ಬೆಂಗಳೂರು; ಖಾಸಗಿ ವಾಹನಗಳಾದ ಆಟೋ, ಮೋಟಾರ್ ಕ್ಯಾಬ್ ಮತ್ತಿತರೆ ಮಜಲು, ಒಪ್ಪಂದ ವಾಹನಗಳು, ಸರಕು ಸಾಗಣೆ ವಾಹನಗಳ ಪ್ರಯಾಣಿಸಿದ ದರಗಳನ್ನು ನಿಗದಿಪಡಿಸುವುದು ಮತ್ತು ರಾಜ್ಯ ಸಾರಿಗೆ ಪ್ರಾಧಿಕಾರ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಇರುವ ಅಧಿಕಾರ ಕಡಿತಗೊಳಿಸಿ ಪ್ರತ್ಯೇಕ ಪ್ರಾಧಿಕಾರ ರಚಿಸಲು ನಿಯಮಗಳಿಗೆ ತಿದ್ದುಪಡಿ ಕಾನೂನು ಇಲಾಖೆಯೂ ಸಹ ಸಹಮತಿಸಿದೆ.
ಕಾನೂನು ಇಲಾಖೆಯೂ ಸಹಮತಿ ವ್ಯಕ್ತಪಡಿಸಿರುವುದರಿಂದ ಖಾಸಗಿ ವಾಹನಗಳಾದ ಆಟೋರಿಕ್ಷಾ, ಮೋಟಾರ್ ಕ್ಯಾಬ್ನಂತಹ ಮಜಲು ವಾಹನಗಳಿಗೆ ಪ್ರಯಾಣ ದರ ನಿಗದಿಗೆ ಚಾಲನೆ ಸಿಕ್ಕಂತಾಗಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಮಾದರಿಯಲ್ಲೇ ಸಾರಿಗೆ ಇಲಾಖೆಯಲ್ಲಿಯೂ ಪ್ರತ್ಯೇಕ ಪ್ರಾಧಿಕಾರ ರಚಿಸುವ ಸಂಬಂಧ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯನ್ನು ಕಾನೂನು ಇಲಾಖೆಯು ಅನುಮೋದಿಸಿದೆ. ಈ ಸಂಬಂಧ ಇಲಾಖೆಯ ಹೆಚ್ಚುವರಿ ಹೆಚ್ಚುವರಿ ಕಾರ್ಯದರ್ಶಿ ಶೈಮಾ ಖಮ್ರೋಜ್ ಅವರು ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಅಭಿಪ್ರಾಯ ತಿಳಿಸಿದ್ದಾರೆ.
2025ರ ಡಿಸೆಂಬರ್ 4ರಂದು ನೀಡಿರುವ ಅಭಿಪ್ರಾಯದ ಪ್ರತಿಯು ‘ದಿ ಫೈಲ್’ ಲಭ್ಯವಾಗಿದೆ.
ಪ್ರಸ್ತಾವದಲ್ಲಿ ಏನಿತ್ತು?
ಮೋಟಾರು ವಾಹನ ಕಾಯ್ದೆ ಕಲಂ 67ರಲ್ಲಿ ರಸ್ತೆ ಸಾರಿಗೆಯನ್ನು ನಿಯಂತ್ರಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ರಾಜ್ಯಗಳೀಗೆ ಅಧಿಕಾರವನ್ನು ಪ್ರತ್ಯಾಯೋಜಿಸಿದೆ. ಹೀಗಾಗಿ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1999ರಡಿ ಸೇರ್ಪಡೆ, ತಿದ್ದುಪಡಿ ತರಬಹುದು ಎಂದು ಪ್ರಸ್ತಾವಿಸಿತ್ತು. ಈ ನಿಯಮಗಳ ಅನ್ವಯ ಮಜಲು ವಾಹನಗಳ, ಒಪ್ಪಂದ ವಾಹನಗಳ ಹಾಗೂ ಸರಕು ಸಾಗಣೆ ವಾಹನಗಳ ಪ್ರಯಾಣಿಸಿದ ದರಗಳನ್ನು ನಿಗದಿಪಡಿಸಬಹುದು.

ಅಲ್ಲದೇ ರಾಜ್ಯ ಸಾರಿಗೆ ಪ್ರಾಧಿಕಾರ ಮತ್ತು ಆಯಾ ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಇರುವ ಅಧಿಕಾರವನ್ನು ಕಡಿತಗೊಳಿಸಿ ದರ ನಿಯಂತ್ರಣ ಪ್ರಾಧಿಕಾರ ರಚಿಸಬಹುದು. ಇದಕ್ಕೆ ಸರ್ಕಾರದ ಹಂತದಲ್ಲಿ ಅಧಿಸೂಚನೆ ಹೊರಡಿಸಲು ಕ್ರಮ ವಹಿಸಬಹುದು ಎಂದು ಸಾರಿಗೆ ಇಲಾಖೆ ಆಯುಕ್ತರು 2025ರ ನವೆಂಬರ್ 10ರಂದು ಕೋರಿದ್ದರು.
ಸಾರಿಗೆ ಇಲಾಖೆಯ ಆಯುಕ್ತರು ಕೋರಿದ್ದ ಪ್ರಸ್ತಾವವನ್ನು ಸಚಿವ ರಾಮಲಿಂಗಾರೆಡ್ಡಿ ಅವರು ಅನುಮೋದಿಸಿದ್ದರು.

ಈ ಸಂಬಂಧ ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿದ್ದರು.
ಬಹುತೇಕ ಜಿಲ್ಲೆಗಳಲ್ಲಿ ದರ ಪರಿಷ್ಕರಣೆ ಮಾಡಿ ಸುಮಾರು ವರ್ಷಗಳು ಕಳೆದಿವೆ. ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ಹೊಸದಾಗಿ ಪ್ರಾರಂಭಿಸಿದಲ್ಲಿ ಹಾಗೂ ಖಾಸಗಿ ವಾಹನಗಳಾದ ಮಜಲು ವಾಹನ ಮತ್ತು ಒಪ್ಪಂದ ವಾಹನಗಳಿಗೂ ಪ್ರಯಾಣಿಕ ದರಗಳನ್ನು ನಿಗದಿಪಡಿಸಿದಲ್ಲಿ ಯಾವುದೇ ತಾರತಮ್ಯವಾಗುವುದಿಲ್ಲ. ಮತ್ತು ಪಾರದರ್ಶಕತೆಯಿಂದ ಕಾನೂನಿನ ಅಡಿಯಲ್ಲಿ ದರಗಳನ್ನು ನಿಗದಿಪಡಿಸಲು ಸಾಧ್ಯವಾಗಲಿದೆ ಎಂದು ಸಾರಿಗೆ ಇಲಾಖೆಯು ತಿಳಿಸಿತ್ತು.
ಇದನ್ನು ಪರಿಶೀಲಿಸಿರುವ ಕಾನೂನು ಇಲಾಖೆಯು ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ ಅಧ್ಯಾಯ -VA Public Transport Fare Regulatory Committee ಯಲ್ಲಿನ ನಿಯಮಗಳ 135 ಎ, 135 ಬಿ, 135 ಜಿ ಮತ್ತು 135 ಕೆ ಗಳಿಗೆ ತಿದ್ದುಪಡಿ/ ಸೇರ್ಪಡೆ ಮಾಡುವ ಆಡಳಿತ ಇಲಾಖೆಯ ಪ್ರಸ್ತಾವನೆಗೆ ಕಾನೂನು ಇಲಾಖೆಯು ಸಹಮತಿಸಿದೆ ಎಂದು ಅಭಿಪ್ರಾಯದಲ್ಲಿ ತಿಳಿಸಿರುವುದು ಗೊತ್ತಾಗಿದೆ.

ಮಜಲು ವಾಹನಗಳು, ಒಪ್ಪಂದ ವಾಹನಗಳೂ ಹಾಗೂ ಸರಕು ಸಾಗಣೆ ವಾಹನಗಳು ಪ್ರಯಾಣಿಸಿದ ದರಗಳನ್ನು ಪೆಟ್ರೋಲ್, ಡೀಸೆಲ್ ದರಗಳು ಹೆಚ್ಚಾದಾಗ, ಹಣದುಬ್ಬರ ಹೆಚ್ಚಾದಾಗ ಹಾಗೂ ಬೇರೆ ಬೇರೆ ಕಾರಣಗಳಿಂದ ವಾಹನಗಳ ಸಂಘ ಸಂಸ್ಥೆಗಳು ಮನವಿ ಸಲ್ಲಿಸುತ್ತವೆ. ಪ್ರಯಾಣಿಸಿದ ದರಗಳ ಹೆಚ್ಚಳಕ್ಕೆ ಕೋರಿದಾಗ ರಾಜ್ಯ ಸಾರಿಗೆ ಪ್ರಾಧಿಕಾರ ಮತ್ತು ಆಯಾ ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ದರ ಹೆಚ್ಚಳವನ್ನು ಮಾಡಲಾಗುತ್ತಿದೆ.

ಪ್ರಯಾಣಿಸಿದ ದರಗಳನ್ನು ನಿಗದಿಪಡಿಸಲು ರಾಜ್ಯ ಸಾರಿಗೆ ಪ್ರಾಧಿಕಾರ ಮತ್ತು ಆಯಾ ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅಧಿಕಾರವಿದೆ. ಅವರಿಂದ ಅಧಿಕಾರ ಕಡಿತಗೊಳಿಸಿ ದರ ನಿಯಂತ್ರಣ ಪ್ರಾಧಿಕಾರಕ್ಕೆ ನೀಡಬೇಕು. ಈ ಸಂಬಂಧ ಸರ್ಕಾರದ ಹಂತದಲ್ಲಿ ಮೋಟಾರು ವಾಹನ ನಿಯಮಗಳು 1999ರ ಅಡಿ ಸೇರ್ಪಡೆ, ಸೂಕ್ತ ತಿದ್ದುಪಡಿ ಅಥವಾ ಅಧಿಸೂಚನೆ ಹೊರಡಿಸಬಹುದು ಎಂದು ಸಾರಿಗೆ ರಸ್ತೆ ಸುರಕ್ಷತೆ ಆಯುಕ್ತರು 2025ರ ಸೆ.6ರಂದು ಪತ್ರ ಬರೆದಿದ್ದರು.

ದರ ನಿಯಂತ್ರಣ ಪ್ರಾಧಿಕಾರ ರಚನೆಗೆ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದರು. ಅಲ್ಲದೇ ದರ ಪರಿಷ್ಕರಣೆ ಪ್ರಸ್ತಾವವನ್ನು ಈ ಪ್ರಾಧಿಕಾರಕ್ಕೆ ಕಳಿಸಲು ಸಮ್ಮತಿ ವ್ಯಕ್ತಪಡಿಸಿದ್ದರು. ಬಹುತೇಕ ಜಿಲ್ಲೆಗಳಲ್ಲಿ ವಾಹನಗಳ ಪ್ರಯಾಣ ದರ ಪರಿಷ್ಕರಣೆ ಮಾಡಿ ಸುಮಾರು ವರ್ಷಗಳು ಆಗಿವೆ. ಹೀಗಾಗಿ ಕೆಲವು ಜಿಲ್ಲೆಗಳ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಪ್ರಯಾಣ ದರ ಪರಿಷ್ಕರಣೆ ಸಂಬಂಧ ನಡವಳಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ಮಾದರಿಯಲ್ಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳ ಪ್ರಯಾಣ ದರವನ್ನು ವೈಜ್ಞಾನಿಕವಾಗಿ ನಿಗದಿಪಡಿಸುವ ಸಲುವಾಗಿ ಸರಕಾರ, ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ (ಪಿಟಿಎಫ್ಆರ್ಸಿ) ರಚಿಸಿ ಈಗಾಗಲೇ ಅಧಿಸೂಚನೆ ಹೊರಡಿಸಿದೆ.
ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶದಿಂದ ಸಮಿತಿ ರಚಿಸಲಾಗಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ವೈಜ್ಞಾನಿಕವಾಗಿ ಪ್ರಯಾಣ ದರ ನಿಗದಿಪಡಿಸಲು ಈ ಮೊದಲು ಯಾವುದೇ ಸಮಿತಿಗಳನ್ನು ರಚಿಸಿರಲಿಲ್ಲ. ಈಗ ಕಾಲಕಾಲಕ್ಕೆ ಹೆಚ್ಚಳವಾಗುವ ಡೀಸೆಲ್ ಬೆಲೆ ಮತ್ತು ಇತರೆ ವೆಚ್ಚ ಸರಿದೂಗಿಸಲು ಪ್ರಯಾಣ ದರ ಪರಿಷ್ಕರಣೆ ಅಗತ್ಯವಾಗಿದೆ. ಇಲ್ಲವಾದಲ್ಲಿ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಇಲಾಖೆಯು ಹೇಳಿತ್ತು.
ಈ ಹಿನ್ನೆಲೆಯಲ್ಲಿ ಸರಕಾರ ಕರ್ನಾಟಕ ಮೋಟಾರು ವಾಹನ ನಿಯಮ-1989 ರಡಿಯಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿ ರಚಿಸಿ ಆದೇಶಿಸಿದೆ. ಈ ಸಮಿತಿಯು ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಹೊಂದಿರಲಿದೆ. ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಇಬ್ಬರು ಸದಸ್ಯರಲ್ಲಿಒಬ್ಬರು ಕಾನೂನಿನ ಶೈಕ್ಷಣಿಕ ಅರ್ಹತೆ ಹೊಂದಿರುವ ನಿವೃತ್ತ ಪ್ರಧಾನ ಕಾರ್ಯದರ್ಶಿ ಅಥವಾ ಸರಕಾರದ ಕಾರ್ಯದರ್ಶಿಯಾಗಿರಬೇಕು. ಇನ್ನೊಬ್ಬ ಸದಸ್ಯರು ಕೈಗಾರಿಕಾ ತಜ್ಞ ಅಥವಾ ಹಣಕಾಸು ತಜ್ಞರಾಗಿರಬಹುದು ಎಂದು ಸೂಚಿಸಿದೆ.
ನೇಮಕಗೊಂಡ ಸದಸ್ಯರ ಮರು ಆಯ್ಕೆಗೆ ಅವಕಾಶ ಇಲ್ಲ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಮಿತಿಯ ಅಧಿಕಾರಾವಧಿಯನ್ನು ಮೂರು ವರ್ಷಗಳ ಅವಧಿಗೆ ಸೀಮಿತಗೊಳಿಸಲಾಗಿದೆ. ಈ ಸಮಿತಿಗೆ ನೇಮಕಗೊಂಡ ಸದಸ್ಯರ ಮರು ಆಯ್ಕೆಗೆ ಅವಕಾಶ ಇರುವುದಿಲ್ಲ. ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಲಿಖಿತ ಪತ್ರದ ಮೂಲಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬಹುದು. ಇದನ್ನು ಅಂಗೀಕರಿಸುವ ಅಧಿಕಾರ ರಾಜ್ಯ ಸರಕಾರಕ್ಕಿರುತ್ತದೆ. ಸಮಿತಿಯು ಕನಿಷ್ಠ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು.
ಡಿಸೆಂಬರ್ 31ರೊಳಗೆ ವಾರ್ಷಿಕ ವರದಿ
ರಸ್ತೆ ಸಾರಿಗೆ ನಿಗಮಗಳಿಗೆ ನೀಡುವ ಶಿಫಾರಸುಗಳ ಪ್ರತಿಯನ್ನು ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಮುಂದೆ ಮಂಡಿಸಲು ರಾಜ್ಯ ಸರಕಾರಕ್ಕೆ ಪ್ರತಿ ವರ್ಷ ಏಪ್ರಿಲ್ 1 ರ ನಂತರ ಸಾಧ್ಯವಾದಷ್ಟು ಬೇಗ ಮತ್ತು ಡಿಸೆಂಬರ್ 31ರೊಳಗೆ ವಾರ್ಷಿಕ ವರದಿ ಸಲ್ಲಿಸಬೇಕೆಂಬ ಷರತ್ತು ವಿಧಿಸಲಾಗಿದೆ.
ಸಾರಿಗೆ ನಿಗಮಗಳ ವೆಚ್ಚ ಏರಿಕೆ
2014 ಕ್ಕೆ ಹೋಲಿಸಿದರೆ ಸಾರಿಗೆ ನಿಗಮದ ವೆಚ್ಚಗಳು ಸುಮಾರು ಶೇಕಡಾ 100ರಷ್ಟು ಏರಿಕೆಯಾಗಿದೆ. 8 – 10 ವರ್ಷಗಳಿಗೊಮ್ಮೆ ದರ ಪರಿಷ್ಕರಣೆ ಮಾಡುವುದರಿಂದ ಸಾರ್ವಜನಿಕರಿಗೂ ಹೊರೆಯಾಗುತ್ತದೆ. ಕಾಲ ಕಾಲಕ್ಕೆ ಅತ್ಯಲ್ಪ ಪ್ರಯಾಣ ದರ ಏರಿಕೆಯು ವೈಜ್ಞಾನಿಕವಾಗಿ ಸಮಂಜಸವಾಗಿರುತ್ತದೆ. ಪ್ರಯಾಣ ದರ ನಿರ್ವಹಣಾ ಸಮಿತಿಯು ರಾಜಕೀಯ ಇಚ್ಛಾಶಕ್ತಿಗಳಿಂದ ದೂರವಿದ್ದು, ಕೆಇಆರ್ಸಿ ಮಾದರಿಯಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸರಕು ಸಾಗಣೆ ವಾಹನಗಳ ಬಾಡಿಗೆ ದರವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರವು 2023ರಲ್ಲೇ ಆದೇಶ ಹೊರಡಿಸಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೋಟಾರು ವಾಹನಗಳ ಅಧಿನಿಯಮ 1988ರ ಕಲಂ 67ರ ಉಪಕಲಂ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದರಗಳನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಬಾಡಿಗೆ ದರ ಪರಿಷ್ಕರಿಸುವಂತೆ ಸರಕು ಸಾಗಣೆ ವಾಹನಗಳು ಬಹು ದಿನಗಳಿಂದ ಬೇಡಿಕೆ ಇಟ್ಟಿದ್ದವು. ಈ ಬೇಡಿಕೆಯನ್ನು ಪರಿಗಣಿಸಿದ್ದ ಸಾರಿಗೆ ಇಲಾಖೆ ಕೂಡಲೇ ಜಾರಿಗೆ ಬರುವಂತೆ ಬಾಡಿಗೆ ದರ ಪರಿಷ್ಕರಿಸಿ ಆದೇಶಿಸಿತ್ತು.
6 ಚಕ್ರಗಳ ಲಾರಿಗೆ 8 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 37 ರೂ.ಗೆ ಬಾಡಿಗೆ ದರ ಏರಿಕೆ ಮಾಡಿತ್ತು. 6 ಚಕ್ರಗಳ ಲಾರಿಗೆ 12 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 50 ರೂ.ಗೆ ಹೆಚ್ಚಳವಾಗಿತ್ತು. 10 ಚಕ್ರಗಳ ಲಾರಿಗೆ 19 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 60 ರೂ.ಗೆ ಬಾಡಿಗೆ ದರ ಏರಿಸಿತ್ತು.
12 ಚಕ್ರಗಳ ಲಾರಿಗೆ 25 ಮೆಟ್ರಿಕ್ ಟನ್ ಪತಿ ಕಿ.ಮೀ.ಗೆ 67 ರೂ.ಗೆ ಏರಿಕೆಯಾಗಿದೆ. 14 ಚಕ್ರಗಳ ಲಾರಿಗೆ 30 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 76 ರೂ.ಗೆ ಹೆಚ್ಚಿಸಲಾಗಿದೆ. 16 ಚಕ್ರಗಳ ಲಾರಿಗೆ 35 ಮೆಟ್ರಿಕ್ ಟನ್ ಪ್ರತಿ ಕಿ.ಮೀ.ಗೆ 89 ರೂ.ಗೆ ಬಾಡಿಗೆ ದರ ಏರಿಕೆ ಮಾಡಿ ಪರಿಷ್ಕರಿಸಲಾಗಿದೆ.
ವಾಹನ ವೆಚ್ಚ, ನೋಂದಣಿ ವೆಚ್ಚ, ವಾಹನದ ತೆರಿಗೆ, ಬಿಡಿಭಾಗಗಳು, ವಿಮಾ ಪಾಲಿಸಿ ಹಾಗೂ ಇಂಧನ ದರಗಳು ಗಣನೀಯವಾಗಿ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಸರಕು ಸಾಗಣೆ ವಾಹನಗಳಿಗೆ ಬಾಡಿಗೆ ದರಗಳ ಪರಿಷ್ಕರಣೆ ಅಗತ್ಯವೆಂದು ಸರ್ಕಾರ ಸಮರ್ಥಿಸಿಕೊಂಡಿತ್ತು. ಈ ನಿಟ್ಟಿನಲ್ಲಿ ಮೋಟಾರು ವಾಹನಗಳ ಅಧಿನಿಯಮ 1988ರ ಕಲಂ 67ರ ಉಪಕಲ ಅಡಿ 19-03 2002ರ ಅಧಿಸೂಚನೆಯನ್ನು ಪರಿಷ್ಕರಿಸಿತ್ತು.
ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸರಕ ಸಾಗಣೆ ವಾಹನಗಳಿಗೆ ಬಾಡಿಗೆ ದರಗಳನ್ನು ನಿಗದಿಪಡಿಸಲು ರಾಜ್ಯ ಸಾರಿಗೆ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿತ್ತು. ಅದರಂತೆ ಕರ್ನಾಟಕ ರಾಜ್ಯದಲ್ಲಿ ನೋಂದಾಯಿತ ಸರಕು ಸಾಗಾಣೆ ವಾಹನಗಳಿಗೆ ಬಾಡಿಗೆ ದರಗಳನ್ನು ಕೂಡಲೇ ಜಾರಿಗೆ ಬರುವಂತೆ ಬಾಡಿಗೆ ದರ ಪರಿಷ್ಕರಿಸಿ ಸರ್ಕಾರ ಆದೇಶಿಸಿತ್ತು.
ಸರಕು ವಾಹನಗಳ ಬಾಡಿಗೆ ದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿತ್ತು. ಸಾಗಾಟ ಸರಕು ವಾಹನಗಳ ಬಾಡಿಗೆ ದರ ಹೆಚ್ಚುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಬೆಲೆ ಏರಿಕೆಗಳಿಂದ ಕಂಗೆಟ್ಟಿರುವ ಗ್ರಾಹಕರು ಇದೀಗ ಮತ್ತೊಂದು ಹೊರೆ ಬಿದ್ದಿದೆ.









