ಎರಡೆರಡು ಬಾರಿ ಭೂ ಸ್ವಾಧೀನ,ಪರಿಹಾರ; ಸಿದ್ದು ಮೊದಲ ಅವಧಿಯ ಅಕ್ರಮಕ್ಕೆ ಎರಡನೇ ಅವಧಿಯಲ್ಲಿ ಕ್ಲೀನ್ ಚಿಟ್

ಬೆಂಗಳೂರು; ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಿದ್ದ ಮಾಸ್ತಿ ಹೊಳೆ ಗ್ರಾಮದ ಜಮೀನುಗಳನ್ನು ಎರಡೆರಡು ಬಾರಿ ಭೂಸ್ವಾಧೀನಪಡಿಸಿ ಪರಿಹಾರ ನೀಡಿದ್ದ ಪ್ರಕರಣವನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವು ಮುಕ್ತಾಯಗೊಳಿಸಿದೆ.

 

ವಿಶೇಷವೆಂದರೇ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿಯೇ ಅಂದರೇ 2015-16ನೇ ಸಾಲಿನಲ್ಲಿ ಮಾಸ್ತಿ ಹೊಳೆ ಗ್ರಾಮದ ಜಮೀನುಗಳನ್ನು ಎರಡೆರಡು ಬಾರಿ ಭೂಸ್ವಾಧೀನಪಡಿಸಿ ಪರಿಹಾರ ನೀಡಿತ್ತು. ಇದೀಗ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಈ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

 

ಹಿಡಕಲ್ ಡ್ಯಾಮ್ (ರಾಜಾ ಲಕ್ಕಗೌಡ ಸರದೇಸಾಯಿ ಜಲಾಶಯ) ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಸಿಗದೆ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. 1980ರ ಸುಮಾರಿಗೆ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಕನಿಷ್ಠ ಪರಿಹಾರ ನೀಡಲಾಗಿತ್ತು. ಕೋರ್ಟ್ ಆದೇಶಗಳ ನಂತರ ಕೆಲವು ರೈತರಿಗೆ ಎಕರೆಗೆ ₹5 ಲಕ್ಷದವರೆಗೆ ಹೆಚ್ಚುವರಿ ಪರಿಹಾರ ಸಿಕ್ಕಿದೆ. ಪರಿಹಾರ ವಿಳಂಬದ ವಿರುದ್ಧ ಮಾಸ್ತಿಹೊಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

 

ಇದರ ಬೆನ್ನಲ್ಲೇ 2015-16ರಲ್ಲಿ ಎರಡೆರೆಡು ಬಾರಿ ಭೂ ಸ್ವಾಧೀನಪಡಿಸಿ ಪರಿಹಾರ ನೀಡಿದ್ದ ಪ್ರಕರಣವನ್ನು ಮುಕ್ತಾಯಗೊಳಿಸಿರುವುದು ಮುನ್ನೆಲೆಗೆ ಬಂದಿದೆ. ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಬೆಳಗಾವಿಯ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

 

2026ರ ಜನವರಿ 19ರಂದು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಿಂದ ಮಾಸ್ತಿಹೊಳೆಯ ಗ್ರಾಮದ ಹಲವು ಜಮೀನುಗಳು ಮುಳುಗಡೆಯಾಗಿದ್ದವು. ಈ ಜಮೀನುಗಳನ್ನು 1969-70ರಿಂದ 1980ನೇ ಸಾಲಿನಲ್ಲಿಯೇ ಭೂ ಸ್ವಾಧೀನಪಡಿಸಿತ್ತು. ಆದರೆ ಇವೇ ಜಮೀನುಗಳನ್ನು 2015-16ನೇ ಸಾಲಿನಲ್ಲಿಯೂ ಮತ್ತೊಮ್ಮೆ ಭೂ ಸ್ವಾಧೀನಪಡಿಸಿ ಪರಿಹಾರ ನೀಡಲಾಗಿತ್ತು.

 

ಹಿಡಕಲ್ ಜಲಾಶಯ

 

ಮತ್ತೊಂದು ವಿಶೇಷವೆಂದರೇ ಈ ಪ್ರಕರಣದ ಕುರಿತು ಎರಡೆರಡು ಬಾರಿ ತನಿಖಾ ತಂಡ ರಚಿಸಿತ್ತು. ಮೊದಲನೇ ತನಿಖಾ ತಂಡವು ಈ ಪ್ರಕರಣವನ್ನು ಹೊರಗೆಡವಿದ್ದರೇ ಎರಡನೇ ತನಿಖಾ ತಂಡವು ಈ ಪ್ರಕರಣದಲ್ಲಿ ಯಾವುದೇ ದಾಖಲೆಗಳು ಲಭ್ಯವಿರುವುದಿಲ್ಲ ಎಂದು ಕ್ಲೀನ್‌ ಚಿಟ್‌ ನೀಡಿರುವುದು ಪತ್ರದಿಂದ ಗೊತ್ತಾಗಿದೆ.

 

1969-79ರಿಂದ 1980ನೇ ಸಾಲಿನಲ್ಲಿ ಈ ಹಿಂದೆಯೇ ಮಾಸ್ತಿಹೊಳೆ ಗ್ರಾಮದಲ್ಲಿ ಭೂ ಸ್ವಾಧೀಪಡಿಸಲಾಗಿತ್ತು. ಈ ಹಿಂದೆಯೇ ಭೂ ಸ್ವಾಧೀನಪಡಿಸಿದ್ದರೂ ಪುನಃ 2015-16ನೇ ಸಾಲಿನಲ್ಲಿ ಎರಡನೇ ಬಾರಿ ಭೂಸ್ವಾಧೀನಪಡಿಸಿ ಪರಿಹಾರ ನೀಡಲಾಗಿದೆ ಎಂದು 2025ರ ಫೆ.21ರಂದೇ ತನಿಖಾ ತಂಡವು ವರದಿ ನೀಡಿತ್ತು. ಈ ತನಿಖಾ ತಂಡವು ನೀಡಿದ್ದ ವರದಿ ಕುರಿತು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2025ರ ಮಾರ್ಚ್‌ 25ರಂದು ನಡೆದಿದ್ದ ಸಭೆಯಲ್ಲಿ ಚರ್ಚಿಸಲಾಗಿತ್ತು.

 

2025ರ ಮಾರ್ಚ್‌ 25ರಂದು ನಡೆದಿದ್ದ ಸಭೆಯ ನಿರ್ಣಯದಂತೆ ಈ ಪ್ರಕರಣದ ಕುರಿತು ಮತ್ತೊಂದು ತನಿಖಾ ತಂಡವನ್ನು ರಚಿಸಿ ವರದಿ ಸಲ್ಲಿಸಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶಿಸಿತ್ತು. ಈ ನಿರ್ದೇಶನದಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ವಿಭಾಗದ ಆಯುಕ್ತರು ವಿಶೇಷ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದರು.

 

ದಾಖಲೆಗಳೇ ಲಭ್ಯವಿಲ್ಲವೆಂದ ಎರಡನೇ ತನಿಖಾ ತಂಡ

 

ಭೂ ಸ್ವಾಧೀನ ( ಕಡತ ಸಂಖ್ಯೆ ಎಲ್ಎಕ್ಯೂ;ಎಸ್‌;01;13-14 ಮತ್ತು ಎಲ್‌ಎಕ್ಯೂ;ಜೆಎಸ್‌ಆರ್‍‌;01;1ಎ;13-14)ರ ಪ್ರಕರಣದಲ್ಲಿ 2022ರಂದು ಪ್ರಾದೇಶಿಕ ಆಯುಕ್ತರು ತನಿಖಾ ವರದಿ ನೀಡಿದ್ದರು. ಈ ತನಿಖಾ ವರದಿಯಲ್ಲಿ ಪ್ರಸ್ತಾವಿಸಿದ್ದ 22 ಸರ್ವೇ ನಂಬರ್‍‌ಗಳು 2015 ಮತ್ತು 2016ರ ಅನುಮೋದಿತ ಐ ತೀರ್ಪಿನಲ್ಲಿ ಪುನರಾವರ್ತನೆ ಆಗಿಲ್ಲ. ಮತ್ತು ಈ ಸರ್ವೇ ನಂಬರ್‍‌ಗಳಲ್ಲಿ ಎರಡನೇ ಬಾರಿ ಭೂ ಸ್ವಾಧೀನಪಡಿಸಿ ಎರಡೆರಡು ಬಾರಿ ಪರಿಹಾರ ಧನ ನೀಡಿರುವ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಾಗಿಲ್ಲ ಎಂದು ಎರಡನೇ ತನಿಖಾ ತಂಡವು ತನ್ನ ವರದಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತ್ತು.

 

 

ಎರಡನೇ ತನಿಖಾ ತಂಡವು ನೀಡಿದ್ದ ತನಿಖಾ ವರದಿಯನ್ನು ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಕಾಂಗ್ರೆಸ್‌ ಸರ್ಕಾರವು ಒಪ್ಪಿಕೊಂಡಿದೆ. ಅಲ್ಲದೇ ತನಿಖಾ ವರದಿಯು ಯಾವುದೇ ವ್ಯತ್ಯಾಸಗಳಿಲ್ಲದೇ ದಾಖಲೆಗಳಿಗೆ ಅನುಗುಣವಾಗಿದೆ ಎಂದು ಷರತ್ತುಗೊಳಪಡಿಸಿ ತನಿಖಾ ವರದಿಗೆ ಒಪ್ಪಿಗೆ ನೀಡಿದೆ. ಇದೇ ಹಂತದಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಬೆಳಗಾವಿ ವಿಭಾಗದ ಈಗಿನ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಹಿಡಕಲ್ ಡ್ಯಾಮ್ ನಿರ್ಮಾಣಕ್ಕೆ 1968-1997ರ ಅವಧಿಯಲ್ಲಿ ಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಆರಂಭದಲ್ಲಿ ಅತ್ಯಲ್ಪ ಪರಿಹಾರ ನೀಡಲಾಗಿತ್ತು. ಇದರಿಂದಾಗಿ ರೈತರು ನ್ಯಾಯಾಲಯದ ಮೊರೆ ಹೊಕ್ಕಿದ್ದರು. ಒಂದು ಪ್ರಕರಣದಲ್ಲಿ ಎಕರೆಗೆ ₹3 ಲಕ್ಷ ಮತ್ತು ಇನ್ನೊಂದು ಪ್ರಕರಣದಲ್ಲಿ ₹5,08,000 ವರೆಗೆ ನ್ಯಾಯಾಲಯವು ಪರಿಹಾರ ನಿಗದಿಪಡಿಸಿತ್ತು. ಆದರೆ 1980ರಲ್ಲಿ ಸ್ವಾಧೀನಪಡಿಸಿಕೊಂಡ ಸುಮಾರು 400 ಎಕರೆ ಜಮೀನಿಗೆ ಪರಿಹಾರ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಹಳೆಯ ದಾಖಲೆಗಳಿಲ್ಲದ ಕಾರಣ ಪರಿಹಾರ ವಿಳಂಬವಾಗುತ್ತಿದೆ.

 

2024ರಲ್ಲಿ ಮಾಸ್ತಿಹೊಳಿ ಗ್ರಾಮಸ್ಥರು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದ್ದರು. ನಿಡೋರಿ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಎಕರೆಗೆ ₹3 ಲಕ್ಷದವರೆಗೆ ಪರಿಹಾರವನ್ನು ಕೋರ್ಟ್ ಆದೇಶಿಸಿತ್ತು.ಅಲ್ಲದೇ ಹಿಡಕಲ್ ಅಣೆಕಟ್ಟು ಯೋಜನೆಗೆ ಸುಮಾರು 43 ವರ್ಷಗಳ ಹಿಂದೆ ಜಮೀನು ಕಳೆದುಕೊಂಡಿರುವ ಹುಕ್ಕೇರಿ ತಾಲೂಕಿನ ರೈತರು, ತಮಗೆ ಮಂಜೂರಾದ ಪರ್ಯಾಯ ಭೂಮಿಯನ್ನು ಹಸ್ತಾಂತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದರು.

 

ಭೂ ಪರಿಹಾರಕ್ಕೆ ಒತ್ತಾಯಿಸಿ ರೈತರ ಪ್ರತಿಭಟನೆ

 

ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ 394.26 ಎಕರೆ ಜಮೀನು ಮುಳುಗಡೆಯಾಗಿದೆ. ಈ ಜಮೀನಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯವೂ ಆದೇಶಿಸಿದೆ. ಆದರೂ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ್ದರು. ನೀರಾವರಿ ನಿಗಮದ ಕೆಲವು ಅಧಿಕಾರಿಗಳು 20 ವರ್ಷಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆಪಾದಿಸಿದ್ದರು. ಮೂರು ಹಂತಗಳಲ್ಲಿ ಭೂಮಿ ವಿಭಾಗಿಸಿ ಈಗ ಕೆಲವು ರೈತರಿಗೆ ಪರಿಹಾರ ಕೊಡುತ್ತೇವೆ, ನಂತರ ಉಳಿದವರಿಗೂ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದರ. ಇದಕ್ಕೆ ರೈತರ ಒಪ್ಪಿಗೆ ಇರಲಿಲ್ಲ. 394.26 ಎಕರೆಗೂ ಏಕಕಾಲಕ್ಕೆ ಪರಿಹಾರ ಕೊಡಿ ಎಂದು ರೈತರು ಆಗ್ರಹಿಸಿದ್ದರು.

 

ಹಿಡಕಲ್ ಜಲಾಶಯ ಯೋಜನೆಗೆ ಬಳಸಿದ ಜಮೀನಿಗೆ ಹೊಸ ಭೂ ಸ್ವಾಧೀನ ಕಾಯ್ದೆ ಅಡಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದರು. ಆದರೆ 137 ಎಕರೆ 9 ಗುಂಟೆ ಭೂಮಿಯನ್ನು ಸ್ವಾಧೀನಮಾಡಿಕೊಂಡ ಹಾಗೂ 156 ಎಕರೆಗೆ ಪರಿಹಾರ ನೀಡಿದ ಬಗ್ಗೆ ಯಾವುದೇ ದಾಖಲೆಯೂ ಇರಲಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದ್ದರು.
ಈ ಮಧ್ಯೆ ಹಿಡಕಲ್ ಜಲಾಶಯಕ್ಕೆ ಭೂ ಸ್ವಾಧೀನಪಡಿಸಿಕೊಂಡ ಭೂಮಿ ಪ್ರತಿ ಗುಂಟೆಗೆ ರೂ.22,400/- ಗೆ ಬದಲಾಗಿ ಗುಂಟೆಗೆ ರು.56,000/ ಹೆಚ್ಚಿಸಬೇಕು ಎಂದು ನ್ಯಾಯಾಲಯವು ತೀರ್ಪು ನೀಡಿತ್ತು.

 

ಹಾಗೆಯೇ ಹಿಡಕಲ್ ಅಣೆಕಟ್ಟು ಯೋಜನೆಯಲ್ಲಿ ಭೂಮಿ ಕಳೆದುಕೊಂಡವರ ಪುನರ್ವಸತಿ ಉದ್ದೇಶಕ್ಕಾಗಿ, ಬೆಳಗಾವಿ ಜಿಲ್ಲೆಯ ಬಸವನಕುಡಚಿ ಗ್ರಾಮದಲ್ಲಿ ಒಟ್ಟು 21 ಎಕರೆ 05 ಗುಂಟೆ ವಿಸ್ತೀರ್ಣದ ಜಮೀನುಗಳನ್ನು (LAC ಸಂಖ್ಯೆ 5/2013 ರಿಂದ 11/2013 ರವರೆಗೆ )ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಭೂಸ್ವಾಧೀನ ಕಾಯ್ದೆ, 1884 (ಸಂಕ್ಷಿಪ್ತವಾಗಿ, ‘ಕಾಯ್ದೆ’) ದ ಸೆಕ್ಷನ್ 4(1) ರ ಅಡಿಯಲ್ಲಿ ಅಧಿಸೂಚನೆಯನ್ನು (27.05.2004 ರಂದು) ಪ್ರಕಟಿಸಿತ್ತು. ಮತ್ತು ವಿಶೇಷ ಭೂಸ್ವಾಧೀನ ಅಧಿಕಾರಿ (SLAO) LAQ: JSR: 107, 109/2004-05 ರಲ್ಲಿ 15.07.2004 ರಂದು ತೀರ್ಪು ನೀಡಿದ್ದರು.

 

ನ್ಯಾಯಾಲಯವು (29.01.2004 ರ) ಮಾರಾಟ ಪತ್ರವನ್ನು ಆಧರಿಸಿ, ಸ್ವಾಧೀನಪಡಿಸಿಕೊಂಡ ಆಸ್ತಿಯ ಮಾರುಕಟ್ಟೆ ಮೌಲ್ಯವನ್ನು ಪ್ರತಿ ಗುಂಟೆಗೆ ₹56,000/- ಎಂದು ನಿಗದಿಪಡಿಸುವ ಮೂಲಕ ತೀರ್ಪು ನೀಡಿತ್ತು.

Your generous support will help us remain independent and work without fear.

Latest News

Related Posts