ಬೆಂಗಳೂರು; ಅಲ್ಪಾವಧಿ ಟೆಂಡರ್ ಪ್ರಕ್ರಿಯೆಯನ್ನೂ ನಡೆಸದೆಯೇ ಮಂಗಳೂರು ಮೂಲದ ಆಸ್ಕಿನ್ ಆಟೋಮೇಷನ್ ಪ್ರೈ ಲಿ ನಿಂದ ಕೃತಕ ಬುದ್ಧಿಮತ್ತೆ ಆಧರಿತ (ಎಐ) ಕ್ಯಾಮರಾಗಳನ್ನು ಖರೀದಿಸಿರುವ ವಿಧಾನಸಭೆ ಸಚಿವಾಲಯವು, ಹಲವು ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಇದೀಗ ಬಹಿರಂಗವಾಗಿದೆ.
ಆರ್ಥಿಕ ಇಲಾಖೆಯ ಗಮನಕ್ಕೆ ತಾರದೆಯೇ ಮತ್ತು ಸಹಮತಿಗೂ ಮುನ್ನವೇ ನೇರವಾಗಿ ವಿಧಾನಸಭೆ ಸಚಿವಾಲಯವೇ ಕ್ಯಾಮರಾಗಳನ್ನು ಖರೀದಿಸಿದೆ. ವಿಶೇಷವೆಂದರೇ ಇದಕ್ಕೆ ಸ್ಪೀಕರ್ ಯು ಟಿ ಖಾದರ್ ಅವರೂ ಸಹ ಅನುಮೋದಿಸಿದ್ದರು.
ನಿಯಮಾನುಸಾರ ಯಾವುದೇ ಕ್ರಮ ವಹಿಸದೇ ಇದ್ದ ವಿಧಾನಸಭೆ ಸಚಿವಾಲಯವು ಈ ಖರೀದಿ ಪ್ರಕ್ರಿಯೆಗೆ ಘಟನೋತ್ತರವಾಗಿ 4(ಜಿ) ವಿನಾಯಿತಿ ನೀಡಬೇಕು ಎಂದು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯು ಮೊದಲು ಒಪ್ಪಿರಲಿಲ್ಲ.
ಘಟನೋತ್ತರವಾಗಿ 4 (ಜಿ) ವಿನಾಯಿತಿ ನೀಡಲು ಅವಕಾಶವೇ ಇಲ್ಲ ಎಂದು ಆರ್ಥಿಕ ಇಲಾಖೆಯು ಹೇಳಿತ್ತು. ಆದರೆ ಸ್ಪೀಕರ್ ಕಚೇರಿಯು ಆರ್ಥಿಕ ಇಲಾಖೆ ಮೇಲೆ ಒತ್ತಡ ಹೇರಿತ್ತು. ಹೀಗಾಗಿ ಒತ್ತಡಕ್ಕೆ ಮಣಿದ ಆರ್ಥಿಕ ಇಲಾಖೆಯು 4(ಜಿ) ವಿನಾಯಿತಿ ನೀಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.
ಸ್ಪರ್ಧಾತ್ಮಕ ದರಗಳ ಮೂಲಕ ಕ್ಯಾಮರಾಗಳನ್ನು ಖರೀದಿಸಲು ಎಲ್ಲಾ ಅವಕಾಶಗಳಿದ್ದರೂ ಸಹ ವಿಧಾನಸಭೆ ಸಚಿವಾಲಯವು ಕರ್ನಾಟಕ ಪಾರದರ್ಶಕ ಕಾಯ್ದೆಯಿಂದ 4(ಜಿ) ವಿನಾಯಿತಿ ದೊರಕಿಸಿಕೊಂಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
ಈ ಕುರಿತು ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.
ವಿಧಾನಸಭೆ ಸಭಾಂಗಣ ಪ್ರವೇಶ ದ್ವಾರಗಳಿಗೆ ಸ್ಮಾರ್ಟ್ ಕ್ಯಾಮರಾಗಳನ್ನು 41,82,816.80 ರು.ಗಳ ವೆಚ್ಚದಲ್ಲಿ ಖರೀದಿಸಲು ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಬಲವಾದ ಆಕ್ಷೇಪಗಳನ್ನು ಎತ್ತಿತ್ತು.
ನಿರ್ದಿಷ್ಟವಾಗಿ ಆಸ್ಕಿನ್ ಆಟೋಮೇಷನ್ ಪ್ರೈ ಲಿ ನಿಂದಲೇ ಏಕೆ ಖರೀದಿಸಲು ಉದ್ದೇಶಿಸಿದೆ, ಈ ಸಂಸ್ಥೆಯನ್ನು ಹೊರತುಪಡಿಸಿ ಇಂತಹ ಸೇವೆಯನ್ನು ಒಗಿಸಲು ಇತರೆ ಯಾವುದೇ ಸಂಸ್ಥೆಗಳು ಲಭ್ಯವಿಲ್ಲವೇ ಎಂಬುದರ ಕುರಿತು ಆರ್ಥಿಕ ಇಲಾಖೆ ಮಾಹಿತಿ ಕೋರಿತ್ತು. ಆದರೆ ಯಾವುದೇ ಮಾಹಿತಿಗಳನ್ನೂ ಒದಗಿಸಿರಲಿಲ್ಲ.
ಅಲ್ಲದೇ ಈ ಸೇವೆಯನ್ನು ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸದೇ ಇರುವುದಕ್ಕೂ ಸೂಕ್ತ ಸಮರ್ಥನೆಗಳನ್ನೂ ನೀಡಿರಲಿಲ್ಲ. ಮತ್ತು ಪ್ರಸ್ತಾಪಿತ ದರಗಳು ಸಮಂಜಸವಾಗಿದೆಯೇ ಎಂಬುದಕ್ಕೆ ಯಾವುದೇ ದೃಢೀಕರಣ ಒದಗಿಸಿರಲಿಲ್ಲ. ಮತ್ತು 2024ರ ಮಾರ್ಚ್ 15ರಂದು ಆರ್ಥಿಕ ಇಲಾಖೆಯು ಹೊರಡಿಸಿದ್ದ ಮಾರ್ಗಸೂಚಿಗಳ ಅನ್ವಯ ಪರಿಶೀಲನೆಯನ್ನೂ ನಡೆಸಿರಲಿಲ್ಲ ಎಂಬುದು ಆರ್‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.
‘ಈ ಹಿನ್ನೆಲೆಯಲ್ಲಿ ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ತಿರಸ್ಕರಿಸಿ, ಪ್ರಸ್ತಾಪಿತ ಸೇವೆಯನ್ನು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಅನ್ವಯ ಟೆಂಡರ್ ಪ್ರಕ್ರಿಯೆ ಮೂಲಕವೇ ಕೈಗೊಳ್ಳಬೇಕು,’ ಎಂದು ಆರ್ಥಿಕ ಇಲಾಖೆಯು ತಿಳಿಸಿತ್ತು.
ಅಷ್ಟೇ ಅಲ್ಲದೇ ಎಐ ಆಧರಿತ ಕ್ಯಾಮರಾಗಳ ಖರೀದಿಗೆ ಆರ್ಥಿಕ ಇಲಾಖೆಯು ಅನುಮತಿಯನ್ನೇ ನೀಡಿರಲಿಲ್ಲ. ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಗೆ ಸಲ್ಲಿಸುವ ಮುನ್ನವೇ ಸಚಿವಾಲಯವು ಕ್ಯಾಮರಾಗಳನ್ನು ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಹೀಗಾಗಿ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ಘಟನೋತ್ತರ ವಿನಾಯಿತಿ ನೀಡಲು ಅವಕಾಶವೇ ಇರಲಿಲ್ಲ. ಅಲ್ಲದೇ ಆರ್ಥಿಕ ಇಲಾಖೆಯು 2024ರ ಮಾರ್ಚ್ 15ರಂದು ಹೊರಡಿಸಿದ್ದ ಸುತ್ತೋಲೆಯನ್ನು ಪಾಲಿಸಿಲ್ಲ ಎಂಬುದು ಸಹ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಮುನ್ನವೇ ಕ್ಯಾಮರಾಗಳನ್ನು ಖರೀದಿಸಿದ್ದ ವಿಧಾನಸಭೆ ಸಚಿವಾಲಯವು, ಇದಕ್ಕೆ ಘಟನೋತ್ತರವಾಗಿ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಪ್ರಕಾರ 4 (ಜಿ) ವಿನಾಯಿತಿ ಕೋರಿತ್ತು.
ವಿಧಾನಸಭೆ ಸಚಿವಾಲಯದ ಪ್ರಸ್ತಾವನೆಯಲ್ಲೇನಿತ್ತು?
ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯು ವಿಧಾನಸಭೆ ಸಭಾಂಗಣದೊಳಗೆ ಪ್ರವೇಶಿಸಿ ದೊಡ್ಡ ಗದ್ದಲ ಉಂಟಾಗಿತ್ತು. ಈ ಪ್ರಕರಣದ ಬಗ್ಗೆ ಸಭಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಸೂಕ್ತ ರೀತಿಯ ನಿಗಾವಣೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದರು. ಈ ಸಂದರ್ಭದಲ್ಲಿ ಮಂಗಳೂರಿನ ಆಸ್ಕಿನ್ ಆಟೋಮೇಷನ್ ಪ್ರೈ ಲಿ., ಎಐ ತಂತ್ರಜ್ಞಾನದ ಕ್ಯಾಮರಾಗಳನ್ನು ಒದಗಿಸುವ ಕುರಿತು ಆಸಕ್ತಿ ವ್ಯಕ್ತಪಡಿಸಿ ಪತ್ರ ನೀಡಿದ್ದರು.
2024ರ ಜುಲೈ 15ರಿಂದ ಅಧಿವೇಶನ ಪ್ರಾರಂಭವಾಗುವ ಪೂರ್ವದಲ್ಲಿ ಈ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಬೇಕಿದೆ. ಆಸ್ಕಿನ್ ಕಂಪನಿಯು ಪ್ರತಿಷ್ಠಿತ ಕಂಪನಗಿಳಿಗೆ ಈ ಸೇವೆ ನೀಡಿದ್ದಾರೆ. ಅವರು ಒದಗಿಸಿರುವ ಕ್ಯಾಮರಾಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಾಗದೇ ಇರುವುದು ಕಂಡು ಬರುತ್ತದೆ.
ಈ ಹಿನ್ನೆಲೆಯಲ್ಲಿ ಈ ಕಾಮಗಾರಿಗೆ ಸಂಬಂಧಿಸಿದಂತೆ ಮೊದಲಿಗೆ ಆರ್ಥಿಕ ಇಲಾಖೆಯಿಂದ ಪಾರದರ್ಶಕತೆ ಅಧಿನಿಯಮ ಕಲಂ 4(ಜಿ) ಅಡಿಯಲ್ಲಿ ಟೆಂಡರ್ ಕರೆಯುವುದರಿಂದ ವಿನಾಯಿತಿ ಪಡೆದು ನೇರವಾಗಿ ಸಂಸ್ಥೆಯವರಿಗೆ ಕಾರ್ಯಾದೇಶ ನೀಡುವ ಪ್ರಸ್ತಾವನೆಗೆ ಸಭಾಧ್ಯಕ್ಷರು ಅನುಮೋದನೆ ನೀಡಿದ್ದಾರೆ. ಹೀಗಾಗಿ ವಿನಾಯಿತಿಯನ್ನು ಆರ್ಥಿಕ ಇಲಾಖೆಯು ವಿನಾಯಿತಿ ನೀಡಬೇಕು ಎಂದು ಕೋರಿದ್ದರು.
ಇದಕ್ಕೆ ಆರ್ಥಿಕ ಇಲಾಖೆಯು ಆರಂಭದಲ್ಲಿ ಸಹಮತಿ ನೀಡಿರಲಿಲ್ಲ.
‘ಕಾರ್ಯ ಯೋಜನೆಯನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿರುತ್ತದೆ. ಆದ್ದರಿಂದ ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಅನುಸಾರ ಘಟನೋತ್ತರವಾಗಿ ವಿನಾಯಿತಿ ನೀಡಲು ಅವಕಾಶವಿರುವುದಿಲ್ಲ. ಅಲ್ಲದೇ ಈ ಕುರಿತು ಆರ್ಥಿಕ ಇಲಾಖೆಯ 2024ರ ಮಾರ್ಚ್ 15ರಂದು ಹೊರಡಿಸಿದ್ದ ಸುತ್ತೋಲೆ ಪ್ರಕಾರ ಇಂತಹ ಪ್ರಸ್ತಾವನೆಗಳನ್ನು ಸಲ್ಲಿಸಿರುವ ಅಧಿಕಾರಿಗಳ ಸೇವಾ ಪುಸ್ತಕದಲ್ಲಿ ದಾಖಲಿಸಲಾಗುವುದು,’ ಎಂದು ಟಿಪ್ಪಣಿಯಲ್ಲಿ ಎಚ್ಚರಿಸಿತ್ತು.
ಸುತ್ತೋಲೆಯಲ್ಲೇನಿದೆ?
ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳಡಿಯಲ್ಲಿ ಘಟನೋತ್ತರವಾಗಿ 4(ಜಿ) ವಿನಾಯಿತಿ ನೀಡಲು ಅವಕಾಶವಿರುವುದಿಲ್ಲ. ಆದ್ದರಿಂದ ಕಾಮಗಾರಿ/ಕಾರ್ಯಕ್ರಮ/ಸರಬರಾಜು ಆರಂಭವಾದ ನಂತರ ಅಥವಾ ಮುಕ್ತಾಯವಾದ ನಂತರ ಯಾವುದೇ ವಿನಾಯಿತಿ ಪ್ರಸ್ತಾವನೆಗಳನ್ನು ಸಲ್ಲಲಿಸಬಾರದು. ಆಡಳಿತ ಇಲಾಖೆಗಳಿಂದ ಸ್ವೀಕೃತವಾಗುವ ಅಂತಹ ಯಾವುದೇ ಪ್ರಸ್ತಾವನೆಗಳನ್ನು ಟಿಪ್ಪಣಿ ಮಾಡಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಸೇವಾ ಪುಸ್ತಕದಲ್ಲಿ ದಾಖಲಿಸಲು ಡಿಪಿಎಆರ್‌ಗೆ ವರದಿ ಮಾಡಲಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ.
ಆದರೂ ವಿಧಾನಸಭೆ ಸಚಿವಾಲಯ ಅಧಿಕಾರಿಗಳು ಆರ್ಥಿಕ ಇಲಾಖೆಗೆ 4 (ಜಿ) ವಿನಾಯಿತಿಯನ್ನು ಘಟನೋತ್ತರವಾಗಿ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು.
ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಲ್ ಕೆ ಅತೀಕ್ ಅವರೂ ಸಹ ಆಕ್ಷೇಪ ಎತ್ತಿದ್ದರು.
ವಿಧಾನಸಭೆ ಸಚಿವಾಲಯವು ಆರ್ಥಿಕ ಇಲಾಖೆಯ ಸಹಮತಿ ಇದೆ ಎಂದು ಭಾವಿಸಿ ಖರೀದಿ ಪ್ರಕ್ರಿಯೆ ನಡೆಸಿದೆ. ಇದನ್ನು ಗಮನಿಸಲಾಗಿದೆ. ಅಲ್ಲದೇ 4 (ಜಿ) ಗೆ ಆರ್ಥಿಕ ಇಲಾಖೆಯ ಸಹಮತಿ ಇದೆಯೆಂದು ಭಾವಿಸಿ ಖರೀದಿಸಬಾರದು ಎಂದು ಟಿಪ್ಪಣಿಯ 21ನೇ ಕಂಡಿಕೆಯಲ್ಲಿ ದಾಖಲಿಸಿದ್ದರು.
ಇದೇ ಕಂಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಅನುಮೋದಿಸಿದ್ದರು.
ಹಾಗೆಯೇ ‘ಈ ಪ್ರಸ್ತಾವನೆ ಕುರಿತು ಆರ್ಥಿಕ ಇಲಾಖೆಯಿಂದ ಟಿಪ್ಪಣಿ ಮಾಡಿಕೊಳ್ಳಲಾಗಿದೆ ಎಂದೂ ಮತ್ತು ಈ ರೀತಿ ಟೆಂಡರ್ ಕರೆಯದೇ ಅಥವಾ ಮುಂಚಿತವಾಗಿ ವಿನಾಯಿತಿ ಪಡೆಯದೇ ಸೇವೆ ಸಂಗ್ರಹಿಸಲು ಕಾರಣರಾದ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಆರ್ಥಿಕ ಇಲಾಖೆಯ ಸುತ್ತೋಲೆ ಪ್ರಕಾರ ಕ್ರಮ ವಹಿಸಬೇಕು,’ ಎಂದೂ ಟಿಪ್ಪಣಿಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ಆದರೆ ಈ ಯಾವ ಪ್ರಕ್ರಿಯೆಗಳೂ ನಡೆದಿಲ್ಲ. ಬದಲಿಗೆ ಆರ್ಥಿಕ ಇಲಾಖೆಯು 2024ರ ಆಗಸ್ಟ್ 26ರಂದು ಘಟನೋತ್ತರವಾಗಿ ಅನುಮೋದನೆಯನ್ನು ನೀಡಿದೆ.
41,82,816.80 ರು. ಗಳನ್ನು ಪಾವತಿಸಲು ಕ್ರಮ ವಹಿಸಬೇಕು. ಇನ್ನು ಮುಂದೆ ಕೆಟಿಪಿಪಿ ಕಾಯ್ದೆ ಕಲಂ 4(ಜಿ) ಅಡಿ ಸೇವೆಗಳನ್ನು ಆರ್ಥಿಕ ಇಲಾಖೆಯ ಸಹಮತಿ ಪಡೆಯದೇ ಸಂಗ್ರಹಣೆ ಮಾಡಿಕೊಳ್ಳಬಾರದು ಎಂದು ಅನಧಿಕೃತ ಟಿಪ್ಪಣಿಯಲ್ಲಿ ಸೂಚಿಸಿರುವುದು ತಿಳಿದು ಬಂದಿದೆ.