ಬೆಂಗಳೂರು; ಹಾಸನ ಜಿಲ್ಲಾ ಬಿಜೆಪಿ ಮುಖಂಡ ಎಂದು ಹೇಳಿಕೊಂಡಿದ್ದ ನಾಗೇಶ್ ಎಂಬಾತ ಜಾತಿ ಧರ್ಮ, ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ಕೋಮುಗಲಭೆ ಸೃಷ್ಟಿಗೆ ಕಾರಣವಾಗುವಂತಹ ಕೃತ್ಯ ಎಸಗಿರುವುದು ಪೊಲೀಸ್ ತನಿಖೆಯಲ್ಲಿ ದೃಢಪಟ್ಟಿದೆ.
ಈ ಸಂಬಂಧ ಹಾಸನ ಜಿಲ್ಲೆಯ ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಾಗೇಶ್ ಎಂಬಾತನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಗೃಹ ಇಲಾಖೆಯು ಪೂರ್ವಾನುಮತಿ ನೀಡಿದೆ.
2025ರ ಜನವರಿ 2ರಂದೇ ಈ ಕುರಿತು ಆದೇಶ (ಸಂಖ್ಯೆ; ಹೆಚ್ ಡಿ 153 ಎಮ್‌ಹೆಚ್‌ಬಿ 2024 ದಿನಾಂಕ 02.01.2025) ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಹರೀಶ ಹುಲುವರೆ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಎಂಬುವರು 2024ರ ಮೇ 19ರಂದು ದೂರು ನೀಡಿದ್ದರು. ಈ ದೂರಿನ ಕುರಿತು ತನಿಖೆ ನಡೆಸಿದ್ದ ಪೊಲೀಸರು, ಅರೋಪಿತನ ವಿರುದ್ಧದ ಆರೋಪಗಳನ್ನು ಸಾಕ್ಷ್ಯಾಧಾರಗಳಿಂದ ಸಾಬೀತುಪಡಿಸಿದ್ದರು.

ಹೀಗಾಗಿ ಈತನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಪೊಲೀಸರು ಅನುಮತಿ ಕೋರಿದ್ದರು. ಪೂರ್ವಾನುಮತಿ ನೀಡುವ ಸಂಬಂಧ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಒಳಾಡಳಿತ ಇಲಾಖೆಯು ಇದೀಗ ಪೂರ್ವಾನುಮತಿ ನೀಡಿ ಆದೇಶ ಹೊರಡಿಸಿದೆ.
‘ಪ್ರಕರಣದ ಆರೋಪಿತನ ವಿರುದ್ಧ ಆರೋಪಿಸಲಾಗಿರುವ ಎಸ್ ಸಿ ಎಸ್ ಟಿ ದೌರ್ಜನ್ಯ ತಡೆ ಕಾಯ್ದೆ 2015ರ ಕಲಂ 153 ಎ(1)(ಎ)(ಬಿ) ಐಪಿಸಿ ಅಡಿಯಲ್ಲಿ ಆರೋಪಕ್ಕೆ ಕಲಂ 196(1)(ಎ) ಸಿಆರ್‍ಪಿಸಿ ಅಡಿ ಆರೋಪಿತನನ್ನು ನ್ಯಾಯಾಲಯದಲ್ಲಿ ಅಭಿಯೋಗಗೊಳಪಡಿಸಲು ಸರ್ಕಾರದ ಪೂರ್ವಾನುಮತಿ ನೀಡಲಾಗಿದೆ,’ ಎಂದು ಆದೇಶದಲ್ಲಿ ಇಲಾಖೆಯು ತಿಳಿಸಿದೆ.
ಈ ಆದೇಶ ಹೊರಡಿಸಲು ಸಚಿವ ಡಾ ಜಿ ಪರಮೇಶ್ವರ್ ಅವರು ಅನುಮೋದನೆ ನೀಡಿದ್ದರು ಎಂದು ಗೊತ್ತಾಗಿದೆ.
ಎಫ್‌ಐಆರ್‍ನಲ್ಲೇನಿದೆ?
ಹಾಸನ ಜಿಲ್ಲಾ ಬಿಜೆಪಿ ಮುಖಂಡ ಎಂದು ಹೇಳಿಕೊಂಡು ನಾಗೇಶ್ ಎಂಬುವರು ಅವರ ಸಾಮಾಜಿಕ ಜಾಲತಾಣವಾದ ಅವರ ಫೇಸ್ ಬುಕ್ ಖಾತೆಯಲ್ಲಿ (Nagesh Bjp Hsan http;//facebook.com.hassan.94) ಮುಸ್ಲಿಂ, ಕ್ರಿಶ್ಚಿಯನ್, ಎಸ್ ಸಿ ಎಸ್ ಟಿ ಈ ದೇಶ ದ್ರೋಹಿಗಳಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಇತ್ಯಾದಿಯಾಗಿ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡಿರುತ್ತಾರೆ. ಇವರು ಜಾತಿ ಧರ್ಮ ಹಾಗೂ ಸಮುದಾಯಗಳ ನಡುವೆ ವಿಷ ಬೀಜಗಳನ್ನು ಬಿತ್ತಿ ಸಮಾಜದಲ್ಲಿ ಕೋಮುಗಲಭೆ ಸೃಷ್ಟಿ ಮಾಡುವಂತಹ ಹಾಗೂ ರಾಷ್ಟ್ರದಲ್ಲಿ ಶಾಂತಿ ಕದಡುವಂತಹ ಕೆಲಸವನ್ನು ನಾಗೇಶ್ ಮಾಡುತ್ತಿದ್ದಾರೆ ಎಂದು ಎಫ್‌ಐಆರ್‍ನಲ್ಲಿ ಹೇಳಲಾಗಿದೆ.

ಸಾವಿರಾರು ವರ್ಷಗಳಿಂದ ದೌರ್ಜನ್ಯ, ದಬ್ಭಾಳಿಕೆ, ಜಾತಿ ತಾರತಮ್ಯ, ಶೋಷಣೆಗಳಿಗೆ ಒಳಗಾಗಿರುವ ಈ ಭಾರತದ ಮೂಲ ನಿವಾಸಿ ಎಸ್ ಸಿ ಎಸ್ ಟಿ ಬಗ್ಗೆ ನಾಗೇಶ್ ಅವರಿಗೆ ಇರುವ ದ್ವೇಷದ ಕ್ರೂರತ್ವ ಎದ್ದು ಕಾಣುತ್ತಿದೆ. ನೇರವಾಗಿ ನಮ್ಮ ಎಸ್ ಸಿ ಎಸ್ ಟಿ ಸಮುದಾಯಗಳ ಬಗ್ಗೆ ದ್ವೇಷದ ಮಾತುಗಳನ್ನಾಡುವುದು, ನಂತರ ಕ್ಷಮೆ ಕೇಳುವುದು ನಮ್ಮ ಸಮುದಾಯಗಳೀಗೆ ಮಾಡುವ ಘನ ಘೋರ ಅಪರಾಧವಾಗಿದೆ ಎಂದು ವಿವರಿಸಿರುವುದು ಎಫ್‌ಐಆರ್‍ನಿಂದ ಗೊತ್ತಾಗಿದೆ.

ದಲಿತ ಸಮುದಾಯದ ಜನರನ್ನು ದ್ವೇಷದ ಭಾವನೆಯಿಂದ ನೋಡಿ ಕೀಳು ಜಾತಿಯವರು ಎಂದು ಬಿಂಬಿಸಿ ಜಾತಿ ನಿಂದನೆ ಮಾಡಿರುವುದು ಕಂಡುಬಂದಿರುತ್ತದೆ ಇದರಿಂದ ನಮ್ಮ ದಲಿತ ಸಮುದಾಯದ ಜನರಿಗೆ ಅವಮಾನ ಆಗಿರುತ್ತದೆ. ಇವರ ಈ ಪೋಸ್ಟ್‌ರ್‍ನಿಂದ ಸಮಾಜದಲ್ಲಿ ಕೋಮುಗಲಭೆ ಉಂಟಾಗುವ ಸಾಧ್ಯತೆ ಇರುತ್ತದೆ ಎಂದೂ ಎಫ್‌ಐಆರ್‍ನಲ್ಲಿ ಹೇಳಲಾಗಿದೆ.

ಈ ಕುರಿತು ಪೊಲೀಸರು ತನಿಖೆ ನಡೆಸಿದ್ದರು. ಈ ಅಂಶವನ್ನು ಸರ್ಕಾರದ ಆದೇಶದಲ್ಲಿ ಪುನರುಚ್ಛರಿಸಿದೆ.
‘ ಆರೋಪಿತನು ಜಾತಿ ಧರ್ಮ ಹಾಗೂ ಸಮುದಾಯಗಳ ನಡುವೆ ವಿಷ ಬೀಜಗಳನ್ನು ಬಿತ್ತಿ ಸಮಾಜದಲ್ಲಿ ಕೋಮುಗಲಭೆ ಸೃಷ್ಟಿ ಮಾಡುವಂತಹ ಹಾಗೂ ಸಾರ್ವಜನಿಕ ನೆಮ್ಮದಿಗೆ ಭಂಗ ತರುವಂತಹ ಕೃತ್ಯವನ್ನೆಸಗಿ ದಲಿತ ಸಮುದಾಯದ ಜನರಿಗೆ ಅವಮಾನ ಮಾಡಿರುವುದು ತನಿಖಾಧಿಕಾರಿಗಳು ತನಿಖಾ ಕಾಲಕ್ಕೆ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳಿಂದ ಹಾಗೂ ಸಾಕ್ಷಿದಾರರ ಹೇಳಿಕೆಗಳಿಮದ ಆರೋಪಿತನು ಕೃತ್ಯ ಎಸಗಿರುವುದು ದೃಢಪಟ್ಟಿರುತ್ತದೆ ಎಂದು ಆದೇಶದಲ್ಲಿ ವಿವರಿಸಿರುವುದು ಗೊತ್ತಾಗಿದೆ.





