ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನದಲ್ಲಿ ವಿಳಂಬ; ಬಡ್ಡಿ ಹೊರೆ, ಸರ್ಕಾರಕ್ಕೆ ಆರ್ಥಿಕ ನಷ್ಟ

ಬೆಂಗಳೂರು; ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಚಚಡಿ ಏತ ನೀರಾವರಿ ಯೋಜನೆಗೆ 4 ವರ್ಷಗಳ ಹಿಂದೆಯೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದರೂ ಸಹ ಇದುವರೆಗೂ ಪೂರ್ಣಗೊಂಡಿಲ್ಲ. ಹೀಗಾಗಿ ಬಡ್ಡಿ ರೂಪದಲ್ಲಿ ಸರ್ಕಾರಕ್ಕೆ ಅಪಾರ ಪ್ರಮಾಣದಲ್ಲಿ ಆರ್ಥಿಕ ನಷ್ಟವಾಗುತ್ತಿದೆ.

 

ಮಾರ್ಕಂಡೇಯ ಮುಖ್ಯ ಕಾಲುವೆಯಿಂದ ಮೂಲಕ 2,718 ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಉದ್ದೇಶ ಹೊಂದಿರುವ ಚಚಡಿ ಏತ ನೀರಾವರಿ ಯೋಜನೆಯು ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳ್ಳುತ್ತಿಲ್ಲ. ಈ ನಡುವೆ ಈ ಯೋಜನೆಗೆ ಭೂ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗಳು ಸಹ 4 ವರ್ಷಗಳಾದರೂ ಪೂರ್ಣಗೊಂಡಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಭೂ ಸ್ವಾಧೀನಪಡಿಸಿಕೊಳ್ಳುವಲ್ಲಿ ಅನವಶ್ಯಕವಾಗಿ ವಿಳಂಬ ಎಸಗಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಬೆಳಗಾವಿಯ ಬೃಹತ್‌ ನೀರಾವರಿ ಯೋಜನೆಯ ವಿಶೇಷ ಜಿಲ್ಲಾಧಿಕಾರಿಗೆ ನಿರ್ದೇಶಿಸಿದ್ದಾರೆ. ಈ ಸಂಬಂಧ ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು 2026ರ ಜನವರಿ 13ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಚಚಡಿ ನೀರಾವರಿ ಕಾಲುವೆಗಳಿಗೆ ಏತ ನೀರಾವರಿ ಮೂಲಕ ನೀರುಣಿಸುವ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮವು ಕೈಗೆತ್ತಿಕೊಂಡಿದೆ. ಇದಕ್ಕೆ ಒಟ್ಟು 12 ಕೋಟಿ ರುಪಾಯಿಗಳ ಅನುದಾನ ಕಲ್ಪಿಸಲಾಗಿದೆ. ನೇಸರಗಿ ಭಾಗದ ಹೊಸಕೋಟಿ, ಗಜಮನಹಾಳ, ಮಾಸ್ತಮರಡಿ, ಹಣಬರಹಟ್ಟಿ, ವಣ್ಣೂರ, ಮೇಕಲಮರಡಿ, ಕಲಕುಪ್ಪಿ, ಬುಧನೂರ, ಹಿರೇಬುದನೂರ, ಚಚಡಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ರೈತರಿಗೆ ನೀರು ದೊರಕಲಿದೆ.

 

ಚಚಡಿ ಏತ ನೀರಾವರಿ ಯೋಜನೆಯ ಕಾಲುವೆಗಳು

 

ಈ ಪೈಕಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಚಚಡಿ ಏತ ನೀರಾವರಿ ಯೋಜನೆ ಹಾದು ಹೋಗಲಿದೆ. ಚಚಡಿ ಮುಖ್ಯ ಕಾಲುವೆಯಡಿಯಲ್ಲಿ ಬರುವ ವಿತರಣಾ ಕಾಲುವೆ (ಸಂಖ್ಯೆ; 2ರ ಕಿ ಮೀ 0.7000ರಿಂದ 2.451 ರ ಕಿ ಮೀ 0.00ರಿಂದ 1.650, 4 ಕಿ ಮೀ 0.00 ರಿಂದ 1,450, 5ರ ಕಿ ಮೀ 0.00ರಿಂದ 2.220, 4ರ ಕಿ ಮೀ 0.00ರಿಂದ 0.245) ಕಾಮಗಾರಿಯ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿಲ್ಲ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಈ ಕಾಮಗಾರಿಗೆ ಭೂ ಸ್ವಾಧೀನಪಡಿಸಿಕೊಳ್ಳಲು 2021ರ ಅಕ್ಟೋಬರ್‍‌ 7ರಂದೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಹೊರಬಿದ್ದು 4 ವರ್ಷಗಳಾದರೂ ಸಹ ಭೂ ಸ್ವಾಧೀನ ಪ್ರಕ್ರಿಯೆಯು ಪೂರ್ಣಗೊಂಡಿಲ್ಲ. ಈ ಪ್ರಕ್ರಿಯೆಯಲ್ಲಿ ಅನಾವಶ್ಯಕವಾಗಿ ವಿಳಂಬ ಎಸಗಲಾಗಿದೆ. ಇದರಿಂದಾಗಿ ಬಡ್ಡಿ ರೂಪದಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟವಾಗಲಿದೆ ಎಂದು ಕಂದಾಯ ಇಲಾಖೆಯು ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.

 

 

‘ಪ್ರಕರಣವು ಈಗಾಗಲೇ ಅಸಿಂಧುಗೊಂಡಿರುವುದರಿಂದ ಹಾಗೂ ಬಡ್ಡಿ ರೂಪದಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗುವ ಸಂಭವವಿರುವುದರಿಂದ ಹೊಸದಾಗಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಿಸಬೇಕು. ಹಾಗೂ ವಿಳಂಬಕ್ಕೆ ಕಾರಣರಾದ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ವರದಿ ಸಲ್ಲಿಸಬೇಕು,’ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ನಿರ್ದೇಶಿಸಿರುವುದು ತಿಳಿದು ಬಂದಿದೆ.

 

ಚಚಡಿ ಮುಖ್ಯ ಕಾಲುವೆಯ ವಿತರಣಾ ಕಾಲುವೆ ಸಂಖ್ಯೆ 6,7,8,10,11 ಮತ್ತು 1ರ ನಿರ್ಮಾಣಕ್ಕಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದ ಒಟ್ಟು 19 ಎಕರೆ 01 ಗುಂಟೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲು 2025ರಲ್ಲಿ ಈಗಿನ ಕಾಂಗ್ರೆಸ್‌ ಸರ್ಕಾರವೂ ಅಧಿಸೂಚನೆ ಹೊರಡಿಸಿತ್ತು.

 

 

ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು ಮತ್ತು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ 2019ರ ಕಲಂ 3ರ ಪ್ರಕಾರ ಊ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಸಾಮಾಜಿಕ ಪರಿಣಾಮ ಅಧ್ಯಯನ ಮಾಡುವುದರಿಂದ ಮತ್ತು ಮೂಲ ಭೂ ಸ್ವಾಧೀನ ಕಾಯ್ದೆ 2013ರ ಅಧ್ಯಾಯ 2 ಮತ್ತು 3ರ ಉಪಬಂಧಗಳನ್ನು ಅನ್ವಯಿಸುವುದರಿಂದ ವಿನಾಯಿತಿ ನೀಡಿ ಆದೇಶಿಸಿತ್ತು.

 

ಅದೇ ರೀತಿ ಇದೇ ಚಚಡಿ ಏತ ನೀರಾವರಿ ಯೋಜನೆಗೆ ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಒಟ್ಟು 10 ಎಕರೆ 32 ಗುಂಟೆ ಜೀನುಗಳನ್ನು ಭೂ ಸ್ವಾಧೀನಪಡಿಸಲು ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು ಮತ್ತು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ 2019ರ ಕಲಂ 3ರ ಪ್ರಕಾರ ಭೂ ಸ್ವಾಧೀನ ಪ್ರಕ್ರಿಯೆ ಆರಂಭಿಸಲು ಅಧಿಸೂಚನೆ ಹೊರಡಿಸಿದೆ.

 

 

ಅಲ್ಲದೇ ಈ ಯೋಜನೆ ಸಂಬಂಧ ಸಾಮಾಜಿಕ ಪರಿಣಾಮ ಅಧ್ಯಯನ ಮಾಡುವುದರಿಂದ ಮತ್ತು ಮೂಲ ಭೂ ಸ್ವಾಧೀನ ಕಾಯ್ದೆ 2013ರ ಅಧ್ಯಾಯ 2 ಮತ್ತು 3ರ ಉಪಬಂಧಗಳನ್ನು ಅನ್ವಯಿಸುವುದರಿಂದ ವಿನಾಯಿತಿ ನೀಡಿದೆ.

 

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಚಚಡಿ ಏತ ನೀರಾವರಿ ಯೋಜನೆಯು ಮಾರ್ಕಂಡೇಯ ಬಲದಂಡೆ ಕಾಲುವೆ ಬಳಸಿ ಸುಮಾರು 2,718 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಪ್ರಮುಖ ಯೋಜನೆಯಾಗಿದೆ. ಚಚಡಿ ಏತ ನೀರಾವರಿ ಯೋಜನೆ ಹೆಡ್‌ ವರ್ಕ್ ಮತ್ತು ಪ್ರಾರಂಭಿಕ 5 ಕಿ ಮೀ ವರೆಗಿನ ಕಾಲುವೆ ಜಾಲ ಸಹಿತ ಗುತ್ತಿಗೆಯನ್ನು ಟರ್ನ್‌ ಕೀ ಆಧಾರದ ಮೇಲೆ ವಹಿಸಿದೆ.

 

 

ಚಚಡಿ ಏತ ನೀರಾವರಿ ಯೋಜನೆಯ ಹೆಡ್‌ ವರ್ಕ್ ಕಾಮಗಾರಿಯು ಪೂರ್ಣಗೊಂಡಿದೆ. ರೈಸಿಂಗ್‌ ಮೇನ್ ಹಾಗೂ ಮುಖ್ಯ ಕಾಲುವೆ 0ರಿಂದ 3ರವರೆಗಿನ ಪ್ರದೇಶವು ಅರಣ್ಯ ಪ್ರದೇಶದಲ್ಲಿ ಹಾಯ್ದು ಹೋಗಿರುವುದರಿಂದ ಕಾಮಗಾರಿಯ ಅನುಷ್ಠಾನದಲ್ಲಿ ವಿಳಂಬವಾಗಿದೆ.

 

ಅರಣ್ಯ ಭೂ ಸ್ವಾಧೀನ ಪ್ರದೇಶವು ಸ್ವಾಧೀನಗೊಳಿಸುವ ಎರಡನೇ ಹಂತದ ಪ್ರಕ್ರಿಯೆಯು ಅನುಮೋದನೆ ಹಂತದಲ್ಲಿದೆ. ಯೋಜನೆಯ ಮುಖ್ಯಕಾಲುವೆ 6ರಿಂದ 36 ವಿತರಣಾ ಕಾಲುವೆ, ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ ಹೊಲಗಾಲುವೆಗಳ ನಿರ್ಮಾಣ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುವುದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts