ಷ ರು.ಗಳನ್ನು ಸರ್ಕಾರಕ್ಕೆ ವಾಪಸ್‌ ನೀಡಲು ಕೋರಿರುವುದು ತಿಳಿದು ಬಂದಿದೆ.

 

ಕೋಲಾರದ ಮುಳಬಾಗಿಲು ತಾಲೂಕಿಗೆ ಬಿಡುಗಡೆಯಾಗಿದ್ದ 59.53 ಲಕ್ಷ ರು. ಅನುದಾನದ ಪೈಕಿ 43.73 ಲಕ್ಷ ರು. ಖರ್ಚಾಗಿದೆ. ವೆಚ್ಚ ಮಾಡಲು ಇನ್ನೂ 15.80 ಲಕ್ಷ ರು. ಬಾಕಿ ಉಳಿಸಿಕೊಂಡಿದೆ. ಈ ಅನುದಾನವನ್ನು 10 ಗೋಕಟ್ಟೆಗಳನ್ನು ನಿರ್ಮಾಣಕ್ಕೆ ಬಳಸಿಕೊಂಡಿದೆ.

 

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿಗೆ 59.65 ಲಕ್ಷ ರು. ಅನುದಾನ ಬಿಡುಗಡೆಯಾಗಿದೆ. ಈ ಪೈಕಿ 58.65 ಲಕ್ಷ ರು ಖರ್ಚಾಗಿದೆ. ವೆಚ್ಚಕ್ಕೆ 1.00 ಲಕ್ಷ ರು. ಬಾಕಿ ಉಳಿಸಿಕೊಂಡಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಿ ತಾಲೂಕಿಗೆ 91.51 ಲಕ್ಷ ರು. ಅನುದಾನ ಬಿಡುಗಡೆಯಾಗಿತ್ತು. ಈ ಪೈಕಿ 70.16 ಲಕ್ಷ ರು. ಖರ್ಚಾಗಿದೆ. ವೆಚ್ಚಕ್ಕೆ 21.35 ಲಕ್ಷ ರು. ಬಾಕಿ ಇರಿಸಿಕೊಂಡಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿಗೆ ಬಿಡುಗಡೆಯಾಗಿದ್ದ 3.55 ಲಕ್ಷ ರು. ಪೈಕಿ 3.53 ಲಕ್ಷ ರು. ಖರ್ಚಾಗಿದೆ.

 

ಒಟ್ಟಾರೆ ಈ ಐದು ಜಿಲ್ಲೆಗಳಿಗೆ 305.21 ಲಕ್ಷ ರು. ಬಿಡುಗಡೆಯಾಗಿದ್ದ ಅನುದಾನದ ಪೈಕಿ 176.02 ಲಕ್ಷ ರು. ಖರ್ಚಾಗಿದೆ. ವೆಚ್ಚ ಮಾಡಲು 129.13 ಲಕ್ಷ ರು. ಬಾಕಿ ಇದೆ.

SUPPORT THE FILE

Latest News

Related Posts