ಶಾಸಕರ ವಿಚಾರಣೆ; ಅನುಮತಿ ಅಗತ್ಯವಿಲ್ಲವೆಂದಿದ್ದ ಸ್ಪೀಕರ್‌, ಆದರೂ ಪ್ರಸ್ತಾವನೆ ತಿರಸ್ಕರಿಸಿದ್ದೇಕೆ?

ಬೆಂಗಳೂರು; ಟೆಂಡರ್‍‌ದಾರರಿಂದ ಅಕ್ರಮವಾಗಿ ಕಮಿಷನ್‌ ರೂಪದಲ್ಲಿ ಲಂಚವನ್ನು ಪಡೆಯಲು ಅನುವು ಮಾಡಿಕೊಟ್ಟು ಭ್ರಷ್ಟಾಷಾರ ಅಪರಾಧ ಎಸಗಿರುವ ಪ್ರಕರಣದಲ್ಲಿ ವಿಚಾರಣೆಗೆ ಅನುಮತಿ ಅಗತ್ಯವಿಲ್ಲ ಎಂದು ಸ್ಪೀಕರ್‌ ಎರಡೆರಡು ಬಾರಿ ಅಭಿಪ್ರಾಯ ನೀಡಿದ್ದರು. ಆದರೂ ಲೋಕಾಯುಕ್ತ ವಿಚಾರಣೆಗೆ ಈಗಿನ ಕಾಂಗ್ರೆಸ್‌ ಸರ್ಕಾರವು ಅನುಮತಿ ನಿರಾಕರಿಸಿತ್ತು.

 

ಅಲ್ಲದೇ ಈ ಪ್ರಕರಣದಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಅಪರಾಧ ಎಸಗಿರುವುದನ್ನು ಲೋಕಾಯುಕ್ತ ಪೊಲೀಸರು ತನಿಖೆಯಲ್ಲಿ ದೃಢಪಡಿಸಿದ್ದರು. ಆದರೂ ಅವರನ್ನು ವಿಚಾರಣೆಗೊಳಪಡಿಸಲು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಅನುಮತಿ ಪ್ರಸ್ತಾವವು ತಿರಸ್ಕೃತಗೊಂಡಿತ್ತು. ಖುದ್ದು ಸ್ಪೀಕರ್‌ ಯು ಟಿ ಖಾದರ್‌ ಅವರೇ ವಿಚಾರಣೆಗೆ ಅನುಮತಿ ಅಗತ್ಯವಿಲ್ಲ ಎಂದು ಎರಡೆರಡು ಬಾರಿ ಅಭಿಪ್ರಾಯ ನೀಡಿದ್ದರೂ ಸಹ ವಿಚಾರಣೆಗೆ  ಅನುಮತಿ ನೀಡದೇ ಪ್ರಸ್ತಾವವನ್ನು ತಿರಸ್ಕರಿಸಿದ್ದೇಕೆ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.

 

15ನೇ ವಿಧಾನಸಭೆಯ ಅವಧಿಯಲ್ಲಿನ ಶಾಸಕರು ಎಸಗಿರುವವ ಅಪರಾಧಕ್ಕೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯು ಆ ಸದಸ್ಯರನ್ನು ಸಭಾಧ್ಯಕ್ಷರ ಅನುಮತಿ ಇಲ್ಲದೆಯೇ ಅಭಿಯೋಜನೆಗೆ ಒಳಪಡಿಸಬಹುದು. ಈ ಸಂಬಂಧ ಪ್ರಕರಣವೊಂದರಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್‌ ಅವರು 2019ರ ಜೂನ್‌ 2ರಂದೇ  ಅಭಿಪ್ರಾಯ ನೀಡಿದ್ದರು.  ಹೀಗಾಗಿ  ಲೋಕಾಯುಕ್ತ ಪೊಲೀಸರು ನೇರವಾಗಿ ವಿಚಾರಣೆ ನಡೆಸಲು ಅವಕಾಶವಿದ್ದರೂ ಸಹ ಮತ್ತೊಮ್ಮೆ ಸಭಾಧ್ಯಕ್ಷರ  ಪೂರ್ವಾನುಮತಿ ಕೇಳಿ ಸಲ್ಲಿಸಿದ್ದ ಪ್ರಸ್ತಾವನೆಯೂ ಚರ್ಚೆಗೆ ಗ್ರಾಸವಾಗಿದೆ.

 

ಈ ಸಂಬಂಧ ‘ದಿ ಫೈಲ್‌’ ಅರ್‍‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.

 

ಮಾಡಾಳು ವಿರೂಪಾಕ್ಷಪ್ಪ ಅವರ ಪ್ರಕರಣದಲ್ಲಿನ ಆರೋಪ ಪಟ್ಟಿ ಸಲ್ಲಿಸುವುದು/ ಅಭಿಯೋಜನಾ ಮಂಜೂರಾತಿ ನೀಡುವ ಪ್ರಸ್ತಾವವನ್ನು ಕಾಂಗ್ರೆಸ್‌ ಸರ್ಕಾರವು ತಿರಸ್ಕರಿಸಿರುವ ಬೆನ್ನಲ್ಲೇ ವಿಧಾನಸಭೆ ಸಚಿವಾಲಯವು ಆರ್‍‌ಟಿಐ ಅಡಿಯಲ್ಲಿ ನೀಡಿರುವ ಕಡತದಲ್ಲಿನ ವಿವರಗಳು ಸಹ ಮುನ್ನೆಲೆಗೆ ಬಂದಿವೆ.

 

ವಿಧಾನಸಭೆಯ ಸದಸ್ಯರನ್ನು ವಿಚಾರಣೆಗೊಳಪಡಿಸಲು ಸಭಾಧ್ಯಕ್ಷರ ಪೂರ್ವಾನುಮತಿಯ ಅಗತ್ಯವೇ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಹಲವು ತೀರ್ಪುಗಳನ್ನು ನೀಡಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರು ಸಭಾಧ್ಯಕ್ಷರ ಪೂರ್ವಾನುಮತಿ ಇಲ್ಲದೆಯೇ ನೇರವಾಗಿ ವಿಚಾರಣೆ ನಡೆಸಬಹುದು ಎಂದು ಸಭಾಧ್ಯಕ್ಷ ಯು ಟಿ ಖಾದರ್ ಅವರು ಲೋಕಾಯುಕ್ತ ಪೊಲೀಸ್‌ ಮುಖ್ಯಸ್ಥರಿಗೆ ಅಭಿಪ್ರಾಯ ನೀಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

‘ಪ್ರಸ್ತಾವಿತ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯದ ರೀತಿ ಹಿಂದಿನ ವಿಧಾನಸಭೆಯ ಶಾಸಕರ ವಿರುದ್ಧದ ಭ್ರಷ್ಟಾಚಾರ ಆಪಾದನೆಯ ಮೇರೆಗೆ ಅವರನ್ನು ಅಭಿಯೋಜನೆಗೆ ಒಳಪಡಿಸಲು ಸಭಾಧ್ಯಕ್ಷರ ಅಭಿಯೋಜನಾ ಮಂಜೂರಾತಿ ಅವಶ್ಯಕತೆ ಇರುವುದಿಲ್ಲ,’ ಎಂದು ಸಚಿವಾಲಯದ ನಿರ್ದೇಶಕರು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಅಲ್ಲದೇ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 19(1)ರ ರೀತಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆಯೇ  ಕೇಂದ್ರ ಮತ್ತು ರಾಜ್ಯ ಸರ್ಕಾರದ ವ್ಯವಹರಣೆಗಳಿಗಾಗಿ ನೇಮಿಸಬಹುದಾದ ಮತ್ತು ಸೇವೆಯಿಂದ ವಿಮುಕ್ತಿಗೊಳಿಸಬಹುದಾದ ಯಾವುದೇ ಒಬ್ಬ ಸಾರ್ವಜನಿಕ ಸೇವಕ ಅಪರಾಧ ಎಸಗಿದಾಗ ಅಂತಹವರನ್ನು ಕರ್ತವ್ಯಗಳಿಂದ ತೆಗೆದು ಹಾಕುವ ಅಧಿಕಾರವಿಲ್ಲ.

 

ಅಲ್ಲದೇ ಇವರ ವಿರುದ್ಧ ಯಾವುದೇ ಪೊಲೀಸ್‌ ಅಧಿಕಾರಿಯು ವಿಚಾರಣೆ, ತನಿಖೆ ನಡೆಸಲು ಅವಕಾಶವೂ ಇಲ್ಲ. ಆದರೆ ಕರ್ನಾಟಕ ವಿಧಾನಸಭೆಯ ಸದಸ್ಯರುಗಳು ಯಾವುದೇ ಪ್ರಾಧಿಕಾರದಿಂದ ನೇಮಕಗೊಂಡಿರುವುದಿಲ್ಲ. ಆದ್ದರಿಂದ ವಿಧಾನಸಭೆ ಸದಸ್ಯರುಗಳನ್ನು ತೆಗೆದುಹಾಕಲು ಸಭಾಧ್ಯಕ್ಷರಿಗಾಗಲೀ ಅಥವಾ ಇತರೆ ಯಾವುದೇ ಸಕ್ಷಮ ಪ್ರಾಧಿಕಾರಕ್ಕೆ ಅವಕಾಶವಿರುವುದಿಲ್ಲ ಎಂದೂ ನಿರ್ದೇಶಕರು ಸ್ಪಷ್ಟವಾಗಿ ಅಭಿಪ್ರಾಯ ನೀಡಿದ್ದರು.

 

ನಿರ್ದೇಶಕರು ನೀಡಿದ್ದ ಈ ಅಭಿಪ್ರಾಯವನ್ನೇ ಸ್ಪೀಕರ್ ಯು ಟಿ ಖಾದರ್ ಅವರೂ ಸಹ ಅನುಮೋದಿಸಿದ್ದಾರೆ.

 

‘ವಿಧಾನಸಭೆ ಸದಸ್ಯರುಗಳು ಸಭಾಧ್ಯಕ್ಷರಿಂದ ನೇಮಕಾತಿ ಹೊಂದಿದವರಲ್ಲ. ಅವರುಗಳು ಚುನಾಯಿತ ಜನಪ್ರತಿನಿಧಿಗಳು. ಸಭಾಧ್ಯಕ್ಷರು, ವಿಧಾನಸಭೆಯ ಸದಸ್ಯರುಗಳನ್ನು ನೇಮಿಸುವ ಪ್ರಾಧಿಕಾರವಾಗದೇ ಇರುವುದರಿಂದ ಇವರುಗಳ ವಿರುದ್ಧ ದೂರು ದಾಖಲಿಸಲು, ತನಿಖೆ ಕೈಗೊಳ್ಳಲು ಮತ್ತು ಅಭಿಯೋಜನೆಗೆ ಒಳಪಡಿಸಲು ಸಭಾಧ್ಯಕ್ಷರು ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ,’ ಎಂದು ನಿರ್ದೇಶಕರು ನೀಡಿದ್ದ ಟಿಪ್ಪಣಿಗೆ  ಸ್ಪೀಕರ್‍‌ ಯು ಟಿ ಖಾದರ್ ಅವರು ಅನುಮೋದಿಸಿರುವುದು ತಿಳಿದು ಬಂದಿದೆ.

 

 

ಹೀಗೆ ಸಭಾಧ್ಯಕ್ಷರು ಸ್ಪಷ್ಟವಾಗಿ ಅಭಿಪ್ರಾಯ ನೀಡಿದ ನಂತರವೂ ಲೋಕಾಯುಕ್ತ ಪೊಲೀಸರು 2018ರಲ್ಲಿ ಪ್ರಕಟವಾಗಿದ್ದ ಭ್ರಷ್ಟಚಾರ ನಿರೋಧ ಕಾಯ್ದೆ (ತಿದ್ದುಪಡಿ) 2018ನ್ನು ಮುಂದಿಟ್ಟಿದ್ದರು. ಇದರ ಅನ್ವಯ ಮಾಜಿ ಸದಸ್ಯರಿಗೂ ಕೂಡ ಅಭಿಯೋಜನೆ ಮಂಜೂರಾತಿ ಆದೇಶ ಪಡೆದುಕೊಳ್ಳುವುದು ಅವಶ್ಯಕವಾಗಿರುತ್ತದೆ ಎಂದು ಪ್ರತಿಪಾದಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ವಿಧಾನಸಭೆ ಸಚಿವಾಲಯವು ಲೋಕಾಯುಕ್ತ ಪೊಲೀಸರು ಮುಂದಿಟ್ಟಿದ್ದ ಪ್ರತಿಪಾದನೆಯನ್ನು ಒಪ್ಪಿರಲಿಲ್ಲ. ‘ ಮಾಡಾಳು ವಿರೂಪಾಕ್ಷಪ್ಪ ಅವರು ವಿಧಾನಸಭೆಯ ಮಾಜಿ ಸದಸ್ಯರಾಗಿದ್ದಾರೆ. ಇವರು ಯಾರ ಅಧೀನದಲ್ಲಿಯೂ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಮಾಜಿ ಶಾಸಕರಿಗೆ ಅಭಿಯೋಜನೆ ಮಂಜೂರಾತಿ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಈ ಹಿಂದೆಯೇ ತಿಳಿಸಲಾಗಿರುತ್ತದೆ,’ ಎಂದು ವಿಧಾನಸಭೆ ಸಚಿವಾಲಯದ  ನಿರ್ದೇಶಕರು ಮತ್ತೊಮ್ಮೆ ಸ್ಪಷ್ಟವಾಗಿ ಅಭಿಪ್ರಾಯ ನೀಡಿದ್ದರು.

 

ಅಲ್ಲದೇ ಪ್ರಸ್ತುತ ಪ್ರಕರಣದಲ್ಲಿ ಕೆ ವಿರೂಪಾಕ್ಷಪ್ಪ ಅವರು ಜನರಿಂದ ಆಯ್ಕೆಯಾದ ಜನಪ್ರತಿನಿಧಿಯಾಗಿದ್ದಾರೆ. ಸಭಾಧ್ಯಕ್ಷರು ಇವರನ್ನು  ನೇಮಿಸುವ ಪ್ರಾಧಿಕಾರವಾಗಿಲ್ಲ. ಹಾಗೂ ಅವರನ್ನು ತೆಗೆದುಹಾಕಲು ಸಭಾಧ್ಯಕ್ಷರಿಗೆ ಅವಕಾಶವಿಲ್ಲ. ಹೀಗಾಗಿ ಅವರ ವಿರುದ್ಧದ ಆಪಾದನೆಗಳ ಬಗ್ಗೆ ಸಭಾಧ್ಯಕ್ಷರು ಅಭಿಯೋಜನಾ ಮಂಜೂರಾತಿ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹಿಂಬರಹ ನೀಡಬಹುದು. ಅಲ್ಲದೇ ಈ ಪ್ರಕರಣವನ್ನು ಮುಕ್ತಾಯಗೊಳಿಸಬಹುದು ಎಂದು ಸಭಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿದ್ದರು ಎಂಬುದು ಟಿಪ್ಪಣಿಯಿಂದ ಗೊತ್ತಾಗಿದೆ.

 

 

ಇದೇ ಅಂಶವನ್ನು ಉಲ್ಲೇಖಿಸಿ ವಿಧಾನಸಭೆ ಸಚಿವಾಲಯದ ನಿರ್ದೇಶಕರು ಲೋಕಾಯುಕ್ತ ಪೊಲೀಸ್‌ ಮಹಾನಿರ್ದೇಶಕರಿಗೆ 2024ರ ಜನವರಿ 8ರಂದೇ ಪತ್ರ ಬರೆದಿದ್ದರು.

 

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಧ್ಯಕ್ಷರು ಸ್ಪಷ್ಟ, ಖಚಿತ ಮತ್ತು ನಿಖರತೆಯಿಂದ ಕೂಡಿರುವ ಅಭಿಪ್ರಾಯ ನೀಡಿದ್ದರೂ ಸಹ ಮಾಡಾಳು ವಿರೂಪಾಕ್ಷಪ್ಪ ಅವರನ್ನು ವಿಚಾರಣೆಗೊಳಪಡಿಸುವ ಪ್ರಸ್ತಾವನೆಯನ್ನು  ಕಾಂಗ್ರೆಸ್‌ ಸರ್ಕಾರವು ತಿರಸ್ಕರಿಸಿದೆ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವಿಧಾನಸಭೆಗೆ ದಾಖಲೆಯನ್ನೂ ಮಂಡಿಸಿದ್ದಾರೆ. ಯಾವ ಕಾರಣಗಳಿಗಾಗಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂಬುದು ಈಗಲೂ ನಿಗೂಢವಾಗಿದೆ.

 

 

ಶಾಸಕರು ಅಥವಾ ಮಾಜಿ ಶಾಸಕರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸಲು ಅಭಿಯೋಜನಾ ಮಂಜೂರಾತಿ ನೀಡುವ ಅಧಿಕಾರ ವಿಧಾನಸಭೆ ಅಧ್ಯಕ್ಷರಿಗೆ ಇದೆಯೆ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಹೀಗಾಗಿ ಲೋಕಯುಕ್ತ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು ಸಲ್ಲಿಸಿರಲಿಲ್ಲ.

 

ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಲಂಚ ಪ್ರಕರಣ; ಆರೋಪ ಪಟ್ಟಿ, ಪಿಎಸ್‌ಒ ಪ್ರಸ್ತಾವ ತಿರಸ್ಕರಿಸಿದ ಸರ್ಕಾರ

 

ಕೆಎಸ್‌ಡಿಎಲ್‌ಗೆ ಕಚ್ಛಾ ವಸ್ತು ಪೂರೈಕೆಯ ಟೆಂಡರ್‍‌ ಪಡೆದಿದ್ದ ಶ್ರೇಯಸ್‌ ಕಶ್ಯಪ್ ಎಂಬ ಗುತ್ತಿಗೆದಾರನಿಂದ ವಿರೂಪಾಕ್ಷಪ್ಪ ಅವರ ಮಗ, ಬಿಡಬ್ಲ್ಯೂಎಸ್‌ಎಸ್‌ಬಿ ಹಿಂದಿನ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ಮಾಡಾಳ್, ಅಪ್ಪನ ಪರವಾಗಿ 40 ಲಕ್ಷ ರು ಲಮಚ ಪಡೆಯುತ್ತಿದ್ದಾಗ ಮಾರ್ಚ್‌ 2ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಶಾಂತ ಅವರ ಖಾಸಗಿ ಕಚೇರಿಯಲ್ಲಿ ಒಟ್ಟು 1.62 ಕೋಟಿ ನಗದು ಪತ್ತೆಯಾಗಿತ್ತು.

 

ಮರುದಿನವೇ ವಿರೂಪಾಕ್ಷಪ್ಪ ಅವರ ಮನೆಯಲ್ಲಿಯೂ ಶೋಧ ನಡೆದಿತ್ತು. ಆ ಸಂದರ್ಭದಲ್ಲಿ 7.26 ಕೋಟಿ ನಗದು ಪತ್ತೆಯಾಗಿತ್ತು. ಮಗನ ಬಂಧನ ಬಳಿಕ ತಲೆ ಮರೆಸಿಕೊಂಡಿದ್ದರು. ನಂತರ ಅವರು ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು. ಇದನ್ನು ಹೈಕೋಟ್‌ ಕೂಡ ತಿರಸ್ಕರಿಸಿತ್ತು. ಅದೇ ದಿನ ಅವರನ್ನು ಬಂಧಿಸಿತ್ತು.

 

ಶಾಸಕ ಮಾಡಾಳು ವಿರೂಪಾಕ್ಷಪ್ಪ ನಾಪತ್ತೆ; ಲೋಕಾ ಪೊಲೀಸರಿಂದ ಲುಕ್‌ಔಟ್‌ ನೋಟೀಸ್‌ ಜಾರಿಗೆ ಸಿದ್ಧತೆ

 

ಪ್ರಕರಣಕ್ಕೆ ಸಂಬಂಧಿಸಿದ ದೂರು, ಎಫ್‌ಐಆರ್‍‌, ತನಿಖಾ ವರದಿ ಎಲ್ಲವನ್ನೂ ವಿಧಾನಸಭೆ ಅಧ್ಯಕ್ಷರಿಗೆ ಸಲ್ಲಿಸಿತ್ತು. ಆದರೆ ಅಭಿಯೋಜನಾ ಮಂಜೂರಾತಿ ನೀಡುವ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಹೀಗಾಗಿ ವಿರೂಪಾಕ್ಷಪ್ಪ ಅವರ ವಿರುದ್ಧ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ವಿಳಂಬವಾಗಿತ್ತು.

 

ಅಲ್ಲದೇ ಇದೇ ಪ್ರಕರಣದಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ರದ್ದುಗೊಳಿಸಿ ಆದೇಶಿಸಿತ್ತು. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್​ 17 A ಪ್ರಕಾರ ಪ್ರಕ್ರಿಯೆ ಪಾಲಿಸಿಲ್ಲ ಎಂದು ಮಾಡಾಳ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು. ವಕೀಲರ ವಾದ ಪುರಸ್ಕರಿಸಿದ್ದ ಹೈಕೋರ್ಟ್​, ಪ್ರಕರಣ ರದ್ದು ಮಾಡಿ ಆದೇಶ ಹೊರಡಿಸಿತ್ತು. ಸ್ಪೀಕರ್ ಅನುಮತಿ ಪಡೆಯದೇ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಲಾಗಿದೆ ಎಂಬ ತಾಂತ್ರಿಕ ಕಾರಣವನ್ನು ಮುಂದಿಟ್ಟು ವಾದಿಸಲಾಗಿತ್ತು.

 

 

 

 

ವಿಶೇಷವೆಂದರೇ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಂದು  ಪ್ರತಿಪಕ್ಷ ನಾಯಕರಾಗಿದ್ದ  ಸಿದ್ದರಾಮಯ್ಯ  ಅವರು ‘ಚನ್ನಗಿರಿ ಕ್ಷೇತ್ರದ ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು ಸಚಿತ್ರವಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟರೂ ನೀವು ಮಾತ್ರ ಬಾಯಿ ಬಿಡುತ್ತಿಲ್ಲ ಯಾಕೆ? ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ ನರೇಂದ್ರ ಮೋದಿ ಅವರೇ? ಎಂದು ಪ್ರಶ್ನಿಸಿದ್ದರು,’.

SUPPORT THE FILE

Latest News

Related Posts