ಬೆಂಗಳೂರು; ಹಾವೇರಿ ಮತ್ತು ಮಂಡ್ಯದಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (86 ಮತ್ತು 87) ಕ್ಕೆ ಆಗಿರುವ ವೆಚ್ಚದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಮತ್ತು ಅನುಮಾನಗಳು ವ್ಯಕ್ತವಾಗಿರುವ ಬೆನ್ನಲ್ಲೇ ಈ ಎರಡೂ ಸಮ್ಮೇಳನಗಳಿಗೆ ವಿವಿಧ ವಸ್ತುಗಳ ಖರೀದಿ ಮತ್ತು ಸೇವೆಗಳನ್ನು ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿದೆ. ಮತ್ತು ಮಾಡಿರುವ ವೆಚ್ಚದಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಸರ್ಕಾರಕ್ಕೆ ಲಿಖಿತ ದೂರು ಸಲ್ಲಿಕೆಯಾಗಿದೆ.
ಇಟಗಿ ಎಂಬುವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ, ಮಂಡ್ಯ ಜಿಲ್ಲಾಧಿಕಾರಿ, ಕೆಎಸ್‌ಎಂಸಿಎನ ವ್ಯವಸ್ಥಾಪಕ ನಿರ್ದೇಶಕ ಅತೀಕ್ ಉಲ್ಲಾ ಷರೀಫ್ ಮತ್ತಿತರ ವಿರುದ್ಧ ಸಚಿವ ಎಂ ಬಿ ಪಾಟೀಲ್, ಶಿವರಾಜ್ ತಂಗಡಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.
ಈ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಡಿಸೆಂಬರ್ 20ರಿಂದ 22ರವರೆಗೆ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು ₹29.65 ಕೋಟಿ ವೆಚ್ಚವಾಗಿತ್ತು. ಬಳ್ಳಾರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 40 ಕೋಟಿ ರು ಗಳನ್ನು ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಅವರು ಬೇಡಿಕೆ ಇಟ್ಟಿದ್ದಾರೆ. ಈ ಬೆಳವಣಿಗೆ ನಡುವೆಯೇ ಮಹೇಶ್ ಜೋಷಿ ಸೇರಿದಂತೆ ಮತ್ತಿತರರ ವಿರುದ್ಧ ಸಲ್ಲಿಕೆಯಾಗಿರುವ ದೂರು ಮುನ್ನೆಲೆಗೆ ಬಂದಿದೆ.
‘ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ, ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ, ಕೆಎಸ್‌ಎಂಸಿ&ಎ ಲಿ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಅತೀಕ್ ಉಲ್ಲಾ ಷರೀಫ್, ಸಿದ್ದಲಿಂಗಪ್ಪ ಪೂಜಾರಿ ಮತ್ತಿತರೆ ಅಧಿಕಾರಿಗಳು, ಸರ್ಕಾರದಿಂದ ಮಂಜೂರಾಗಿರುವ ಅನುದಾನವನ್ನು ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ಬಳಸಿಕೊಂಡಿದ್ದಾರೆ. ಮತ್ತು ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆಯಲ್ಲಿ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಎಲ್ಲಾ ಖರೀದಿ ಮತ್ತು ಪಡೆದಿರುವ ಸೇವೆಗಳನ್ನು ಪಡೆದಿರುವ ಆಯೋಜಕರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ,’ ಎಂದು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.
ದೂರಿನಲ್ಲೇನಿದೆ?
2020ರಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಹಾವೇರಿಯಲ್ಲಿ 86ನೇ ಸಾಹಿತ್ಯ ಸಮ್ಮೇಳನ ಮತ್ತು ಹಾವೇರಿಯಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ 87ನೇ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಆಯೋಜಿಸಲಾಗುವುದು ಎಂದು ಘೋಷಿಸಲಾಗಿತ್ತು. ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳವನ್ನು ಒಂದು ವರ್ಷದ ಮುಂಚೆಯೇ ನಿಗದಿಪಡಿಸಿದ್ದರೂ ಸಹ ಈ ಎರಡೂ ಸಾಹಿತ್ಯ ಸಮ್ಮೇಳನಗಳ ಕಾರ್ಯಕ್ರಮ ಆಯೋಜನೆಗೆ ಕೆಟಿಪಿಪಿ ಕಾಯ್ದೆಯಡಿ ಟೆಂಡರ್ ಕರೆದಿರಲಿಲ್ಲ. 4 (ಜಿ) ವಿನಾಯಿತಿ ಪಡೆದು ಕೆಎಸ್‌ಎಂಸಿಎ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕೆಎಸ್‌ಎಂಸಿಎಯು ಸರ್ಕಾರಿ ಸಂಸ್ಥೆಯಾಗಿದ್ದು ಈ ಸಂಸ್ಥೆ ಮೂಲಕ ಕೆಲಸ ಆಗಿದೆ ಎಂದು ಸಾರ್ವಜನಿಕರಿಗೆ ತೋರಿಸಲಾಗಿದೆ. ಆದರೆ ಇಲ್ಲಿ ತಮಗೆ ಬೇಕಾದ ವ್ಯಕ್ತಿಗಳಿಗೆ ಕೆಲಸವನ್ನು ವಹಿಸಲಾಗಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಹಾಗೂ ಕಾಮಗಾರಿ ನಿರ್ವಹಿಸದೇ ಬಿಲ್‌ಗಳನ್ನು ನೀಡಲಾಗಿದೆ. ಈ ಮೂಲಕ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆಪಾದಿಸಿರುವುದು ಗೊತ್ತಾಗಿದೆ.
ಸಾಹಿತ್ಯ ಸಮ್ಮೇಳನಗಳ ಕಾರ್ಯಕ್ರಮಗಳಿಗಾಗಿ ಶಾಮಿಯಾನ, ಸೌಂಡ್ ಸಿಸ್ಟಮ್‌ಗಳು, ಅಲಂಕಾರ ವ್ಯವಸ್ಥೆ, ಆಹಾರ, ಸರಕುಗಳು, ಸಾಗಾಟ, ಬೆಳಕಿನ ವ್ಯವಸ್ಥೆ, ಮತ್ತು ಇತರ ಸೇವೆಗಳನ್ನು ಕೆಟಿಪಿಪಿ ಕಾಯ್ದೆ ಮೂಲಕ ಪಡೆಯಬೇಕು. ಸಮ್ಮೇಳನದ ದಿನಾಂಕ ಮತ್ತು ಸ್ಥಳವೂ ಸಹ ಓಂದು ವರ್ಷದ ಮೊದಲೇ ನಿಗದಿಯಾಗಿರುತ್ತದೆ. ಆದರೂ ಟೆಂಡರ್ ಆಹ್ವಾನಿಸಿಲ್ಲ. ಕೆಟಿಪಿಪಿ ಕಾಯ್ದೆಯ 4 (ಜಿ) ವಿನಾಯಿತಿ ಪಡೆದು ಕೆಎಸ್‌ಎಂಸಿಎ ಮೂಲಕ ಕೆಟಿಪಿಪಿ ಕಾಯ್ದೆಯನ್ನೂ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
‘ಸಮಯದ ಅಭಾವ ಹಾಗೂ ಸೇವೆ/ಕಾಮಗಾರಿ ಇತರರಿಂದ ಆಗದೇ ಇರುವ ಸಂದರ್ಭದಲ್ಲಿ ಮಾತ್ರ 4 ಜಿ ವಿನಾಯಿತಿ ಪಡೆಯಲು ನಿಯಮಗಳ ಪ್ರಕಾರ ಅವಕಾಶವಿದೆ. ಹೀಗಿದ್ದರೂ 4 ಜಿ ವಿನಾಯಿತಿ ಬಳಸಿಕೊಳ್ಳುವುದು ಆರ್ಥಿಕ ಇಲಾಖೆ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ತಿಳಿದರೂ ಸಹ ಕಾಯ್ದೆಯ ದುರುಪಯೋಗ ಮಾಡಿಕೊಳ್ಳಲಾಗಿದೆ,’ ಎಂದು ದೂರಿರುವುದು ತಿಳಿದು ಬಂದಿದೆ.
ಸರಕುಗಳು/ವಸ್ತುಗಳು/ಸೇವೆಗಳು ಇತ್ಯಾದಿಗಳನ್ನು ಸಂಗ್ರಹಿಸುವಲ್ಲಿ ಹಲವಾರು ಏಜೆನ್ಸಿಗಳಿಂದ ಸಂಗ್ರಹಿಸಲಾಗಿದೆ. ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ದರಗಳಲ್ಲಿ ಸಾಮಗ್ರಿಗಳು ಮತ್ತು ಸೇವೆಗಳನ್ನು ಪಡೆದುಕೊಳ್ಳಲಾಗಿದೆ. ಕೆಟಿಪಿಪಿ ಕಾಯ್ದೆಯನ್ನು ಪಾಲಿಸಿ ಟೆಂಡರನ್ನು ಆಹ್ವಾನಿಸಿ ಸರಕುಗಳು ಮತ್ತು ಸೇವೆಗಳನ್ನು ಪಡೆದುಕೊಂಡಿದ್ದರೆ ಸಮ್ಮೇಳನವನ್ನು ಇನ್ನೂ ಕಡಿಮೆ ವೆಚ್ಚದಲ್ಲಿ ನಡೆಸಬಹುದಾಗಿತ್ತು. ಈ ಮೂಲಕ ಸಾರ್ವಜನಿಕ ಹಣ ಪೋಲಾಗುವುದನ್ನು ತಡೆಯಬಹುದಾಗಿತ್ತು. ಆದರೆ, ಇವರು ಅದರ ಬದಲಾಗಿ ಗುತ್ತಿಗೆದಾರರು ಹಾಗೂ ಏಜೆನ್ಸಿಯೊಂದಿಗೆ ಒಳಒಪ್ಪಂದ ಮಾಡಿಕೊಂಡು ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿರುತ್ತಾರೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲೇನಾಗಿದೆ?
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಶಾಮಿಯಾನ ಸೇವೆ ಪಡೆಯವುದರಲ್ಲಿಯೂ ಹೆಚ್ಚುವರಿಯಾಗಿ ಹಣ ಪಾವತಿಸಿದೆ. ಜರ್ಮನ್ ಹ್ಯಾಂಗರ್ ಶಾಮಿಯಾನ ಪ್ರತಿ ಚದರ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರ ಹೆಚ್ಚು ಹೆಚ್ಚು ಎಂದರೆ 30 ರು ಇದೆ. ಆದರೆ ಆಯೋಜಕರು ದುಪ್ಟಟ್ಟು ದರದಲ್ಲಿ ಅಂದರೇ 68.25 ರು ದರದಲ್ಲಿ ಬಿಲ್ ಮಾಡಿ ಹಣ ಪಾವತಿಸಲಾಗಿದೆ. ಹಸಿರು ಜಾಳಿಗೆ ಮ್ಯಾಟ್ ನ ದರ 3-4 ರು ರುಪಾಯಿಗೆ ಖರೀದಿ ಮಾಡಬಹುದಾಗಿತ್ತು, ಆದರೆ ಆಯೋಜಕರು 6.30 ರು ದರದಲ್ಲಿ ಬಾಡಿಗೆ ಪಡೆದಿದ್ದಾರೆ ಎಂದು ದೂರಿರುವುದು ಗೊತ್ತಾಗಿದೆ.
ಊಟದ ವ್ಯವಸ್ಥೆಯಲ್ಲಿಯೂ ಆಗಿದೆಯೇ ಅವ್ಯವಹಾರ?
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯಾಸಕ್ತರು, ಸಾರ್ವಜನಿಕರಿಗೆ ಊಟದ ವ್ಯವಸ್ಥೆಗಾಗಿ 4.69 ಲಕ್ಷ ಜನರು ಊಟೋಪಚಾರ ಮಾಡಲಾಗಿದೆಯೆಂದು ಖೊಟ್ಟಿ ಅಂಕಿಗಳನ್ನು ನೀಡಿ ಹಣ ದುರುಪಯೋಗ ಮಾಡಿದ್ದಾರೆ. ಎಂದು ಆಪಾದಿಸಲಾಗಿದೆ.
‘ಇಲ್ಲಿ ಗಮನಿಸಬೇಕಾದ ವಿಷಯವೆನೆಂದರೇ, ಮಂಡ್ಯದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಕೃಷ್ಣಕುಮಾರ ಅವರು ಮೊದಲ ದಿನ 1.90 ಲಕ್ಷ, ಎರಡನೇ ದಿನ 1.70 ಲಕ್ಷ , ಮೂರನೇ ದಿನ 2.00 ಲಕ್ಷ ಮಂದಿ ಸಮ್ಮೇಳನದ ಊಟ ಸವಿದಿದ್ದಾರೆ. ಊಟಕ್ಕೆ ಬಳಕೆಯಾದ ಅಡಕೆ ತಟ್ಟೆಗಳು, ಬಾಲೆಎಲೆಯ ಲೆಕ್ಕದ ಆಧಾರದ ಮೇಲೆ ಈ ಲೆಕ್ಕಾಚಾರ ಹಾಕಲಾಗಿದೆ ಎಂದು ಪತ್ರಿಕೆಯಲ್ಲಿ ಹೇಳಿಕೆ ನೀಡಿರುತ್ತಾರೆ. ಅಡಕೆ ತಟ್ಟೆ ಹಾಗೂ ಬಾಳೆ ಎಲೆಯ ಲೆಕ್ಕದ ಮೇಲೆ ಎಲ್ಲಾದರೂ ಇಷ್ಟು ಜನ ಊಟ ಮಾಡಿದ್ದಾರೆಂದು ಹೇಳಲು ಸಾಧ್ಯವೇ,’ ಎಂದು ದೂರುದಾರರು ದೂರಿನಲ್ಲಿ ಪ್ರಶ್ನಿಸಿರುವುದು ಗೊತ್ತಾಗಿದೆ.
ಸಮ್ಮೇಳನಕ್ಕೆ ಇಷ್ಟೇ ಜನರು ಆಗಮಿಸಿದ್ದಾರೆ ಎನ್ನುವುದಕ್ಕೆ ಯಾವುದೇ ದಾಖಲೆಗಳು ಇರುವುದಿಲ್ಲ. ಇದರಿಂದ ಇವರು ಸರ್ಕಾರದ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳದೇ ಅದನ್ನು ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ತಟ್ಟೆಗಳನ್ನು ತರಿಸಿದ ವಾಹನಗಳು ಸಾಹಿತ್ಯ ಸಮ್ಮೇಳನ ಮುಗಿದ ಮೇಲೆ ಉಪಯೋಗಿಸದೇ ಇರುವ ತಟ್ಟೆಗಳನ್ನು ವಾಹನದಲ್ಲಿ ವಾಪಸು ಹೋಗಿರುವುದನ್ನು ಸಾಹಿತ್ಯಾಸಕ್ತರು ಗಮನಿಸಿ ಫೋಟೊ ಹಾಗೂ ವಿಡೀಯೋ ಚಿತ್ರೀಕರಣ ಮಾಡಿದ್ದಾರೆ ಎಂದು ದೂರಿನಲ್ಲಿ ಗಮನಸೆಳೆದಿರುವುದು ತಿಳಿದು ಬಂದಿದೆ.
ಹಾವೇರಿ ಸಾಹಿತ್ತಯ ಸಮ್ಮೇಳನದಲ್ಲೂ ಸಹ 2.50 ಲಕ್ಷ ಜನರು ಊಟ ಮಾಡಿದ್ದಾರೆಂದು ತಪ್ಪು ಮಾಹಿತಿ ನೀಡಿಲಾಗಿದೆ. ಪ್ಲೇಟ್‌ಗಳ ಆಧಾರದ ಮೇಲೆ ಕೆಎಸ್‌ಎಂಸಿಎ ಸಂಸ್ಥೆಯಿಂದ ಬಿಲ್ಲುಗಳನ್ನು ಪಡೆದು ಹಣ ಪಾವತಿಸಿ ಸರ್ಕಾರದ ಹಣವನ್ನು ಹಗಲು ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.
4 ಜಿ ವಿನಾಯಿತಿ ನೀಡಿ ಹೊರಡಿಸಿರುವ ಅದೇಶದಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ಹಾಗೂ ಸಮಂಜಸ ದರದಲ್ಲಿ ಪಡೆಯಬೇಕು ಎಂದು ನಿರ್ದೇಶನ ನೀಡಲಾಗಿದೆ. ಆದರೆ ಆಯೋಜಕರು ಇದನ್ನು ಪಾಲನೆ ಮಾಡಿಲ್ಲ. ಕೆಟಿಪಿಪಿ ಕಾಯ್ದೆಯಂತೆ ಟೆಂಡರ್ ಕರೆಯಬೇಕಿತ್ತು. ಆದರೆ ಕೆಎಸ್‌ಎಂಸಿಎ ಅಧಿಕಾರಿಗಳು ಒಳಒಪ್ಪಂದ ಮಾಡಿಕೊಂಡು ತಮಗೆ ಬೇಕಾದವರಿಗೆ ಕಾಮಗಾರಿ ನೀಡಿ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿರುವುದು ತಿಳಿದು ಬಂದಿದೆ.
ಕೆಎಸ್‌ಎಂಸಿಎಯು ಸರ್ಕಾರಿ ಜಾಹೀರಾತುಗಳನ್ನು ವಿವಿಧ ಪತ್ರಿಕೆಗಳಿಗೆ ವಾರ್ತಾ ಇಲಾಖೆ ನಿಗದಿಪಡಿಸಿರುವ ದರದಲ್ಲಿ ಜಾಹೀರಾತು ನೀಡುತ್ತದೆ. ವಾರ್ತಾ ಇಲಾಖೆಯು ಈ ದರಗಳಿಗೆ ಸೇವಾ ಶುಲ್ಕವನ್ನು ಕಡಿತಗೊಳಿಸಿ ಪತ್ರಿಕೆಗಳಿಗೆ ಹಣ ಪಾವತಿಸುತ್ತಿದೆ. ಇನ್ನಿತರೆ ಪೂರಕ ಸೇವೆಗಳಿಗೂ ವಿವಿಧ ಇಲಾಖೆಗಳಿಗೆ ಸಲ್ಲಿಸಿದ ಸೇವೆ ನಿರ್ವಹಿಸುವ ಗುತ್ತಿಗೆದಾರರಿಂದ ಸೇವಾ ಶುಲ್ಕ ಪಡೆಯುತ್ತಿತ್ತು. ಆದರೆ ಸಾಹಿತ್ಯ ಸಮ್ಮೇಳನದಲ್ಲಿ ಸೇವಾ ಶುಲ್ಕವನ್ನು ಸರ್ಕಾರದಿಂದ ಪಡೆದು ಹೊರೆ ಮಾಡಿದೆ ಎಂದು ದೂರುದಾರರು ವಿವರಿಸಿರುವುದು ಗೊತ್ತಾಗಿದೆ.
‘ಮಂಡ್ಯದಲ್ಲಿ ಸೇವಾ ಶುಲ್ಕವೆಂದು 1.08 ಕೋಟಿ ಪಡೆದಿದೆ. ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಗುತ್ತಿಗೆದಾರರಿಂದ ಪಡೆಯಬೇಕಿದ್ದ ಸೇವಾ ಶುಲ್ಕವನ್ನು ಕೆಎಸ್‌ಎಂಸಿಎ ಸಂಸ್ಥೆಯವರು ಸರ್ಕಾರದಿಂದ ಪಡೆದು ಖಜಾನೆ ಲೂಟಿಗೈದಿರುವುದು ಸ್ಪಷ್ಟವಾಗಿದೆ,’ ಎಂದು ಆರೋಪಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ, ಹಾವೇರಿಯ ಅಂದಿನ ಜಿಲ್ಲಾಧಿಕಾರಿ ರಗುನಂದಮೂರ್ತಿ, ಕೆಎಸ್‌ಎಂಸಿಎ ಸಂಸ್ಥೆಯ ಅಂದಿನ ವ್ಯವಸ್ಥಾಪಕ ನಿರ್ದೇಶಕ ಸಿದ್ದಲಿಂಗಪ್ಪ ಪೂಜಾರಿ, ಮಂಡ್ಯ ಜಿಲ್ಲಾಧಿಕಾರಿ ಡಾ ಉಮಾರ್, ಕೆಎಸ್‌ಎಂಸಿಎಯ ಹಾಲಿ ವ್ಯವಸ್ಥಾಪಕ ನಿರ್ದೇಶಕ ಮಹಮದ್ ಅತೀಕ್ ಉಲ್ಲಾ ಷರೀಫ್, ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರನ್ನು ತನಿಖೆಗೊಳಪಡಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿರುವುದು ತಿಳಿದು ಬಂದಿದೆ.