ಬೆಂಗಳೂರು; ಸಿಇಟಿ ಪರೀಕ್ಷೆಯಲ್ಲಿ ಪಠ್ಯಕ್ರಮದಿಂದ ಹೊರತಾಗಿರುವ ಪ್ರಶ್ನೆಗಳ ಕುರಿತು ವಿವರವಾದ ತನಿಖೆ ನಡೆಸಲು ಈಗಾಗಲೇ ತಜ್ಞರ ಸಮಿತಿ ರಚಿಸಿರುವ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮುಂದಿನ ದಿನಗಳಲ್ಲಿ ಪರೀಕ್ಷೆಗಳನ್ನು ನಡೆಸುವ ಸಂಬಂಧ ಸೂಕ್ತ ಕಾರ್ಯವಿಧಾನ(ಎಸ್‌ಒಪಿ) ರೂಪಿಸಲು ಮತ್ತೊಂದು ಸಮಿತಿ ರಚಿಸಿದೆ.
ಪರೀಕ್ಷಾ ಪ್ರಾಧಿಕಾರವು ಹಲವು ವರ್ಷಗಳಿಂದಲೂ ಸಿಇಟಿ ಪರೀಕ್ಷೆ ನಡೆಸುತ್ತಿದೆಯಾದರೂ ಸರಿಯಾದ ಕಾರ್ಯವಿಧಾನವನ್ನು ರೂಪಿಸಿಕೊಂಡಿರಲಿಲ್ಲ. ಹೀಗಾಗಿ ಹಲವು ಪ್ರಮಾದಗಳು ಸಂಭವಿಸಿದ್ದವು. 2024ನೇ ಸಾಲಿನಲ್ಲಿ ನಡೆದಿದ್ದ ಸಿಇಟಿಯಲ್ಲಿಯೂ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಕೇಳಿದ್ದ ಪ್ರಕರಣದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಆರೋಪಿತ ಅಧಿಕಾರಿಯಿಂದಲೇ ಎಸ್‌ಒಪಿ ರೂಪಿಸಲು ನೇಮಿಸಿತ್ತು.
ಪೋಷಕರ ವಲಯದಲ್ಲಿ ಟೀಕೆಗೆ ಗುರಿಯಾದ ನಂತರ ಸರ್ಕಾರವು ಇದೀಗ ಸೂಕ್ತ ಕಾರ್ಯವಿಧಾನವನ್ನು ರೂಪಿಸಿ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಅಪರ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಐಎಎಸ್ ಅಧಿಕಾರಿ ಡಿ ಎನ್ ನರಸಿಂಹರಾಜು ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
2024ರ ಮೇ 9ರಂದು ಉನ್ನತ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
2024ನೇ ಸಾಲಿನಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ (ಸಿಇಟಿ) ಪರೀಕ್ಷೆಯಲ್ಲಿ ಪಠ್ಯಕ್ರಮದಿಂದ ಹೊರತಾಗಿದ್ದ ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಸಂಬಂಧ ಕೆಇಎನ ಕಾರ್ಯನಿರ್ವಾಹಕ ಅಧಿಕಾರಿಯನ್ನು ಹೊಣೆಗಾರಿಕೆ ಮಾಡಬೇಕಿದ್ದ ಸರ್ಕಾರವು ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿರಲಿಲ್ಲ. ಬದಲಿಗೆ ಆ ಜಾಗದಿಂದ ವರ್ಗಾವಣೆ ಮಾಡಿ ಕೈತೊಳೆದುಕೊಂಡಿತ್ತು.
ಕರ್ನಾಟಕ ಪರೀಕ್ಷೆ ಪ್ರಾಧಿಕಾರವು ಮುಂದಿನ ದಿನಗಳಲ್ಲಿ ಪರೀಕ್ಷೆಗಳನ್ನು ಹೇಗೆ ನಡೆಸಬೇಕು ಎಂಬುದೂ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದಂತೆ ವಿವರವಾದ ಕಾರ್ಯ ವಿಧಾನ (ಎಸ್‌ಒಪಿ)ವನ್ನು ಅಳವಡಿಸಿಕೊಳ್ಳಲು ಸೂಕ್ತ ಶಿಫಾರಸ್ಸುಗಳನ್ನು ಮಾಡಲು ಡಿ ಎನ್ ನರಸಿಂಹರಾಜು ಅವರನ್ನು ನೇಮಿಸಿರುವುದು ಆದೇಶದಿಂದ (ಇಡಿ173 ಟಿಇಸಿ 2024) ತಿಳಿದು ಬಂದಿದೆ.
ಮುಂದಿನ ಸಾಲಿನಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪರೀಕ್ಷೆ ನಡೆಸುವ ಸಂದರ್ಭದಲ್ಲಿ ಪ್ರಾಧಿಕಾರವು ಹೇಗೆ ಕಾರ್ಯನಿರ್ವಹಿಸಬೇಕು, ಪ್ರಶ್ನೆ ಪತ್ರಿಕೆಗಳನ್ನು ತಯಾರಿಸುವ ವಿಧಾನ, ಮೌಲ್ಯಮಾಪನ ಮಾಡಲು (ವಿವರಣಾತ್ಮಕ ಮತ್ತು ಬಹು ಆಯ್ಕೆ ಪ್ರಶ್ನೆಗಳನ್ನೂ ಒಳಗೊಂಡಂತೆ) ಶ್ರೇಣಿಗಳನ್ನು ಅಂತಿಮಗೊಳಿಸುವ ಸಂಬಂಧ ನರಸಿಂಹರಾಜು ಸಮಿತಿಯು ಶಿಫಾರಸ್ಸುಗಳನ್ನು ಮಾಡಲಿದೆ ಎಂದು ಗೊತ್ತಾಗಿದೆ.
ಸಿಇಟಿ ಪರೀಕ್ಷೆಯಲ್ಲಿ ಭಾರೀ ಸಂಖ್ಯೆಯ ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಿಂದ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಗೊಂದಲ, ಆತಂಕ ಉಂಟಾಗಿತ್ತು. ಪರೀಕ್ಷೆಯ ಬಳಿಕ ಪತ್ರಿಕೆಗಳ ಹಲವಾರು ಪ್ರಶ್ನೆಗಳು ಸಿಇಟಿಯ ವಠ್ಯಕ್ರಮದ ಹೊರತಾಗಿವೆ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಹೀಗಾಗಿ ಯಾವ್ಯಾವ ವಿಷಯದಲ್ಲಿ ಎಷ್ಟೆಷ್ಟು ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಈ ಪ್ರಕರಣದ ಬಗ್ಗೆ ಸರ್ಕಾರವು ಪರಿಶೀಲನೆ ನಡೆಸಿತ್ತು. ಸಿಇಟಿಯ ಪಠ್ಯಕ್ರಮದಿಂದ ಹೊರತಾಗಿರುವ ಪ್ರಶ್ನೆಗಳ ಸಂಖ್ಯೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಪ್ರತಿ 4 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ತಜ್ಞರ ಸಮಿತಿಯನ್ನು ರಚಿಸಿತ್ತು.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯಿಂದ ಏ.18 ಮತ್ತು 19ರಂದು ನಡೆಸಲಾಗಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಸೇರಿದಂತೆ ನಾಲ್ಕು ವಿಷಯಗಳಲ್ಲಿ ನಡೆಸಲಾಗಿತ್ತು. ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಹಲವು ವರ್ಷಗಳಿಂದಲೂ ಸಿಇಟಿ ಪರೀಕ್ಷೆ ನಡೆಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದಕ್ಕೊಂದು ಸೂಕ್ತ ಕಾರ್ಯವಿಧಾನವನ್ನೇ ರೂಪಿಸಿಕೊಂಡಿರಲಿಲ್ಲ. ಹೀಗಾಗಿ ಪರೀಕ್ಷೆ ಸಿದ್ಧತೆಯಿಂದ ಹಿಡಿದು ಹಲವು ಸಂದರ್ಭಗಳಲ್ಲಿ ಪ್ರಮಾದಗಳನ್ನು ಎಸಗುತ್ತಿತ್ತು. ಕಳೆದ ಮೂರೂವರೆ ವರ್ಷಕ್ಕೂ ಮೇಲ್ಪಟ್ಟು ಪ್ರಾಧಿಕಾರದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮ್ಯ ಅವರು 2 ಬಾರಿ ವರ್ಗಾವಣೆಗೊಂಡಿದ್ದರೂ ಅದೇ ಸ್ಥಳದಲ್ಲಿ ಪ್ರಭಾವ ಬೀರಿ ಮುಂದುವರೆದಿದ್ದರು.