ಬೆಂಗಳೂರು; ಹಿರಿಯ ಪೊಲೀಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರ ವಿರುದ್ಧ ಹೂಡಲಾಗಿರುವ ಪ್ರಕರಣಗಳು ಮುಕ್ತಾಯಗೊಂಡ ಬಳಿಕ ಮುಚ್ಚಿದ ಲಕೋಟೆಯನ್ನು ತೆರೆಯಲು ಇಲಾಖೆ ಮುಂಬಡ್ತಿ ಸಮಿತಿ ಸಭೆಯು ನಿರ್ಣಯ ಕೈಗೊಂಡಿರುವುದು ಇದೀಗ ಬಹಿರಂಗವಾಗಿದೆ.
ಡಿ ರೂಪಾ ಅವರು ಮುಂಬಡ್ತಿಗಾಗಿ ಹೊಸದಾಗಿ ಸಲ್ಲಿಸುವ ಮನವಿಯನ್ನು ಸರಕಾರ ಎಂಟು ವಾರಗಳಲ್ಲಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿರುವ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಇಲಾಖೆ ಮುಂಬಡ್ತಿ ಸಮಿತಿ ಸಭೆಯ ನಿರ್ಣಯಗಳೂ ಮುನ್ನೆಲೆಗೆ ಬಂದಿವೆ.
2024ರ ಡಿಸೆಂಬರ್ 4ರಂದು ನಡೆದಿದ್ದ ಇಲಾಖೆ ಮುಂಬಡ್ತಿ ಸಮಿತಿ ಸಭೆಯ ನಿರ್ಣಯಗಳ ವಿವರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ರಾಜ್ಯ ಐಪಿಎಸ್ ವೃಂದದ ಅಧಿಕಾರಿಗಳಿಗೆ 2025ರ ಜನವರಿ 1ರಿಂದ ಅನ್ವಯವಾಗುವಂತೆ 2025ನೇ ಸಾಲಿನಲ್ಲಿ ಉದ್ಭವವಾಗುವ ರಿಕ್ತ ಸ್ಥಾನಗಳು ಮತ್ತು ಅಧಿಕಾರಿಗಳ ಸೇವಾ ಅವಧಿಯನ್ನು ಆಧರಿಸಿ ವಿವಿಧ ದರ್ಜೆಗಳಿಗೆ ಮುಂಬಡ್ತಿ ನೀಡಲಿದೆ. ಈ ಕುರಿತು 2024ರ ಡಿಸೆಂಬರ್ 4ರಂದೇ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಇಲಾಖೆ ಮುಂಬಡ್ತಿ ಸಮಿತಿ ಸಭೆ ನಡೆದಿತ್ತು.
’25 ವರ್ಷ ಸೇವಾ ಅವಧಿಯನ್ನು ಪೂರ್ಣಗೊಳಿಸಿ ಎಡಿಜಿಪಿ ದರ್ಜೆಗೆ ಮುಂಬಡ್ತಿ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿತ್ತು. ಡಿ ರೂಪ ( ಕೆಎನ್ 2000) ಅವರ ಅರ್ಹತೆ ಕುರಿತು ಇಲಾಖೆ ಮುಂಬಡ್ತಿ ಸಭೆಯಲ್ಲಿ ಸಮಿತಿ ಸದಸ್ಯರು ಚರ್ಚಿಸಿದ್ದರು. ಇವರ ವಿರುದ್ಧ ಇಲಾಖೆ ವಿಚಾರಣೆ ಮತ್ತು ಕ್ರಿಮಿನಲ್ ಪ್ರಕರಣ ಬಾಕಿ ಇರುವುದರಿಂದ ಸಭೆಯನ್ನು ನಿರ್ಣಯವನ್ನು ಮುಚ್ಚಿದ ಲಕೋಟೆಯಲ್ಲಿರಿಸಲು ನಿರ್ಣಯಿಸಿದೆ,’ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಅದೇ ರೀತಿ ಈ ಪ್ರಕರಣಗಳು ಮುಕ್ತಾಯಗೊಂಡ ಬಳಿಕ ಲಕೋಟೆಯನ್ನು ತೆರೆಯಲು ನಿರ್ಣಯಿಸಿತ್ತು ಎಂಬುದು ಲಭ್ಯವಿರುವ ದಾಖಲೆಯಿಂದ ತಿಳಿದು ಬಂದಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ರೂಪಾ ಅವರ ವಿರುದ್ಧ ಹೂಡಿರುವ ಕ್ರಿಮಿನಲ್ ಮಾನಹಾನಿ ಪ್ರಕರಣವು ಖಾಸಗಿ ದಾವೆಯಾಗಿದೆ. ಅದನ್ನು ಗಣನೆಗೆ ತೆಗೆದುಕೊಳ್ಳದೇ ನ್ಯಾಯಯುತವಾಗಿ ತನಗೆ ದೊರೆಯಬೇಕಾದ ಬಡ್ತಿ ನೀಡಲು ರಾಜ್ಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ನಿರ್ದೇಶನ ನೀಡಬೇಕೆಂದು ಕೋರಿ ರೂಪಾ ಅವರು ಅರ್ಜಿ ಸಲ್ಲಿಸಿದ್ದರು.
ವಾದ-ಪ್ರತಿವಾದ ಆಲಿಸಿದ್ದ ನ್ಯಾಯಪೀಠವು ‘ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಲ್ಲಿಸಿರುವ ಮಧ್ಯಪ್ರವೇಶ ಕೋರಿರುವ ಅರ್ಜಿಯು ಸೂಕ್ತವಾಗಿಲ್ಲ. ಅವರು ಅಗತ್ಯ ಪಕ್ಷಕಾರರಾಗಿಲ್ಲ. ರೂಪಾ ಹೊಸದಾಗಿ ಡಿಒಪಿಟಿಗೆ ಮನವಿ ಸಲ್ಲಿಸಬೇಕು. ಮನವಿ ಸಂಬಂಧ ಸಕ್ಷಮ ಪ್ರಾಧಿಕಾರವು ಎಂಟು ವಾರಗಳಲ್ಲಿನಿರ್ಧಾರ ಕೈಗೊಳ್ಳಬೇಕು,’ ಎಂದು ಆದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ರೋಹಿಣಿ ಸಿಂಧೂರಿ ಪರ ವಾದಿಸಿದ್ದ ಹಿರಿಯ ನ್ಯಾಯವಾದಿ ಕೆ.ಎನ್. ಫಣೀಂದ್ರ ‘ರೂಪಾ ವಿರುದ್ಧ ಹೂಡಿರುವ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ರೋಹಿಣಿ ದೂರುದಾರರಾಗಿದ್ದಾರೆ. ಹಾಗಾಗಿ, ಪ್ರಕರಣದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದೇವೆ. ಬಡ್ತಿ ವಿಚಾರವು ಡಿಒಪಿಟಿ ನಿಯಮದ ಪ್ರಕಾರ ಮುಚ್ಚಿದ ಲಕೋಟೆಯ ಪ್ರಕ್ರಿಯೆಯಾಗಿದೆ,’ ಎಂದು ಪ್ರತಿವಾದವನ್ನು ಮುಂದಿರಿಸಿದ್ದರು.
ರೂಪಾ ಅವರ ಪ್ರತಿನಿಧಿಸಿದ್ದ ವಕೀಲ ಬಿಪಿನ್ ಹೆಗ್ಡೆ, ‘ರೋಹಿಣಿ ದೂರು ದಾಖಲಿಸಿದ್ದು, ತನಿಖೆ ನಡೆದು ಅದನ್ನು ಕೈಬಿಡಲಾಗಿದೆ. ತನಿಖೆ ಕೈಬಿಟ್ಟ ಮೇಲೂ ಬಡ್ತಿ ನೀಡುತ್ತಿಲ್ಲ. ಅಡ್ವೊಕೇಟ್ ಜನರಲ್ ಮತ್ತು ಕಾನೂನು ಇಲಾಖೆಯು ತಮ್ಮ ಮತ್ತು ರೋಹಿಣಿ ನಡುವಿನ ದಾವೆಗಳು ಖಾಸಗಿ ಪ್ರಕರಣ ಎಂದು ಹೇಳಿದೆ. ಇದು ಸೇವಾ ಷರತ್ತು ಮತ್ತು ನಿಯಮಗಳಿಗೆ ಅನ್ವಯಿಸುವುದಿಲ್ಲ,” ಎಂದು ನ್ಯಾಯಪೀಠದ ಮುಂದೆ ವಾದಿಸಿದ್ದರು.
ವೈಯಕ್ತಿಕ ಹಗೆ ಸಾಧಿಸಲು ಮಾನಸಿಕ ಸ್ತಿಮಿತ ಕಳೆದುಕೊಂಡಿರುವವರ ರೀತಿಯಲ್ಲಿ ಐಪಿಎಸ್ ಅಧಿಕಾರಿ ರೂಪಾ ವರ್ತಿಸುತ್ತಿದ್ದಾರೆ” ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಮಾನಹಾನಿ ಮೊಕದ್ದಮೆ ಹೂಡಿದ್ದರು. ಇದಕ್ಕೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
ರೂಪಾ ಅವರ ಮಾನಹಾನಿ ಹೇಳಿಕೆಗಳಿಗೆ ರೋಹಿಣಿ ಪ್ರತಿಕ್ರಿಯಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಈ ಪ್ರಕರಣದಲ್ಲಿ ಆತುರಾತುರವಾಗಿ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಮ್ಯಾಜಿಸ್ಟ್ರೇಟ್ ಕಾರ್ಯನಿರ್ವಹಣೆಗೆ ಆಕ್ಷೇಪಿಸಿ, ಪ್ರಕರಣವನ್ನು ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಮಂಡಿಸಬೇಕು ಎಂದು . ರೋಹಿಣಿ ಪ್ರತಿನಿಧಿಸಿದ್ದ ವಕೀಲ ಬಿ ಎ ಬೆಳ್ಳಿಯಪ್ಪ ಅವರು ಮೆಮೊ ಸಲ್ಲಿದ್ದರು.
ಇದಕ್ಕೆ ರೂಪಾ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು ಆಕ್ಷೇಪಿಸಿದ್ದರು. ‘ಪ್ರಕರಣವನ್ನು ಒಮ್ಮತದ ಮೂಲಕ ಬಗೆಹರಿಸಿಕೊಳ್ಳಲು ರೂಪಾ ಸಿದ್ಧರಿದ್ದಾರೆ. ಸುಪ್ರೀಂ ಕೋರ್ಟ್ ಸಹ ಇದನ್ನೇ ಹೇಳಿತ್ತು. ರೋಹಿಣಿ ಒಪ್ಪದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ್ದ ಅರ್ಜಿಯನ್ನು ಹಿಂಪಡೆದು, ಇಲ್ಲಿ ಮಾನಹಾನಿ ಪ್ರಕರಣ ದಾಖಲಿಸಲಾಗಿದೆ. ಇನ್ನು, ಮ್ಯಾಜಿಸ್ಟ್ರೇಟ್ ವಿವೇಚನೆ ಬಳಸಿಯೇ ಪ್ರಕರಣದ ಸಂಜ್ಞೇ ಪರಿಗಣಿಸಿದ್ದಾರೆ.
ವಿನಾ ಕಾರಣ ಮ್ಯಾಜಿಸ್ಟ್ರೇಟ್ ಮೇಲೆ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ರೋಹಿಣಿ ಅವರು ಮ್ಯಾಜಿಸ್ಟ್ರೇಟ್ ಅವರನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ. ಉನ್ನತ ಸ್ಥಾನದಲ್ಲಿರುವವರು ನ್ಯಾಯಾಲಯದ ಪ್ರಕ್ರಿಯೆಯೆನ್ನು ದುರ್ಬಳಕೆ ಮಾಡಲು ಅನುಮತಿಸಬಾರದು,’ ಎಂದು ಆಕ್ಷೇಪಿಸಿದ್ದರು.
ವಾದ-ಪ್ರತಿವಾದ ಆಲಿಸಿದ್ದ ಪೀಠವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣದ ವಿಚಾರಣಾ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆ ವಿಧಿಸಲಾಗಿದೆ ಎಂದು ಆದೇಶಿಸಿತ್ತು.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಪರಸ್ಪರ ನ್ಯಾಯಾಂಗ ಹೋರಾಟ ನಡೆಸುವ ಬದಲಿಗೆ ರಾಜಿಯಾಗುವ ಬಗ್ಗೆ ಪರಿಶೀಲಿಸುವುದು ಸೂಕ್ತ ಎಂದು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು.









