ಕೋವಿಡ್‌ ಅಕ್ರಮ; ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಕರಿಗೆ ಅಧಿಕಾರವೇ ಇಲ್ಲ

ಬೆಂಗಳೂರು; ಕೋವಿಡ್‌ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮ, ಅವ್ಯವಹಾರಗಳ ಕುರಿತು ಕುನ್ಹಾ ಆಯೋಗವು ನೀಡಿದ್ದ ಸಂಪುಟ 3ರ ವರದಿ ಆಧರಿಸಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಕ್ರಮಕ್ಕೆ ಮುಂದಾಗಿದೆಯಾದರೂ ಸಿಸಿಎ ನಿಯಮಗಳ ಅನುಸಾರ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ನಿರ್ದೇಶಕರಿಗೆ ಅಧಿಕಾರವೇ ಇಲ್ಲ.

 

ಕೋವಿಡ್‌ ಸಂದರ್ಭದಲ್ಲಿ ಸಾರ್ವಜನಿಕ ಹಣ ಮತ್ತು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಅವರು ವರದಿ ನೀಡಿದ್ದರು. ಈ ವರದಿ ಆಧರಿಸಿ ಕೈಗೊಳ್ಳಬೇಕಾದ ಕ್ರಮಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಇನ್ನೂ ಬಿರುಸಿನ ಚಾಲನೆ ದೊರೆತಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ಕುನ್ಹಾ ಆಯೋಗವು ಸಂಪುಟ 3 ಮತ್ತು 5ರ ವರದಿ ಆಧರಿಸಿ ಕೈಗೊಂಡಿರುವ ಕ್ರಮಗಳ ಕುರಿತು ವಾಸ್ತವಾಂಶದ ವರದಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕಿದ್ವಾಯಿ ಗಂಥಿ ಸ್ಮಾರಕ ಸಂಸ್ಥೆಯು ವರದಿ ನೀಡಿದೆ. ಈ ವರದಿ ಕುರಿತು ಸಚಿವ ಡಾ ಶರಣ ಪ್ರಕಾಶ ಪಾಟೀಲ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

2025ರ ಮೇ 23ರಂದು ನಡೆದ ಸಭೆಗೆ ಸಲ್ಲಿಸಿರುವ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ತನಿಖಾ ಆಯೋಗದ ವರದಿಯಲ್ಲಿ 918.34 ಕೋಟಿ ರು ಮೌಲ್ಯದ 32 ಉಪಕರಣಗಳ ಖರೀದಿ ವಿಧಿ ವಿಧಾನಗಳ ಕುರಿತು ಪರಿಶೋಧಿಸಲಾಗಿದೆ. ಇದರ ಆಧಾರದ ಮೇಲೆ ಹಲವು ಶಿಫಾರಸ್ಸುಗಳನ್ನು ಮಾಡಿತ್ತು. ಈ ಪೈಕಿ 2025 ಮೇ 23ರ ಅಂತ್ಯಕ್ಕೆ 78.54 ಕೋಟಿ ರು ವಸೂಲಾತಿಗೆ ಶಿಫಾರಸ್ಸು ಮಾಡಿದೆ. ಸಂಪೂರ್ಣ ಮೊತ್ತವನ್ನು ವಸೂಲು ಮಾಡಲು ಪ್ರಥಮ ಕಾರಣ ಕೇಳುವ ನೋಟೀಸ್‌ ಜಾರಿಗೊಳಿಸಿರುವುದು ವಾಸ್ತವಾಂಶದ ವರದಿಯಿಂದ ತಿಳಿದು ಬಂದಿದೆ.

 

19 ಪ್ರಕರಣಗಳಲ್ಲಿ 11.67 ಕೋಟಿ ರು ವಸೂಲಾತಿಗೆ ಸಂಬಂಧಿಸಿದಂತೆ ಸರಬರಾಜುದಾರರಿಗೆ ಅಂತಿಮ ನೋಟೀಸ್‌ ನೀಡಿದೆ. 33.94 ಕೋಟಿ ರು ಮೊತ್ತದ ಡೆಲಿವರಿ ಚಲನ್‌ಗಳನ್ನು ಆಯೋಗಕ್ಕೆ ಸಲ್ಲಿಸಿರಲಿಲ್ಲ. ಇದರ ಆಧಾರದ ಮೇಲೆ ಸುಮಾರು 12 ಕೋಟಿ ರು ಗಳನ್ನು ಸರಬರಾಜು ಸಂಸ್ಥೆಯಿಂದ ವಸೂಲು ಮಾಡಲು ಶಿಫಾರಸ್ಸು ಮಾಡಿದೆ. 32.60 ಕೋಟಿ ರು.ಗಳನ್ನು ವಿಳಂಬಿತ ಸರಬರಾಜಿನ ದಂಡ ಸ್ವರೂಪದಲ್ಲಿ ವಸೂಲುಮಾಡಲು ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

‘ದಿ ಫೈಲ್‌’ ಹೊರಗೆಡವಿದ ಕೋವಿಡ್‌ ಭ್ರಷ್ಟಾಚಾರದ 50 ಮುಖಗಳು

 

35 ಪ್ರಕರಣಗಳಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಶಿಫಾರಸ್ಸು ಮಾಡಲಾಗಿದೆ. ಈ ಪೈಕಿ 3 ಪ್ರಕರಣಗಳಲ್ಲಿ ಸಮಾನಾಂತರವಾಗಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಶಿಫಾರಸ್ಸು ಮಾಡಿರುವುದು ವಾಸ್ತವಾಂಶದ ವರದಿಯಿಂದ ತಿಳಿದು ಬಂದಿದೆ.

 

ನಿರ್ದೇಶಕರಿಗೆ ಅಧಿಕಾರವಿಲ್ಲ

 

ಕರ್ನಾಟಕ ನಾಗರಿಕ ನಡತೆ ನಿಯಮಾವಳಿಗಳು ಹಾಗೂ ಸಿಸಿಎ ನಿಯಮಗಳ ಪ್ರಕಾರ ವರದಿಯಲ್ಲಿ ಪ್ರತಿಪಾದಿಸಿರುವ ವೃಂದದ ಅಧಿಕಾರಿಗಳ ವಿರುದ್ಧ ತನಿಖಾ ಪ್ರಾಧಿಕಾರ ಅಥವಾ ಶಿಸ್ತು ಪ್ರಾಧಿಕಾರವಾಗಿ ಕ್ರಮ ಕೈಗೊಳ್ಳಲು ಕಿದ್ವಾಯಿ ಗಂಥಿ ಸ್ಮಾರಕ ನಿರ್ದೇಶಕರಿಗೆ ಅಧಿಕಾರವಿಲ್ಲ ಎಂದು ವಾಸ್ತವಾಂಶದ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಸರಬರಾಜುದಾರರಿಗೆ 90 ಶೋಕಾಸ್‌ ನೋಟಿಸ್‌ ನೀಡಿದೆ. ಈ ಪೈಕಿ 61 ಮಂದಿ ಸರಬರಾಜುದಾರರು ತಮ್ಮ ಅಭಿಪ್ರಾಯವನ್ನು ಸಲ್ಲಿಸಿದ್ದಾರೆ. ಈ ಅಭಿಪ್ರಾಯಗಳನ್ನು ಇಲಾಖೆ ಮತ್ತು ಸಂಸ್ಥೆಯು ಪರಿಶೀಲಿಸುತ್ತಿದೆ. ಈ ಅಭಿಪ್ರಾಯಗಳು 2024ರ ಸೆ.30ರಂದು ಹೊರಡಿಸಿದ್ದ ಆದೇಶಗಳ ಅನ್ವಯ ಇವೆಯೇ ಎಂಬುದನ್ನೂ ಸಹ ಪರಿಶೀಲಿಸುತ್ತಿದೆ. ಈ ಸಂಬಂಧ ಸರ್ಕಾರಕ್ಕೂ ಪತ್ರವನ್ನು ಬರೆದಿದೆ.

 

ಡೆಲಿವರಿ ಚಲನ್‌ಗಳನ್ನು ಸಲ್ಲಿಸಬೇಕು ಎಂದು ಒಟ್ಟು 149 ಪತ್ರಗಳನ್ನು ಸರಬರಾಜು ಸಂಸ್ಥೆಗಳಿಗೆ ಸಕ್ಷಮ ಪ್ರಾಧಿಕಾರವು ಬರೆದಿದೆ. ಈ ಪೈಕಿ 80 ರಿಪ್ಲೈಗಳು ಸಲ್ಲಿಕೆಯಾಗಿವೆ. ಸರ್ಕಾರದ ಆದೇಶದಂತೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ಎಫ್‌ಐಆರ್‍‌ಗಳನ್ನು ದಾಖಲಿಸಿದೆ. ಕೆಲವು ಪ್ರಕರಣಗಳನ್ನು ಸಿಐಡಿಗೆ ವಹಿಸಲಾಗಿದೆ. ಜಂಟಿ ವಿಚಾರಣೆ ಮತ್ತು ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿದೆ. ಆರೋಪಿಗಳಿಗೆ ನೋಟೀಸ್‌ ಸಹ ಜಾರಿಗೊಳಿಸಿದೆ ಎಂದು ವಾಸ್ತವಾಂಶದ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಪಿಪಿಇ ಕಿಟ್‌ ಖರೀದಿಗೆ ಸಂಬಂಧಿಸಿದಂತೆ 35 ಪ್ರಕರಣಗಳಲ್ಲಿ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿತ್ತು. ಆರ್ಥಿಕ ನಷ್ಟ ಉಂಟು ಮಾಡಿರುವ ಆಧಾರದ ಮೇಲೆ ಅಥವಾ ತಪ್ಪಿಸಬಹುದಾದ ಹೆಚ್ಚುವರಿ ವೆಚ್ಚದ ಪ್ರಕರಣಗಳು ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ವರದಿಯಲ್ಲಿ ಶಿಫಾರಸ್ಸಾಗಿತ್ತು.

 

35 ಪ್ರಕರಣಗಳ ಪೈಕಿ  132.78 ಕೋಟಿ ರು ವೆಚ್ಚದಲ್ಲಿ ಪಿಪಿಇ ಕಿಟ್‌ ಖರೀದಿಯಲ್ಲಿ ನಿಯಮಗಳ ಉಲ್ಲಂಘನೆಯಾಗಿತ್ತು. ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆರೋಪಿತ ಅಧಿಕಾಋಇಗಳು ಮತ್ತು ಸರಬರಾಜು ಸಂಸ್ಥೆಗಳ ವಿರುದ್ಧ ವಿಧಾನಸೌಧದ ಪೊಲೀಸ್‌ ಠಾಣೆಯ್ಲಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ಕುನ್ಹಾ ಆಯೋಗ ವರದಿಯಲ್ಲಿ ಉಲ್ಲೇಖವಾಗಿರುವಂತೆ ಸರಬರಾಜು ಸಂಸ್ಥೆಗಳಿಗೆ, ವಿಳಂಬ ಸರಬರಾಜಿಗಾಗಿ ದಂಡ ವಿಧಿಸುವ ಮತ್ತು ಹೆಚ್ಚುವರಿ ಪಾವತಿಯಾಗಿರುವಲ್ಲಿ, ಹೆಚ್ಚುವರಿ ಮೊತ್ತವನ್ನು ಆಯಾ ಸರಬರಾಜುದಾರರ ಸಂಸ್ಥೆಗಳಿಂದ ವಸೂಲು ಮಾಡಲು ಮುಂದಾಗಿದೆ. ಈ ಸಂಬಧ 239 ಸರಬರಾಜು ಸಂಸ್ಥೆಗಳಿಗೆ ನೋಟೀಸ್‌ ಜಾರಿಗೊಳಿಸಿದೆ. 141 ಪ್ರಕರಣಗಳಲ್ಲಿ ಸಮಜಾಯಿಷಿ ಸ್ವೀಕೃತವಾಗಿದೆ. ಅವುಗಳನ್ನು ಪರಿಶೀಲಿಸುತ್ತಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು, ನಿಯಮಾನುಸಾರ ಕ್ರಮ ವಹಿಸುತ್ತಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವಾಸ್ತವಾಂಶದ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts