ಲಂಚ; ಕಾವೇರಿ ಜಲಾನಯನ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಉಪ ಆಡಳಿತಾಧಿಕಾರಿ ವಿರುದ್ಧ ವಿಚಾರಣೆ

ಬೆಂಗಳೂರು; ನಗರಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಗಳ ಮುಂಬಡ್ತಿಗೂ ಕೋಟ್ಯಂತರ ರುಪಾಯಿ ಲಂಚಕ್ಕೆ ಬೇಡಿಕೆ ಇರಿಸಲಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಕಾವೇರಿ ಜಲಾನಯನ ಯೋಜನೆಗಳ  ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಉಪ ಆಡಳಿತಾಧಿಕಾರಿ ಆಗಿರುವ  ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿ ಎಲಿಷಾ ಆಂಡ್ರೂಸ್‌ ವಿರುದ್ಧ ಇಲಾಖೆ  ವಿಚಾರಣೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನಿವೃತ್ತ ಜಿಲ್ಲಾ ನ್ಯಾಯಾಧೀಶ ಎ ಕೃಷ್ಣಪ್ಪ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.

 

 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 65 ಇಂಜಿನಿಯರುಗಳಿಗೆ ಮುಂಬಡ್ತಿ ನೀಡಲು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಲಂಚಕ್ಕೆ ಬೇಡಿಕೆ ಇರಿಸಿದ್ದಾರೆ. ಹಣ ನೀಡಿದ ನಂತರವಷ್ಟೇ ಈ ಸಂಬಂಧದ ಕಡತಕ್ಕೆ ಅನುಮೋದನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಸಂಬಂಧಿಸಿದ ಇಂಜನಿಯರ್‌ಗಳಿಗೆ ಸಂದೇಶ ರವಾನಿಸಿದ್ದರು ಎಂದು ಹೇಳಲಾಗಿತ್ತು. ಈ ಕುರಿತು ‘ದಿ ಫೈಲ್‌’ 2022ರ ಮಾರ್ಚ್‌ 30ರಂದು ವರದಿ ಪ್ರಕಟಿಸಿತ್ತು.

 

ಇಂಜನಿಯರ್‌ಗಳ ಮುಂಬಡ್ತಿಗೂ ಲಂಚ; ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ವಿರುದ್ಧ ಸಿಎಂಗೆ ದೂರು

 

ಕಾರ್ಯನಿರ್ವಾಹಕ  (ಎಇಇ) ಹುದ್ದೆಯಿಂದ ಕಾರ್ಯನಿರ್ವಾಹಕ ಇಂಜನಿಯರ್‌ (ಇಇ) 45 ಎಲಿ ಹುದ್ದೆಗೆ ಮತ್ತು 5 ಕಾರ್ಯನಿರ್ವಾಹಕ ಇಂಜಿನಿಯರ್‌ ಹುದ್ದೆಯಿಂದ ಸೂಪರಿಂಡೆಂಟ್‌ ಇಂಜನಿಯರ್‌ (ಎಸ್‌ಇ) ಹುದ್ದೆಗೆ ಮುಂಬಡ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ಎಲಿಷಾ ಆಂಡ್ರೂಸ್‌ ಅವರು ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರು ದಾಖಲಿಸಿತ್ತು.

 

ಮುಂಬಡ್ತಿ ನೀಡುವ ಪ್ರಕ್ರಿಯೆಗೆ ಇಲಾಖೆಯಲ್ಲಿ ಚಾಲನೆ ನೀಡಿದ್ದ ಉನ್ನತ ಅಧಿಕಾರಿಯೊಬ್ಬರು ಅನುಮೋದನೆಗೆ ಬಾಕಿ ಇರಿಸಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ‘ ಈ ಕಡತವನ್ನು ಅನುಮೋದಿಸಬೇಕಾದರೆ ಲಂಚ ನೀಡಬೇಕೆಂದು, ನಿಮ್ಮ ಹೆಸರೇಳಿ ನಾಲ್ಕುವರೆ ಕೋಟಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆದಿರುತ್ತಾರೆ (AE ಯಿಂದ AEE ಗೆ ಎರಡು ಕೋಟಿ, AEE ಯಿಂದ EE ಗೆ 1 ಕೋಟಿ ಮತ್ತು EE ಯಿಂದ SE ಗೆ 1.5 ಕೋಟಿ). ಈ ಅಪಾರ ಪ್ರಮಾಣದ ಲಂಚದ ಹಣ ಪಾವತಿಸಲು ಭ್ರಷ್ಟ ಬಿಬಿಎಂಪಿ ಎಂಜಿನಿಯರುಗಳು ಈಗಾಗಲೇ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿರುತ್ತಾರೆ,’ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ಪ್ರಸ್ತಾಪಿಸಿತ್ತು.

 

ಕರ್ನಾಟಕ ರಾಷ್ಟ್ರಸಮಿತಿಯು ನೀಡಿರುವ ದೂರಿನ ಪ್ರತಿ

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ-3 ಆಗಿದ್ದ ಎಲಿಷಾ ಆಂಡ್ರೂಸ್‌ ಅವರಿಗೆ 2023ರ ಜೂನ್‌ 7ರಂದು ನೋಟೀಸ್‌, ದೋಷಾರೋಪಣೆ ಪಟ್ಟಿ ಜಾರಿಗೊಳಿಸಲಾಗಿತ್ತು. ಅಲ್ಲದೇ ಈ ನೋಟೀಸ್‌, ದೋಷಾರೋಪಣೆ ಪಟ್ಟಿಗೆ ಪ್ರತಿ ರಕ್ಷಣಾ ಹೇಳಿಕೆ ನೀಡಿದ್ದರು. ಆದರೆ ಈ ಹೇಳಿಕೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಒಪ್ಪಿರಲಿಲ್ಲ. ‘ ಪ್ರತಿ ರಕ್ಷಣಾ ಹೇಳಿಕೆಯನ್ನು ಪರಿಶೀಲಿಸಲಾಗಿ ಆಪಾದಿತರ ಸಲ್ಲಿಸಿರುವ ಪ್ರತಿ ರಕ್ಷಣಾ ಹೇಳಿಕೆಯಲ್ಲಿ ಆರೋಪವನ್ನು ಅಲ್ಲಗಳೆಯಲು ಸಮಂಜಸವಾದ ಮತ್ತು ಸಂಪೂರ್ಣವಾದ ಹೇಳಿಕೆ, ದಾಖಲೆಗಳನ್ನು ಸಲ್ಲಿಸಿರುವುದಿಲ್ಲ. ಆದ್ದರಿಂದ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ತಿಳಿಯಲು ಆಪಾದಿತರ ವಿರುದ್ಧ ಪೂರ್ಣ ಪ್ರಮಾಣದ ಇಲಾಖೆ ವಿಚಾರಣೆ ನಡೆಸಲು ತೀರ್ಮಾನಿಸಲಾಗಿದೆ,’ ಎಂದು ಇಲಾಖೆಯು ಆದೇಶದಲ್ಲಿ ವಿವರಿಸಿದೆ.

 

 

‘ಕೆಲವು ಅಲ್ಪ ಸ್ವಲ್ಪ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿರುವವರು ಕೂಡ ವಿಧಿಯಿಲ್ಲದೆ, ತಮ್ಮ ದುಡಿಮೆಯ ಹಣ ಮತ್ತು ಸಾಲ ಮಾಡಿ ಹಣ ನೀಡಿರುತ್ತಾರೆ. ಇಲ್ಲಿ ಮಹತ್ವದ ವಿಚಾರವೆಂದರೆ, ಮುಖ್ಯಮಂತ್ರಿಯವರ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿರುವುದು. ಪದೇ ಪದೇ ಮುಖ್ಯಮಂತ್ರಿಯವರ ಮತ್ತು ಅವರ ಕಛೇರಿಯ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿರುವುದು ನಡೆಯುತ್ತಲೇ ಇದೆ, ಆದರೂ ಈ ಬಗ್ಗೆ ಯಾವುದೇ ಕ್ರಮ ಅಗದಿರುವುದರಿಂದ ಇಲ್ಲಿ ಮುಖ್ಯಮಂತ್ರಿಯವರ ಕಛೇರಿಯ ಮೇಲೆಯೆ ಅನುಮಾನ ಮೂಡುವಂತೆ ಮಾಡಿದೆ,’ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ತಿಳಿಸಿತ್ತು.

 

ರಾಜ್ಯ ಸರ್ಕಾರದ ಜಲ ಸಂಪನ್ಮೂಲ, ಲೋಕೋಪಯೋಗಿ (ಪಿಡ್ಬ್ಲೂಡಿ) ಮತ್ತು ನಗರಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳಲ್ಲಿ 40% ಕಮೀಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪವು ನೇರವಾಗಿ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರವು ತನಿಖೆಗೆ ಆದೇಶ ಮಾಡಿ, ಈ ತನಿಖೆಯನ್ನು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ವಹಿಸಿತ್ತು.ಆದರೆ ಅವರು ಇದುವರೆಗೂ ಯಾವುದೇ ವರದಿಯನ್ನು ನೀಡಿರಲಿಲ್ಲ.

 

 

ಇದರ ಮಧ್ಯೆಯೇ ‘ಇದೇ ಅಪರ ಮುಖ್ಯ ಕಾರ್ಯದರ್ಶಿಯವರ ಅಧೀನದಲ್ಲಿರುವ ಉಪ ಕಾರ್ಯದರ್ಶಿಯೊಬ್ಬರು ಈ ಲಂಚದ ಹಣವನ್ನು ಮುಖ್ಯಮಂತ್ರಿಯವರ ಹೆಸರು ಹೇಳಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಈಗ ಈ ಉಪ ಕಾರ್ಯದರ್ಶಿಯವರನ್ನು ವರ್ಗಾವಣೆ ಮಾಡಲಾಗಿದ್ದು, ಯಾವ ಕಾರಣಕ್ಕೆ ಮಾಡಲಾಗಿದೆ ಎಂದು ತಿಳಿದುಬಂದಿಲ್ಲ. ಈ ವಿಚಾರದ ಬಗ್ಗೆ ತನಿಖೆಯಾಗಬೇಕು ಮತ್ತು ಲಂಚ ಪಡೆದಿರುವವರು ಮತ್ತು ಲಂಚ ನೀಡಿರುವವರಿಬ್ಬರ ಮೇಲೂ ಕ್ರಮವಾಗಬೇಕು,’ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ಒತ್ತಾಯಿಸಿತ್ತು.

 

ಅಲ್ಲದೆ ಇಂತಹ ವಿಚಾರಗಳ ಬಗ್ಗೆ ಕೆ. ಆರ್. ಎಸ್. ಪಕ್ಷವು ಹಲವಾರು ಪತ್ರಗಳನ್ನು ಮತ್ತು ಸಕ್ಷಮ ಪ್ರಾಧಿಕಾರಗಳಿಗೆ ದೂರುಗಳನ್ನು ನೀಡಿದೆ. ಬಹುತೇಕ ಪ್ರಕರಣಗಳಲ್ಲಿ ಈ ಯಾವುದರ ಬಗ್ಗೆಯೂ ಕ್ರಮ ಕೈಗೊಳ್ಳದೇ ಇರುವುದರಿಂದ ಇಂತಹ ಅಕ್ರಮಗಳು ಮತ್ತು ಭ್ರಷ್ಟಾಚಾರ ಮತ್ತಷ್ಟು ಹೆಚ್ಚುತ್ತಿವೆ ಎಂದು ದೂರಿನಲ್ಲಿ ಹೇಳಿತ್ತು.

Your generous support will help us remain independent and work without fear.

Latest News

Related Posts