ಬೆಂಗಳೂರು; ವಕ್ಫ್ ಆಸ್ತಿಗಳ ದುರುಪಯೋಗ, ದುರ್ಬಳಕೆ, ಒತ್ತುವರಿ ಕುರಿತಾಗಿ ರಾಜ್ಯ ಅಲ್ಪಸಂಖ್ಯಾತರ ಆಯೋಗವು ನೀಡಿದ್ದ ವಿಶೇಷ ವರದಿ, ಈ ವರದಿಯನ್ನಾಧರಿಸಿ ಉಪಲೋಕಾಯುಕ್ತರು ನಡೆಸಿದ್ದ ತನಿಖೆ, ವಕ್ಫ್ ಬೋರ್ಡ್ ಸೂಪರ್ ಸೀಡ್ ಮಾಡುವಂತಹ ಗಂಭೀರ ವಿಷಯಗಳ ಕುರಿತು ಚರ್ಚಿಸಿದ್ದ ಮುಖ್ಯ ಕಡತವೇ ಇಲಾಖೆಯಲ್ಲಿ ಇಲ್ಲ!
ಅನ್ವರ್ ಮಾಣಿಪ್ಪಾಡಿ ವರದಿ, ಉಪ ಲೋಕಾಯುಕ್ತರಾಗಿದ್ದ ಎನ್ ಆನಂದ್ ಅವರ ತನಿಖಾ ವರದಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ ವೈ ವಿಜಯೇಂದ್ರ ಅವರು 150 ಕೋಟಿ ಹಣದ ಆಮಿಷ ಒಡ್ಡಿದ್ದರು ಎಂಬ ಕುರಿತು ಆಡಳಿತ ಪಕ್ಷವು ಮಾಡಿದ್ದ ಆರೋಪವು ಬೆಳಗಾವಿ ಅಧಿವೇಶನದಲ್ಲಿ ಗದ್ದಲ, ವಾಕ್ಸಮರಕ್ಕೆ ಕಾರಣವಾಗಿದೆ.
ಇದರ ಬೆನ್ನಲ್ಲೇ ಇವೇ ವಿಷಯಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ತೆರೆದಿದ್ದ ಮುಖ್ಯ ಕಡತವೇ ಇಲ್ಲ ಎಂಬ ಸಂಗತಿಯೂ ಮುನ್ನೆಲೆಗೆ ಬಂದಿದೆ.
ಮುಖ್ಯ ಕಡತದ ಕುರಿತಾಗಿ ಕೆಲವು ದಾಖಲೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಮುಖ್ಯ ಕಡತವನ್ನು ಇಲಾಖೆಗೆ ಹಿಂದಿರುಗಿಸಬೇಕು ಎಂದು ಇಲಾಖೆಯ ಸರ್ಕಾರದ ಅಂದಿನ ಅಧೀನ ಕಾರ್ಯದರ್ಶಿಯಾಗಿದ್ದ ಅಬ್ಬಾಸ್ ಷರೀಫ್ ಅವರು ಇಲಾಖೆಯ ಅಂದು ಸಚಿವರಾಗಿದ್ದ ಕಮರುಲ್ ಇಸ್ಲಾಂ ಅವರ ಆಪ್ತ ಕಾರ್ಯದರ್ಶಿಗಳಿಗೆ 2014ರ ಏಪ್ರಿಲ್ 28ರಂದು ಅನಧಿಕೃತ ಟಿಪ್ಪಣಿ ಬರೆದಿದ್ದರು. ಈ ಟಿಪ್ಪಣಿಯ ಪ್ರತಿಯು ‘ದಿ ಫೈಲ್’ ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಅನಧಿಕೃತ ಟಿಪ್ಪಣಿಯಲ್ಲೇನಿದೆ?
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮುಖ್ಯ ಕಡತ ಸಂಖ್ಯೆ ಎಂಡಬ್ಲ್ಯೂಡಿ 99 ಡಬ್ಲ್ಯೂಇಎಸ್ 2012/ ಎಂಡಬ್ಲ್ಯೂಡಿ 38 ಎಲ್‌ಎಂಆರ್ 2012 ಸಂಖ್ಯೆಯ ಕಡತಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರ ಅವಗಾಹನೆಗೆ ಹಾಗೂ ಆದೇಶಕ್ಕೆ ಕಳಿಸಿತ್ತು. ಈ ಕಡತವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅವಗಾಹನೆ ಮತ್ತು ಆದೇಶದ ನಂತರ ಈವರೆವಿಗೂ ಹಿಂದಿರುಗಿಸಿರುವುದಿಲ್ಲ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವರದಿ 2012ರ ಮಾರ್ಚ್ 26ರ ಮೇಲೆ ಕ್ರಮ ಕೈಗೊಳ್ಳಲು 2013ರ ಜನವರಿ 3ರಂದು ನಡೆದ ಸಚಿವ ಸಂಪುಟದಲ್ಲಿ ಕೆಲವು ಸಲಹೆಗಳನ್ನು ಅನುಮೋದಿಸಿ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯವನ್ನು ಪಡೆದು ಮುಂದಿನ ಕ್ರಮ ಜರುಗಿಸಲು ಕಡತದಲ್ಲಿ ನಿರ್ಧರಿಸಿತ್ತು.
‘ಈ ಬಗ್ಗೆ ಸಚಿವ ಸಂಪುಟ ಶಾಖೆಯಿಂದ ಅನುಷ್ಠಾನ ವರದಿಯನ್ನು ಕೋರಲಾಗಿದ್ದು ಇದೊಂದು ಅತೀ ಗಂಭೀರವಾದ ವಿಷಯವಾಗಿದ್ದು ಈಗಾಗಲೇ ವಿಧಾನ ಪರಿಷತ್‌ನ ಕಾರ್ಯದರ್ಶಿಗಳು ಮುಖ್ಯ ಕಾರ್ಯದರ್ಶಿಯವರಿಗೆ ಅರೆ ಸರ್ಕಾರಿ ಪತ್ರವನ್ನು ಬರೆದು ತೆಗೆದುಕೊಂಡ ತೀರ್ಮಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು,’ ಎಂದು ಕೋರಿದ್ದರು ಎಂದು ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಸಚಿವರ ಕಚೇರಿಯಲ್ಲಿ ಸಿಗದ ಕಡತ
ಈ ವಿಷಯವನ್ನು ಸುಮಾರು ಬಾರಿ ಸಚಿವರ ಕಚೇರಿಗೆ ಮೌಖಿಕವಾಗಿ ಹಾಗೂ ದೂರವಾಣಿ ಮುಖಾಂತರ ಸಂಪರ್ಕಿಸಿ ಈ ಕೂಡಲೇ ಮೇಲ್ಕಂಡ ಕಡತವನ್ನು ಇಲಾಖೆಗೆ ಹಿಂದಿರುಗಿಸಬೇಕು ಎಂದು ಕೋರಲಾಗಿತ್ತು. ಆದರೂ ಸಹ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿಯವರು ಎರಡು ಬಾರಿ ಖುದ್ದಾಗಿ ಸಚಿವರ ಕಚೇರಿಗೆ ಭೇಟಿ ನೀಡಿ ಮೇಲ್ಕಂಡ ಕಡತವನ್ನು ಹುಡುಕಿದಾಗ ಕಡತವು ಸಿಕ್ಕಿರುವುದಿಲ್ಲ. ಕಡತವನ್ನು ಕಳಿಸಿರುವುದಕ್ಕೆ ಇಲಾಖೆಯಲ್ಲಿ ಸ್ವೀಕೃತಿ ಇರುತ್ತದೆ. ಆದರೆ, ಕಡತವನ್ನು ಇಲಾಖೆಗೆ ಹಿಂದಿರುಗಿಸಿರುವುದಕ್ಕೆ ಸಚಿವರ ಕಚೇರಿಯಲ್ಲಿ ಯಾವುದೇ ಸ್ವೀಕೃತಿ ಇರುವುದಿಲ್ಲ ಎಂಬ ಅಂಶವನ್ನು ಅನಧಿಕೃತ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
‘ಇದರಿಂದ ಸ್ಪಷ್ಟವಾಗಿ ತಿಳಿದು ಬರುವುದೇನಂದರೇ ಮೇಲ್ಕಂಡ ಕಡತವು ಸಚಿವರ ಕಚೇರಿಯಲ್ಲಿಯೇ ಇರುತ್ತದೆ. ಆದ್ದರಿಂದ ಈ ವಿಷಯದಲ್ಲಿ ವೈಯಕ್ತಿಕ ಗಮನವನ್ನು ಹರಿಸಿ ಮುಖ್ಯ ಕಡತವನ್ನು ಆದಷ್ಟು ಶೀಘ್ರವಾಗಿ ಹುಡುಕಿ ಹಿಂದಿರುಗಿಸಿದಲ್ಲಿ ಸಚಿವ ಸಂಪುಟ ಶಾಖೆ ಮತ್ತು ವಿಧಾನ ಪರಿಷತ್‌ನ ಸಚಿವಾಲಯಕ್ಕೆ ಕೋರಿರುವ ಮಾಹಿತಿಯನ್ನು ಕಳಿಸಿಕೊಡಲು ಅನುಕೂಲವಾಗುತ್ತದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಿದ್ದರು.
ಅಲ್ಲದೇ ಇದಕ್ಕೆ ಪೂರಕವಾಗಿ ಕಡತದ ಚಲನವಹಿ ಹಾಳೆಯನ್ನು ಅನಧಿಕೃತ ಟಿಪ್ಪಣಿಯೊಂದಿಗೆ ಲಗತ್ತಿಸಿದ್ದರು.
‘ಇದಕ್ಕೆ ಸಂಬಂಧಿಸಿದ ಭೌತಿಕ ಕಡತವನ್ನು ಈಗಲೂ ಹುಡುಕುತ್ತಿದ್ದೇವೆ. ಆದರೂ ಸಿಕ್ಕಿಲ್ಲ. ಇದು ನಾಪತ್ತೆಯಾಗಿದೆಯೇ ಅಥವಾ ನಾಶವಾಗಿದೆಯೇ ಎಂಬ ಬಗ್ಗೆಯೂ ಗೊತ್ತಾಗುತ್ತಿಲ್ಲ. ಸಿ ಮತ್ತು ಡಿ ವರ್ಗ ಎಂದು ಮಾಡಲಾಗಿದೆಯೇ ಎಂಬ ಬಗ್ಗೆಯೂ ಯಾವುದೇ ಮಾಹಿತಿಯೂ ಇಲ್ಲ,’ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.