ವಾಲ್ಮೀಕಿ ನಿಗಮಕ್ಕೆ ಅನುದಾನ ಕಡಿತ; ಗಂಗಾಕಲ್ಯಾಣಕ್ಕೆ 21.66 ಕೋಟಿ ರು ಬಿಡುಗಡೆ ಮಾಡದ ಸರ್ಕಾರ

ಬೆಂಗಳೂರು; ಮಹರ್ಷಿ ವಾಲ್ಮೀಕಿ ನಿಗಮದಲ್ಲಿನ ಕೋಟ್ಯಂತರ ರುಪಾಯಿಗಳನ್ನು ನಕಲಿ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣವು ಅಧಿವೇಶನದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ 2023-24ನೇ ಸಾಲಿನಲ್ಲಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮಕ್ಕೆ   ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಿಸಿದ ನಾಲ್ಕನೇ  ತ್ರೈಮಾಸಿಕ ಅನುದಾನ ಬಿಡುಗಡೆ ಮಾಡಿರಲಿಲ್ಲ  ಎಂಬ ಸಂಗತಿ ಬಯಲಾಗಿದೆ.

 

ಅಷ್ಟೇ ಅಲ್ಲ,  2023-24ನೇ ಸಾಲಿನಲ್ಲಿ ನಿಗಮದ ಯೋಜನೆಗಳನ್ನು ಅನುಷ್ಠಾನಗೊಳಿಸಲು 225.00 ಕೋಟಿ ರು. ಹಂಚಿಕೆಯಾಗಿತ್ತು. ಈ ಸಂಬಂಧ ಸರ್ಕಾರಿ ಆದೇಶವನ್ನೂ ಹೊರಡಿಸಲಾಗಿತ್ತು.  ಆದರೆ ಜುಲೈ 2023ರಲ್ಲಿ ಮಂಡನೆಯಾಗಿದ್ದ ಬಜೆಟ್‌ನ  ಸಂಪುಟ 05ರಲ್ಲಿ ನಿಗಮಕ್ಕೆ 50 ಕೋಟಿ ರು.ಗಳಷ್ಟು ಕಡಿಮೆ ಹಂಚಿಕೆ ಮಾಡಿತ್ತು. ಅಂದರೆ 175.00 ಕೋಟಿ ರು. ಬಿಡುಗಡೆಯಾಗಿತ್ತು.

 

ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ  ವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷಗಳು ಸದನದಲ್ಲಿ ಒತ್ತಾಯಿಸುತ್ತಿರುವ ಬೆನ್ನಲ್ಲೇ 21.66 ಕೋಟಿ ರು. ಅನುದಾನವನ್ನು ಬಿಡುಗಡೆ ಮಾಡಿರಲಿಲ್ಲ ಎಂಬ ಅಂಶವು ಮುನ್ನೆಲೆಗೆ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು 2024ರ ಫೆ.2ರಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗಂಗಾ ಕಲ್ಯಾಣ ಯೋಜನೆಗೆ 2023-24ನೇ ಸಾಲಿಗೆ ಒಟ್ಟಾರೆ 65.00 ಕೋಟಿ ರು. ನಿಗದಿಪಡಿಸಿತ್ತು. ಮೊದಲ ಮತ್ತು ಎರಡನೇ ತ್ರೈಮಾಸಿಕ ಹಾಗೂ ಮೂರನೇ ಕಂತಿನಲ್ಲಿ 43.33 ಕೋಟಿ ರು ಮಾತ್ರ ಬಿಡುಗಡೆಯಾಗಿತ್ತು. ಆದರೆ ಇದಕ್ಕೆ ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿರಲಿಲ್ಲ. ಹೀಗಾಗಿ ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ 21.66 ಕೋಟಿ ರು., 2024ರ ಫೆ.2ರವರೆಗೆ ಬಿಡುಗಡೆಯಾಗಿರಲಿಲ್ಲ ಎಂಬುದು ಪತ್ರದಿಂದ ತಿಳಿದು ಬಂದಿದೆ.

 

ಸ್ವಯಂ ಉದ್ಯೋಗ ಯೋಜನೆಗೆ ರಾಜ್ಯ ಸರ್ಕಾರು 60.00 ಕೋಟಿ, ಪರಿಶಿಷ್ಟ ಪಗಂಡಗದವರಿಗೆ ಸ್ವ ಸಹಾಯ ಗುಂಪುಗಳ ಮೂಲಕ ವಿಸ್ತೃತ ಸಾಲ (ಸಹಾಯಧನ) ಕ್ಕೆ 50.00 ಕೋಟಿ ರು., ಗಂಗಾ ಕಲ್ಯಾಣ ಯೋಜನೆಗೆ 65.00 ಕೋಟಿ ರು. ಸೇರಿ ಒಟ್ಟಾರೆ 175 ಕೋಟಿ ರು.ಗಳನ್ನು ನಿಗದಿಪಡಿಸಲಾಗಿತ್ತು.

 

ಈ ಪೈಕಿ ಸ್ವಯಂ ಉದ್ಯೋಗ ಯೋಜನೆಗೆ 15.00 ಕೋಟಿ ರು.ಕ ಸ್ವ ಸಹಾಯ ಗುಂಪುಗಳ ಮೂಲಕ ವಿಸ್ತೃತ ಸಾಲ ಸಾಲ ಸಹಾಯ ಧನ ಯೋಜನೆಗೆ 12.50 ಕೋಟಿ ರು. ಅನುದಾನ ನಿಗದಿಯಾಗಿತ್ತು ಎಂಬುದು ಪತ್ರದಿಂದ ಗೊತ್ತಾಗಿದೆ.

 

ಈ ಪ್ರಕರಣದಲ್ಲಿ ಈಗಾಗಲೇ ಸಚಿವ ಬಿ ನಾಗೇಂದ್ರ ಅವರ ತಲೆದಂಡವೂ ಆಗಿದೆ. ಅಲ್ಲದೇ ಅವರನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ.

 

ಈ ಪ್ರಕರಣದಲ್ಲಿ  ಆರೋಪಿತ ಅಧಿಕಾರಿಯೊಬ್ಬರು ನ್ಯಾಯಾಲಯಕ್ಕೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು.  ಈ  ಪತ್ರದಲ್ಲಿ ವಿಧಾನಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವರ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ರಕ್ಷಿಸಿಡಬೇಕು ಮತ್ತು ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಕೋರಿದ್ದರು.

 

ಆರೋಪಿ ಅಧಿಕಾರಿಯ ಮನವಿಯಲ್ಲೇನಿತ್ತು?

 

ನಿಗಮದ ಅಧ್ಯಕ್ಷರಾದ ಬಸವರಾಜ್ ದದ್ದಲ್ ಜೊತೆ ನಡೆಸಿರುವ ಸಂಭಾಷಣೆಯನ್ನು ಎಸ್‌ಐಟಿ  ವಶಪಡಿಸಿಕೊಂಡಿದ್ದು ಅದನ್ನು ನಾಶ ಮಾಡುವ ಸಂಭವವಿರುತ್ತದೆ. ಹಾಗಾಗಿ ಅದರ ಒಂದು ಪ್ರತಿಯನ್ನು ನ್ಯಾಯಾಲಯ  ಪಡೆದುಕೊಳ್ಳಬೇಕು. ವಿಧಾನಸೌಧದಲ್ಲಿರುವ ಉನ್ನತ ಶಿಕ್ಷಣ ಸಚಿವರ ಅವರ ಕಾರ್ಯಾಲಯದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಯೂನಿಯನ್ ಬ್ಯಾಂಕಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ನಾಶ ಮಾಡುವ ಸಂಭವವಿದ್ದು ಅವುಗಳನ್ನು ಕೂಡ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ಆರೋಪಿತ ಅಧಿಕಾರಿಯು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.

 

ಆರೋಪಿತ ಅಧಿಕಾರಿಯು ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರವನ್ನಾಧರಿಸಿ ಪ್ರತಿಪಕ್ಷ ಬಿಜೆಪಿಯೂ ಟ್ವೀಟ್‌ ಮಾಡಿತ್ತು.

 

‘ಕಾಂಗ್ರೆಸ್ಸಿನ ಬಹುತೇಕ ನಾಯಕರು ಸೇರಿಕೊಂಡು ಮಾಡಿರುವ ಮಹಾನ್ ಭ್ರಷ್ಟಾಚಾರ. ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಭಾಗಿಯಾಗಿರುವ ಈ ಒಂದು ಹಗರಣವನ್ನು ಎಸ್ಐಟಿ ನಿಷ್ಪಕ್ಷಪಾತ ತನಿಖೆ ನಡೆಸುವುದು ಅಸಾಧ್ಯ, ಆದಕಾರಣ ಸಿದ್ದರಾಮಯ್ಯನವರು ಈ ಪ್ರಕರಣವನ್ನು ಸಿಬಿಐಗೆ ವಹಿಸಿ ತಾವು ಕೂಡ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು,’ ಎಂದು ಆಗ್ರಹಿಸಿದೆ.

the fil favicon

SUPPORT THE FILE

Latest News

Related Posts