15ನೇ ಹಣಕಾಸು; ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಕಂತಿನಲ್ಲೇ 821.70 ಕೋಟಿ ರು. ಬಾಕಿ

ಬೆಂಗಳೂರು; 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ 2023-24ನೇ ಸಾಲಿನ ಮೊದಲ ಕಂತಿನಲ್ಲಿ ಗ್ರಾಮ ಪಂಚಾಯ್ತಿ ಸೇರಿದಂತೆ ರಾಜ್ಯದ ಗ್ರಾಮೀಣ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದ ಒಟ್ಟು ಮೊತ್ತದ ಪೈಕಿ 821.70 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.

 

ಮೊದಲ ಕಂತಿನಲ್ಲಿ ಬಾಕಿ ಉಳಿಸಿಕೊಂಡಿರುವ 821.70 ಕೋಟಿ ರು.ಗಳನ್ನು ಬಿಡುಗಡೆಗೊಳಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಪಿ ಸಿ ಜಾಫರ್‍‌ ಅವರು 2023ರ ಅಕ್ಟೋಬರ್‍‌ 31ರಂದು ಕೇಂದ್ರ ಸರ್ಕಾರದ ಆರ್ಥಿಕ ಸಚಿವಾಲಯದ ನಿರ್ದೇಶಕ ಆಭಯ್‌ಕುಮಾರ್‍‌ ಅವರಿಗೆ ಪತ್ರ (FD-28/FCC/2020-31-10-2023) ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದರ ಬೆನ್ನಲ್ಲೇ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಬರೆದಿರುವ ಪತ್ರವೂ ಮುನ್ನೆಲೆಗೆ ಬಂದಿದೆ.

 

ರಾಜ್ಯದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮೊದಲ ಕಂತಿನಲ್ಲಿ ನಿರ್ಬಂಧಿತ ಅನುದಾನವೂ ಸೇರಿದಂತೆ ಒಟ್ಟಾರೆ 1,245 ಕೋಟಿ ರು. ಹಂಚಿಕೆ ಆಗಿತ್ತು. ನಿರ್ಬಂಧಿತ ಅನುದಾನವೆಂದು  747.00 ಕೋಟಿ ರು. ಹಂಚಿಕೆಯಾಗಿದ್ದರೂ 2023ರ ಅಕ್ಟೋಬರ್‍‌ ಅಂತ್ಯದವರೆಗೂ ಬಿಡಿಗಾಸೂ ಕೂಡ ಬಂದಿಲ್ಲ. ಈ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಅವರೂ ಸಹ ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು.

 

15ನೇ ಹಣಕಾಸು ಆಯೋಗ; ಬಿಡಿಗಾಸೂ ನೀಡದ ಕೇಂದ್ರ, 551.53 ಕೋಟಿ ಮರಳಿಸಿದ ಆರೋಗ್ಯ ಇಲಾಖೆ

 

ಉಳಿದಂತೆ ಬೇಸಿಕ್‌ (ಯುನೈಟೆಡ್‌) ವಿಭಾಗದಲ್ಲಿ ಹಂಚಿಕೆಯಾಗಿದ್ದ 498 ಕೋಟಿ ರು. ನಲ್ಲಿ 423.30 ಕೋಟಿ ರು. ಅನುದಾನವನ್ನು ರಾಜ್ಯ ಸರ್ಕಾರವು ಸ್ವೀಕರಿಸಿದೆ. ಇದರಲ್ಲಿ ಕೇಂದ್ರ ಸರ್ಕಾರವು ಇನ್ನೂ 74.70 ಕೋಟಿ ರು. ಸೇರಿದಂತೆ ಒಟ್ಠಾರೆ 821.70 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಬರೆದಿರುವ ಪತ್ರದಿಂದ ಗೊತ್ತಾಗಿದೆ.

 

2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ಮಂತ್ರಾಲಯದಿಂದ 15ನೇ ಹಣಕಾಸು ಆಯೋಗದಡಿ ಬರಬೇಕಾಗಿರುವ ಬಾಕಿ ಅನುದಾನದ ಮೊತ್ತದ ವಿವರವನ್ನು ಆರ್ಥಿಕ ಇಲಾಖೆಯು 2023ರ ಅಕ್ಟೋಬರ್‍‌ 6ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗೆ ಕೋರಿತ್ತು. 2023-24ರ ಕೇಂದ್ರದ ಹಣಕಾಸು ಆಯೋಗದ ಅನುದಾನವನ್ನು ಪಡೆಯಲು ಅವಶ್ಯವಿರುವ ಷರತ್ತುಗಳನ್ನು ಪೂರೈಸಲಾಗಿದೆಯೇ? ಅದರಂತೆ ತಮ್ಮ ಇಲಾಖೆಗೆ ಇದುವರೆವಿಗೂ ಬಿಡುಗಡೆಯಾಗಿ ಉಳಿದ ಅನುದಾನವನ್ನು ಕೇಂದ್ರ ಸರ್ಕಾರದಿಂದ ಪಡೆಯಲು ಇಲಾಖೆ ವತಿಯಿಂದ ಕೈಗೊಂಡ ಕ್ರಮಗಳ ಮಾಹಿತಿ ಒದಗಿಸಬೇಕು ಎಂದು ಕೋರಿತ್ತು ಎಂಬುದು ತಿಳಿದು ಬಂದಿದೆ.

 

ಇದಕ್ಕೆ ಉತ್ತರ ಒದಗಿಸಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆಯು 15ನೇ ಹಣಕಾಸು ಆಯೋಗದಡಿ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌ ಇಲಾಖೆಗೆ 821.70 ಕೋಟಿ ರು. ಬಾಕಿ ಬರಬೇಕಾಗಿದೆ ಎಂದು ವಿವರ ನೀಡಿತ್ತು.

 

 

15ನೇ ಹಣಕಾಸು ಆಯೋಗ; ರಾಜ್ಯ ವಿಪತ್ತು ನಿರ್ವಹಣೆಗೆ ಈವರೆಗೂ ಬಿಡುಗಡೆಯಾಗದ ಅನುದಾನ

15ನೇ ಹಣಕಾಸು ಆಯೋಗದ 2020-21ರ ಪ್ರಕಾರ ವಿಶೇಷ ಅನುದಾನವಾಗಿ 5,495 ಕೋಟಿ ರೂ. ಶಿಫಾರಸು ಮಾಡಲಾಗಿತ್ತು. 2021-22ರಲ್ಲಿ ಹಣಕಾಸು ಆಯೋಗ 6 ಸಾವಿರ ಕೋಟಿ ರೂ. ಅನ್ನು ಬೆಂಗಳೂರಿನ ನೀರಾವರಿ ಕಾಮಗಾರಿ ಮತ್ತು ಪೆರಿಫರಲ್ ರಸ್ತೆ ನಿರ್ಮಾಣಕ್ಕೆ ನೀಡಿತ್ತು.

 

14ನೆ ಹಣಕಾಸು ಆಯೋಗವು 2020-21 ರಿಂದ 2025-26ನೆ ಸಾಲಿಗೆ ತೆರಿಗೆ ಹಂಚಿಕೆಯಲ್ಲಿ ರಾಜ್ಯದ ಪಾಲನ್ನು ಶೇ.4.71ರಷ್ಟು ನಿಗದಿ ಮಾಡುವಂತೆ ಶಿಫಾರಸ್ಸು ಮಾಡಿದ್ದರೂ 15ನೆ ಹಣಕಾಸು ಆಯೋಗವು ಈ ಪ್ರಮಾಣವನ್ನು ಶೇ.3.647ಕ್ಕೆ ಇಳಿಸಿತ್ತು.

 

2021-22 ರಿಂದ 2025-26 ರ ಐದು ವರ್ಷಗಳವರೆಗೆ 15 ನೇ ಹಣಕಾಸು ಆಯೋಗವು ಶಿಫಾರಸು ನೀರು ಮತ್ತು ನೈರ್ಮಲ್ಯಕ್ಕಾಗಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು (ಆರ್‌ಎಲ್‌ಬಿಗಳು)/ ಪಂಚಾಯತ್‌ಗಳಿಗೆ 1,42,084 ಕೋಟಿ ರು.ಗಳನ್ನು ನಿಗದಿಪಡಿಸಿತ್ತು.

 

ರಾಜ್ಯದಲ್ಲಿರುವ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು ಅನುದಾನದ ಪೈಕಿ ಶೇ.40ರಷ್ಟು ಅನುದಾನವು ಮೂಲ (ಅನಿರ್ಬಂಧಿತ )ಮತ್ತು ಶೇ.60ರಷ್ಟು ಅನುದಾನವು ನಿರ್ಬಂಧಿತ ಅನುದಾನವಾಗಿರುತ್ತದೆ. 15ನೇ ಹಣಕಾಸು ಆಯೋಗವು ರಾಜ್ಯ ಹಣಕಾಸು ಆಯೋಗದ ಅಂಗೀಕೃತ ಶಿಫಾರಸ್ಸುಗಳ ಆಧಾರದ ಮೇಲೆ ಮೂಲ ಅನುದಾನ ಮತ್ತು ನಿರ್ಬಂಧಿತ ಅನುದಾನವನ್ನು ರಾಜ್ಯದ ಮೂರು ಹಂತದ ಪಂಚಾಯ್ತಿಗಳಿಗೆ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ.

 

ಇದರ ಪ್ರಕಾರ ರಾಜ್ಯದ ಜಿಲ್ಲಾ ಪಂಚಾಯ್ತಿಗಳಿಗೆ ಒಟ್ಟು ಅನುದಾನದ ಶೇ.5ರಷ್ಟು, ತಾಲೂಕು ಪಂಚಾಯ್ತಿಗಳಿಗೆ ಒಟ್ಟು ಅನುದಾನದ ಶೇ. 10ರಷ್ಟು, ಗ್ರಾಮ ಪಂಚಾಯ್ತಿಗಳಿಗೆ ಒಟ್ಟು ಅನುದಾನದ ಶೇ.85ರಷ್ಟು ಅನುದಾನವನ್ನು ವಿಂಗಡಿಸಲಾಗಿದೆ.

 

ಮೂಲ ಅನುದಾನದ ಶೇ.40ರ ಹಂಚಿಕೆಯನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ಉತ್ಪಾದನೆ ಹೆಚ್ಚಳ, ಬಡತನ ನಿರ್ಮೂಲನೆ ಕಾರ್ಯಕ್ರಮ, ಪ್ರಾಥಮಿಕ ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದ ಮೂಲ ಸೌಕರ್ಯ ಅಭಿವೃದ್ಧಿ, ಆರೋಗ್ಯ ಇಲಾಖೆ, ಮೂಲಭೂತ ಸೌಕರ್ಯ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿಗಾಗಿ ಅನುದಾನವನ್ನು ವಿನಿಯೋಗಿಸಲಾಗುತ್ತದೆ. ಇದನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಿದೆ.

 

ನಿರ್ಬಂಧಿತ ಅನುದಾನದ ಶೇ.60ರಷ್ಟು ಹಂಚಿಕೆಯನ್ನು ಬಯಲು ಶೌಚ ಮುಕ್ತ ಸ್ಥಳೀಯ ಸಂಸ್ಥೆಯ ಸ್ಥಿತಿ, ನಿರ್ವಹಣೆ, ಕುಡಿಯುವ ನೀರಿನ ಪೂರೈಕೆ, ಮಳೆ ನೀರು ಕೊಯ್ಲು, ನೀರಿನ ಮರುಬಳಕೆಗೆ ಉಪಯೋಗಿಸಿಕೊಳ್ಳಬಹುದು.

 

2023-24ನೇ ಸಾಲಿನಲ್ಲಿ ಜಿಲ್ಲಾ ಪಂಚಾಯ್ತಿಗಳಿಗೆ 12450.00 ಲಕ್ಷ ರು., ತಾಲೂಕು ಪಂಚಾಯ್ತಿಗಳಿಗೆ 24900.00 ಲಕ್ಷ ರು., ಗ್ರಾಮ ಪಂಚಾಯ್ತಿಗಳಿಗೆ 211650.00 ಲಕ್ಷ ರು. ಅನುದಾನ ಹಂಚಿಕೆಯಾಗಿರುವುದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts