ಮೊಹರಂ ಹಬ್ಬ ನಿಷೇಧ; ಸಂವಿಧಾನದ ಆಶಯ ಅರ್ಥೈಸಿಕೊಳ್ಳದೇ ತರಾತುರಿ ಆದೇಶ ಹೊರಡಿಸಿದ ಡಿಸಿ

ಬೆಂಗಳೂರು; ವಿವಿಧ ಧಾರ್ಮಿಕ ಹಬ್ಬಗಳ ಆಚರಣೆ ಸಂದರ್ಭಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿ ನಿರ್ವಹಣೆಗಾಗಿ ಪ್ರತಿಬಂಧಾಕಾಜ್ಞೆಗಳನ್ನು ಹೊರಡಿಸಬೇಕಿದ್ದ ಬಳ್ಳಾರಿ ಜಿಲ್ಲಾಧಿಕಾರಿಗಳು ಇದೀಗ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದನ್ನು ಮುಂದಿರಿಸಿ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಯಾಧೀಶರ ವಸತಿಗೃಹ ಕಾಂಪೌಂಡ್ ಪಕ್ಕದಲ್ಲಿನ ಮಹಾನಂದಿಕೊಟ್ಟಂ ಒಳಗಡೆ ಸೇರಿದಂತೆ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಮೊಹರಂ ಹಬ್ಬ ಆಚರಣೆಯನ್ನೇ ನಿಷೇಧಿಸಿ ಹೊರಡಿಸಿರುವ ಆದೇಶವು ಚರ್ಚೆಗೆ ಗ್ರಾಸವಾಗಿದೆ.

 

ಕೇವಲ ಮೆರವಣಿಗೆ, ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರದ ಹಾಗೆ ಅಥವಾ ಮತ್ತೊಂದು ಮತಧರ್ಮದವರಿಗೆ ಪ್ರಚೋದನೆ ಉಂಟಾಗಲಾರದ ರೀತಿಯಲ್ಲಿ ನಿರ್ಬಂಧಗಳನ್ನಷ್ಟೇ ಹೇರಿ ಹಬ್ಬದ ಆಚರಣೆಗೆ ಅನುವು ಮಾಡಿಕೊಡಬೇಕಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೂ ಮೊಹರಂ ಹಬ್ಬ ಆಚರಣೆಯನ್ನು ನಿಷೇಧಿಸಬೇಕು ಎಂದು ವರದಿ ನೀಡಿದ್ದಾರೆ.

 

ಈ ವರದಿಯನ್ನಾಧರಿಸಿ ಬಳ್ಳಾರಿ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ಬಳ್ಳಾರಿ ಜಿಲ್ಲಾಧಿಕಾರಿಗಳ ಹೆಸರಿನಲ್ಲಿರುವ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಇದು ‘ದಿ ಫೈಲ್‌’ಗೆ ಲಭ್ಯವಾಗಿದೆ.
‘ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ಕೆಲ ಗ್ರಾಮಗಳಲ್ಲಿ ವೈಷಮ್ಯ ವಾತಾವರಣ ಇರುವುದರಿಂದ ಜು 31ರಿಂದ ಆ 09ವರೆಗೆ ಆಚರಿಸುತ್ತಿರುವ ಮೊಹರಂ ಹಬ್ಬವನ್ನು ನಿಷೇಧಿಸಬೇಕು,’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ವರದಿ ನೀಡಿದ್ದರು ಎಂಬುದನ್ನು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಸಂವಿಧಾನದ ಆಶಯಗಳನ್ನು ಸರಿಯಾಗಿ ಆರ್ಥೈಸಿಕೊಳ್ಳದೆಯೇ ಜಿಲ್ಲಾಧಿಕಾರಿಗಳು ತರಾತುರಿಯಲ್ಲಿ ಆದೇಶ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಆದೇಶದಲ್ಲೇನಿದೆ?

 

‘ಮೊಹರಂ ಆಚರಿಸುವ ಸಂದರ್ಭದಲ್ಲಿ ಶಾಂತಿ ಮತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಬಗ್ಗೆ ವರದಿಗಳು ಇರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪೊಲೀಸ್ ಬಂದೋಬಸ್ತ್ ಪರಿಣಾಮಕಾರಿಯಾಗಿ ಜಾರಿಗೆ ತರಲು ಮತ್ತು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೆಲ ಗ್ರಾಮಗಳಲ್ಲಿ ಮೊಹರಂ ಹಬ್ಬದ ಆಚರಣೆ ನಿಷೇಧಿಸಲಾಗಿದೆ,’ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ವಿವರಿಸಿದ್ದಾರೆ.

 

ಬಳ್ಳಾರಿ ಡಿ ಸಿ ಹೆಸರಿನಲ್ಲಿರುವ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡ ಆದೇಶ

 

ಅಲ್ಲದೆ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ಕೆಲ ಗ್ರಾಮಗಳಲ್ಲಿ ವೈಷಮ್ಯ ವಾತಾವರಣ ಇರುವುದರಿಂದ ಜು 31ರಿಂದ ಆ 09ವರೆಗೆ ಆಚರಿಸಸುತ್ತಿರುವ ಮೊಹರಂ ಹಬ್ಬವನ್ನು ನಿಷೇಧಿಸಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ವರದಿ ನೀಡಿದ್ದರು ಎಂಬುದನ್ನು ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ.

 

ಮೊಹರಂ ಹಬ್ಬ ನಿಷೇಧಿಸಲ್ಪಟ್ಟ ಗ್ರಾಮಗಳಿವು

 

ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯಾಯಾಧೀಶರ ವಸತಿಗೃಹ ಕಾಂಪೌಂಡ್ ಪಕ್ಕದಲ್ಲಿನ ಮಹಾನಂದಿಕೊಟ್ಟಂ ಒಳಗಡೆ ಹಾಗೂ ತಾಳೂರು ರಸ್ತೆಯ ಕನ್ನಡ ನಗರ ಮುಖ್ಯ ರಸ್ತೆ, ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ಸೂಗೂರು, ಮುದೇನೂರು, ಹೀರೆಹಾಳ್, ನಾಡಂಗ ಗ್ರಾಮಗಳು. ತೆಕ್ಕಲಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಕ್ಕಲಕೋಟೆ, ಹಳೇಕೋಟೆ, ಉಪ್ಪಾರಹೊಸಳ್ಳಿ, ಉಡಗೋಳ, ಅರಳಿಗನೂರು ಗ್ರಾಮಗಳು. ಸಿರಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಿರಿಗೇರಿ, ಕೂರಿಗನೂರು, ತಾಳೂರು, ಕರೂರು ಗ್ರಾಮಗಳು. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳಗಲ್ಲು ಗ್ರಾಮ ಹಾಗೂ ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಂ.15 ಗೋನಾಳು ಗ್ರಾಮದಲ್ಲಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

 

ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(ಎ)ರ ಅಡಿಯಲ್ಲಿ ಶಸ್ತ್ರ, ಬಡಿಗೆ, ಬರ್ಚಿ, ಗದೆ, ಬಂದೂಕು, ಚೂರಿ, ಕೋಲು, ಲಾಠಿ ಅಥವಾ ಶರೀರಕ್ಕೆ ಗಾಯ ಮಾಡಲು ಉಪಯೋಗಿಸಬಹುದಾದ ಯಾವುದೇ ವಸ್ತುವನ್ನು ಒಯ್ಯುವುದು. ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(ಬಿ)ರ ಅಡಿಯಲ್ಲಿ ಯಾವುದೇ ದಾಹಕ(ನಾಶಕಾರಿ) ಪದಾರ್ಥ ಇಲ್ಲವೇ ಸ್ಪೋಟಕ ವಸ್ತು ಒಯ್ಯುವುದು. ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(ಡಿ)ರ ಅಡಿಯಲ್ಲಿ ಯಾವುದೇ ವ್ಯಕ್ತಿಗಳ ಭಾವ ಚಿತ್ರಗಳನ್ನು ಅವಮಾನಕಾರ ರೀತಿಯಲ್ಲಿ ಪ್ರದರ್ಶಿಸಬಾರದು ಎಂದೂ ಆದೇಶದಲ್ಲಿ ಸೂಚಿಸಲಾಗಿದೆ.

 

ಅದೇ ರೀತಿ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(ಇ)ರ ಅಡಿಯಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದನ್ನು, ಪದ ಹಾಡುವುದನ್ನು, ವಾದ್ಯ ಬಾರಿಸುವುದನ್ನು, ವ್ಯಾಖ್ಯಾನ ಕೊಡುವುದನ್ನು, ಸನ್ನೆ ಪ್ರದರ್ಶನವನ್ನು, ಆಫೀಸರ್‌ ಅಭಿಪ್ರಾಯದಲ್ಲಿ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಯಾವುದೇ ವಸ್ತು ಅಥವಾ ತಯಾರಿ ಪ್ರದರ್ಶನ ಅಥವಾ ಪ್ರಸಾರವನ್ನು ಪ್ರತಿಬಂಧಿಸುವುದು ಹಾಗೂ ಗುಂಪುಗೂಡಿ ಮೆರವಣಿಗೆ ಮಾಡಕೂಡದು ಎಂದು ನಿರ್ದೇಶಿಸಲಾಗಿದೆ.

 

ಸಂವಿಧಾನದ ವಿಧಿ 19(1)(ಬಿ) ಪ್ರಕಾರ ಯಾವುದೇ ಪ್ರಜೆ ಶಾಂತಿಯುತವಾಗಿ ಯಾವುದೇ ಆಯುಧಗಳನ್ನು ಹೊಂದದೇ ಸಭೆ ಸೇರುವುದಕ್ಕೂ ಮತ್ತು 19(1) (ಡಿ) ಅಡಿ ಯಾವುದೇ ನಿರ್ಬಂಧವಿಲ್ಲದೇ ತಿರುಗಾಡಲು ಮೂಲಭೂತ ಹಕ್ಕುಗಳನ್ನು ಕಾಯ್ದರಿಸಲಾಗಿದೆ. ಭಾರತ ದಂಡ ಪ್ರಕ್ರಿಯೆ ಸಂಹಿತೆ ಆಧ್ಯಾಯ 10ರ ಪ್ರಕಾರ ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿ ನಿರ್ವಹಣೆಗಾಗಿ ಪ್ರತಿಬಂಧಕಾಜ್ಞೆಗಳನ್ನಷ್ಟೇ ಹೊರಡಿಸಬೇಕು. ಹಾಗೆಯೇ 19(2)ರ ಪ್ರಕಾರ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾರಣವಾಗಿಟ್ಟುಕೊಂಡು ಈ ಮೇಲಿನ ಎರಡೂ ಹಕ್ಕುಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬಹುದು. ಆದರೆ ಸಂವಿಧಾನದ ವಿಧಿ 25ರಲ್ಲಿ ತಿಳಿಸಿರುವಂತೆ ಯಾವುದೇ ಧಾರ್ಮಿಕ ಆಚರಣೆಗಳ ಕುರಿತು ಸಂಪೂರ್ಣ ನಿರ್ಬಂಧ ಹೇರಲು ಸಾಧ್ಯವಿಲ್ಲ.

 

ಯಾವ್ಯಾವ ಸ್ಥಳಗಳಲ್ಲಿ ಸಾರ್ವಜನಿಕ ಶಾಂತಿಗೆ ಧಕ್ಕೆ ಆಗುತ್ತದೆ ಎಂದು ಕಂಡುಬರುತ್ತದೆಯೋ ಆಗ ಈ ದಂಡ ಪ್ರಕ್ರಿಯೆ ಸಂಹಿತೆ ಅಡಿಯಲ್ಲಿ ಮತ್ತು ಕರ್ನಾಟಕ ಪೊಲೀಸ್‌ ಆದಿನಿಯಮದಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಅನುಸರಿಸಿ ಪ್ರತಿಬಂಧಕಾಜ್ಞೆಗಳನ್ನು ಜಾರಿಗೊಳಿಸಬಹುದು. ಆದರೆ ಹಬ್ಬಗಳ ಆಚರಣೆಯನ್ನೇ ನಿಷೇಧಿಸಲು ಸಾಧ್ಯವಿಲ್ಲ. ಖಾಸಗಿಯಾಗಿ ವೈಯಕ್ತಿಕವಾಗಿ ಆ ಮತಕ್ಕೆ ಸೇರಿದವರು ಅವರ ಮನೆಗಳಲ್ಲಿ ಅಥವಾ ಅವರ ಪ್ರಾರ್ಥನಾ ಮಂದಿರಗಳಲ್ಲಿ ಸೇರಿ ಧಾರ್ಮಿಕ ಆಚರಣೆಗಳನ್ನು ಮಾಡಿಕೊಳ್ಳಲು ಅವಕಾಶವಿದೆ.

 

‘ಬಳ್ಳಾರಿ ಜಿಲ್ಲಾಧಿಕಾರಿಯು ಹೊರಡಿಸಿರುವ ಆದೇಶವು ನಿರ್ದಿಷ್ಟವಾಗಿಲ್ಲ. ಸಾಮಾನ್ಯವಾಗಿ ಹಬ್ಬ ಎಂದು ಹೇಳಿದ್ದಾರೆ. ಹಬ್ಬದಲ್ಲಿ ಹಲವಾರು ರೀತಿಯ ಆಚರಣೆಗಳಿರುತ್ತವೆ. ಒಂದು ಖಾಸಗಿಯಾಗಿ, ಇನ್ನೊಂದು ಅವರ ಪ್ರಾರ್ಥನಾ ಮಂದಿರಗಳಲ್ಲಿ  ಒಂದೇ ಸಮುದಾಯದವರು ಅಚರಿಸಿಕೊಳ್ಳುವವರು, ಮೂರನೆಯದಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಮೆರವಣಿಗೆ ತೆಗೆಯುವುದು ಅಥವಾ ಬೇರೆ ರೀತಿಯಲ್ಲಿ ಅನ್ಯ ಧರ್ಮದವರಿಗೆ ಕಾಣುವ ರೀತಿಯಲ್ಲಿ ಬೇರೆ ಬೇರೆ ಬಗೆಯ ಆಚರಣೆಗಳನ್ನು ಮಾಡುವುದು. ಹಾಗಾಗಿ ಹಬ್ಬ ಎನ್ನುವ ಪದವನ್ನು ಸಾಮಾನ್ಯವಾಗಿ ಬಳಸಿರುವುದರಿಂದ ಇದು ಗೊಂದಲಮಯವಾಗಿದೆ.  ಹಾಗಾಗಿ ಯಾವ ನಿರ್ದಿಷ್ಟ ಆಚರಣೆಗಳನ್ನು ನಿಷೇಧಿಸಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ ಈ ಆದೇಶವು ಸರಿ ಇಲ್ಲ,’ ಎನ್ನುತ್ತಾರೆ ವಕೀಲ ಕೆ ಬಿ ಕೆ ಸ್ವಾಮಿ.

the fil favicon

SUPPORT THE FILE

Latest News

Related Posts