ಬೆಂಗಳೂರು; ವಿಪತ್ತುಗಳ ನಿರ್ವಹಣೆಗೆಂದು ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳಲ್ಲಿನ ವೈಯಕ್ತಿಕ ಠೇವಣಿ ಖಾತೆಯಲ್ಲಿ ಮೀಸಲಿರಿಸಿದ್ದ ಒಟ್ಟು ಮೊತ್ತದ ಪೈಕಿ 2023ರ ಮಾರ್ಚ್ ಅಂತ್ಯಕ್ಕೆ 303 ಕೋಟಿ ರುಪಾಯಿ ಖರ್ಚಾಗದೇ ಬಾಕಿ ಉಳಿದಿತ್ತು ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಪ್ರಧಾನ ಮಹಾಲೇಖಪಾಲರು ಬೆಳಕಿಗೆ ತಂದಿದ್ದಾರೆ.
2025ರ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು, ಕರ್ನಾಟಕದಲ್ಲಿ ವಿಪತ್ತು ನಿರ್ವಹಣೆ ಕಾರ್ಯನಿರ್ವಹಣೆಯಲ್ಲಿನ ಹಲವು ಮುಖಗಳನ್ನು ತೆರೆದಿಟ್ಟಿದೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.

ಬೆಳಗಾವಿ ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳಲ್ಲಿನ ವೈಯಕ್ತಿಕ ಠೇವಣಿ ಖಾತೆಗಳಲ್ಲಿ (ಪಿ ಡಿ ಖಾತೆ) ನ ಮೊತ್ತವನ್ನು ಖರ್ಚು ಮಾಡಿರಲಿಲ್ಲ. ಇದರ ಮೊತ್ತವೇ ಬೃಹತ್ ಪ್ರಮಾಣದಲ್ಲಿತ್ತು. ಅಲ್ಲದೇ ಖರ್ಚು ಮಾಡಿರುವುದಕ್ಕೆ ಸಂಬಂಧಿಸಿದಂತೆ ಬಳಕೆ ಪ್ರಮಾಣ ಪತ್ರಗಳೂ ಲಭ್ಯವಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ಪಟ್ಟಿ ನೀಡಿರುವುದು ಗೊತ್ತಾಗಿದೆ.
ಸಿಎಜಿ ವರದಿ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊಡಗಿನಲ್ಲೇ ಅತೀ ಹೆಚ್ಚು ಬಾಕಿ
ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ ಖಾತೆಯಲ್ಲಿ 51.08 ಕೋಟಿ, ತಾಲೂಕು ಕಚೇರಿಗಳಲ್ಲಿ 22.18 ಕೋಟಿ ರು ಸೇರಿ 72.26 ಕೋಟಿಯಷ್ಟು ಬಾಕಿ ಉಳಿದಿತ್ತು. ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳಲ್ಲಿ ಒಟ್ಟಾರೆ 22.37 ಕೋಟಿ, ದಕ್ಷಿಣ ಕನ್ನಡದಲ್ಲಿ ಜಿಲ್ಲಾಧಿಕಾರಿ, ತಾಲೂಕು ಕಚೇರಿಗಳಲ್ಲಿ 16.06 ಕೋಟಿ, ದಾವಣಗೆರೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ತಾಲೂಕು ಕಚೇರಿಗಳಲ್ಲಿ 12.16 ಕೋಟಿ, ಹಾವೇರಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಹೆಸರಿನಲ್ಲಿನ ಪಿ ಡಿ ಖಾತೆಯಲ್ಲಿ 27.58 ಕೋಟಿ ಬಾಕಿ ಉಳಿದಿತ್ತು.
ಹಾಗೆಯೇ ಕಲ್ಬುರ್ಗಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಹೆಸರಿನ ಪಿ ಡಿ ಖಾತೆಯಲ್ಲಿ 44.35 ಕೋಟಿ, ತಾಲೂಕು ಕಚೇರಿಗಳಲ್ಲಿ 2.60 ಕೋಟಿ ಸೇರಿದಂತೆ 46.95 ಕೋಟಿ ರು., ಕೊಡಗಿನಲ್ಲಿ ಜಿಲ್ಲಾಧಿಕಾರಿ ಹೆಸರಿನ ಪಿ ಡಿ ಖಾತೆಯಲ್ಲಿ 57.04 ಕೋಟಿ ರು ಖರ್ಚಾಗದೇ ಬಾಕಿ ಉಳಿದಿತ್ತು. ರಾಮನಗರ ಜಿಲ್ಲಾಧಿಕಾರಿ ಪಿ ಡಿ ಖಾತೆಯಲ್ಲಿ 19.26 ಕೋಟಿ ರು, ತಾಲೂಕು ಕಚೇರಿಯಲ್ಲಿ 0.87 ಕೋಟಿ 20.13 ಕೋಟಿ ರು., ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಪಿ ಡಿ ಖಾತೆಯಲ್ಲಿ 21.07 ಕೋಟಿ ರು., ತಾಲೂಕು ಕಚೇರಿಗಳಲ್ಲಿ 6.36 ಕೋಟಿ ರು ಸೇರಿ 27.43 ಕೋಟಿ ರು ಬಾಕಿ ಉಳಿದಿತ್ತು.

ಒಟ್ಟಾರೆ ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 262.50 ಕೋಟಿ ಮತ್ತು ತಾಲೂಕು ಕಚೇರಿಗಳಲ್ಲಿ 40.53 ಕೋಟಿ ರು ಸೇರಿ ಒಟ್ಟಾರೆ 303.03 ಕೋಟಿ ರು ಖರ್ಚಾಗದೇ ಬಾಕಿ ಉಳಿದಿತ್ತು ಎಂದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

‘ಜಿಲ್ಲೆಗಳು ಮತ್ತು ಇತರ ಇಲಾಖೆಗಳು ಏಜೆನ್ಸಿಗಳಿಗೆ ಬಿಡುಗಡೆಗಳನ್ನು ವೆಚ್ಚವಾಗಿ ಕಾಯ್ದಿರಿಸಿದ್ದರಿಂದ ರಾಜ್ಯದಲ್ಲಿ ವಿಪತ್ತು ನಿರ್ವಹಣೆ ಮೇಲಿನ ನಿಜವಾದ ವೆಚ್ಚವನ್ನು ಅತಿಯಾಗಿ ಹೇಳಲಾಗಿದೆ ಎಂದು ಖರ್ಚು ಮಾಡದ ಬೃಹತ್ ಬಾಕಿ ಅಂಶಗಳು ಸೂಚಿಸುತ್ತವೆ. ಇದು ರಾಜ್ಯವು, ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವೆಚ್ಚವನ್ನು ತಪ್ಪಾಗಿ ವರದಿ ಮಾಡಿದಂತಾಗಿದೆ. ಅದೇ ರೀತಿ ಇಲಾಖೆಯಲ್ಲಿ ಹೊಂದಾಣಿಕೆ ಮತ್ತು ಮೇಲ್ವಿಚಾರಣೆ ಕಾರ್ಯವಿಧಾನಗಳ ಅನುಪಸ್ಥಿತಿಯನ್ನು ಎದ್ದು ತೋರಿಸಿತು,’ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಹಾಗೆಯೇ ವಿಪತ್ತು ನಿರ್ವಹಣೆಗೆಂದು ಮಾಡಿದ್ದ ಖರ್ಚಿಗೆ ಸಂಬಂಧಿಸಿದಂತೆ ಏಜೆನ್ಸಿಗಳಿಂದ ಬಳಕೆ ಪ್ರಮಾಣ ಪತ್ರಗಳನ್ನು ಪಡೆದಿರಲಿಲ್ಲ. ಹೀಗಾಗಿ ವೆಚ್ಚದ ನೈಜ ಮೊತ್ತವನ್ನು ಉಲ್ಲೆಖಿಸಲಾಗಲಿಲ್ಲ. ವಿಪತ್ತುವಾರು ಸ್ವೀಕೃತಿಗಳು, ವೆಚ್ಚಗಳ ವಿವರಗಳು ಇಲ್ಲದಿರುವುದು, ಸೂಕ್ತ ದಾಖಲೆಗಳಿಲ್ಲದೇ ನಗದು ಪುಸ್ತಕಗಳ ಅಸಮರ್ಪಕ ನಿರ್ವಹಣೆ, ಬಹು ಬ್ಯಾಂಕ್ ಖಾತೆಗಳ ಅನಿಯಮಿತ ನಿರ್ವಹಣೆ, ಜಿಲ್ಲೆಗಳು ಮತ್ತು ತಾಲೂಕುಗಳ ಹಣಕಾಸು ದಾಖಲೆಗಳ ನಡುವೆ ಹೊಂದಾಣಿಕೆ ಇರಲಿಲ್ಲ. ಹೀಗಾಗಿ ಲೆಕ್ಕ ಪರಿಶೋಧನೆಗೆ ಲಭ್ಯವಿದ್ದ ದಾಖಲೆಗಳಿಂದಲೇ ವಿಪತ್ತು ನಿರ್ವಹಣೆ ಅನುದಾನ ಬಳಕೆಯ ನಿಖರತೆಯನ್ನು ನಿರ್ಣಯಿಸುವುದನ್ನು ತಡೆಯಿತು ಎಂದೂ ಸಿಎಜಿ ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ನೈಸರ್ಗಿ ವಿಕೋಪ ಮೇಲ್ವಿಚಾರಣೆ ಕೇಂದ್ರವು ಸ್ವೀಕರಿಸಿದ್ದ ಮೊತ್ತವನ್ನು ಖರ್ಚು ಮಾಡಿದೆಯಾದರೂ ಈ ಖರ್ಚಿನ ಬಗ್ಗೆ ಬಳಕೆ ಪ್ರಮಾಣ ಪತ್ರವನ್ನು ಒದಗಿಸಿಲ್ಲ. ಅಲ್ಲದೇ ಕಂದಾಯ ಇಲಾಖೆಯೂ ಸಹ ಬಳಕೆ ಪ್ರಮಾಣ ಪತ್ರ ಸಲ್ಲಿಸುವಂತೆ ಒತ್ತಾಯಿಸಿಲ್ಲ.
46.99 ಕೋಟಿಗೆ ಬಳಕೆ ಪ್ರಮಾಣ ಪತ್ರಗಳೇ ಇಲ್ಲ
ಕರ್ನಾಟಕ ರಾಜ್ಯ ನೈಸರ್ಗಿ ವಿಕೋಪ ಮೇಲ್ವಿಚಾರಣೆ ಕೇಂದ್ರಕ್ಕೆ 2017-18ರಿಂದ 2022-23ರವರೆಗೆ ಒಟ್ಟಾರೆ 46.99 ಕೋಟಿ ರು ಬಿಡುಗಡ ಮಾಡಲಾಗಿತ್ತು ಎಂದು ನೋಡಲ್ ಇಲಾಖೆಯು ಹೇಳಿತ್ತು. ಆದರೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂಧ್ರವು 47.89 ಕೋಟಿ ರು.ಗಳನ್ನು ಸ್ವೀಕರಿಸಿತ್ತು. ಬಳಕೆ ಪ್ರಮಾಣ ಪತ್ರಗಳ ಅನುಪಸ್ಥಿತಿ ಮತ್ತು ಇಲಾಖೆ, ಏಜೆನ್ಸಿ ನಡುವೆ ಹೊಂದಾಣಿಕೆ ಇರಲಿಲ್ಲ ಎಂಬುದಕ್ಕೆ ಈ ಪ್ರಕರಣವು ಕೈಗನ್ನಡಿ ಹಿಡಿದಂತಾಗಿದೆ.

2017-2023ರ ಅವಧಿಯಲ್ಲಿ ಕೆಎಸ್‌ಎನ್‌ಡಿಎಂಸಿಯು 21.77 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಮಾರ್ಚ್ 2023 ವೇಳೆಗೆ ತನ್ನ ಬ್ಯಾಂಕ್ ಖಾತೆಯಲ್ಲಿ 27.04 ಕೋಟಿ ರು ಬಾಕಿ ಹೊಂದಿತ್ತು. ಈ ಬಾಕಿ ಮೊತ್ತದಲ್ಲಿ 91 ಲಕ್ಷ ರು ಬಡ್ಡಿ ಮೊತ್ತವೂ ಒಳಗೊಂಡಿತ್ತು. ಇದು ಬಿಡುಗಡೆಯ ಶೇ.50ಕ್ಕಿಂತಲೂ ಹೆಚ್ಚಿನದಾಗಿತ್ತು. ಮತ್ತು ಈ ಕೇಂದ್ರವು ಅನ್ಯ ಉದ್ದೇಶಗಳಿಗೆ ಖರ್ಚು ಮಾಡಿರುವುದನ್ನೂ ಸಿಎಜಿ ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.
3.05 ಕೋಟಿ ರು ಅನರ್ಹ ವೆಚ್ಚ
ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ನಗರಗಳಲ್ಲಿ ಟೆಲಿ ಮೆಟ್ರಿಕ್ ಮಳೆ ಮಾಪಕ, ಟೆಲಿ ಮೆಟ್ರಿಕ್ ಹವಾಮಾನ ಕೇಂದ್ರಗಳು, ಟೆಲಿ ಮೆಟ್ರಿಕ್ ನೀರಿನ ಮಟ್ಟ ಸಂವೇದಕಗಳ ಪೂರೈಕೆ, ಸ್ಥಾಪನೆ, ಕಾರ್ಯಾರಂಭ ಮತ್ತು ನಿರ್ವಹಣೆಗೆ 2.81 ಕೋಟಿಯಷ್ಟು ಖರ್ಚು ಮಾಡಿತ್ತು. ಆದರೆ ಈ ಚಟುವಟಿಕೆಗಳನ್ನು ಆಯಾ ಪುರಸಭೆಗಳು ನಡೆಸಬೇಕಿತ್ತು. ಮತ್ತು ವೆಚ್ಚವನ್ನು ಸ್ಮಾರ್ಟ್ ಸಿಟಿ ಮಿಷನ್ ಕಾರ್ಯಕ್ರಮದಡಿ ಭರಿಸಬೇಕಾಗಿತ್ತು.
ಅದೇ ರೀತಿ ಅಂತರ ಸಚಿವಾಲಯ ಕೇಂದ್ರದ ತಂಡ ಭೇಟಿ ಸಂದರ್ಭದಲ್ಲಿ ರಾಜ್ಯದ ಪ್ರವಾಹ ಪೀಡಿತ ಸ್ಥಳಗಳನ್ನು ವೀಕ್ಷಿಸಲು ಚಾರ್ಟ್‌ಡ್ ವಿಮಾನ ಬಾಡಿಗೆ ಶುಲ್ಕ ರೂಪದಲ್ಲಿ 11.22 ಲಕ್ಷ ರು ಖರ್ಚು ಮಾಡಲಾಘಿತ್ತು. ಮತ್ತು ಸಿಬ್ಬಂದಿಗೆ ಸಂಬಳ ಹೆಸರಿನಲ್ಲಿ 12.91 ಲಕ್ಷ ರು ಖರ್ಚು ಮಾಡಿತ್ತು. ಆದರೆ ಈ ಆಡಳಿತಾತ್ಮಕ ವೆಚ್ಚಗಳು ರಾಜ್ಯ ವಿಪತ್ತು ಪಡೆಯ ಅಡಿಯಲ್ಲಿ ಖರ್ಚು ಮಾಡಲು ಅವಕಾಶವಿರಲಿಲ್ಲ. ರಾಜ್ಯ ಸರ್ಕಾರವೇ ಈ ಮೊತ್ತವನ್ನು ಭರಿಸಬೇಕಾಗಿತ್ತು ಎಂದು ಸಿಎಜಿ ತನ್ನ ವರದಿಯಲ್ಲಿ ಅಭಿಪ್ರಾಯಿಸಿದೆ. ಹಾಗೆಯೇ ಈ ವೆಚ್ಚವನ್ನು ಎಸ್‌ಡಿಆರ್‍ಎಫ್ ಅನುದಾನದಡಿಯಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿರುವುದು ಗೊತ್ತಾಗಿದೆ.
ಅಷ್ಟೇ ಅಲ್ಲ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನದ ಅಡಿಯಲ್ಲಿ ಲಭ್ಯವಿರುವ ಹಣವನ್ನು ಈ ಕೇಂದ್ರವು 2021-22ರಲ್ಲಿ ಸಂವಹನ ಸಾಧನಗಳೊಂದಿಗೆ ನಿಯಂತ್ರಣ ಕೊಠಡಿ ಕೆಲಸಕ್ಕೆ ಬಳಸಿಕೊಂಡಿತ್ತು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣೆ ಕೇಂಧ್ರ 1.03 ಕೋಟಿ ರು.ಗಳನ್ನು ಖರ್ಚು ಮಾಡಿತ್ತು.
ಅಲಂಕಾರಕ್ಕಾಗಿ 61.84 ಲಕ್ಷ ವೆಚ್ಚ
ಈ ಹಣದಲ್ಲಿ ವಿಡಿಯೋ ವಾಲ್, ಸಂವಹನ, ಸಭಾಂಗಣ ಉಪಕರಣಗಳು, ಬೆಂಗಳೂರಿನ ಬಹುಮಹಡಿ ಕಟ್ಟಡದಲ್ಲಿರುವ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಚೇರಿಯ ನವೀಕರಣ, ಎಸ್‌ಇಒಸಿ ಬಲಪಡಿಸಲು ಉಪಕರಣಗಳ ಅಳವಡಿಕೆ ಮತ್ತು ನವೀಕರಣಕ್ಕಾಗಿ 61.84 ಲಕ್ಷ ರುಗ.ಳನ್ನು ಖರ್ಚು ಮಾಡಿದೆ. ಮತ್ತು ನವೀಕರಿಸಿದ್ದ ಕೋಣೆಯನ್ನು ಕಂದಾಯ ಇಲಾಖೆಯು ಅನ್ಯ ಉದ್ದೇಶಗಳಿಗೆ ಬಳಸಿರುವುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ.
‘ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಯಾವುದೇ ಭೌತಿಕ ಸ್ಥಾಪನೆ ಇಲ್ಲದಿದ್ದರೂ ಎಸ್‌ಇಒಸಿ ಬಹುಮಹಡಿ ಕಟ್ಟಡದ ಆವರಣದಲ್ಲಿ ಸಂಪೂರ್ಣವಾಗಿ ನಿಷ್ಕ್ರೀಯವಾಗಿತ್ತು. ಹೀಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನದಿಂದ ಒಳಾಂಗಣಂ ಅಲಂಕಾರ ಕಾಮಗಾರಿಗಳಿಗೆ ವೆಚ್ಚ ಮಾಡಿದ 61.84 ಲಕ್ಷ ರು ಸ್ಪಷ್ಟವಾಗಿ ಅನರ್ಹವಾಗಿದ್ದವು,’ ಎಂದು ಸಿಎಜಿ ವರದಿಯು ವಿವರಿಸಿದೆ.
ಕಂದಾಯ ಇಲಾಖೆಯು 2013-2022ರ ಅವಧಿಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಇಲಾಖೆಗೆ ತರಬೇತಿ, ಸಾಮರ್ಥ್ಯ ವರ್ಧನೆ ಮತ್ತು ಡಿಆರ್‍ಎಫ್ ಘಟಕಗಳಿಗೆ ಉಪಕರಣಗಳ ಖರೀದಿಗಾಗಿ 43.37 ಕೋಟಿ ರು ಬಿಡುಗಡೆ ಮಾಡಿತ್ತು. ಅಗ್ನಿ ಶಾಮಕ ಮತ್ತು ತುರ್ತು ಇಲಾಖೆಯು 23.68 ಕೋಟಿ ರು.ಗಳನ್ನು ಬಳಸಿತ್ತು. ಮತ್ತು 7.69 ಕೋಟಿ ರು ಬಳಕೆಯಾಗದೇ ಬ್ಯಾಂಕ್ ಖಾತೆಯಲ್ಲಿ ಉಳಿದಿತ್ತು.
ಕೈ ತಪ್ಪಿ ಹೋದ 12 ಕೋಟಿ
ಈ ಮೊತ್ತವು ಬಳಕೆಯಾಗದೇ ಬಾಕಿ ಉಳಿಯಲು ಯಾವ ಕಾರಣಗಳನ್ನೂ ಇಲಾಖೆಯು ನೀಡಿಲ್ಲ ಅಥವಾ ಬಳಕೆಯ ಕ್ರಿಯಾ ಯೋಜನೆಯನ್ನು ಸಿಎಜಿಗೆ ಒದಗಿಸಿಲ್ಲ. ಇದಲ್ಲದೇ ಇಲಾಖೆಯು ಹಣವನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಕಾರಣ 2022-23ರ ಅವಧಿಯಲ್ಲಿ 12 ಕೋಟಿ ಖರ್ಚು ಮಾಡಬೇಕಾಗಿದ್ದ ಅವಧಿಯೂ ಮುಕ್ತಾಯವಾಗಿತ್ತು. ಹೀಗಾಗಿ ಈ ಮೊತ್ತವು ಕೈ ತಪ್ಪಿ ಹೋಯಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ.
‘ಇದರ ಪರಿಣಾಮವಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅನುದಾನವು ಸರ್ಕಾರದ ಖಾತೆಯ ಹೊರಗೇ ಇದೆ. ಅಗ್ನಿಶಾಮಕ ಮತ್ತು ತುರ್ತು ಇಲಾಖೆಯು ಉಪಕರಣಗಳ ಖರೀದಿ ಮತ್ತು ಸಾಮರ್ಥ್ಯ ವೃದ್ಧಿಗೆ ಯಾವುದೇ ಯೋಜನೆಗಳನ್ನೇ ಹೊಂದಿರಲಿಲ್ಲ ಎಂದು ಇದು ಸೂಚಿಸುತ್ತದೆ,’ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನು ವಿಪತ್ತು ನಿರ್ವಹಣಾ ಕೇಂದ್ರದಿಂದ ನಿಧಿ ಬಳಕೆಯನ್ನು ಸಿಎಜಿಯು ಲೆಕ್ಕ ಪರಿಶೋಧನೆ ಮಾಡಿದೆ. 2017-23ರ ಅವಧಿಯಲ್ಲಿ ಡಿಎಂ-ಎಟಿಐಗೆ ವಿಪತ್ತು ನಿರ್ವಹಣೆ ತರಬೇತಿ ಚಟುವಟಿಕೆ ನಡೆಸಲು 9.29 ಕೋಟಿ ರು ಬಿಡುಗೆಡ ಮಾಡಿತ್ತು. ಸಂಸ್ಥೆಯು 4.18 ಕೋಟಿ ಖರ್ಚು ಮಾಡಿದೆ. ಮತ್ತು ಉಳಿದ 5.11 ಕೋಟಿ ರು ಸಿಡಿಎಂನ ಬ್ಯಾಂಕ್ ಖಾತೆಯಲ್ಲಿ ಮತ್ತು ಸರ್ಕಾರದ ಖಾತೆಯಿಂದ ಹೊರಗೇ ಉಳಿದಿದೆ. 2017-18ರಿಂದ 2022-23ರ ಅವಧಿಯಲ್ಲಿ ಸಿಡಿಎಂನ ಸರಾಸರಿ ವಾರ್ಷಿಕ ವೆಚ್ಚವು ಕೇವಲ 70 ಲಕ್ಷ ರು.ನಷ್ಟಿದೆ. ಇದೇ ವರ್ಷಗಳಲ್ಲಿ ಉಳಿತಾಯದ ಶೇಕಡವಾರು ಪ್ರಮಾಣವು ಸಹ ಶೇ. 29ರಿಂದ 89ರಷ್ಟಿತ್ತು.
‘ಆದ್ದರಿಂದ ನೈಜ ಬಳಕೆಗಿಂತ ಹೆಚ್ಚಿನ ಹಣವನ್ನು ಬಿಡುಗಡೆ ಮಾಡುವುದು ಅನಗತ್ಯವಾಗಿದೆ. ಮ್ತು ಹೆಚ್ಚುವರಿ ಬಿಡುಗಡೆಯನ್ನು ಸಮರ್ಥಿಸಲು ದಾಖಲೆಯಲ್ಲಿ ಏನೂ ಇರಲಿಲ್ಲ,’ ಎಂದು ಸಿಎಜಿ ವರದಿಯಲ್ಲಿ ಹೇಳಿದೆ.









