ಬೆಂಗಳೂರು; ಕರ್ನಾಟಕ ಗಣಿ ಪರಿಸರ ಪುನಃಶ್ಚೇತನ ನಿಗಮದ ಮೇಲ್ವಿಚಾರಣೆ ಪ್ರಾಧಿಕಾರದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರಿಗೆ ಅಪರಿಚಿತರು ವಾಟ್ಸಾಪ್ ಸಂದೇಶ ಕಳಿಸುತ್ತಿದ್ದಾರೆ. ಅಲ್ಲದೇ ಕೆಲವರು ಅನಧಿಕೃತವಾಗಿ ಅವರ ಮನೆಗೂ ಹೋಗುತ್ತಿದ್ದಾರೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ಗಣಿಭಾದಿತ ಪ್ರದೇಶಗಳ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಇಲಾಖೆಗಳು ಸಲ್ಲಿಸಿರುವ ವಿಸ್ತೃತ ಯೋಜನೆಗಳ ಪ್ರಸ್ತಾವನೆ ಕುರಿತು 2024ರ ಫೆ.9 ಮತ್ತು 10ರಂದು ನಡೆದ ಸಭೆಯಲ್ಲಿ ಈ ಸಂಗತಿಯು ಬಹಿರಂಗವಾಗಿದೆ.
ಈ ಎರಡೂ ಸಭೆಗಳ ನಡವಳಿಗಳಲ್ಲಿ ಈ ಅಂಶವನ್ನು ದಾಖಲಿಸಲಾಗಿದೆ. ಈ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಇತ್ತೀಚೆಗಷ್ಟೇ ತುಮಕೂರಿನ ಗುಬ್ಬಿ ತಾಲೂಕಿನ ಗಣಿಬಾಧಿತ ಪ್ರದೇಶದಲ್ಲಿ ಸಮಗ್ರ ಪರಿಸರ ಯೋಜನೆ (CEPMIZ) ಕಾಮಗಾರಿಯನ್ನು ಕೈಗೆತ್ತಿಕೊಳ್ಳುವುದರ ಸಂಬಂಧ ಸ್ಥಳೀಯ ಶಾಸಕ ಮತ್ತು ಗುತ್ತಿಗೆದಾರ ನಡುವೆ ಮಾರಾಮಾರಿ ನಡೆದಿತ್ತು. ಇದರ ಬೆನ್ನಲ್ಲೇ ಮೇಲ್ವಿಚಾರಣೆ ಪ್ರಾಧಿಕಾರದ ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರಿಗೆ ಅಪರಿಚಿತರು ವಾಟ್ಸಾಪ್ ಸಂದೇಶ ಕಳಿಸುತ್ತಿರುವುದು ಮುನ್ನೆಲೆಗೆ ಬಂದಿದೆ.
‘ಅಪರಿಚಿತರು ವಾಟ್ಸ್ಆಪ್ ಮೆಸೇಜ್‌ಗಳನ್ನು ಕಳಿಸುತ್ತಾರೆ. ಇನ್ನು ಕೆಲವರು ಅನಧಿಕೃತವಾಗಿ ಮನೆಗೆ ಬರುತ್ತಾರೆ. ಇಂತವರಿಗೆಲ್ಲಾ ಮಾಹಿತಿಯನ್ನು ಕೆಎಂಇಆರ್‌ಸಿ ಮತ್ತು ಎಂಡಿ, ಕೆಎಂಇಆರ್‌ಸಿಗೆ ರವಾನಿಸಿ ಎಂದು ಸೂಚಿಸಿದ್ದೇನೆ. ಮತ್ತು ಈ ಸಂಬಂಧ ಸೂಕ್ತ ಕ್ರಮ ಜರುಗಿಸಬೇಕು,’ ಎಂದು ಪ್ರಾಧಿಕಾರದ ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರು ಸೂಚಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಗಣಿ ಬಾಧಿತ ಪ್ರದೇಶಗಳಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಅಭಿವೃದ್ಧಿಗೆ ಪೂರಕವಾಗಿ ಹಲವು ಇಲಾಖೆಗಳು ಪ್ರಸ್ತಾವನೆಗಳನ್ನು ಸಲ್ಲಿಸಿವೆ. ಆದರೆ ಬಹುತೇಕ ವಿಸ್ತೃತ ಯೋಜನಾ ವರದಿಗಳಲ್ಲಿ ಹಲವಾರು ನ್ಯೂನತೆಗಳಿದ್ದವು. ಬಹುತೇಕ ಯೋಜನೆಗಳ ಪ್ರಸ್ತಾವನೆಗಳು ಮತ್ತು ಮತ್ತು ಡಿಪಿಆರ್ಗಳ ನಡುವೆ ಭಾರೀ ವ್ಯತ್ಯಾಸಗಳಿದ್ದವು. ಮತ್ತು ಈ ಯೋಜನೆಗಳ ಪ್ರಸ್ತಾವನೆಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಇಲಾಖೆಗಳ ಮುಖ್ಯಸ್ಥರು ಪರಿಶೀಲನೆಯನ್ನೇ ನಡೆಸಿಲ್ಲ ಎಂಬುದು ತಿಳಿದು ಬಂದಿದೆ.
‘ಹಲವು ಡಿಪಿಆರ್‌ಗಳನ್ನು ಗಮನಿಸಿದ ನಂತರ ಡಿಪಿಆರ್‌ಗಳಲ್ಲಿ ಹಲವಾರು ನ್ಯೂನ್ಯತೆಗಳು ಇರುವುದು ಕಂಡುಬಂದಿತು ಮತ್ತು ಮೇಲುಸ್ತುವಾರಿ ಪ್ರಾಧಿಕಾರವು ಪ್ರಾಮಾಣಿಕವಾಗಿ ಪರಿಶೀಲಿಸಿದೆ. ಹಲವಾರು ಯೋಜನೆಗಳ ಪ್ರಸ್ತಾವನೆಗಳು ಮತ್ತು ಡಿಪಿಆರ್ಗಳ ನಡುವೆ ಭಾರಿ ವ್ಯತ್ಯಾಸಗಳಿವೆ. ಪ್ರಸ್ತಾವನೆ ಸಲ್ಲಿಸುವ ಮುನ್ನ ಇಲಾಖೆ ಪರಿಶೀಲನೆ ನಡೆಸಿಲ್ಲ. ಇದರಿಂದಾಗಿ ಡಿಪಿಆರ್‌ಗಳಿಗೆ ಅನುಮೋದನೆ ನೀಡಲು ವಿಳಂಬವಾಯಿತು ಮತ್ತು ಆಡಳಿತಾತ್ಮಕ ಅನುಮೋದನೆ ನೀಡಲು ತಡವಾಯಿತು,’ ಎಂದು ನಡವಳಿಯಲ್ಲಿ ದಾಖಲಾಗಿರುವುದು ಗೊತ್ತಾಗಿದೆ.
ಡಿಪಿಆರ್ ತಯಾರಿಸಲು ಮಾರ್ಗಸೂಚಿಗಳು ಮತ್ತು ಸಂಬಂಧ ಹಲವರೊಂದಿಗೆ ಚರ್ಚೆಗಳು ನಡೆದಿವೆ. ಸಿಇಸಿ ವರದಿಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ ಆದೇಶಗಳ ಹಿನ್ನೆಯಲ್ಲಿ ಅನುಮೋದನೆಯನ್ನು ಸಿದ್ಧಪಡಿಸಲಾಗಿದೆ. ಮೇಲ್ವಿಚಾರಣಾ ಪ್ರಾಧಿಕಾರ ಮಾರ್ಗಸೂಚಿಗಳನ್ನು ಸಭೆಯು ಅನುಮೋದಿಸಿರುವುದು ತಿಳಿದು ಬಂದಿದೆ.
ಉಳಿದ ಪ್ರಸ್ತಾವನೆಗಳನ್ನು ತ್ವರಿತವಾಗಿ ಸಿದ್ಧಪಡಿಸಿ ಅನುಮೋದನೆ ಪಡೆಯಬೇಕು. ಇದಕ್ಕೆ ಅನುಗುಣವಾಗಿ ನಾಲ್ಕು ಜಿಲ್ಲೆಗಳಲ್ಲಿ ಎಂಜಿನಿಯರಿಂಗ್ ಕೋಶವನ್ನು ಸ್ಥಾಪಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತ್ವರಿತವಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.
‘ಯೋಜನೆಯೊಂದಿಗೆ ಸಂಬಂಧ ಹೊಂದಿರುವ ಅಧಿಕಾರಿಗಳು/ಪಿಎಂಯು ಪರಿಣಿತರನ್ನು ಆಗಿಂದಾಗ್ಗೆ ಬದಲಾಯಿಸಬೇಕು. ಯೋಜನೆಯನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರಬೇಕು. ನೇಮಕಾತಿಯು ಅಗತ್ಯಕ್ಕೆ ಅನುಸಾರವಾಗಿ ಇರಬೇಕು. ಹೆಚ್ಚಿನ ಅಧಿಕಾರಿಗಳನ್ನು ನೇಮಿಸಿಕೊಂಡಲ್ಲಿ ಯೋಜನೆ ಮೇಲೆ ಹಣಕಾಸು ಹೊರೆಯಾಗಲಿದೆ. ಅಧಿಕಾರಿಗಳು ಮತ್ತು ಎಲ್ಲ ವಿಶೇಷ ತಜ್ಞರನ್ನು ಒಳಗೊಂಡಂತೆ ಎಲ್ಲ ನೇಮಕಾತಿಗಳು ಒಎ ಗಮನಕ್ಕೆ ತರಬೇಕು ಮತ್ತು ನಂತರವೇ ನೇಮಕಾತಿ ಮಾಡಿಕೊಳ್ಳಬೇಕು,’ ಎಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.
ಜೆಎಸ್‌ಡಬ್ಲ್ಯೂಯುನ 8.65 ಕಿ.ಮೀ ರೈಲ್ವೆ ಲೈನನ್ನು ಬಳಸಿಕೊಳ್ಳಲು ಎನ್‌ಒಸಿ ನೀಡಲಾಗಿರುವುದು ಮತ್ತು ಈ ಎನ್‌ಒಸಿ, ಡಿಪಿಆರ್‌ಗಳಿಗೂ ಅನುಮೋದನೆ ದೊರೆತಿದೆ. ರೈಲ್ವೆ ಲೈನ್‌ನ್ನು ಜೆಎಸ್‌ಡಬ್ಲ್ಯೂ ಬಳಕೆ ಮಾಡಿಕೊಳ್ಳುವ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಪ್ರಾಧಿಕಾರದ ವಕೀಲರಿಂದ ಕಾನೂನು ಸಲಹೆ ಪಡೆದುಕೊಳ್ಳುವಂತೆ ಸೂಚಿಸಿರುವುದು ಗೊತ್ತಾಗಿದೆ.
ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಈ 4 ಜಿಲ್ಲೆಗಳ 466 ಗ್ರಾಮಗಳನ್ನು ಗಣಿ ಬಾಧಿತ ಎಂದು ಘೋಷಿಸಲಾಗಿದ್ದು, ಈ ಗ್ರಾಮಗಳ ಅಭಿವೃದ್ಧಿಗೆ ಸುಪ್ರೀಂಕೋರ್ಟ್ 24,996.71 ಕೋ. ರೂ. ಅಂದಾಜು ವೆಚ್ಚದ ಕ್ರಿಯಾ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತಿದೆ. ಈ ಪ್ರಾಧಿಕಾರವು ಈವರೆಗೆ 4 ಜಿಲ್ಲೆಗಳಲ್ಲಿ ಒಟ್ಟು 7634.96 ಕೋ. ರೂ. ಮೊತ್ತದ 317 ಪ್ರಸ್ತಾವನೆಗಳನ್ನು ಅನುಮೋದಿಸಿದೆ.
ಅರಣ್ಯ ಅಭಿವೃಧಿ, ಪರಿಸರ ಪುನ:ಶ್ಚೇತನ, ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು, ನೀರಾವರಿ, ಕುಡಿಯುವ ನೀರು, ನೈರ್ಮಲ್ಯ ಹಾಗೂ ಗ್ರಾಮೀಣ ರಸ್ತೆಗಳು, ಆರೋಗ್ಯ, ಶಿಕ್ಷಣ, ದುರ್ಬಲ ವರ್ಗಗಳ ಅಭಿವೃದ್ಧಿ, ವಸತಿ, ಕೌಶಲ್ಯ ಅಭಿವೃದ್ದಿ, ಪ್ರವಾಸೋದ್ಯಮ, ಮುಂತಾದ ಶೀರ್ಷಿಕೆಗಳಡಿ ಸಮಗ್ರವಾದ ಯೋಜನೆಯನ್ನು ರೂಪಿಸಿರುವುದನ್ನು ಸ್ಮರಿಸಬಹುದು.