ಮದ್ಯ ಪರವಾನಿಗೆ ನಿಯಮಗಳಿಗೆ ತಿದ್ದುಪಡಿ; ಆಕ್ಷೇಪಣೆಗಳ ಆಹ್ವಾನಿಸಿ, ಪರಿಗಣಿಸದ ಸರ್ಕಾರ

ಬೆಂಗಳೂರು; ಸಿಎಲ್2, ಸಿಎಲ್‌ 9, ಸಿಎಲ್ 11 ಸಿ ಸನ್ನದುಗಳನ್ನು ಸಾರ್ವಜನಿಕ ಹರಾಜು ಮಾಡುವ ಸಂಬಂಧ ಕರ್ನಾಟಕ ಅಬಕಾರಿ ನಿಯಮಗಳಿಗೆ ತಂದಿರುವ ತಿದ್ದುಪಡಿ ಗೆ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದ ಸರ್ಕಾರವು ಅವುಗಳನ್ನು ಪರಿಗಣಿಸಿರಲಿಲ್ಲ.

 

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಲೈಸೆನ್ಸ್‌ ಮಂಜೂರು ಮಾಡುವಲ್ಲಿ ಲಂಚಗುಳಿತನ ಆರೋಪಗಳು ಮತ್ತು ಈಚೆಗಷ್ಟೇ ಲೋಕಾಯುಕ್ತ ದಾಳಿಗೆ ಒಳಗಾಗಿರುವ ಅಬಕಾರಿ ಡಿ ಸಿ ಗಳು ಸಚಿವ ಆರ್ ಬಿ ತಿಮ್ಮಾಪುರ ಅವರ ಹೆಸರನ್ನು ಹೇಳಿರುವುದು ಸದನದಲ್ಲಿ ಗದ್ದಲ ಎಬ್ಬಿಸಿವೆ.  ಅಲ್ಲದೇ ಪ್ರತಿಪಕ್ಷವು ತಿಮ್ಮಾಪುರ ಅವರ ರಾಜೀನಾಮೆಗೂ ಪಟ್ಟು ಹಿಡಿದಿದೆ.

 

ಈ ಬೆಳವಣಿಗೆ ನಡುವೆಯೇ ಅಬಕಾರಿ ನಿಯಮಗಳಿಗೆ ತಂದಿರುವ ತಿದ್ದುಪಡಿಗಳಿಗೆ ಸಾರ್ವಜನಿಕರು ಮತ್ತು ಬಾಧಿತರಿಂದ ಆಕ್ಷೇಪಣೆಗಳನ್ನು ಪರಿಗಣಿಸಬಾರದು ಎಂದು ಆರ್ಥಿಕ ಇಲಾಖೆಯೇ ಹೇಳಿರುವುದು ಮುನ್ನೆಲೆಗೆ ಬಂದಿದೆ.

 

ಅಬಕಾರಿ ನಿಯಮಗಳಿಗೆ ತಂದಿರುವ ತಿದ್ದುಪಡಿ ಕುರಿತು ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ ಆ ನಂತರ ಅವುಗಳನ್ನು ಪರಿಗಣಿಸದೇ ಇರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

2025-26ನೇ ಸಾಲಿಗೆ ಅಬಕಾರಿ ಇಲಾಖೆಗೆ ನಿಗದಿಪಡಿಸಿದ್ದ ರಾಜಸ್ವ ಸಂಗ್ರಹಣಾ ಗುರಿಯನ್ನು ಸಾಧಿಸುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ 2025ರ ಮೇ 8ರಂದೇ ಅಧಿಕಾರಿಗಳ ಸಭೆ ನಡೆದಿತ್ತು.

 

ಸ್ಥಗಿತಗೊಂಡಿರುವ ಸಿಎಲ್‌ 2, 1987ರ ಕೋಟಾ ಅನ್ವಯ ಮಂಜೂರು ಮಾಡಲು ಬಾಕಿ ಇರುವ ಸಿಎಲ್ 2 ಸನ್ನದುಗಳು, ಸ್ಥಗಿತಗೊಂಡಿರುವ ಸಿಎಲ್‌-9 ಸನ್ನದುಗಳು, ಸ್ಥಗಿತಗೊಂಡಿರುವ ಸಿಎಲ್‌ 11 ಸಿ ಸನ್ನದುಗಳ ಹರಾಜಿಗೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿತ್ತು.

 

ಈ ಎಲ್ಲಾ ಸನ್ನದುಗಳನ್ನು ಅಬಕಾರಿ ಆಯುಕ್ತರಿಂದ ಪೂರ್ವಾನುಮತಿ ಪಡೆದು ನಂತರ ಕಾರಣಾಂತರಗಳಿಂದ ಮಂಜೂರಾತಿಯಾಗದೇ ಇರುವ ಸಿಎಲ್ 11 ಸಿ ಸನ್ನದುಗಳು ಮತ್ತು ಸರ್ಕಾರದ ಆದೇಶದ ಪ್ರಕಾರ 463 ಮತ್ತು 900 ರ ಕೋಟಾ ಅನ್ವಯ ಮಂಜೂರಾತಿಗೆ ಬಾಕಿ ಇರುವ ಸಿಎಲ್‌ 11 ಸಿ ಸನ್ನದುಗಳನ್ನು ಸಾರ್ವಜನಿಕ ಹರಾಜು ಮಾಡಲು ಕರ್ನಾಟಕ ಅಬಕಾರಿ (ದೇಶಿ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು 1968 ಮತ್ತು ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಮಗಳು 1967ಕ್ಕೆ ಸೂಕ್ತ ತಿದ್ದುಪಡಿ ತರಲು ಪ್ರಸ್ತಾಪಿಸಿತ್ತು.

 

 

ಸಾರ್ವಜನಿಕ ಹರಾಜು ಮಾಡುವ ಸಂಬಂಧ ಸಲ್ಲಿಕೆಯಾಗಿದ್ದ ತಿದ್ದುಪಡಿ ಪ್ರಸ್ತಾವನೆಯನ್ನು ಪರಿಷ್ಕರಿಸಲಾಗಿತ್ತು. ಅದರ ಪ್ರಕಾರ ಕರ್ನಾಟಕ ಅಬಕಾರಿ ನಿಯಮಗಳು 1968, 1976 ಮತ್ತು 1968ರ ನಿಯಮಗಳಿಗೆ ತಿದ್ದುಪಡಿಗೊಳಿಸಲು ಪ್ರಸ್ತಾವಿಸಿದ್ದ ಅಬಕಾರಿ ಆಯುಕ್ತರು 2025ರ ಮೇ 9ರಂದು ಎರಡನೇ ಬಾರಿ ಸಲ್ಲಿಸಿದ್ದರು.

 

ಹಾಗೆಯೇ 288 ಸಿಎಲ್ -11 ಸಿ ಸನ್ನದುಗಳನ್ನು ಎಂಎಸ್ಐಎಲ್‌ನಿಂದ ಹಿಂಪಡೆಯುವುದು ಮತ್ತು ಈ ಸನ್ನದುಗಳನ್ನು ಇ-ಹರಾಜು ಪ್ರಕ್ರಿಯೆ ಮೂಲಕ ಹಂಚಿಕೆ ಮಾಡುವ ಪ್ರಸ್ತಾವವನ್ನು ಸಲ್ಲಿಸಲಾಗಿತ್ತು. ಈ ಸಂಬಂಧ ಕರಡು ತಿದ್ದುಪಡಿಗೆ ಮದ್ಯ ಮಾರಾಟಗಾರರು, ಸಂಘ ಸಂಸ್ಥೆಗಳು, ಸಾರ್ವಜನಿಕರಿಂದಲೂ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಅಬಕಾರಿ ಇಲಾಖೆಗೆ 85 ಮತ್ತು ಸರ್ಕಾರದ ಹಂತದಲ್ಲಿ 94 ಸೇರಿದಂತೆ ಒಟ್ಟಾರೆ 179 ಆಕ್ಷೇಪಣೆಗಳು ಸ್ವೀಕೃತವಗಿದ್ದವು.

 

ಮದ್ಯ ಮಾರಾಟಗಾರರು, ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದ ಸರ್ಕಾರವು, ಈ ಯಾವ ಆಕ್ಷೇಪಣೆಗಳನ್ನೂ ಪರಿಗಣಿಸಿರಲಿಲ್ಲ. ಇದಕ್ಕೆ ಸರ್ಕಾರದ ರಾಜಸ್ವದ ಹಿತದೃಷ್ಟಿ ಕಾರಣವನ್ನು ಮುಂದೊಡ್ಡಿತ್ತು.

 

ಆಕ್ಷೇಪಣೆಗಳ ಒಪ್ಪದ ಸರ್ಕಾರ

 

ಬ್ಯಾಡಗಿಯ ಕಿರಣ್‌ ಕುಮಾರ್, ಗದಗ್‌ ತಾಲೂಕಿನ ಮದ್ಯ ಮಾರಾಟಗಾರರು ಸಂಘ, ಬಾಗಲಕೋಟೆ, ಹುಬ್ಬಳ್ಳಿ, ವಿಜಯಪುರ ಜಿಲ್ಲೆಯ ಹಲವರು ತಿದ್ದುಪಡಿಗೊಂಡಿರುವ ನಿಯಮಗಳಲ್ಲಿ ಸನ್ನದು ಶುಲ್ಕದ ಶೇ.10ರಷ್ಟು ದಂಡ ವಿಧಿಸಿರುವುದಕ್ಕೆ ಆಕ್ಷೇಪಣೆ ಸಲ್ಲಿಸಿದ್ದರು. ಆದರೆ ಅಬಕಾರಿ ಇಲಾಖೆಯು ಈ ಆಕ್ಷೇಪಣೆಯನ್ನು ಒಪ್ಪಿರಲಿಲ್ಲ.

 

ಪಾಲುದಾರಿಕೆ ಸಂಸ್ಥೆಗಳಲ್ಲಿ ಪಾಲುದಾರರ ನಿಧನ, ಪಾಲುದಾರರ ಬದಲಾವಣೆ ಮತ್ತು ಪಾಲುದಾರರು ಹೊಂದಿರುವ ಪಾಲು ಬದಲಾವಣೆ ಆದಲ್ಲಿ ಇಲಾಖೆಯ ಗಮನಕ್ಕೆ ತರಬೇಕು. ಮತ್ತು ಇದಕ್ಕೆ ನಿಗದಿಪಡಿಸಿರುವ 45 ದಿನಗಳ ಕಾಲವಕಾಶ ಸೂಕ್ತವಾಗಿದೆ. ನಿಗದಿತ ಅವಧಿಯೊಳಗೆ ಪಾಲುದಾರಿಕೆ ಬದಲಾವಣೆಯನ್ನು ಇಲಾಖೆ ಗಮನಕ್ಕೆ ತರೇ ಇದ್ದಲ್ಲಿ ಸನ್ನದು ಶುಲ್ಕದ ಶೆ. 10ರಷ್ಟು ದಂಡ ವಿಧಿಸವುದು ಸೂಕ್ತವಾಗಿದೆ ಎಂದು ಅಬಕಾರಿ ಇಲಾಖೆಯು ತಿದ್ದುಪಡಿಯನ್ನು ಸಮರ್ಥಿಸಿಕೊಂಡಿತ್ತು.

 

 

ಅಲ್ಲದೇ ಸಿಎಲ್‌ 2 ಮತ್ತು ಸಿ ಎಲ್ 9 ಸನ್ನದುಗಳ ಹೊಸ ಮಂಜೂರಾತಿಗೆ ನಿರ್ಬಂಧವಿದೆ. ಇದರಿಂದಾಗಿ ಸರ್ಕಾರಕ್ಕೆ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಶುಲ್ಕ 43.43 ಕೋಟಿಯಷ್ಟು ನಷ್ಟವಾಗಿದೆ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖವಾಗಿದೆ. ಅಲ್ಲದೇ ಸ್ಥಗಿತಗೊಂಡಿರುವ ಸನ್ನದುಗಳನ್ನು ಊರ್ಜಿತಗೊಳಿಸದೇ ಇರುವ ಕಾರಣ ಸರ್ಕಾರಕ್ಕೆ ರಾಜಸ್ವ ನಷ್ಟವಾಗಿದೆ ಎಂದು ಇತ್ತೀಚಿನ ಲೆಕ್ಕಪರಿಶೋಧನಾ ವರದಿಯೂ ಸಹ ಹೇಳಿತ್ತು ಎಂದು ಅಬಕಾರಿ ಇಲಾಖೆಯು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.

 

ಹಾಗೆಯೇ ಸ್ಥಗಿತಗೊಂಡಿರುವ ಸನ್ನದುಗಳನ್ನು ಊರ್ಜಿತಗೊಳಿಸಿ ನವೀಕರಿಸಿಕೊಳ್ಳಲು ಕರ್ನಾಟಕ ಅಬಕಾರಿ ದೇಶಿ ಮತ್ತು ವಿದೇಶಿ ಮದ್ಯ ಮಾರಾಟದ ನಿಯಮಗಳು 1968ರ ನಯಮ 5 (ಎ) ಪ್ರಕಾರ ಸನ್ನದುದಾರರಿಗೆ ಅವಕಾಶವಿದೆ. ಆದರೆ ಇಲ್ಲಿಯವರೆಗೆ ಸನ್ನದುದಾರರು ಸ್ಥಗಿತಗೊಂಡ ಸನ್ನದುಗಳನ್ನು ಊರ್ಜಿತಗೊಳಿಸಿ ನವೀಕರಿಸಿಕೊಂಡಿಲ್ಲ. ಹೀಗಾಗಿ ಈ ಸನ್ನದುಗಳನ್ನು ಸರ್ಕಾರವು ಮುಟ್ಟುಗೋಲು ಹಾಕಿಕೊಂಡು ಹರಾಜು ಮಾಡಲು ನಿರ್ಧರಿಸಿದೆ. ಹೀಗಾಗಿ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 30ರ ಅನ್ವಯ ಸನ್ನದುಗಳನ್ನು ಹಿಂಪಡೆಯುವ ಅವಶ್ಯಕತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಆಕ್ಷೇಪಣೆಗಳನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದು ನಿರ್ಧರಿಸಿತ್ತು.

 

ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನೀತಿ ಅನುಸರಿಸುವುದಕ್ಕೂ ಮದ್ಯ ಮಾರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಮೀಸಲಾತಿ ನೀಡುವುದರಿಂದ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ವ್ಯತಿರಿಕ್ತವಾಗಲಿದೆ ಎಂದು ಹೇಳಿದ್ದರು. ಆದರೆ ಸರ್ಕಾರವು ಈ ಆಕ್ಷೇಪಣೆಯನ್ನು ಒಪ್ಪಿಲ್ಲ. ಬದಲಿಗೆ ಸನ್ನದು ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ನೀಡಲು ಸರ್ಕಾರವು ನಿರ್ಧರಿಸಿದೆ. ಅಬಕಾರಿ ಸನ್ನದುಗಳಲ್ಲಿ ಮೀಸಲಾತಿ ಅಳವಡಿಸುವ ಬಗ್ಗೆ ಸರ್ಕಾರದಿಂದ ಮಾರ್ಗದರ್ಶನ ಪಡೆದು ಮುಂದಿನ ಕ್ರಮ ವಹಿಸಲಾಗುವುದು. ಈ ಹಿನ್ನೆಲೆಯಲ್ಲಿ ಈ ಆಕ್ಷೇಪಣೆಯನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದು ಸರ್ಕಾರವು ಸ್ಪಷ್ಟಪಡಿಸಿರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

 

‘ಸರ್ಕಾರದ ರಾಜಸ್ವದ ಹಿತದೃಷ್ಟಿಯಿಂದ ಕರಡು ನಿಯಮಗಳಿಗೆ ಸ್ವೀಕೃತವಾಗಿರುವ ಆಕ್ಷೇಪಣೆ, ಸಲಹೆಗಳನ್ನು ಪರಿಗಣಿಸಲು ಸಾಧ್ಯವಿರುವುದಿಲ್ಲ,’ ಎಂದು ಸರ್ಕಾರವು ನಿಲುವು ತಳೆದಿತ್ತು.

 

 

ಈ ಹಿಂದೆ ಹೊರಡಿಸಿದ್ದ ಕರಡು ತಿದ್ದುಪಡಿ ನಿಯಮಗಳನ್ನು ಮಾರ್ಪಾಡು ಮಾಡಿ ಸಣ್ಣ ಪ್ರಮಾಣದ ಬದಲಾವಣೆ ಮಾಡಿ ನಿಯಮಗಳನ್ನು ರೂಪಿಸಿರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

 

ಹಾಗೆಯೇ ಪ್ರತಿ ತಾಲೂಕಿಗೆ ಕನಿಷ್ಟ 2 ಸನ್ನದುಗಳಂತೆ 352 ಸನ್ನದುಗಳು, ಜಿಲ್ಲಾ ಕೇಂದ್ರ ಸ್ಥಾನಕ್ಕೆ 2 ರಂತೆ 58 ಸನ್ನದುಗಳು ಮತ್ತು ಎಂಐಎಸ್‌ಎಲ್‌ ಸಂಸ್ಥೆಯ ಪ್ರಾದೇಶಿಕ ಬೇಡಿಕೆ ಅಧ್ಯಯನ ಆಧರಿಸಿ 53 ಸನ್ನದುಗಳಂತೆ ಒಟ್ಟು 463 ಸಿಎಲ್ 11 ಸಿ ಸನ್ನದುಗಳನ್ನು ಎಂಎಸ್‌ಐಎಲ್‌ಗೆ 2009ರಲ್ಲೇ ಮಂಜೂರಾಗಿತ್ತು. 220 ವಿಧಾನಸಭೆ ಕ್ಷೇತ್ರಗಳಿಗೆ ತಲಾ 4ರಂತೆ 880, ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೆ ತಲಾ 5ರಂತೆ ಒಟ್ಟು 20, ಹೀಗೆ ರಾಜ್ಯದಲ್ಲಿ ಒಟ್ಟಾರೆ 900 ಸನ್ನದುಗಳನ್ನು ತೆರೆಯಲು 2016ರಲ್ಲೇ ಅನುಮೋದನೆ ನೀಡಿತ್ತು.

 

 

ಈ ಪೈಕಿ 2009ರಲ್ಲಿ ಮಂಜೂರಾಗಿದ್ದ 238 ಸಿಎಲ್‌ 2 ಹಾಗೂ 225 ಸಿಎಲ್‌ 9 ಒಟ್ಟು 463 ಸನ್ನದುಗಳು ಹಲವು ಕಾರಣಗಳಿಗಾಗಿ ನವೀಕರಣಗೊಂಡಿರಲಿಲ್ಲ. ಈಗಾಗಲೇ ಮಂಜೂರಾಗಿ ಕಾರಣಾಂತರಗಳಿಂದ ನವೀಕರಣಗೊಳ್ಳದ 463 ಸನ್ನದುಗಳನ್ನು ಸರ್ಕಾರಿ ಸ್ವಾಮ್ಯದ ಹಾಗೂ ಈಗಾಗಲೇ ಮದ್ಯ ವ್ಯವಹಾರದಲ್ಲಿ ಅನುಭವ ಹೊಂದಿರುವ ಮೈಸೂರ್‍‌ ಸೇಲ್‌ ಇಂಟರ್‍‌ ನ್ಯಾಷನಲ್‌ ಲಿಮಿಟೆಡ್‌ ಸಂಸ್ಥೆಗೆ ನೀಡಲು ಪ್ರಸ್ತಾವನೆಯೂ ಸರ್ಕಾರದ ಹಂತದಲ್ಲಿ ಸ್ವೀಕೃತವಾಗಿತ್ತು.

 

 

2009ರಲ್ಲಿ ಮಂಜೂರಾಗಿದ್ದರೂ ನವೀಕರಣಗೊಳ್ಳದ 463 ಸನ್ನದುಗಳನ್ನು ಎಂಎಸ್‌ಐಎಲ್‌ಗೆ ನೀಡಬಹುದು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದು ತಪ್ಪಾದ ಗ್ರಹಿಕೆಯಾಗಿದೆ ಎಂದು ಅಬಕಾರಿ ಇಲಾಖೆಯು ಹೇಳಿತ್ತು. ಎಂಎಸ್‌ಐಎಲ್‌ಗೆ ಸನ್ನದು ಹಂಚಿಕೆ ಮಾಡುವಾಗ ಕರ್ನಾಟಕ ಅಬಕಾರಿ ನಿಯಮಗಳು 1968ರ ನಿಯಮ 12ನ್ನು ಪರಿಗಣಿಸದೆಯೇ ಹಂಚಿಕೆ ಮಾಡಬಹುದಾಗಿತ್ತು. ಹೀಗಾಗಿ ಸನ್ನದುಗಳ ಮಂಜೂರಾತಿಗಾಗಿ ಕರ್ನಾಟಕ ಅಬಕಾರಿ ನಿಯಮಗಳು 1968ರ ನಿಯಮ 12ನ್ನು ಪರಿಗಣಿಸುವ ಆದ್ಯತೆ ಇರುವುದಿಲ್ಲ ಎಂದು ನ್ಯಾಯಾಲಯವೂ ಆದೇಶಿಸಿತ್ತು.

 

ಹೀಗಾಗಿ ಹೆಚ್ಚುವರಿ ರಾಜಸ್ವ ಸಂಗ್ರಹಣೆ ಮಾಡುವ ಉದ್ದೇಶದಿಂದ ಖಾಲಿ ಅಥವಾ ಲಭ್ಯವಿರುವ ಮದ್ಯದ ಪರವಾನಿಗಿಗಳನ್ನು ಪಾರದರ್ಶಕ ಎಲೆಕ್ಟ್ರಾನಿಕ್‌ ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿಯೇ ಪ್ರಸ್ತಾವಿಸಿದ್ದರು.

Your generous support will help us remain independent and work without fear.

Latest News

Related Posts