ಬೆಂಗಳೂರು; ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ನಡೆಸುವ ವಿವಿಧ ಸಾರ್ವಜನಿಕ ಪರೀಕ್ಷೆಗಳಿಗೆ ಸಂಬಂಧಿಸಿದ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್, ಡಿಜಿಟಲ್ ಮೌಲ್ಯಮಾಪನ, ಆನ್ ಸ್ಕ್ರೀನ್ ಮಾರ್ಕಿಂಗ್ ಸಿಸ್ಟಂ ಸೇವೆ ಪಡೆಯಲು ಉನ್ನತ ಶಿಕ್ಷಣ ಇಲಾಖೆಯು ಕರೆದಿರುವ ಟೆಂಡರ್‍ನಲ್ಲೇ ಹಲವು ಲೋಪಗಳು ಕಂಡು ಬಂದಿವೆ. ಅಲ್ಲದೇ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.
ಈ ಸಂಬಂಧ ಇನ್ಫಿನಿಟಿ ಸರ್ವಿಸೋಲ್ಸ್ ಪ್ರೈವೈಟ್ ಲಿಮಿಟೆಡ್, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದೆ. ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಮತ್ತು ಆನ್ ಸ್ಕ್ರೀನ್ ಮಾರ್ಕಿಂಗ್ ಸಿಸ್ಟಂ ಸೇವೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕ್ಯೂಸಿಬಿಸಿಎಸ್ (Quality & Cost Based Selection (QCBS) ಮಾದರಿಯಲ್ಲಿ ಇ- ಟೆಂಡರ್ 2024ರ ಸೆ.14ರಂದು ಟೆಂಡರ್ ಮಾದರಿಯಲ್ಲಿ(E-Tender No: KEACET/2024-25/SE0018/Call-2) ಆಹ್ವಾನಿಸಿತ್ತು.
ಈ ಟೆಂಡರ್‍ನಲ್ಲಿ ಕೆಟಿಪಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ಪೂರ್ವ ನಿರ್ಧರಿತ ಕಂಪನಿಯಿಂದ ಈ ಸೇವೆ ಪಡೆಯಲು ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕೆಟಿಪಿಪಿ ಕಾಯ್ದೆ 2000 ಅಧ್ಯಾಯ VI A, ನಿಯಮ 28-Hರ ಪ್ರಕಾರ QCBS ಮಾದರಿ ಟೆಂಡರ ಆಹ್ವಾನಿಸಲು ಕನಾ೯ಟಕ ಸಕಾ೯ರ ಆಗಿಂದ್ದಾಗೆ ನಿಗದಿಪಡಿಸುವ ಟೆಂಡರ್ ದಸ್ತಾವೇಜನ್ನು ಕಡ್ಡಾಯವಾಗಿ ಉಪಯೋಗಿಸಬೇಕು. ಅಲ್ಲದೇ ಆರ್ಥಿಕ ಇಲಾಖೆಯು ನಿಗದಿಪಡಿಸಿರುವ 10 ಲಕ್ಷ ರು ಮೇಲ್ಪಟ್ಟ ಕ್ಯೂಸಿಬಿಸಿಎಸ್ (QCBS) ಟೆಂಡರ್ ಆಹ್ವಾನಿಸಲು K/C – 4 RFP ದಾಖಲೆಯನ್ನು ಕಡ್ಡಾಯವಾಗಿ ಬಳಸಬೇಕು.
ಅದೇ ರೀತಿ ಈ ದಸ್ತಾವೇಜಿನಲ್ಲಿ ನಿಗದಿ ಪಡಿಸಿರುವ ಮಾನದಂಡಗಳು (Information to Consultants, General Conditions of Contract) ಮತ್ತು ಪ್ರಸ್ತಾವನೆ ಸಲ್ಲಿಕೆ (Technical & Financial Proposals Submission Forms) ನಮೂನೆಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾಶವಿಲ್ಲ. ಹಾಗೆಯೇ ಎಲ್ಲಾ ಕ್ಯೂಸಿಬಿಸಿಎಸ್ (QCBS) ಟೆಂಡರ್‌ಗಳಲ್ಲಿ ಷರತ್ತು ( “Terms of Reference”) ಭಾಗವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.
ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2024ರ ಸೆ.14ರಂದು ಆಹ್ವಾನಿಸಿರುವ ಟೆಂಡರ್‍ನಲ್ಲಿ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಆರ್‍ಇಪಿಯಲ್ಲಿ ಗುಣಮಟ್ಟದ ಮಾದರಿ ಗುತ್ತಿಗೆ (Standard Form of Contract) ಅಳವಡಿಸಿಲ್ಲ. ಇದರಿಂದ ಸೇವೆ ಪಡೆಯುವವರು ಮತ್ತು ಸೇವೆದಾರರ ನಡುವೆ ಯಾವ ರೀತಿಯ ಕರಾರು ಸಹಿ ಆಗಬೇಕಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟತೆಯಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
‘ಇದು ಕೆ.ಇ.ಎ ಕರೆದಿರುವ ಟೆಂಡರ್‌ನ ಬಹು ಮುಖ್ಯ ಉಲ್ಲಂಘನೆಯಾಗಿದೆ. ಈ ಟೆಂಡರ್‌ನಲ್ಲಿ, ಸೇವೆದಾರರು ಬಹಳಷ್ಟು ಲ್ಯಾಪ್‌ಟಾಪ್‌ಗಳು, ಸವ೯ರ್‌ಗಳು, ಪೈರ್‌ವಾಲ್, ಐ.ಟಿ ಸಾಪ಼್ಟ್‌ವೇರ್, ಮುಂತಾದವುಗಳನ್ನು ಒದಗಿಸಬೇಕು. ಇವುಗಳ ತಾಂತ್ರಿಕ ವೈಶಿಷ್ಠತೆಗಳು ಆರ್‍ಇಪಿಯಲ್ಲಿ ಒದಗಿಸಿಲ್ಲ. ಇದರಿಂದ ಸೇವಾದಾರರು ಯಾವ ಮಾದರಿ ಅಥವಾ ಯಾವ ತರಹದ ಸರಕುಗಳು ಮತ್ತು ಸೇವೆಗಳನ್ನು ಒದಗಿಸಬೇಕಾಗಿದೆ ಎಂಬುದು ಸೇವೆದಾರರಿಗೆ ತಿಳಿಯವುದಿಲ್ಲ. ಅಲ್ಲದೇ ಇದರಿಂದ ಸೇವೆದಾರರು ತಮ್ಮ ಆಥಿ೯ಕ ಪ್ರಸ್ತಾವನೆ ತಯಾರಿಸಿ ದರ ನಮೂದಿಸುವುದು ಕಷ್ಟವಾಗಲಿದೆ. ಮತ್ತು ಇಲಾಖೆ ಇದನ್ನು ಯಾವ ರೀತಿ ಮೌಲ್ಯಮಾಪನ ಮಾಡಲಿದೆ, ಹಾಗೂ ಈ ಸರಕು/ಸೇವೆಗಳನ್ನು ಹೇಗೆ ಪಡೆದುಕೊಳ್ಳಲಿದೆ ಎಂಬುದು ತಿಳಿಯುವುದಿಲ್ಲ,’ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಆರ್‍ಇಪಿ (R.F.P.) ಅನ್ವಯ ತಾಂತ್ರಿಕ ಪ್ರಸ್ತಾವನೆ ತಾಂತ್ರಿಕವಾಗಿ ಅಂಗೀಕಾರವಾಗುವ ಮುನ್ನ ಆಥಿ೯ಕ ಪ್ರಸ್ತಾವನೆ ತೆರೆಯಬೇಕು. ಇದರಲ್ಲಿ ಅಹ೯ತೆ ಪಡೆಯಲು ಯಾವುದೇ ಸೇವೆದಾರರ ಪ್ರಸ್ತಾವನೆ ಗರಿಷ್ಠ 100 ಅಂಕಗಳಿಗೆ ಕನಿಷ್ಠ 60 ಅಂಕಗಳನ್ನು ಗಳಿಸಬೇಕು. ಮತ್ತು ತಾಂತ್ರಿಕ ಮತ್ತು ಹಣಕಾಸಿನ ಪ್ರಸ್ತಾವನೆಗಳಿಗೆ 70:30 ಅಂಕಗಳನ್ನು ನೀಡಲಾಗುತ್ತದೆ. ಮತ್ತು ಯಾವ ಪ್ರಸ್ತಾವನೆ ಒಟ್ಟು ತಾಂತ್ರಿಕ ಮತ್ತು ಹಣಕಾಸಿನ ಅಂಕಗಳ ಹೆಚ್ಚು ಅಂಕಗಳನ್ನು ಗಳಿಸುತ್ತದೆಯೋ ಅಂತಹ ಪ್ರಸ್ತಾವನೆ ಮತ್ತು ಸೇವೆದಾರನನ್ನು ಆಯ್ಕೆ ಮಾಡಲಾಗುವುದು ಎಂದು ಆರ್‍ಇಪಿಯಲ್ಲಿ ಹೇಳಲಾಗಿದೆ.
‘ಇದೊಂದು ಗೋಲ್‌ಮಾಲ್ ಟೆಂಡರ್. ಕೆ.ಟಿ.ಪಿ.ಪಿ ಕಾಯಿದೆ 1999 ಮತ್ತು ನಿಯಮ 2000 ಗಳ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಎಲ್ಲಾ ಉಲ್ಲಂಘನೆಗಳನ್ನು ಗಮನಿಸಿದ್ದಲ್ಲಿ, ಕೆ.ಇ.ಎ. ನಾಮಕಾವಸ್ಥೆ ಟೆಂಡರ್ ಕರೆದಿದೆ ಮತ್ತು ತನಗೆ ಬೇಕಾದವರಿಗೆ ಟೆಂಡರ್‌ನೀಡಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ,’ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಕೆಟಿಪಿಪಿ ಕಾಯ್ದೆ 1999 ರ ಸೆಕ್ಷನ್ 23 ರಂತೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಹಾಗೂ ಯಾವುದೇ ಬಿಡ್‌ದಾರರು ಈ ಎಲ್ಲಾ ಉಲ್ಲಂಘನೆಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಲ್ಲಿ, ಈ ಟೆಂಡರ್ ರದ್ದಾಗುವುದು ಖಚಿತ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮವಹಿಸುವುದು ಸಮಂಜಸವಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಈ ದೂರಿನ ಕುರಿತು ಇಲಾಖೆ ಪ್ರಧಾನ ಕಾರ್ಯದರ್ಶಿ ಸಚಿವ ಡಾ ಎಂ ಸಿ ಸುಧಾಕರ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.