ಸರ್ಕಾರಿ ವಾಹನಗಳ ‘ಪೆಟ್ರೋಲ್‌’ ಹಗರಣ; ಇಂಡೆಂಟ್‌ಗಳ ದುರುಪಯೋಗ, ಸರ್ಕಾರದ ಹಣ ಲೂಟಿ?

ಬೆಂಗಳೂರು; ಕರ್ನಾಟಕ ಸರ್ಕಾರದ ಇಲಾಖೆಗಳ ಸರ್ಕಾರಿ ವಾಹನಗಳಿಗೆ ದಿನಂಪ್ರತಿ  ಲೀಟರ್‍‌ಗಟ್ಟಲೇ ಪೆಟ್ರೋಲ್  ತುಂಬಿಸುತ್ತಿರುವ ವಾಹನ ಚಾಲಕರು ನಕಲಿ ಬಿಲ್‌, ಸುಳ್ಳು ಲೆಕ್ಕ ತೋರಿಸುತ್ತಿದ್ದಾರೆ. ಬಿಲ್‌ಗಳ ನೈಜತೆಯನ್ನೇ ಪರಿಶೀಲಿಸದ ಇಲಾಖೆಗಳ ಮುಖ್ಯಸ್ಥರು ಹಣ ಪಾವತಿಗೆ ಸಹಿ ಹಾಕುತ್ತಿದ್ದಾರೆ.  ವಾಹನ ಚಾಲಕರುಗಳೊಂದಿಗೆ ಅಧಿಕೃತ ಸರ್ವಿಸ್‌ ಸ್ಟೇಷನ್‌ನವರೂ ಶಾಮೀಲಾಗಿ ಸರ್ಕಾರದ ಹಣವನ್ನು ಲೂಟಿಗೈದಿದ್ದಾರೆ!

 

ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ತುಂಬಿಸಲು ಕಚೇರಿಯ ಮೊಹರು ಇಲ್ಲ. ಅಲ್ಲದೇ ಇಲಾಖಾ ಮುಖ್ಯಸ್ಥರ ಸಹಿಯೂ ಇಲ್ಲ. ಆದರೂ ಸಹ ವಾಹನ ಚಾಲಕರೇ ಸಹಿ ಮಾಡಿ ಇಂಡೆಂಟ್‌ಗಳನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.  ಅಷ್ಟೇ ಅಲ್ಲ, ಕಚೇರಿಯು ನೀಡುವ ಇಂಡೆಂಟ್‌ನ್ನೇ ತಿದ್ದಲಾಗುತ್ತಿದೆ. ಆದರೂ ಇಲಾಖೆಗಳ ಮುಖ್ಯಸ್ಥರು ಈ ಬಗ್ಗೆ ಗಂಭೀರವಾಗಿ ಗಮನವನ್ನೇ ಹರಿಸಿಲ್ಲ. ಹೀಗಾಗಿ  ವಾಹನ ಚಾಲಕರು ಸರ್ಕಾರಿ ಹಣಕ್ಕೆ ಕನ್ನ ಹಾಕಿದ್ದಾರೆ!

 

ಇದಕ್ಕೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆಯೇ ಜ್ವಲಂತ ಸಾಕ್ಷಿ. ಈ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮನೋಜ್‌ ಜೈನ್‌ ಅವರಿಗೆ ಒದಗಿಸಿರುವ ವಾಹನಕ್ಕೆ ತುಂಬಿಸಿರುವ ಇಂಧನದ ಬಿಲ್‌ಗಳಲ್ಲೇ ಅಪರತಪರಾಗಳಾಗಿವೆ. ಇದಕ್ಕೆ ಸಂಬಂಧಿಸಿದ ಬಿಲ್‌ಗಳು ಮತ್ತು ಈ ಬಗ್ಗೆ ಇಲಾಖೆಯೇ ಲೆಕ್ಕಪತ್ರ ವಿಭಾಗಕ್ಕೆ 2024ರ ಡಿಸೆಂಬರ್ 4ರಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿ ಟಿಪ್ಪಣಿ ಹೊರಡಿಸಿದ್ದಾರೆ. ಈ  ಟಿಪ್ಪಣಿ ಪ್ರತಿಯು  ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪೂಲ್‌ ವಾಹನ ಒದಗಿಸಿತ್ತು. ಕೆಎ-01-ಜಿಬಿ-9990 ಸಂಖ್ಯೆಯ ವಾಹನಕ್ಕೆ ಇಂಡೆಂಟ್‌ಗಳೇ ಇಲ್ಲದಿದ್ದರೂ ಸಹ ಪೆಟ್ರೋಲ್‌ ತುಂಬಿಸಲಾಗಿದೆ. ಮತ್ತು ಈ ಸಂಬಂಧ  ಅನೇಕ ಬಿಲ್‌ಗಳನ್ನು ಸೃಷ್ಟಿಸಲಾಗಿದೆ. ಕೇವಲ ಐದೇ ಐದು ತಿಂಗಳಲ್ಲಿ ಈ ವಾಹನಕ್ಕೆ  390 ಲೀಟರ್  ಇಂಧನ ತುಂಬಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

 

ಟಿಪ್ಪಣಿಯಲ್ಲೇನಿದೆ?

 

ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆಯ ಕಚೇರಿಯ ಪೂಲ್‌ ವಾಹನ (ಕೆಎ-01-ಜಿಬಿ-9990) ಕ್ಕೆ ಶೇಷಾದ್ರಿಪುರಂ ಸರ್ವಿಸ್‌ ಸ್ಟೇಷನ್‌ನಿಂದ ಇಂಧನ ಭರಿಸಲಾಗುತ್ತಿತ್ತು. ಈ ವಾಹನಕ್ಕೆ ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ವಾಹನ ಚಾಲಕ ಮಹೇಶ್‌ ಎನ್‌ ಎಂಬುವರು 2023ರ ಡಿಸೆಂಬರ್‍‌, 2024ರ ಜನವರಿ, ಫೆಬ್ರುವರಿ, ಮಾರ್ಚ್‌, ಮೇ ತಿಂಗಳಿಗೆ ಸಂಬಂಧಿಸಿದ ಇಂಧನದ ಬಿಲ್‌ಗಳಲ್ಲಿ ವ್ಯತ್ಯಯ ಮಾಡಿದ್ದರು ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

 

 

ಇಂಡೆಂಟ್‌ಗಳನ್ನು ದುರುಪಯೋಗಪಡಿಸಿಕೊಂಡು ಬಿಲ್‌ಗಳನ್ನು ಸಕಾಲಕ್ಕೆ ಕಚೇರಿಗೆ ಸಲ್ಲಿಸಿರುವುದಿಲ್ಲ. ಈ ಕುರಿತು ಕಚೇರಿಯ ಇತರೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಇಂಡೆಂಟ್‌ಗಳನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ.

 

 

ಹೆಚ್ಚುವರಿ ಇಂಡಂಟ್‌ಗಳ ಕುರಿತಾದ ವಿಷಯ ಕಚೇರಿಯ ಗಮನಕ್ಕೆ ಬಾರದಿರಲಿ ಎಂದು ಬಿಲ್‌ಗಳನ್ನು ಕಚೇರಿಗೆ ಸಲ್ಲಿಸಿಲ್ಲ. ಅಲ್ಲದೇ ಸರ್ವಿಸ್‌ ಸ್ಟೇಷನ್‌ ಅವರು ಬಿಲ್‌ಗಳನ್ನು ನೀಡಿರುವುದಿಲ್ಲ ಎಂಬ ಸಮಜಾಯಿಷಿ ನೀಡುತ್ತಾ ಬಂದಿರುವುದು ಕಂಡುಬಂದಿರುತ್ತದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

‘ಹೀಗಾಗಿ ಈ ವಾಹನ ಚಾಲಕರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಇವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳಬೇಕು ಎಂದು ಏಜೆನ್ಸಿಗೆ ತಿಳಿಸಲಾಗಿರುತ್ತದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಅಧಿಕೃತ ಸಹಿ ಮತ್ತು ಕಚೇರಿಯ ಮೊಹರು ಇಲ್ಲದೇ, ವಾಹನ ಚಾಲಕರು ತಾವೇ ಸಹಿ ಮಾಡಿ ಇಂಡೆಂಟ್‌ನ್ನು ದುರುಪಯೋಗಪಡಿಸಿಕೊಂಡಿದ್ದಾರೆ.

 

2023ರ ಡಿಸೆಂಬರ್‍‌, 2024ರ ಜನವರಿ, ಫೆಬ್ರುವರಿ, ಮಾರ್ಚ್‌ ಮತ್ತು ಮೇ ತಿಂಗಳಲ್ಲಿ ಒಟ್ಟು 390 ಲೀಟರ್‍‌ ಇಂಧನವನ್ನು ತುಂಬಿಸಿದ್ದರು ಎಂದು ಬಿಲ್‌ ಸೃಜಿಸಲಾಗಿತ್ತು. ಒಟ್ಟು 30,576 ರು ಹೆಚ್ಚುವರಿಯಾಗಿ ಕ್ಲೈಮ್‌ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.

 

2023ರ ಡಿಸೆಂಬರ್‍‌ನಲ್ಲಿ 40 ಲೀಟರ್‍‌ ಇಂಧನ ಪಡೆದುಕೊಳ್ಳಲಾಗಿದೆ. ಇದಕ್ಕೆ 4,077 ರು ಬಿಲ್‌ ಸೃಜಿಸಲಾಗಿದೆ.

 

 

2024ರ ಜನವರಿ 6, 11, 13ರಂದು ಕ್ರಮವಾಗಿ 50, 50, 50 ಲೀಟರ್‍‌ ಇಂಧನ ತುಂಬಿಸಿದ್ದರು. ಇದಕ್ಕೆ ತಲಾ 5,096 ರು. ಮೊತ್ತದ ಬಿಲ್‌ ನೀಡಲಾಗಿತ್ತು.

 

 

2024ರ ಫೆಬ್ರುವರಿ 26, 28ರಂದು 100 ಲೀಟರ್‍‌ ಇಂಧನ  ತುಂಬಿಸಲಾಗಿತ್ತು. ಇದಕ್ಕೆ ತಲಾ 5,096 ರು ಬಿಲ್‌ ಒದಗಿಸಿತ್ತು.

 

 

2024ರ ಮಾರ್ಚ್‌ನಲ್ಲಿ 50 ಲೀಟರ್‍‌ ಇಂಧನ ತುಂಬಿಸಲಾಗಿತ್ತು. ಇದಕ್ಕೆ 4,991 ರು. ಬಿಲ್‌ ತಯಾರಿಸಲಾಗಿತ್ತು.

 

 

2024ರ ಮೇ ತಿಂಗಳಿನಲ್ಲಿ 50 ಲೀಟರ್ ಇಂಧನ ತುಂಬಿಸಲಾಗಿತ್ತು. ಆದರೆ ವಾಹನ ಚಾಲಕ ಅದನ್ನು 50 ಲೀಟರ್‍‌ ಎಂದು ತಿದ್ದಿದ್ದರು ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

 

 

ಸರ್ವಿಸ್‌ ಸ್ಟೇಷನ್‌ವರೂ ಶಾಮೀಲು?

 

ವಾಹನ ಚಾಲಕರು ಎಸಗಿರುವ ಈ ಕೃತ್ಯದಲ್ಲಿ ಶೇಷಾದ್ರಿಪುರಂ ಸರ್ವಿಸ್‌ ಸ್ಟೇಷನ್‌ ಇವರ ಪಾತ್ರವಿರುವುದು ಕಂಡು ಬಂದಿರುತ್ತದೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ.

 

ಇಂಡೆಂಟ್‌ನಲ್ಲಿ ಅಧಿಕೃತ ಸಹಿ ಹಾಗೂ ಕಚೇರಿ ಮೊಹರು ಇಲ್ಲದಿದ್ದರೂ ಇಂಡೆಂಟ್‌ ನ್ನು ಪರಿಶೀಲಿಸದೇ ಇಂಧನವನ್ನು ನೀಡಲಾಗಿದೆ. ಈ ವಾಹನಕ್ಕೆ ಹಿಂದೆಂದೆಯೇ 50 ಲೀಟರ್‍‌ನ ಇಂಧನ ತುಂಬಿರುವುದು ಅನುಮಾನಸ್ಪದವಾಗಿ ತೋರುತ್ತದೆ ಎಂದು ವಿವರಿಸಲಾಗಿದೆ.

 

‘ಸಾಮಾನ್ಯವಾಗಿ ಒಂದು ತಿಂಗಳ ಬಿಲ್‌ ಬಾಕಿಯಿದ್ದರೂ ಸಹ ಇಂಧನವನ್ನು ನೀಡಲು ನಿರಾಕರಿಸುತ್ತಿದ್ದ ಸರ್ವಿಸ್‌ ಸ್ಟೇಷನ್‌ನವರು ಈ ಪ್ರಕರಣದಲ್ಲಿ ಬಿಲ್‌ ಬಾಕಿಯಿದ್ದರೂ ಒಂದು ಬಾರಿಯೂ ಇಂಧನವನ್ನು ನೀಡಲು ನಿರಾಕರಿಸದೆ, ಕಚೇರಿಗೂ ಯಾವುದೇ ರೀತಿಯ ಮಾಹಿತಿ ನೀಡದೆ ಇಂಧನವನ್ನು ನೀಡುತ್ತಾ ಬಂದಿರುವುದು ವಾಹನ ಚಾಲಕರೊಂದಿಗೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

‘ಇಲಾಖೆಗಳ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರು ಆದಿಯಾಗಿ ಇನ್ನಿತರೆ ಅಧಿಕಾರಿ, ನೌಕರರಿಗೆ ಒದಗಿಸಿರುವ ಸರ್ಕಾರಿ ವಾಹನಗಳಿಗೆ ದಿನಂಪ್ರತಿ ಇಷ್ಟೇ ಪ್ರಮಾಣದದಲ್ಲಿ ಪೆಟ್ರೋಲ್‌ ಹಾಕಿಸಬೇಕು ಎಂಬ ನಿಯಮ ಮತ್ತು ಮಿತಿಯೂ ಇಲ್ಲ. ಹೀಗಾಗಿ ಇಲಾಖೆಗಳ ಮುಖ್ಯಸ್ಥರು ತಮಗೆ ಬೇಕಾದಷ್ಟು ಹಾಗೂ ವಾಹನ ಚಾಲಕರು ತಮಗೆ ತೋಚಿದಷ್ಟು ಪೆಟ್ರೋಲ್‌ ಹಾಕಿಸುತ್ತಿದ್ದಾರೆ. ಜತೆಗೆ ನಕಲಿ ಬಿಲ್‌ಗಳನ್ನೂ ಸಲ್ಲಿಸಿ ವರ್ಷಕ್ಕೆ ಕೋಟ್ಯಂತರ ರುಪಾಯಿನಷ್ಟು ಲೂಟಿ ಮಾಡುತ್ತಿದ್ದಾರೆ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು.

 

ಈ ಸಂಬಂಧ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅವರಿಗೂ ಕೆಲ ದೂರುಗಳು ಸಲ್ಲಿಕೆಯಾಗಿದ್ದವು ಎಂದು ಗೊತ್ತಾಗಿದೆ.

SUPPORT THE FILE

Latest News

Related Posts