ಬೆಂಗಳೂರು; ಮದ್ಯ, ವೈನ್ ಉತ್ಪನ್ನಗಳ ಎಂ ಆರ್ ಪಿ ಯನ್ನು ಲೆಕ್ಕ ಹಾಕುವಾಗ ಅಬಕಾರಿ ಭದ್ರತಾ ಚೀಟಿಗಳ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕವಾಗಿ ತೋರಿಸಲು ಡಿಸ್ಟಲರಿಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ 1,000 ಕೋಟಿ ರು. ಭ್ರಷ್ಟಾಚಾರ ನಡೆದಿದೆ ಎಂದು ‘ದಿ ಫೈಲ್’ ವರದಿ ಮಾಡಿದ್ದ ಬೆನ್ನಲ್ಲೇ ಆದೇಶವನ್ನು ಹಿಂಪಡೆದುಕೊಂಡಿದೆಯಾದರೂ ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳನ್ನು ಪುಷ್ಟೀಕರಿಸಿದೆ. ಹೀಗಾಗಿ ಈ ಪ್ರಕರಣವನ್ನು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂಬ ಮನವಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಮದ್ಯ, ವೈನ್ ಉತ್ಪನ್ನಗಳ ಎಂ ಆರ್ ಪಿ ಯನ್ನು ಲೆಕ್ಕ ಹಾಕುವಾಗ ಅಬಕಾರಿ ಭದ್ರತಾ ಚೀಟಿಗಳ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕವಾಗಿ ತೋರಿಸಲು ಡಿಸ್ಟಲರಿಗಳಿಗೆ ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ನೀಡಿದ್ದ ದೂರನ್ನಾಧರಿಸಿ ‘ದಿ ಫೈಲ್’ 2023ರ ಜೂನ್ 23ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಈ ವರದಿ ಪ್ರಕಟಗೊಳ್ಳುತ್ತಿದ್ದಂತೆ ಆದೇಶವನ್ನು ಸರ್ಕಾರವು ಪ್ರತಿಕ್ರಿಯೆ ನೀಡಿದ ದಿನದಂದೇ ಅಬಕಾರಿ ಇಲಾಖೆಯ ಆಯುಕ್ತರು ಆದೇಶವನ್ನು ಹಿಂಪಡೆದುಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಲು ಹೊರಟಿದ್ದಾರೆ ಎಂಬ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಇಡೀ ಪ್ರಕರಣವನ್ನು ತನಿಖೆಗೊಳಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯ ಕಾರ್ಯದರ್ಶಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ಮನವಿ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಮನವಿಯಲ್ಲೇನಿದೆ?
ಮದ್ಯ ಮತ್ತು ವೈನ್ ಉತ್ಪನ್ನಗಳ ಗರಿಷ್ಠ ಮಾರಾಟ ದರ ಲೆಕ್ಕ ಹಾಕುವಾಗ ಅಬಕಾರಿ ಭದ್ರತಾ ಚೀಟಿಗಳ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕ ಭಾಗವಾಗಿ ತೋರಿಸಿ ಟೆಂಡರ್ ನೀಡಿರುವ ಈ ಹಗರಣದಲ್ಲಿ ರಾಜ್ಯದ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್, ಅಬಕಾರಿ ಆಯುಕ್ತ ಡಾ ಜೆ ರವಿಶಂಕರ್, ಹೆಚ್ಚುವರಿ ಅಬಕಾರಿ ಆಯುಕ್ತರಾದ ಎಸ್ ಎಲ್ ರಾಜೇಂದ್ರಪ್ರಸಾದ್, ಅಬಕಾರಿ ಜಂಟಿ ಆಯುಕ್ತರಾದ ಎಸ್ ನಿರ್ಮಲಾ ಮತ್ತು ಹೆಚ್ ಹಿತೇಂದ್ರ ಅವರು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ವ್ಯಾಪಕ ಭ್ರಷ್ಟಾಚಾರ ಎಸಗಿದ್ದಾರೆ. ಈ ಕುರಿತು ಸಲ್ಲಿಸಿದ್ದ ದೂರನ್ನಾಧರಿಸಿ ‘ದಿ ಫೈಲ್’, ‘ವಾರ್ತಾಭಾರತಿ’ ಪ್ರಜಾವಾಣಿ ಪತ್ರಿಕೆಯೂ ಸೇರಿದಂತೆ ದೃಶ್ಯ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.
ಈ ವರದಿ ಬಳಿಕ ಐ ಎಸ್ ಎನ್ ಪ್ರಸಾದ್ ಅವರು ಇದೊಂದು ಕ್ಷುಲಕ ಆರೋಪವಾಗಿದ್ದು ಇದರಲ್ಲಿ ಯಾವುದೇ ಹುರುಳಿಲ್ಲ. ಐಎಎಲ್ ವೆಚ್ಚಕ್ಕೆ ಸಂಬಂಧಿಸಿದ ಆದೇಶದಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ. ಆದರೂ ಅವ್ಯವಹಾರ ನಡದಿದೆ ಎಂದು ಕೆಲವರು ಆರೋಪಿಸಿರುವುದರಿಂದ ಈ ವಿಚಾರದಲ್ಲಿ ಸಂಶಯಕ್ಕೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಆದೇಶ ಹಿಂಪಡೆದಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಪ್ರತಿಕ್ರಿಯೆ ನೀಡಿದ ದಿನದಂದೇ ಅಬಕಾರಿ ಇಲಾಖೆಯ ಆಯುಕ್ತರು ಆದೇಶವನ್ನು ಹಿಂಪಡೆದುಕೊಂಡಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.
ದೂರು ನೀಡಿದ ಎರಡು ದಿನದ ಅಂತರದಲ್ಲೇ ಅಬಕಾಋಇ ಇಲಾಖೆಯು 2023ರ ಮಾರ್ಚ್ 28, ಮೇ 22ರಂದು ಹೊರಡಿಸಿದ್ದ ಆದೇಶಗಳು ಹಾಗೂ ನೀಡಿದ್ದ ಎಲ್ಲಾ ಸೂಚನೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆದುಕೊಂಡಿದೆ. ಆದರೆ ಈ ಪ್ರಕರಣದಲ್ಲಿ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರ, ಅಧಿಕಾರ ದುರುಪಯೋಗಗಳು ನಡೆದಿಲ್ಲ ಎನ್ನುವುದಾದರೆ ಈ ಹಗರಣವನ್ನು ಯಾವುದೇ ತನಿಖೆಗೆ ಆದೇಶ ಮಾಡದೆಯೇ ಈಗಾಗಲೇ ನೀಡಿರುವ ಆದೇಶವನ್ನಷ್ಟೇ ಹಿಂಪಡೆದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಹೀಗಾಗಿ 1,000 ಕೋಟಿ ರು. ಹೆಚ್ಚಿನ ಅವ್ಯವಹಾರ ನಡೆದಿರುವ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್, ಡಾ ಜೆ ರವಿಶಂಕರ್, ಎಸ್ ಎಲ್ ರಾಜೇಂದ್ರಪ್ರಸಾದ್, ಎನ್ ನಿರ್ಮಲಾ, ಹೆಚ್ ಹಿತೇಂದ್ರ ಅವರ ವಿರುದ್ಧ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ಕಾಲಮಿತಿಯೊಳಗೆ ತನಿಖೆ ನಡೆಸಿ ವರದಿ ಸರ್ಕಾರಕ್ಕೆ ಸಲ್ಲಿಸಬೇಕು. ಈ ಮೂಲಕ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದಿನೇಶ್ ಕಲ್ಲಹಳ್ಳಿ ಅವರು ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿದ್ದಾರೆ.
‘ಮದ್ಯ/ವೈನ್ ಉತ್ಪನ್ನಗಳ ಎಂಆರ್ಪಿಯನ್ನು ಲೆಕ್ಕ ಹಾಕುವಾಗ ಅಬಕಾರಿ ಭದ್ರತಾ ಚೀಟಿಗಳ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕ ಕಾಂಪೋನೆಂಟ್ ಆಗಿ ತೋರಿಸಲು ಆದೇಶಿಸಿರುತ್ತದೆ. ಅದರಂತೆ ರಾಜ್ಯದ ಎಲ್ಲಾ ಡಿಸ್ಟಲರಿ/ವೈನರಿ ಸನ್ನದುದಾರರು ಹೊರ ರಾಜ್ಯ/ಹೊರ ದೇಶಗಳಿಂದ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮುಖಾಂತರ ಆಮದಾಗುವ ಮದ್ಯ, ವೈನ್ ಉತ್ಪನ್ನಗಳ ಡಿಪಿ, ಎಂಆರ್‌ಪಿ, ಆರ್‌ಎಂಆರ್‌ಪಿಗಳನ್ನು ಅಬಕಾರಿ ಆಯುಕ್ತರ ಕಚೇರಿಗೆ ಸಲ್ಲಿಸಿ ಅದರಂತೆ ಅನುಮೋದನೆ ಪಡೆಯಲು ಆದೇಶ ಹೊರಡಿಸಿರುತ್ತದೆ. ಮುಂದುವರೆದು 28-03-2023ರ ಆದೇಶವನ್ನು ತಕ್ಷಣದಿಂದಲೆ ಜಾರಿಗೆ ಬರುವಂತೆ ಹಿಂಪಡೆದಿದೆ. ಈ ಕಚೇರಿಯು ನೀಡಿದ್ದ ಎಲ್ಲಾ ಸೂಚನೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿರುತ್ತದೆ,’ ಎಂದು ಅಬಕಾರಿ ಆಯುಕ್ತರು 2023ರ ಜೂನ್ 24ರಂದು ಕೆಎಸ್‌ಬಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ರಾಜ್ಯದ ಎಲ್ಲಾ ಜಿಲ್ಲಾ ಅಬಕಾರಿ ಉಪ ಆಯುಕ್ತರು, ರಾಜ್ಯದ ಎಲ್ಲಾ ಡಿಸ್ಟಲರಿ, ವೈನರಿಗಳಿಗೆ ಪತ್ರ ಬರೆದಿದ್ದರು.
ಮತ್ತು ಭದ್ರತಾ ಚೀಟಿಗಳ ಮುದ್ರಣಕ್ಕೆ ಸಿಂಗಲ್ ಟೆಂಡರ್ ಮೂಲಕ ಮಣಿಪಾಲ್ ಟೆಕ್ನಾಲಜೀಸ್ ಲಿಮಿಟೆಡ್‌ಗೆ ಕಾರ್ಯಾದೇಶ ನೀಡಿರುವುದರ ಹಿಂದೆ 1,000 ಕೋಟಿ ರು.ಗೂ ಹೆಚ್ಚಿನ ಅಕ್ರಮ ನಡೆದಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು.
ಬಿಜೆಪಿ ಅವಧಿಯಲ್ಲಿ ತಡೆಹಿಡಿದಿದ್ದ ಆದೇಶಕ್ಕೆ ಮರುಜೀವ; ಅಬಕಾರಿಯಲ್ಲಿ 1,000 ಕೋಟಿ ಅಕ್ರಮ ಆರೋಪ
ಡಿಸ್ಟಲರಿಗಳ ಸಂಘವು 2020ರಲ್ಲಿಯೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತಾದರೂ ಕಳೆದ ಮೂರು ವರ್ಷದಿಂದಲೂ ಕುಂಟುತ್ತಾ ಸಾಗಿತ್ತು. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ 2023ರ ಮಾರ್ಚ್ 28ರಂದು ಅನುಮತಿ ನೀಡಿ ಆದೇಶ ಹೊರಡಿಸಿತ್ತಾದರೂ ಚುನಾವಣೆ ನೀತಿ ಸಂಹಿತೆ ಕಾರಣ ಆದೇಶಕ್ಕೆ ತಡೆಬಿದ್ದಿತ್ತು. ಆದರೀಗ ಅಧಿಕಾರಕ್ಕೆ ಬಂದ ಒಂದೆರಡು ದಿನದಲ್ಲಿಯೇ ಹಿಂದಿನ ಆದೇಶಕ್ಕೆ ಚಾಲನೆ ನೀಡಿರುವ ಕಾಂಗ್ರೆಸ್ ಸರ್ಕಾರವು 1,000 ಕೋಟಿ ರು. ಅಕ್ರಮದ ಆರೋಪದಲ್ಲಿ ಸಿಲುಕಿತ್ತು.
ಅಬಕಾರಿ ಇಲಾಖೆಯ ಅಧಿಕಾರಿಗಳ ವರ್ಗಾವಣೆ, ನಿಯೋಜನೆಯಲ್ಲಿ ಸಚಿವ ತಿಮ್ಮಾಪುರ ಅವರ ಕುಟುಂಬ ಸದಸ್ಯರೊಬ್ಬರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದ ಬೆನ್ನಲ್ಲೇ ಅಬಕಾರಿ ಇಲಾಖೆಯಲ್ಲಿ 1,000 ಕೋಟಿ ಅಕ್ರಮ ನಡೆದಿದೆ ಎಂದು ಸಲ್ಲಿಕೆಯಾಗಿರುವ ದೂರು ಮುನ್ನೆಲೆಗೆ ಬಂದಿತ್ತು.
ಕೋವಿಡ್ ಕಾಲದ ಹಗರಣ, ಪಿಎಸ್‌ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮ, ಮುಂಬೈ ಮೂಲದ ಕಂಪನಿಗೆ ಕಾಕಂಬಿ ಅನುಮತಿಗೆ ನೀಡಿರುವುದರ ಹಿಂದೆ ವ್ಯಾಪಕವಾಗಿ ಅಕ್ರಮ ನಡೆದಿದೆ ಎಂದು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದ ಕಾಂಗ್ರೆಸ್, ಅಧಿಕಾರ ಗದ್ದುಗೆ ಹಿಡಿದ ಒಂದೆರಡು ದಿನದಲ್ಲಿಯೇ ಅಬಕಾರಿ ಭದ್ರತಾ ಚೀಟಿಗಳ ವೆಚ್ಚ ಮತ್ತು ಅದನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕವಾಗಿ ತೋರಿಸಲು ಅನುಮತಿ ನೀಡುವ ಮೂಲಕ 1,000 ಕೋಟಿ ರುಪಾಯಿ ಅಕ್ರಮದ ಆರೋಪಕ್ಕೆ ಗುರಿಯಾಗುವ ಮೂಲಕ ಪ್ರತಿಪಕ್ಷ ಬಿಜೆಪಿಗೆ ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿತ್ತು.
ವಿಶೇಷವೆಂದರೆ ಈ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಪತಿ ಹಾಗೂ ಆರ್ಥಿಕ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್ ಅವರು ಭಾಗಿಯಾಗಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿತ್ತು.
ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ ಎಸ್ ಎನ್ ಪ್ರಸಾದ್, ಅಬಕಾರಿ ಇಲಾಖೆಯ ಆಯುಕ್ತರಾಗಿದ್ದ ಡಾ ಜೆ ರವಿಶಂಕರ್, ಹೆಚ್ಚುವರಿ ಆಯುಕ್ತ (ಐಎಂಎಲ್) ಎಸ್ ಎಲ್ ರಾಜೇಂದ್ರ ಪ್ರಸಾದ್, ಜಂಟಿ ಆಯುಕ್ತರಾದ ನಿರ್ಮಲಾ, ಹೆಚ್ ಜಿತೇಂದ್ರ ಅವರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೆಸರಿಸಿಸಲಾಗಿತ್ತು.
ದೂರಿನಲ್ಲೇನಿತ್ತು?
ಮದ್ಯದ ಬಾಟಲಿಗಳ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ವೆಚ್ಚವು ಮದ್ಯ, ವೈನ್ ತಯಾರಿಕೆ ವೆಚ್ಚದಲ್ಲಿಯೇ ಸೇರಿರುತ್ತದೆ. ಇದು ಘೋಷಿತ ಬೆಲೆಯಾಗಿದೆ. ಘೋಷಿತ ದರ ಪಟ್ಟಿ ಅನ್ವಯ ಹೆಚ್ಚುವರಿ ಅಬಕಾರಿ ಸುಂಕ ನಿರ್ಧರಿತವಾಗುತ್ತದೆ. ಮದ್ಯ ಉತ್ಪಾದಕರು ವಿತರಕರಿಗೆ ಮದ್ಯ ಮಾರಾಟ ಮಾಡುವ ಮುನ್ನವೇ ಮುಂಗಡವಾಗಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾವತಿಸಿರುತ್ತಾರೆ. ಈ ಹಣವನ್ನು ಕೆಎಸ್‌ಬಿಸಿಎಲ್ ರೀಟೈಲರ್‍ಗೆ ಮದ್ಯ, ವೈನ್ ಮಾರಾಟ ಮಾಡಿದ ನಂತರ ಸರ್ಕಾರಕ್ಕೆ ಪಾವತಿಸಿರುವ ತೆರಿಗೆ ಮೊತ್ತವನ್ನು ಮರು ಭರಿಸಿಕೊಳ್ಳಲಿದ್ದಾರೆ. ಇದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ನೆರೆ ರಾಜ್ಯಗಳಲ್ಲಿಯೂ ಇದನ್ನೇ ಪಾಲಿಸಲಾಗುತ್ತಿದೆ.
ಆದರೆ ಆಶ್ಚರ್ಯಕರ ಸಂಗತಿ ಎಂದರೇ ಅಬಕಾರಿ ಮತ್ತು ಆರ್ಥಿಕ ಇಲಾಖೆಯು 2023ರ ಮಾರ್ಚ್ 28ರಂದು ಹೊರಡಿಸಿದ್ದ ಆದೇಶದ ಪ್ರಕಾರ ಮದ್ಯ ಉತ್ಪನ್ನಗಳ ಎಂಆರ್ಪಿಯನ್ನು ಲೆಕ್ಕ ಹಾಕುವಾಗ ಇಎಎಲ್ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸಿಕೊಳ್ಳದೇ ಪ್ರತ್ಯೇಕ ಕಾಂಪೋನೆಂಟ್ ಆಗಿ ಇದೇ ಜುಲೈ 1ರಿಂದಲೇ ಸೇರಿಸಬೇಕು ಎಂದಿರುವುದು ಮದ್ಯ ಪ್ರಿಯರಿಗೆ ಹೊರೆಯಾಗಿ ಪರಿಣಿಮಿಸಲಿದೆ. ಇದರಿಂದ ಮದ್ಯ, ವೈನ್ ಉತ್ಪಾದಕರಿಗೆ ಪ್ರತಿ ಕೇಸ್‌ನಿಂದ 31.10 ರು.ನಂತೆ ಪ್ರತಿ ವರ್ಷ 1,000 ಕೋಟಿ ರು. ಆರ್ಥಿಕವಾಗಿ ಲಾಭ ತಂದುಕೊಡಲಿದೆ ಎಂದು ದಿನೇಶ್ ಕಲ್ಲಹಳ್ಳಿ ಅವರು ವಿವರಿಸಿದ್ದರು.
ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ಮಾಡಲು ಕರೆದಿದ್ದ ಟೆಂಡರ್‍ನಲ್ಲಿ ಬೇರಾರು ಭಾಗವಹಿಸದ ಕಾರಣ ಸಿಂಗಲ್ ಟೆಂಡರ್ ಆಗಿತ್ತು. ಪ್ರತಿ ಕೇಸ್‌ಗೆ ಏಕಾಏಕೀ 27 ರು ನಿಂದ 31.74 ರು.ಗೆ ಏರಿಕೆಯಾಗಿದೆ. ಇದರಿಂದ ಪ್ರತಿ ಕೇಸ್‌ಗೆ 4.74 ರು.ಪೈಸೆಯಂತೆ 200 ಕೋಟಿ ರು. ಹೊರೆಯನ್ನು ಕಳೆದ ವರ್ಷಕ್ಕಿಂತ ಹೆಚ್ಚುವರಿಯಾಗಿ ಮದ್ಯಪಾನಿಗಳು ಹೊರಬೇಕಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು.
ಕಳೆದ 15-20 ವರ್ಷಗಳಿಂದಲೂ ಅಬಕಾರಿ ಭದ್ರತಾ ಚೀಟಿಗಳ ಮುದ್ರಿಸಲು 4 ಜಿ ವಿನಾಯಿತಿ ಪಡೆಯುತ್ತಿದ್ದ ಸರ್ಕಾರಿ ಸ್ವಾಮ್ಯದ ಕಂಪನಿಯಾಗಿರುವ ಎಂಸಿ ಅಂಡ್ ಎಗೆ ನೀಡಲಾಗುತ್ತಿದೆ. ಆದರೆ ಸರ್ಕಾರಿ ಸ್ವಾಮ್ಯದ ಕಂಪನಿಯು ಕೇವಲ ದರಪಟ್ಟಿ ಪಡೆದು ಮಣಿಪಾಲ್ ಟೆಕ್ನಾಲಜೀಸ್‌ಗೆ ಉಪ ಗುತ್ತಿಗೆ ನೀಡುತ್ತಿದೆ. ಇದು ಕೆಟಿಪಿಪಿ ಕಾಯ್ದೆ ಉಲ್ಲಂಘನೆಯಾಗುತ್ತಿದೆ ಎಂಬುದು ಕಂಡುಬಂದಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಒಂದೇ ಕಂಪನಿಗೆ ಕಳೆದ 15-20ವರ್ಷಗಳಿಂದಲೂ ಇಎಎಲ್ ಮುದ್ರಣದಿಂದ 200 ಕೋಟಿ ರು. ಕಿಕ್ ಬ್ಯಾಕ್ ರೂಪದಲ್ಲಿ ಪಡೆಯಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳ ಸ್ವಜನಪಕ್ಷಪಾತ, ಭ್ರಷ್ಟಾಚಾರವಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಮದ್ಯದ ಬಾಟಲಿಗಳ ಮೇಲೆ ಅಂಟಿಸುವ ಭದ್ರತಾ ಚೀಟಿಗಳ ಮೇಲಿನ ಸಂಖ್ಯೆಯು ಕಾಲಾನುಕ್ರಮದಲ್ಲಿ ಇರುವುದಿಲ್ಲ. ಹಾಗೆಯೇ ಭದ್ರತಾ ಚೀಟಿಗಳ ಮೇಲಿನ ಸಂಖ್ಯೆಯನ್ನು ಸ್ಕ್ಯಾನರ್‍ಗಳು ಗುರುತಿಸುತ್ತಿಲ್ಲ. ಮದ್ಯದ ಬಾಟಲಿಗಳ ಸಂಖ್ಯೆಗೂ ಮತ್ತು ಕೇಸ್‌ಗಳ ಮೇಲೆ ಅಂಟಿಸುವ ಭದ್ರತಾ ಚೀಟಿಗಳ ಸಂಖ್ಯೆ ನಡುವೆ ಅಪಾರವಾದ ವ್ಯತ್ಯಾಸ ಕಂಡುಬರುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು.
ಹೀಗಾಗಿ ಡಿಸ್ಟಲರಿಯಿಂದ ಪೂರೈಕೆಯಾಗುವ ಮದ್ಯದ ಬಾಟಲಿಗಳನ್ನು ಯಾವ ವಿತರಕ/ಸರಬರಾಜುದಾರನಿಗೆ ನೀಡಲಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿಲ್ಲ. ಸರ್ಕಾರವು 600ರಿಂದ 800 ಕೋಟಿ ರು.ವರೆಗೆ ವೆಚ್ಚ ಮಾಡುತ್ತಿದ್ದರೂ ಅದರ ಮೂಲ ಉದ್ದೇಶ ಈಡೇರುತ್ತಿಲ್ಲ. ಹೀಗಾಗಿ ಕಳೆದ ಮೂರು ವರ್ಷದಿಂದಲೂ ಈ ಹಣವು ವ್ಯರ್ಥವಾಗಿ ಪೋಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಮದ್ಯ ಉತ್ಪನ್ನಗಳ ಎಂಆರ್ಪಿಯನ್ನು ಲೆಕ್ಕ ಹಾಕುವಾಗ ಇಎಎಲ್ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸಿಕೊಳ್ಳದೇ ಪ್ರತ್ಯೇಕ ಕಾಂಪೋನೆಂಟ್ ಆಗಿ ಸೇರಿಸಬೇಕು ಎಂದು ಕರ್ನಾಟಕ ಬ್ರೀವರ್ಸ್ ಅಂಡ್ ಡಿಸ್ಟಲರೀಸ್ ಅಸೋಸಿಯೇಷನ್ 2020ರ ಆಗಸ್ಟ್ 12ರಂದು ಅಬಕಾರಿ ಆಯುಕ್ತರಿಗೆ ಮನವಿ ನೀಡಿತ್ತು. ಈ ಮನವಿಯನ್ನು ಪರಿಗಣಿಸಿದಲ್ಲಿ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಎಂದು ಸಂಘವು ಮನವಿಯಲ್ಲಿ ಹೇಳಿತ್ತು ಎಂಬುದು ತಿಳಿದು ಬಂದಿತ್ತು.
‘ಇದೊಂದು ಗಂಭೀರ ಸ್ವರೂಪದ ಅಕ್ರಮ. ಇದರಲ್ಲಿ 1,000 ಕೋಟಿ ರುಪಾಯಿಗೂ ಮೀರಿದ ಭ್ರಷ್ಟಾಚಾರ ನಡೆದಿದೆ. ದೂರಿನಲ್ಲಿ ಹೇಳಿರುವ ಎಲ್ಲಾ ಅಧಿಕಾರಿಗಳು ಪ್ರಮುಖ ಹುದ್ದೆಯಲ್ಲಿ ಇರುವುದರಿಂದ ಸರ್ಕಾರವು ಈ ಪ್ರಕರಣವನ್ನು ಸಾಮಾನ್ಯ ಪ್ರಕರಣದಂತೆ ಪರಿಗಣಿಸಬಾರದು. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ವಿಶೇಷ ತನಿಖಾ ತಂಡಕ್ಕೆ ತನಿಖೆ ಮಾಡಲು ಆದೇಶ ಮಾಡಬೇಕು. ಈ ಬೃಹತ್ ಹಗರಣವನ್ನು ಭ್ರಷ್ಟಾಚಾರ ನಿರ್ಬಂಧ ಕಾಯ್ದೆ ಅನುಸಾರ ತನಿಖೆಗೆ ವಹಿಸಬೇಕು.ದೂರಿನಲ್ಲಿ ಆರೋಪಿಸಿರುವ ಅಧಿಕಾರಿಗಳನ್ನು ತಕ್ಸಣವೇ ಈ ಹುದ್ದೆಗಳಿಂದ ತೆರವುಗೊಳಿಸಿ ಪಾರದರ್ಶಕ ತನಿಖೆ ನಡೆಸಬೇಕು,’ ಎಂದು ದಿನೇಶ್ ಕಲ್ಲಹಳ್ಳಿ ಅವರು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದ್ದನ್ನು ಸ್ಮರಿಸಬಹುದು.