ಬೆಂಗಳೂರು; ಭಿಕ್ಷುಕರ ಪುನರ್ವಸತಿಗೆ ಸಾರ್ವಜನಿಕರಿಂದ ತೆರಿಗೆ ಸಂಗ್ರಹಿಸುತ್ತಿರುವ ನಗರ ಸ್ಥಳೀಯ ಸಂಸ್ಥೆಗಳು , ಗ್ರಾಮ ಪಂಚಾಯತ್ ಮತ್ತು ಬಿಬಿಎಂಪಿಯು ಕೇಂದ್ರ ಪರಿಹಾರ ಸಮಿತಿಗೆ 2025ರ ಡಿಸೆಂಬರ್ 19ರ ಅಂತ್ಯಕ್ಕೆ 63.16 ಕೋಟಿಯಷ್ಟು ಬಾಕಿ ಉಳಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
2025-26ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರ ಪರಿಹಾರ ಸಮಿತಿಗೆ ಸ್ವೀಕೃತವಾಗಿರುವ ಭಿಕ್ಷುಕರ ಕರ ಸಂಗ್ರಹ ಮತ್ತು ಇನ್ನೂ ಸ್ವೀಕೃತವಾಗಿರುವ ಕರದ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ಕೇಂದ್ರ ಪರಿಹಾರ ಸಮಿತಿಯು ಮಾಹಿತಿ ಒದಗಿಸಿದೆ. ಈ ಮಾಹಿತಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ 2024-25ರಲ್ಲಿ 86.26 ಕೋಟಿ ರೂಪಾಯಿ ಭಿಕ್ಷುಕರ ಸೆಸ್ ಸಂಗ್ರಹ ಮಾಡಲಾಗಿದೆ. ಅದರಲ್ಲಿ 10.32 ಕೋಟಿ ರೂಪಾಯಿಗಳನ್ನು ಕೇಂದ್ರ ಪರಿಹಾರ ಸಮಿತಿಗೆ (ಸಿಆರ್ಸಿ) ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಇಲ್ಲಿವರೆಗೆ 73.12 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಆದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು 2024-25ನೇ ಸಾಲಿನ ಭಿಕ್ಷುಕರ ಉಪಕರ ಬೇಡಿಕೆ ಮಾಹಿತಿಯನ್ನು ಕೇಂದ್ರ ಪರಿಹಾರ ಸಮಿತಿಗೆ ಸಲ್ಲಿಸಿಲ್ಲ. ಈ ಬಗ್ಗೆ ಕೇಂದ್ರ ಪರಿಹಾರ ಸಮಿತಿಯು 2025ರ ಜುಲೈ 25ರಂದೇ ಪತ್ರ ಬರೆದಿತ್ತು. 2025ರ ಡಿಸೆಂಬರ್ ಅಂತ್ಯದವರೆಗೂ ಜಿಬಿಎಯು ಭಿಕ್ಷುಕರ ಉಪ ಕರ ಬೇಡಿಕೆ ಕುರಿತು ಮಾಹಿತಿಯನ್ನೇ ಒದಗಿಸಿಲ್ಲ. 2023-24ನೇ ಸಾಲಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು 33.74 ಕೋಟಿ ರು.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡಿದೆ.
ತೆರಿಗೆ ವಸೂಲಾತಿಗೆ ಸಂಬಂಧಿಸಿದಂತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು ಎಂದು ಗೊತ್ತಾಗಿದೆ.
ಜಿಬಿಎ ವ್ಯಾಪ್ತಿಯಲ್ಲಿ 5 ಹೊಸ ಪಾಲಿಕೆಗಳಿವೆ. ಕಳೆದ ವರ್ಷದ ಬಾಕಿ 75 ಕೋಟಿ ರೂಪಾಯಿ ಹಾಗೂ ಈ ವರ್ಷದ ಭಿಕ್ಷುಕರ ಸೆಸ್ ಪಾಲನ್ನು 2026ರ ಮಾರ್ಚ್ 31ರೊಳಗೆ ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಬೇಕು ಎಂದು ಆಯಾ ಪಾಲಿಕೆಗೆಗಳ ಆಯುಕ್ತರಿಗೆ ನಿರ್ದೇಶಿಸಿದ್ದರು.
ಭಿಕ್ಷಾಟನೆ ಉಪ ಕರವನ್ನು 2024-25ನೇ ಸಾಲಿನವರೆಗೆ ಪಾವತಿ ಮಾಡಿದೆ. 75.94 ಕೋಟಿ ರು ಬಾಕಿ ಇದೆ ಎಂದು 2025ರ ಡಿಸೆಂಬರ್ 18ರಂದು ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಹಿತಿ ಒದಗಿಸಿದ್ದರು.

ನಗರ ಸ್ಥಳೀಯ ಸಂಸ್ಥೆಗಳು 2024-25ನೇ ಸಾಲಿನಲ್ಲಿ 42.00 ಕೋಟಿಯಷ್ಟು ಸಂಗ್ರಹಿಸಿವೆ. ಈ ಪೈಕಿ 30.11 ಕೋಟಿ ರುಪಾಯಿಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆ ಮಾಡಿದೆ. ಜಮೆ ಮಾಡಲು 11.88 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿರುವ ಭಿಕ್ಷುಕರ ಉಪ ಕರ ಸಂಗ್ರಹಣೆ ಮಾಹಿತಿಯನ್ನು ಕೆಎಸ್ಎಲ್ಎಗೆ (ರಿಟ್ ಅರ್ಜಿ 10096/2020) ಮಾಹಿತಿ ನೀಡಿದೆ.
ಗ್ರಾಮ ಪಂಚಾಯತ್ಗಳು ಸಹ 2024-25ನೇ ಸಾಲಿನಲ್ಲಿ 72.82 ಕೋಟಿಯಷ್ಟು ಸಂಗ್ರಹ ಮಾಡಿದ್ದರೇ 2025ರ ಡಿಸೆಂಬರ್ 19ರ ಅಂತ್ಯಕ್ಕೆ 21.55 ಕೋಟಿಯಷ್ಟೇ ಜಮೆ ಮಾಡಿದೆ. 51.27 ಕೋಟಿ ರುಪಾಯಿಗಳನ್ನು ಜಮೆ ಮಾಡಲು ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.
ಜಿಬಿಎ, ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್ಗಳಿಂದ 2024-25ನೇ ಸಾಲಿನಲ್ಲಿ 114.82 ಕೋಟಿ ರು ಸಂಗ್ರಹವಾಗಿದ್ದರೇ 85.40 ಕೋಟಿ ರು.ಗಳನ್ನು ಜಮೆ ಮಾಡಿವೆ. 63.16 ಕೋಟಿಯನ್ನು ಇನ್ನೂ ಜಮೆ ಮಾಡಿಲ್ಲ.
2025-26ನೇ ಸಾಲಿನಲ್ಲಿ ಏಪ್ರಿಲ್ನಿಂದ ಮಾರ್ಚ್ವರೆಗೆ ನಗರ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸಿದ್ದ 30.11 ಕೋಟಿ ರುಪಾಯಿಗಳನ್ನು ಕೇಂದ್ರ ಪರಿಹಾರ ಸಮಿತಿಯು ಸ್ವೀಕರಿಸಿದೆ.

ಇದೇ ಅವಧಿಯಲ್ಲಿ ಗ್ರಾಮ ಪಂಚಾಯತ್ಗಳಿಂದ 21.55 ಕೋಟಿ ರು ಗಳನ್ನು ಸ್ವೀಕರಿಸಿದೆ. ಜಿಬಿಎ ವ್ಯಾಪ್ತಿಯಲ್ಲಿ 33.74 ಕೋಟಿ ರು ಒಟ್ಟಾರೆ 85.40 ಕೋಟಿ ರು.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಜಮೆಯಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿಯು ಸಮಾಜ ಕಲ್ಯಾಣ ಇಲಾಖೆಗೆ ಮಾಹಿತಿ ಒದಗಿಸಿದೆ.

ವಾರ್ಷಿಕ ಸ್ಥಿರಾಸ್ತಿ ತೆರಿಗೆ ಸಂಗ್ರಹದಲ್ಲಿ ಬಿಬಿಎಂಪಿಯು ಕಳೆದ 5 ವರ್ಷದಲ್ಲಿ ಪ್ರತಿಶತ 3ರಷ್ಟು ಭಿಕ್ಷುಕರ ಉಪ ಕರವವನ್ನು ಸಂಗ್ರಹಿಸಿದೆ. 2017-18ರಲ್ಲಿ 46.56 ಕೋಟಿಯಷ್ಟು ಸಂಗ್ರಹಿಸಿದ್ದ ಸ್ಥಿರಾಸ್ತಿ ತೆರಿಗೆಯಲ್ಲಿ 4.65 ಕೋಟಿಯನ್ನು ಭಿಕ್ಷುಕರ ಉಪಕರವನ್ನು ಸಂಗ್ರಹಿಸಿತ್ತು. 2018-19ರಲ್ಲಿ 54.58 ಕೋಟಿ ರುನಲ್ಲಿ 5.46 ಕೋಟಿ, 2019-20ರಲ್ಲಿ 57.24 ಕೋಟಿಯಲ್ಲಿ 5.72 ಕೋಟಿ, 2020-21ರಲ್ಲಿ 59.79 ಕೋಟಿಯಲ್ಲಿ 5.98 ಕೋಟಿ, 2021-22ರಲ್ಲಿ 63.72 ಕೋಟಿಯಲ್ಲಿ 6.37 ಕೋಟಿ ಸಂಗ್ರಹಿಸಿತ್ತು. ಇದೇ ಅವಧಿಯಲ್ಲಿ ಕೇಂದ್ರ ಪರಿಹಾರ ಸಮಿತಿಗೆ 253.70 ಕೋಟಿಯಷ್ಟು ಪಾವತಿಸಲು ಬಾಕಿ ಉಳಿಸಿಕೊಂಡಿತ್ತು.

ಬಿಬಿಎಂಪಿ ವತಿಯಿಂದ ನಗರದಲ್ಲಿನ ಆಸ್ತಿ ಮಾಲೀಕರಿಂದ ತೆರಿಗೆಯೊಂದಿಗೆ ಸಂಗ್ರಹಿಸಲಾಗುವ ಭಿಕ್ಷುಕರ ಉಪಕರದಲ್ಲಿ ಶೇ.50ರಷ್ಟನ್ನು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ಅನುಮತಿ ಕೋರಿ ಮತ್ತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಉಪಕರವನ್ನು ನಿರ್ಗತಿಕರು, ವಿಶೇಷಚೇತನರು, ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಗಳಿಗೆ ವಿನಿಯೋಗಿಸಲು ಉದ್ದೇಶಿಸಿತ್ತು.
2008-09ನೇ ಸಾಲಿನಿಂದ 2021-22ರ ಮಾ. 31 ರವರೆಗೆ 543.58 ಕೋಟಿ ರೂ. ಭಿಕ್ಷುಕರ ಉಪಕರ ಸಂಗ್ರಹವಾಗಿತ್ತು. ಇದರಲ್ಲಿ 54.36 ಕೋಟಿ ರೂ. (ಶೇ 10ರಷ್ಟು) ಸಂಗ್ರಹಣೆ ಶುಲ್ಕವನ್ನು ಕಡಿತಗೊಳಿಸಿತ್ತು. ಉಳಿದ 489.22 ಕೋಟಿಯಲ್ಲಿ 350.11 ಕೋಟಿ ರೂ.ಗಳನ್ನು ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಿತ್ತು. ಆ ಅವಧಿಯಲ್ಲಿ 139.11 ಕೋಟಿಯನ್ನು ಪಾಲಿಕೆಯು ಬಾಕಿ ಉಳಿಸಿಕೊಂಡಿತ್ತು.
ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲೆ ಮೈತ್ರೇಯಿ ಕೃಷ್ಣನ್ ಅವರ ಪ್ರಕಾರ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹಿಸಲಾದ 40.88 ಕೋಟಿ ರೂಪಾಯಿ ಭಿಕ್ಷುಕರ ಸೆಸ್ ಪೌರಾಡಳಿತ ನಿರ್ದೇಶನಾಲಯದಿಂದ ಬರುವುದು ಬಾಕಿ ಇದೆ. ಅದೇ ರೀತಿ ಪಂಚಾಯಿತಿಗಳಲ್ಲಿ ಸಂಗ್ರಹಿಸಲಾದ ಸೆಸ್ ಬಗ್ಗೆ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಮಾಹಿತಿ ಬರಬೇಕಿದೆ. ಪ್ರಾಧಿಕಾರ ನಡೆಸಿದ ಸಮೀಕ್ಷೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 720 ಮಕ್ಕಳನ್ನು ಗುರುತಿಸಲಾಗಿದೆ ಎಂದು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದರು.
ವಾದ-ಪ್ರತಿವಾದ ಆಲಿಸಿದ್ದ ನ್ಯಾಯಪೀಠವು ಜಿಬಿಎ ಸೇರಿದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳಲ್ಲಿ ಸಂಗ್ರಹಿಸಲಾಗಿರುವ ಒಟ್ಟು ಭಿಕ್ಷುಕರ ಸೆಸ್, ಅದರಲ್ಲಿ ಕೇಂದ್ರ ಪರಿಹಾರ ಸಮಿತಿಗೆ ಪಾವತಿಸಲಾದ ಮೊತ್ತ, ಬಾಕಿ ಉಳಿದ ಮೊತ್ತದ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಜಿಬಿಎಗೆ ನಿರ್ದೇಶನ ನೀಡಿತ್ತು.
ಅದೇ ರೀತಿ ಮಕ್ಕಳ ಭಿಕ್ಷಾಟನೆ ನಿರ್ಮೂಲನೆ ಮತ್ತು ಅವರ ಪುನರ್ವಸತಿಗೆ 6 ವಾರಗಳಲ್ಲಿ ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕು. ಕ್ರಿಯಾ ಯೋಜನೆ ರೂಪಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ಮುಂದೂಡಿದೆ.
ರಾಜ್ಯಾದ್ಯಂತ ನಾನಾ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಭಿಕ್ಷುಕರ ಕರವೇ ಆದಾಯ ಮೂಲವಾಗಿದೆ. ಒಂದು ವೇಳೆ ಸ್ಥಳೀಯ ಸಂಸ್ಥೆಗಳು ಸಕಾಲದಲ್ಲಿ ಸಂಗ್ರಹಿಸಿದ ಶುಲ್ಕವನ್ನು ಪಾವತಿಸದಿದ್ದರೆ, ಪುನರ್ವಸತಿ ಕೇಂದ್ರಗಳಲ್ಲಿರುವವರಿಗೆ ಆಹಾರ, ವಸತಿ, ಆರೋಗ್ಯ ಮತ್ತು ನಿರ್ವಹಣೆಗೆ ತೊಡಕಾಗಲಿದೆ.









