ಬೆಂಗಳೂರು; ಕಲ್ಬುರ್ಗಿ ವ್ಯಾಪ್ತಿಯ ಕಾಡಾದ ಆಡಳಿತ ಮಂಡಳಿಯು 2024ರ ಮಾರ್ಚ್ 31ರ ಒಂದೇ ದಿನದಂದು 4.46 ಕೋಟಿಯಷ್ಟು ವಿಪರೀತ ವೆಚ್ಚ ಮಾಡಿರುವುದನ್ನು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಇಲಾಖೆಯು ಪತ್ತೆ ಹಚ್ಚಿದೆ.
2023-24ನೇ ಸಾಲಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧನೆ ಮಾಡಿರುವ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನೆ ಇಲಾಖೆಯ ವರದಿಯಲ್ಲಿ ಕಾಡಾ ಹಣಕಾಸಿನ ಆಡಳಿತದಲ್ಲಿನ ಲೋಪ, ಹಲವು ನ್ಯೂನತೆಗಳನ್ನು ಬಯಲಿಗೆಳೆದಿದೆ. ಈ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕಾಡಾ ಕಲ್ಬುರ್ಗಿ2023-24ನೇ ಸಾಲಿನಲ್ಲಿ ಪಾವತಿಯಾದ ಒಟ್ಟು ಮೊತ್ತ ಮತ್ತು ಮಾರ್ಚ್ 2024ರಲ್ಲಿ ಪಾವತಿಯಾದ ಮೊತ್ತಗಳನ್ನು ಲೆಕ್ಕ ಪರಿಶೋಧಕರು ಪರಿಶೀಲಿಸಿದ್ದರು. ಈ ವೇಳೆ ಮಾರ್ಚ್ 2024ರ ಕೊನೆಯ ದಿನಾಂಕದಂದು ವಿಪರೀತ ವೆಚ್ಚ ಮಾಡಲಾಗಿದೆ ಎಂದು ಲೆಕ್ಕ ಪರಿಶೋಧಕರು ಆಕ್ಷೇಪಣೆ ಎತ್ತಿದ್ದಾರೆ.
ಲೆಕ್ಕ ಪರಿಶೋಧನೆ ವರದಿ ಪ್ರಕಾರ 2023-24ನೇ ಸಾಲಿನಲ್ಲಿ 128, 5,75,022.50 ಕೋಟಿ ರು.ಗಳು ಪಾವತಿಯಾಗಿತ್ತು. ಈ ಪೈಕಿ 2024ರ ಮಾರ್ಚ್‌ನಲ್ಲಿ 80,1,16,632 ರು. ವೆಚ್ಚ ಮಾಡಲಾಗಿತ್ತು. ಮಾರ್ಚ್ 2024ರ ಕೊನೆಯ ದಿನಾಂಕದಂದು 4,46,75,504 ರು.ಗಳನ್ನು ಖರ್ಚುಮಾಡಿತ್ತು. ಇದು ಶೇ. 56ರಷ್ಟು ಖರ್ಚು ಮಾಡಲಾಗಿದೆ.
ಅಲ್ಲದೇ 2023-24ರಲ್ಲಿ ಆದ ಒಟ್ಟು ವೆಚ್ಚಕ್ಕೆ ಹೋಲಿಸಿದರೆ 2024ರ ಮಾರ್ಚ್ 30ರಂದು ಒಂದೇ ದಿನ ಒಟ್ಟು ಖರ್ಚಿನ ಶೇ. 34ರಷ್ಟು ಖರ್ಚುಮಾಡಿರುವುದನ್ನು ಲೆಕ್ಕ ಪರಿಶೋಧಕರು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.
‘ಪ್ರಾಧಿಕಾರದವರು ಯಾವುದೇ ಮುಂದಾಲೋಚನೆ ಕೈಗೊಳ್ಳದೇ ಕರ್ನಾಟಕ ಆರ್ಥಿಕ ನಿಯಮಗಳಿಗೆ ವ್ಯತಿರಿಕ್ತವಾಗಿ ಮಾರ್ಚ್‌ನಲ್ಲಿ ಪಾವತಿಸಿದ್ದಾರೆ. ಹಂಚಿಕೆ ಮಾಡಿರುವ ಅನುದಾನವನ್ನು ನಿಯಮಾನುಸಾರ ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ವಿಫಲವಾದಲ್ಲಿ ಮುಂದಿನ ಎಲ್ಲಾ ಆಗುಹೋಗುಗಳಿಗೆ ತಾವೇ ನೇರವಾಗಿ ಜವಾಬ್ದಾರಿ ಆಗಿರುವಿರಿ,’ ಎಂದು ಆಡಳಿತಾಧಿಕಾರಿಗಳಿಗೆ ಅರೆ ಸರ್ಕಾರಿ ಪತ್ರ ಬರೆದಿರುವುದು ವರದಿಯಿಂದ ತಿಳಿದು ಬಂದಿದೆ.
ಈ ಎಲ್ಲಾ ವೆಚ್ಚವು ಮಾರ್ಚ್ 2024ರ ಮಾಹೆಯಲ್ಲಿ ಹಾಗೂ ಮಾರ್ಚ್ ಮಾಹೆಯ ಕೊನೆಯ ದಿನದಂದು ಆಗಿರುತ್ತದೆ ಎಂದು ಅನುಪಾಲನೆ ವರದಿ ಸಲ್ಲಿಸಿದ್ದರು. ಇದು ಕೆಪಿಡಬ್ಲ್ಯೂಡಿ 85, 202, 218(5)228(2)(ಸಿ) 228(2)(ಡಿ), ಕೆಎಫ್‌ಸಿ ಅನುಚ್ಛೇಧ 161(2) ಮತ್ತು ಜೆಎಫ್‌ಆರ್ 62 (3)ರ ನಿಯಮ ಉಲ್ಲಂಘಿಸಿದೆ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ನಿಯಮಾನುಸಾರ ನಿರ್ವಹಣೆಯಾಗದ ನಗದು ಪುಸ್ತಕ
ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರವು ಹಾಲಹಳ್ಳಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‍ನಲ್ಲಿ ಖಾತೆ ಹೊಂದಿದೆ. ಇದರ ನಗದು ಪುಸ್ತಕ ಪರಿಶೀಲಿಸಿದಾಗ ನಿಯಮಾನುಸಾರ ನಿರ್ವಹಿಸಿಲ್ಲ ಎಂಬುದನ್ನು ಲೆಕ್ಕಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ನಿಯಮದಲ್ಲೇನಿದೆ?
ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇಧ 329 ಅನ್ವಯ ನಗದು ಪುಸ್ತಕದಲ್ಲಿ ಜಮೆ ಮಾಡಿದ ಯಾವೊಂದು ನಮೂದನ್ನು ಅಳಿಸುವುದು ಅಥವಾ ಮೇಲೆ ಬರೆಯುವುದು ಅವೆರಡನ್ನೂ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಒಂದು ತಪ್ಪು ಕಂಡುಬಂದರೆ ಅಶುದ್ಧ ನಮೂದಿಗೆ ಪೆನ್ನಿನಿಂದ ಅಡ್ಡಗೆರೆ ಹಾಕಿ ಸಾಲುಗಳ ನಡುವೆ ಕೆಂಪು ಮಸಿಯಲ್ಲಿ ಸರಿಯಾಧ ನಮೂದನ್ನು ದಾಖಲು ಮಾಡಿ ತಪ್ಪನ್ನು ತಿದ್ದಬೇಕು. ಕಚೇರಿ ಮುಖ್ಯಾಧಿಕಾರಿಯ ಅಂತಹ ಪ್ರತಿಯೊಂದು ತಿದ್ದುಪಡಿಗೆ ತಮ್ಮ ಚಿಕ್ಕ ರುಜು ಹಾಕಬೇಕು ಮತ್ತು ತಪ್ಪದೆಯೇ ಚಿಕ್ಕ ಸಹಿಯೊಡನೆ ದಿನಾಂಕವನ್ನು ಮಾಡಬೇಕು.
ಅದೇ ರೀತಿ ಆರ್ಥಿಕ ವರ್ಷದ ಕೊನೆಯ ತಿಂಗಳ ಕೊನೆಯ ದಿನಾಂಕದಂದು ಲೆಕ್ಕ ಸಮನ್ವಯ ಮಾಡಿ ನಗದು ಪುಸ್ತಕಕ್ಕೆ ಮತ್ತು ಬ್ಯಾಂಕ್ ಪಾಸ್ ಬುಕ್‌ಗೆ ಜಮೆ ಹಾಗೂ ಖರ್ಚು ಆಗದೇ ಇರುವ ನಗದೀಕರಣಗೊಳ್ಳದೇ ಇರುವ ಚೆಕ್‌ಗಳ ಸಂಖ್ಯೆಗಳನ್ನು ನಗದು ಪುಸ್ತಕದಲ್ಲಿ ನಮೂದಿಸಬೇಕು. ಅಲ್ಲದೇ ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇಧ 331ರ ಪ್ರಕಾರ ನಗದು ಪುಸ್ತಕವನ್ನು ಪ್ರತಿ ನಿತ್ಯವೂ ಬರೆಯಬೇಕು.
ಪ್ರತಿಯೊಂದು ಜಮೆ ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ನಮೂದನ್ನು ವ್ಯವಹಾರಕ್ಕೆ ತಕ್ಕಂತೆ ಏಕಕಾಲದಲ್ಲಿ ಮಾಡಬೇಕು. ಪ್ರತಿ ದಿನವೂ ಪ್ರಾರಂಭದ ಶಿಲ್ಕನ್ನು ಜಮೆಗಳ ಸಾಲಿನಲ್ಲಿ ತಂದು ಆ ದಿನದ ವ್ಯವಹಾರ ಕಾಲಂನಲ್ಲಿ ಸ್ವೀಕರಿಸಿಕೊಂಡ ಮೊತ್ತಗಳನ್ನು ಜಮೆ ಸಾಲಿನಲ್ಲಿ ಅವುಗಳ ಸ್ವೀಕೃತಿಗಳ ಅನುಕ್ರಮದಲ್ಲಿ ಬರೆಯಬೇಕು.
ಹಾಗೆಯೇ ಪ್ರತಿ ಬಾಬಿನ ಬಗ್ಗೆ ಮಾಡಿದ ವೆಚಚ ಅವುಗಳ ಎದುರಿಗೆ ಸಂವಾದಿ ವೋಚರ್ ನಂಬರ್‍ನ್ನು ಸೂಚಿಸಿ ವೆಚ್ಚದ ಸಾಲಿನಲ್ಲಿ ಬರೆಯಬೇಕು. ಪ್ರತಿ ದಿನವೂ ನಗದು ಪುಸ್ತಕವನ್ನು ಪೂರ್ಣಗೊಳಿಸಿ ಶಿಲ್ಕನ್ನು ಬರೆಯಬೆಕು. ತಿಂಗಳ ಕೊನೆಗೆ ಕೊನೆಯ ದಿನಾಂಕದಂದು ವ್ಯವಹಾರವು ಪೂರ್ಣಗೊಂಡ ತರುವಾಯ ಪ್ರತಿ ದಿನದ ಕೊನೆಯಲ್ಲಿ ಪೂರ್ಣಗೊಳಿಸುವಂತೆಯೇ ನಗದು ಪುಸ್ತಕವನ್ನು ಪೂರ್ಣಗೊಳಿಸಬೇಕು. ಮತ್ತು ನಗದು ಶಿಲ್ಕುಗಳಿಗನುಗುಣವಾಗಿ ವಿವರವಾಗಿ ಬಾಬ್ತುಗಳನ್ನು ಕೊಡಬೇಕು.
‘ಆದರೆ ಕಲ್ಬುರ್ಗಿ ಕಾಡಾದ ವಿಭಾಗದವರು ಈ ಮೇಲೆ ತಿಳಿಸಿರುವ ಆರ್ಥಿಕ ಸಂಹಿತೆಯ ಅನುಚ್ಛೇಧ ಪ್ರಕಾರ ನಿರ್ವಹಿಸಿಲ್ಲ. ನಿಯಮ ಉಲ್ಲಂಘಿಸಿದ್ದಾರೆ. 2023-24ನೇ ಸಾಲಿನಲ್ಲಿ ನಗದು ಪುಸ್ತಕದಲ್ಲಿದ್ದ ಅಂತಿಮ ಶಿಲ್ಕು 2,46,56,093 ರು. ಪಾಸ್ ಪುಸ್ತಕದ ಪ್ರಕಾರ ಅಂತಿಮ ಶಿಲ್ಕು 9,77,15,385 ರು. ವ್ಯತ್ಯಾಸದ ಮೊತ್ತ 7,30,59,292 ರು. ನಗದೀಕರಣಗೊಳ್ಳದ ಚೆಕ್ ಮೊತ್ತವು 7,30,54,280 ರು. ಇದೆ,’ ಎಂದು ಸರ್ಕಾರಿ ಲೆಕ್ಕ ಪರಿಶೋಧಕರು ವಿವರಿಸಿದ್ದಾರೆ.
2020-21ನೇ ಸಾಲಿನಿಂದ ಇಲ್ಲಿಯವರೆಗೆ ಸೂಕ್ತ ಹೊಂದಾಣಿಕೆ ಮತ್ತು ಬ್ಯಾಂಕ್‌ನಿಂದ ಸ್ಪಷ್ಟತೆ ಪಡೆಯದೇ ಇರುವುದಕ್ಕೆ ಹಾಗೂ 2022-23ನೇ ಸಾಲಿನ ಲೆಕ್ಕ ಪರಿಶೋಧನೆಯ ಸದರಿ ಮೊತ್ತಕ್ಕೆ ಸಂಬಂಧಿಸಿದಮತೆ ಆಕ್ಷೇಪಿಸಿತ್ತು. ಆದರೆ ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ವ್ಯತ್ಯಾಸದ ಮೊತ್ತದ ಆದಾಯದ ಮೂಲ ದಾಖಲೆ ಸಲ್ಲಿಸಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ.
ಟೆಂಡರ್‍ನಲ್ಲಿ ನ್ಯೂನತೆ
ಡೇಟಾ ಎಂಟ್ರಿ ಆಪರೇಟರ್ ಸೇವೆಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಘಿತ್ತು. ಇದರಲ್ಲಿ ಒಬ್ಬರೇ ಭಾಗವಹಿಸಿದ್ದರು. ಆರ್ಥಿಕ ಬಿಡ್‌ನ್ಲಿ ಅರ್ಹ ಏಜೆನ್ಸಿ ಎಂದು ಅಥವಾ ಎಲ್ 1 ಎಂದು ಪರಿಗಣಿಸಿ ಕಾರ್ಯಾದೇಶ ನೀಡಲಾಗಿದೆ.ಏಕ ಟೆಂಡರ್‍ಗಳನ್ನು ತಿರಸ್ಕರಿಸಿ ಮರು ಟೆಂಡರ್ ಕರೆಯವುದು ಟೆಂಡರ್ ಆಹ್ವಾನಿಸುವ ಅಧಿಕಾರಿಯ ಪ್ರಥಮ ಆಯ್ಕೆ ಆಗಬೇಕು ಎಂದು ನಿಯಮ ಹೇಳಿದೆ.
ಆದರೆ ಈ ಟೆಂಡರ್‍ನಲ್ಲಿ ಏಕ ಟೆಂಡರ್ ಸ್ವೀಕೃತವಾದಾಗ ಟೆಂಡರ್ ಆಹ್ವಾನಿಸುವ ಅಧಿಕಾರಿಯ ಸದರಿ ಟೆಂಡರ್ ನ್ನು ತಿರಸ್ಕರಿಸಿ ಮರು ಟೆಂಡರ್ ಕರೆಯದೇ ಮೇಲಿನ ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಲೆಕ್ಕ ಪರಿಶೋಧಕರು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಈ ವರದಿ ಕುರಿತಂತೆ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.