ಬೆಂಗಳೂರು; ಅಂದಾಜು 500 ಕೋಟಿ ರು.ಗೂ ಅಧಿಕ ಮೌಲ್ಯದ ಅರಣ್ಯ ಇಲಾಖೆಗೆ ಸೇರಿದ್ದ 17.34 ಎಕರೆ ವಿಸ್ತೀರ್ಣದ ಜಮೀನನ್ನು ಭಾರತ ಸರ್ಕಾರದ ಅರಣ್ಯ ಸಚಿವಾಲಯದಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಸರ್ಕಾರಿ ಕಂದಾಯ ಭೂಮಿ ಎಂದು ಬದಲಿಸಿರುವ ಪ್ರಕರಣದಲ್ಲಿ ಬಿಜೆಪಿ ಹಾಲಿ ಶಾಸಕ ಹಾಗೂ ಹಿಂದಿನ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬೈರತಿ ಬಸವರಾಜು ಮತ್ತು ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ಅವರ ಹೆಸರು ಕೇಳಿ ಬಂದಿದೆ.
ಇವರಿಬ್ಬರ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿಯೇ ಅರಣ್ಯ ಇಲಾಖೆಗೆ ಸೇರಿದ್ದ ಜಮೀನನ್ನು ಅಕ್ರಮವಾಗಿ ಸರ್ಕಾರಿ ಕಂದಾಯ ಭೂಮಿ ಎಂದು ಬದಲಿಸಲು ತೀರ್ಮಾನವಾಗಿತ್ತು. ಅಲ್ಲದೇ ಉಪ ವಿಭಾಗಾಧಿಕಾರಿ ಡಾ ಎಂ ಜಿ ಶಿವಣ್ಣ ಹಾಗೂ ಹಾಗೂ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರು ಕಂದಾಯ ಭೂಮಿ ಎಂದು ದಾಖಲೆ ಬದಲಿಸಲು ಮುಂದಾಗಿದ್ದ ಹೊತ್ತಿನಲ್ಲಿಯೇ ಅರಣ್ಯ ಇಲಾಖೆಯೂ ತನ್ನ ಕರ್ತವ್ಯಲೋಪ ಮೆರೆದಿತ್ತು ಎಂಬ ಅಂಶವು ಇದೀಗ ದಾಖಲೆ ಸಹಿತ ಬಹಿರಂಗವಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಹಿಂದಿನ ಉಪ ವಿಭಾಗಾಧಿಕಾರಿ ಹಾಗೂ ಹಾಲಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಚಿಕ್ಕಮಗಳೂರು)ದಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ ಎಂ ಜಿ ಶಿವಣ್ಣ ಮತ್ತು ಇತ್ತೀಚೆಗಷ್ಟೇ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ಕೆ ಆರ್ ಪುರಂನ ಹಿಂದಿನ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಯವರಿಗೆ ತಡವಾಗಿ ಜ್ಞಾನೋದಯವಾಗಿರುವುದು ಸಹ ಚರ್ಚೆಗೆ ಕಾರಣವಾಗಿದೆ.
ಜಮೀನಿನ ದಾಖಲೆಗಳಲ್ಲಿ ಅರಣ್ಯ ಇಲಾಖೆ ಎಂದು ನಮೂದಾಗಿರುವುದನ್ನು ರದ್ದುಪಡಿಸಿ ಅದನ್ನು ಸರ್ಕಾರ ಎಂದು ನಮೂದಿಸುವ ಸಂಬಂಧ ಅಂದಿನ ಅರಣ್ಯ ಸಚಿವ ಉಮೇಶ್ ಕತ್ತಿ (ಈಗ ದಿವಂಗತರು) ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಜಂಟಿಯಾಗಿ ಸಭೆ ನಡೆಸಿದ್ದರು. ಈ ಸಭೆಯ ನಿರ್ಣಯದಂತೆ ಅರಣ್ಯ ಜಮೀನನ್ನು ಕಂದಾಯ ಜಮೀನು ಎಂದು ದಾಖಲೆಯನ್ನು ಬದಲಾಯಿಸಲಾಗಿತ್ತು ಎಂಬುದು ತಿಳಿದು ಬಂದಿದೆ.
ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮ್ಯುಟೇಷನ್ ಮಾಡಿರುವ ಪ್ರಕರಣದಲ್ಲಿ ಇವರಿಬ್ಬರ ವಿರುದ್ಧ ಅರಣ್ಯ ಕಾಯ್ದೆ ವಿರುದ್ಧ ಮೊಕದ್ದಮೆ ದಾಖಲಿಸಲು ಕೋರಿ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ವಿಜಯ್ ಶರ್ಮ ಅವರು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2023ರ ಅಕ್ಟೋಬರ್ 12ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ಮತ್ತು ಅರಣ್ಯ ಇಲಾಖೆಗೆ ಸೇರಿದ್ದ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮ್ಯುಟೇಷನ್ ಮಾಡುವ ಸಂಬಂಧ ನಡೆದಿದ್ದ ನಡವಳಿಗಳೂ ‘ದಿ ಫೈಲ್’ಗೆ ಲಭ್ಯವಾಗಿದೆ.
ಆದರೆ ಇದುವರೆಗೂ ಈ ಪತ್ರವನ್ನಾಧರಿಸಿ ಸಚಿವ ಈಶ್ವರ ಖಂಡ್ರೆ ಮತ್ತು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಯಾವುದೇ ಕ್ರಮವಹಿಸಿಲ್ಲ ಎಂದು ಗೊತ್ತಾಗಿದೆ.
ಪ್ರಕರಣದ ವಿವರ
ಬೆಂಗಳೂರು ಪೂರ್ವ ತಾಲೂಕಿನ ಕೆ ಆರ್ ಪುರಂ ಹೋಬಳಿಯ ಕೊತ್ತನೂರು ಗ್ರಾಮದ ಸರ್ವೆ ನಂಬರ್ 47ರಲ್ಲಿ 17-34 ಎಕರೆ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿತ್ತು. ಇದನ್ನು ಅರಣ್ಯ ಇಲಾಖೆಯ ಹೆಸರಿನಲ್ಲಿ ಎಂ ಆರ್ 06/99-2000 ಎಂದು ದಾಖಲೆಗಳಲ್ಲೂ ನಮೂದಾಗಿತ್ತು.
ಆ ನಂತರ ಕೆ ಆರ್ ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ ಮತ್ತು ಉಪ ವಿಭಾಗಾಧಿಕಾರಿ ಅವರು ಭಾರತ ಸರ್ಕಾರದ ಅರಣ್ಯ ಸಚಿವಾಲಯದ ಪೂರ್ವಾನುಮತಿ ಇಲ್ಲದೆಯೇ ಖಾಸಗಿ ವ್ಯಕ್ತಿಗಳಿಗೆ ಮ್ಯುಟೇಷನ್ ಮಾಡಿಕೊಟ್ಟಿದ್ದರು ಎಂಬುದು ಪಿಸಿಸಿಎಫ್ ಪತ್ರದಿಂದ ತಿಳಿದು ಬಂದಿದೆ.
ಹಿಂದಿನ ಅರಣ್ಯ ಸಚಿವರ ಪಾತ್ರವೇನು?
ಕೊತ್ತನೂರು ಗ್ರಾಮದ ಸರ್ವೆ ನಂಬರ್ 47ರಲ್ಲಿ 17-34 ಎಕರೆ ಜಮೀನಿನ ದಾಖಲೆಗಳಲ್ಲಿ ಅರಣ್ಯ ಇಲಾಖೆ ಎಂದು ನಮೂದಾಗಿರುವುದನ್ನು ರದ್ದುಪಡಿಸಿ ಅದನ್ನು ಸರ್ಕಾರ ಎಂದು ನಮೂದಿಸುವ ಸಂಬಂಧ 2021ರ ನವೆಂಬರ್ 24ರಂದು ಅಂದಿನ ಅರಣ್ಯ ಸಚಿವರೇ ಪತ್ರ ಬರೆದಿದ್ದರು. ಅಲ್ಲದೇ ಹಿಂದಿನ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಬೈರತಿ ಬಸವರಾಜು ಅವರೂ ಜಂಟಿ ಸಭೆ ನಡೆಸಿದ್ದರು ಎಂಬುದು ಗೊತ್ತಾಗಿದೆ.
ಕೊತ್ತನೂರು ಗ್ರಾಮದ ಸರ್ವೆ ನಂಬರ್ 47ರಲ್ಲಿನ 17-34 ಎಕರೆ ಜಮೀನು ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿತ್ತು. ಇದು ಸರ್ಕಾರಿ ಗೋಮಾಳ ಎಂದು ವರ್ಗೀಕೃತ ಜಮೀನಾಗಿತ್ತು. ಆಕಾರ್‍ಬಂದ್ ನಂತೆ ಒಟ್ಟು ವಿಸ್ತೀರ್ಣ 53.20 ಎಕರೆ ಇದೆ. ಈ ಸರ್ವೆ ನಂಬರ್‍ನಲ್ಲಿ ಪೋಡಿಯಾಗಿ ದುರಸ್ತಾದಂತಹ ಹೊಸ ಸರ್ವೆ ನಂಬರ್ 60, 61, 62 ಮತ್ತು 63ಗಳಾಗಿ ವಿಲೇಗೊಂಡಿತ್ತು.
ಹಾಲಿ ಪಹಣಿಯಂತೆ 38-28 ಎಕರೆ ವಿಸ್ತೀರ್ಣವಿದೆ. ಪಹಣಿ ಕಾಲಂ 3 ಮತ್ತು 9ಕ್ಕೆ ವಿಸ್ತೀರ್ಣ ತಾಳೆ ಇದೆ. ಕೆ ಆರ್‍ಪುರಂ ಹೋಬಳಿ ಕೊತ್ತನೂರು ಗ್ರಾಮದ ಸರ್ವೆ ನಂಬರ್ 47ರಲ್ಲಿನ ಪಹಣಿಯಂತೆ 17034 ಎಕರೆ ಜಮೀನು ಅರಣ್ಯ ಇಲಾಖೆಗೆ 1999-2000ರಲ್ಲಿದ್ದ ಬೆಂಗಳೂರಿನ ಅಂದಿನ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಆದೇಶದಂತೆ ಖಾತೆ ಆಗಿತ್ತು. ಇನ್ನುಳಿದ 3 ಎಕರೆ ಸರ್ಕಾರಿ ಗೋಮಾಳವಾಗಿದೆ.
ಸರ್ವೆ ನಂಬರ್ 47ರಲ್ಲಿ ಮಾಜಿ ಸೈನಿಕರು, ಜಮೀನು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಗಳನ್ನು ವಜಾಗೊಳಿಸಲಾಗಿತ್ತು. ಅಲ್ಲದೇ ಇದೇ ಸರ್ವೆ ನಂಬರ್‍ನಲ್ಲಿ 40-50 ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡಿದ್ದರು. ಅರ್ಜಿ ಸಲ್ಲಿಸಿದ್ದವರೇ ಮನೆಗಳನ್ನು ಕಟ್ಟಿಕೊಂಡು ವಾಸವಿದ್ದರು ಎಂಬುದು ಕಂದಾಯ ದಾಖಲೆಗಳಿಂದ ತಿಳಿದು ಬಂದಿದೆ.
ಅರಣ್ಯ ಇಲಾಖೆಗೆ ಮಂಜೂರಾಗಿ ಹಸ್ತಾಂತರವಾಗಿದ್ದರೂ ಈ ಸಂಬಂಧ ತಹಶೀಲ್ದಾರ್ ಕಚೇರಿಯ ಕಡತದಲ್ಲಿ ಯಾವುದೇ ದಾಖಲೆಗಳು ಲಭ್ಯವಿರಲಿಲ್ಲ. ಹಾಗೂ ಮಂಜೂರಾಗಿರುವ ಸಂಬಂಧದ ದಾಖಲೆಗಳನ್ನು ಅರಣ್ಯ ಇಲಾಖೆಯೂ ಸಲ್ಲಿಸಿರಲಿಲ್ಲ ಎಂಬುದು ಗೊತ್ತಾಗಿದೆ.
ಈ ಅರಣ್ಯ ಪ್ರದೇಶವನ್ನು ನಕಾಶೆಯಲ್ಲಿ ಗುರುತಿಸಿ ಹದ್ದುಬಸ್ತನ್ನು ನಿಗದಿಪಡಿಸಿತ್ತು. ಈ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸ್ವಾಧೀನದಲ್ಲಿತ್ತು. ಈ ಜಮೀನು ಹೊರತುಪಡಿಸಿ ಉಇದ ಪ್ರದೇಶ ಕಂದಾಯ ಇಲಾಖೆಯ ಸುಪರ್ದಿಯಲ್ಲಿತ್ತು. ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಮೀನಿನ ಮೇಲೆ ಅರಣ್ಯ ಇಲಾಖೆಯಿಂದ ಯಾವುದೇ ನಿರ್ಬಂಧಗಳಿಲ್ಲ ಎಂದೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳೂ ವಿವರಣೆ ನೀಡಿದ್ದರು.