ಬೆಂಗಳೂರು; ದಾವಣಗೆರೆ ಜಿಲ್ಲೆಯ ಸಂತೆಬೆನ್ನೂರು ಗ್ರಾಮದ ಗುತ್ತಿಗೆದಾರ ಪಿ ಎಸ್ ಗೌಡರ್ ಆತ್ಮಹತ್ಯೆ ಪ್ರಕರಣವು ರಾಜಕೀಯಕರಣಗೊಂಡಿರುವ ಬೆನ್ನಲ್ಲೇ ಇದೇ ಪ್ರಕರಣದಲ್ಲಿ ಕ್ರಿಡಿಲ್ 7 ಕಾಮಗಾರಿಗಳನ್ನು ಒಗ್ಗೂಡಿಸಿ ಒಂದೇ ಕಾಮಗಾರಿಯನ್ನಾಗಿ ಬದಲಾವಣೆ ಮಾಡಿಕೊಂಡಿತ್ತು ಎಂಬುದು ಇದೀಗ ಬಹಿರಂಗವಾಗಿದೆ.
ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ತ್ರಿಸದಸ್ಯರ ಸಮಿತಿ ರಚಿಸಿ 2024ರ ಮೇ 30ರಂದು ಹೊರಡಿಸಿರುವ ಆದೇಶದಲ್ಲಿ ಈ ಮಾಹಿತಿ ಇದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಕಾಮಗಾರಿಗಳನ್ನು ನಡೆಸಲಾಗಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿಕೆ ನೀಡಿದ್ದರು. ಆದರೆ 7 ಕಾಮಗಾರಿಗಳನ್ನು ಒಂದೇ ಕಾಮಗಾರಿಗೆ ಒಗ್ಗೂಡಿಸಿ ಸಲ್ಲಿಸಿದ್ದ ಅಂದಾಜು ಪಟ್ಟಿಗೆ 2024ರ ಫೆ.14ರಂದು ಆಡಳಿತಾತ್ಮಕ ಅನುಮೋದನೆ ನೀಡಿತ್ತು ಎಂಬುದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಪ್ರಿಯಾಂಕ್ ಖರ್ಗೆ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಸಚಿವರಾದ ಅತ್ಯಲ್ಪ ಅವಧಿಯಲ್ಲಿ ಒಂದೇ ಕಾಮಗಾರಿಗೆ ಬದಲಾವಣೆಗೆ ಮಾಡುವ ಪ್ರಸ್ತಾವನೆಯನ್ನು ಕ್ರಿಡಿಲ್ ಸಲ್ಲಿಸಿತ್ತು ಎಂಬುದು ಆದೇಶದಿಂದ ಗೊತ್ತಾಗಿದೆ.
ವಿಶೇಷವೆಂದರೇ ಈ ಪ್ರಕರಣದ ಕುರಿತು ತನಿಖೆ ನಡೆಸಲು ತ್ರಿಸದಸ್ಯರ ಸಮಿತಿ ರಚಿಸಿ ಆದೇಶ ಹೊರಬಿದ್ದ ದಿನದಂದೇ ಕ್ರಿಡಿಲ್‌ನ ಕೇಂದ್ರ ಕಚೇರಿಯು 2024ರ ಮೇ 30ರಂದು ಈ ಅನುದಾನವನ್ನು ಬಿಡುಗಡೆ ಮಾಡಿತ್ತು.
ಆದೇಶದಲ್ಲೇನಿದೆ?
ಕೆಆರ್‍ಐಡಿಎಲ್ (ದಾವಣಗೆರೆ) ಕಾರ್ಯಪಾಲಕ ಅಭಿಯಂತರರು ತಲಾ 5.00 ಲಕ್ಷ ರು. ವೆಚ್ಚದಲ್ಲಿ 7 ಕಾಮಗಾರಿಗಳ ಬದಲಾಗಿ ಸದರಿ ಕಾಮಗಾರಿಗಳನ್ನು ಒಗ್ಗೂಡಿಸಿ 35.00 ಲಕ್ಷ ರು.ಗಳ ಒಂದೇ ಕಾಮಗಾರಿಗೆ ಬದಲಾವಣೆ ಮಾಡಿ ಅನುಮೋದನೆ ನೀಡಲು 2023ರ ಜುಲೈ 29ರಂದು ಕೋರಿದ್ದರು. ಈ ಸಂಬಂಧ 2023ರ ಅಕ್ಟೋಬರ್ 7ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 2024ರ ಜನವರಿ 20ರಂದು 7 ಕಾಮಗಾರಿಗಳನ್ನು ಒಟ್ಟು 35.00 ಲಕ್ಷ ರು. ಒಂದೇ ಕಾಮಗಾರಿಗೆ ಬದಲಾವಣೆ ಮಾಡಿ ಅನುಮೋದನೆ ನೀಡಲಾಗಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.
ಆ ನಂತರ ಕ್ರಿಡಿಲ್‌ನ ಕಾರ್ಯಪಾಲಕ ಅಭಿಯಂತರರು 7 ಕಾಮಗಾರಿಗಳನ್ನು ಒಗ್ಗೂಡಿಸಿ 35.00 ಲಕ್ಷ ರು. ಗಳ ಒಂದೇ ಕಾಮಗಾರಿಯ ಅಂದಾಜು ಪಟ್ಟಿಯನ್ನು ತಯಾರಿಸಿ 2024ರ ಫೆ.3ರಂದು ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು 2024ರ ಫೆ.14ರಂದು ಈ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು ಎಂಬುದು ಗೊತ್ತಾಗಿದೆ.
ಅನುಮೋದನೆಯಾದ 7 ಕಾಮಗಾರಿಗಳ ಅನುಷ್ಠಾನಕ್ಕೆ ಬಿಡುಗಡೆಯಾದ ಅನುದಾನವನ್ನು ಬದಲಾವಣೆಯಾದ ಒಂದು ಕಾಮಗಾರಿಗ ಪಾವತಿಸಲು ಫಾರಂ 9 ಪಡೆಯುವ ಉದ್ದೇಶಕ್ಕಾಗಿ ಕ್ರಿಡಿಲ್‌ನ ಕಾರ್ಯಪಾಲಕ ಅಭಿಯಂತರರು 2024ರ ಫೆ.27ರಂದು ಕೇಂದ್ರ ಕಚೇರಿಗೆ ಹಿಂದಿರುಗಿಸಿದ್ದರು. ಕೇಂದ್ರ ಕಚೇರಿಯು 2024ರ ಮೇ 30ರಂದು ಈ ಅನುದಾನವನ್ನು ಬಿಡುಗಡೆ ಮಾಡಿತ್ತು.
ದಾವಣಗೆರೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ ಎಸ್ ಗೌಡರ್ ಅವರು 2024ರ ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ವರದಿ ಸಲ್ಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲು ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ 2024ರ ಮೇ 30ರಂದು ಆದೇಶ ಹೊರಡಿಸಿದ್ದಾರೆ.
ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರಾದ ಪ್ರಿಯಾಂಕ ನೀಷ್ಮಾ ಡಿ ಕೋಸ್ಟ, ಪ್ರಭಾರ ಅಧೀಕ್ಷಕ ಇಂಜಿನಿಯರ್ ಅಮರಪ್ಪ ಅವರು ಸಮಿತಿ ಸದಸ್ಯರಾಗಿದ್ದಾರೆ.
ಕ್ರಿಡಿಲ್‌ನಿಂದ ಬಾರದ ಬಾಕಿ ಹಣ; ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ, ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ
ಗುತ್ತಿಗೆದಾರ ಪಿ ಎಸ್ ಗೌಡರ್ ಎಂಬುವರು 2024ರ ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಮಗಾರಿ ನಡೆಸಿದ್ದರ ಸಂಬಂಧ ಹಣ ಬಿಡುಗಡೆ ಮಾಡಿಲ್ಲ, ಅಧಿಕಾರಿಗಳು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಪಿ ಎಸ್ ಗೌಡರ್ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವುದನ್ನು ಸ್ಮರಿಸಬಹುದು.