ಬೆಂಗಳೂರು; ಬಿಬಿಎಂಪಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಸಂಬಂಧ ಕರೆದಿದ್ದ ಟೆಂಡರ್‍ನಲ್ಲಿ ಭಾಗವಹಿಸಿರುವ ಕೆಲ ಏಜೆನ್ಸಿ, ಕಂಪನಿಗಳು ಬಿಡ್ ರಿಗ್ಗಿಂಗ್ ಮಾಡಿರುವುದು ಇದೀಗ ಬಹಿರಂಗವಾಗಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಟೆಂಡರ್ ಕರೆದಿತ್ತಾದರೂ ಆರ್ಥಿಕ ಬಿಡ್ ತೆರೆದಿರಲಿಲ್ಲ. ಈ ಮಧ್ಯೆ ಕಾಂಗ್ರೆಸ್ ಸರ್ಕಾರವು ಅಸ್ತಿತ್ವಕ್ಕೆ ಬರುತ್ತಿದ್ದಂತೆ ಈ ಸಂಬಂಧ ಕೆಲ ಕಂಪನಿ, ಏಜೆನ್ಸಿಗಳು ದೂರು ಸಲ್ಲಿಸಿದ್ದವು. ಈ ದೂರಿನ ಕುರಿತು ತನಿಖೆ ನಡೆಸಬೇಕು ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಮಂಡಳಿಯ ಮುಖ್ಯ ವ್ಯವಸ್ಥಾಪಕರು ಹಲಸೂರು ಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ 2024ರ ಅಕ್ಟೋಬರ್ 3ರಂದು ಪತ್ರ ಬರೆದಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಮಗ್ರ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಬಿಬಿಎಂಪಿಯು ಮುಮದಿನ 30 ವರ್ಷದ ಅವಧಿಗೆ 90 ಸಾವಿರ ಕೋಟಿ ಗುತ್ತಿಗೆ ನೀಡಲು ಮುಮದಾಗಿರುವ ಹೊತ್ತಿನಲ್ಲಿ ಈ ಪತ್ರವು ಮುನ್ನೆಲೆಗೆ ಬಂದಿದೆ.
ಬೆಂಗಳೂರು ನಗರದಲ್ಲಿ ಕಸ ಸಂಗ್ರಹಣೆ ಮತ್ತು ಸಾಗಾಣಿಕೆ ಸಂಬಂಧ ಒಟ್ಟು 89 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆಯಲಾಗಿತ್ತು. ಕೆಲ ಏಜೆನ್ಸಿಗಳು ಮತ್ತು ಕಂಪನಿಗಳು ಗುಂಪಾಗಿ ಬಿಡ್‌ನಲ್ಲಿ ಭಾಗವಹಿಸಿದ್ದವು. ಅಲ್ಲದೇ ಅಂದಾಜು ಮೊತ್ತಕ್ಕಿಂತ ಶೇ.50ರಿಂದ 60ಕ್ಕೂ ಹೆಚ್ಚಾಗಿ ದರ ನಮೂದಿಸಿದ್ದವು ಎಂಬುದು ಸಹಾಯಕ ಪೊಲೀಸ್ ಆಯುಕ್ತರಿಗೆ ಬರೆದಿರುವ ಪತ್ರದಿಂದ ತಿಳಿದು ಬಂದಿದೆ.
ಹಾಗೆಯೇ ಗುಂಪು ಗುಂಪಾಗಿ ಭಾಗವಹಿಸಿದ್ದ ಕೆಲ ಬಿಡ್‌ದಾರರು ತಮ್ಮ ಕೈ ಚಳಕ ತೋರಿಸಿದ್ದರು. ಅವರು ಬಳಸಿದ್ದ ಕಂಪ್ಯೂಟರ್ ಸಿಸ್ಟಂನ ಐಪಿ ಅಡ್ರೆಸ್‌ನ ಮಾಹಿತಿಯೂ ಇ-ತಂತ್ರಾಂಶದಲ್ಲಿಯೂ ಲಭ್ಯವಿರಲಿಲ್ಲ.
ಪತ್ರದಲ್ಲೇನಿದೆ?
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಪಾಲಿಕೆಯ 225 ವಾರ್ಡ್‌ಗಳನ್ನು 89 ಪ್ಯಾಕೇಜ್‌ಗಳಾಗಿ ವಿಂಗಡಿಸಲು ಟೆಂಡರ್ (ಟೆಂಡರ್ ಇಂಡೆಂಟ್ ಸಂಖ್ಯೆ; CGM(TECH/BSWML/TENDE/02-01) ಕರೆಯಲಾಗಿತ್ತು.
89 ಪ್ಯಾಕೇಜ್‌ಗಳಲ್ಲಿ ಸಲ್ಲಿಸಿರುವ ಬಿಡ್‌ಗಳನ್ನು ಕಸ ವಿಲೇವಾರಿ ಸಂಘದ ವ್ಯಕ್ತಿಗಳು ಗುಂಪಾಗಿ ಸೇರಿಕೊಂಡು ಟೆಂಡರ್‍ಗಳನ್ನು ದಾಖಲಿಸಿದ್ದಾರೆ. ಎಲ್ 1 ಬಿಡ್‌ದಾರರು ಯಾರು ಎಂಬ ಸಂಬಂಧಿಸಿದ ಮಾಹಿತಿಯನ್ನು ಉಚ್ಛ ನ್ಯಾಯಾಲಯಕ್ಕೆ ಹೆಚ್ಚುವರಿ ದಾಖಲಾತಿಗಳನ್ನು ಸಲ್ಲಿಸಲಾಗಿದೆ ಎಂದು ವಿಷನ್ ಮ್ಯಾನ್ ಪವರ್, ಎಸ್‌ಎಲ್‌ವಿ ಟ್ರೇಡರ್ಸ್ ಪ್ರೈ ಲಿ., ಹಾಗೂ ಇತರೆ 15 ಏಜೆನ್ಸಿಗಳು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ದೂರು ಸಲ್ಲಿಸಿದ್ದರು.
ಇದೇ ದೂರಿನಲ್ಲಿ ಪ್ರಸ್ತಾಪಿಸಿದ 89 ಪ್ಯಾಕೇಜ್‌ಗಳ ಆರ್ಥಿಕ ಬಿಡ್‌ಗಳನ್ನು ಈಗ ತೆರೆದಿತ್ತು. ಈ ಆರ್ಥಿಕ ಬಿಡ್‌ನಲ್ಲಿ ಗುತ್ತಿಗೆದಾರರು ಅಂದಾಜು ಮೊತ್ತಕ್ಕೆ ಶೇ.50ರಿಂದ 60ರಷ್ಟು ಹೆಚ್ಚಾಗಿ ನಮೂದಿಸಿದ್ದರು. ಈ ಕುರಿತು 2024ರ ಜುಲೈ 23ರಂದು ಉಚ್ಛ ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳಿಗೆ ಸರಿಯಾಗಿ ಹೋಲುತ್ತವೆ. ಆದ್ದರಿಂದ ಈ ಕುರಿತು ಖುದ್ದಾಗಿ ಪರಿಶೀಲಿಸಬೇಕು ಎಂದು ದೂರಿನಲ್ಲಿ ಕೋರಿದ್ದರು.
ಇ-ಪ್ರೊಕ್ಯೂರ್‍ಮೆಂಟ್‌ನಲ್ಲಿ ಭಾಗವಹಿಸಿದ ಬಿಡ್‌ದಾರರು ಸಲ್ಲಿಸಿದ್ದ ಬಿಡ್‌ಗಳ ಕಂಪ್ಯೂಟರ್ ಸಿಸ್ಟಂನ ಐಪಿ ಅಡ್ರೆಸ್‌ಗಳ ಮಾಹಿತಿ ಹಾಗೂ ಬಿಡ್‌ದಾರರು ಸಲ್ಲಿಸಿದ ದಿನಾಂಕ ಮತ್ತು ಸಮಯದ ಮಾಹಿತಿ ನೀಡಬೇಕು ಎಂದು ಇ-ಸಂಗ್ರಹಣೆ ಕಚೇರಿಯ ನಿರ್ದೇಶಕರಿಗೆ ಕೋರಲಾಗಿತ್ತು. ಬಳಕೆದಾರರರು ಬಿಡ್ ಸಲ್ಲಿಸಲು ಉಪಯೋಗಿಸಿದ್ದ ಕಂಪ್ಯೂಟರ್ ಸಿಸ್ಟಂನ ಐಪಿ ಅಡ್ರಸ್‌ಗಳ ಮಾಹಿತಿಯು ಇ-ಸಂಗ್ರಹಣೆ ತಂತ್ರಾಂಶದಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದರು.
‘ಪಾಲಿಕೆಯಲ್ಲಿ ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಕೈಗೊಳ್ಳಲು 89 ಪ್ಯಾಕೇಜ್‌ಗಳನ್ನು ಟೆಂಡರ್ ಮುಖೇನ ನಿರ್ವಹಿಸಲಾಗಿದ್ದು ಈ ಟೆಂಡರ್ ನಿರ್ವಹಣೆಗೆ ಮಾಹಿತಿಗಳು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ದೂರಿನ ಕುರಿತಂತೆ 89 ಪ್ಯಾಕೇಜ್‌ಗಳು ಸಲ್ಲಿಸಿರುವ ಬಿಡ್‌ಗಳ ಕುರಿತು ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು,’ ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ಮಂಡಳಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ಮುಖ್ಯ ಅಭಿಯಂತರರು ಕೋರಿರುರುವುದ ಗೊತ್ತಾಗಿದೆ.
3,500 ಟನ್ ಘನತ್ಯಾಜ್ಯ ನಿರ್ವಹಣೆಗೆ ಎಂದು ಟೆಂಡರ್ ಆಹ್ವಾನಿಸಲಾಗಿತ್ತು. ಈ ಸಂಬಂಧ ಆಹ್ವಾನಿಸಿದ್ದ ಟೆಂಡರ್‍ನ ಪ್ರತಿ ಪ್ರಕ್ರಿಯೆಗಳನ್ನು ಹೈಕೋರ್ಟ್ಗೆ ಪ್ರಮಾಣ ಪತ್ರಗಳ್ನನು ಸಲ್ಲಿಸಲಾಗಿತ್ತು.
ಹೊಸ ಪ್ಯಾಕೇಜ್ ಪ್ರಕಾರ ದಾಸರಹಳ್ಳಿ ಯಲಹಂಕ ವಲಯದಲ್ಲಿ 704 ಕೋಟಿ , ಪಶ್ಚಿ,ಮ ರಾಜರಾಜೇಶ್ವರಿ ನಗರ ವಲಯ 847 ಕೋಟಿ, ಪೂರ್ವ ಮಹದೇವಪುರ ವಲಯದ 768 ಕೋಟಿ, ದಕ್ಷಿಣ ಬೊಮ್ಮನಹಳ್ಳಿ ವಲಯ 844 ಕೋಟಿ ಎಂದು ಅಂದಾಜಿಸಿತ್ತು.
ಸಮಗ್ರ ಘನ ತ್ಯಾಜ್ಯ ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಅಂದಾಜು 45 ಸಾವಿರ ಕೋಟಿ ವನ್ನು ವೆಚ್ಚ ಮಾಡಲಿದೆ.2022ರಲ್ಲಿ ಕರೆದಿದ್ದ ಹೊಸ ಪ್ಯಾಕೇಜ್ ಅನಸುಆರ 510 ಕೋಟಿ ಎಂದು ಟೆಂಡರ್ ದಾಖಲಗಳಲ್ಲಿ ನಮೂದಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 3 ವರ್ಷಗಳ ಅವಧಿಯಲ್ಲಿ ಘನತ್ಯಾಜ್ಯ ನಿರ್ವಹಣೆ, ರಸ್ತೆ ನಿರ್ಮಾಣ, ದುರಸ್ತಿ ಸೇರಿದಂತೆ ಇತರೆ ಯೋಜನೆಗಳಲ್ಲಿ ನಡೆದಿದೆ ಎನ್ನಲಾದ ವ್ಯಾಪಕ ಅಕ್ರಮ, ಭ್ರಷ್ಟಾಚಾರ, ಅಧಿಕಾರ ಮತ್ತು ಹಣಕಾಸು ದುರುಪಯೋಗಳ ಕುರಿತು ತನಿಖೆ ನಡೆಸುವ ಸಂಬಂಧ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೊದಲು ಹೊರಡಿಸಿದ್ದ ಟಿಪ್ಪಣಿಯಲ್ಲಿ ಹೆಸರಿಸಿದ್ದ ಖಡಕ್ ಅಧಿಕಾರಿಗಳನ್ನು ಕೈಬಿಟ್ಟಿತ್ತು.
ಐಎಎಸ್ ಅಧಿಕಾರಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ಹರ್ಷ ಗುಪ್ತ, ಮುನೀಶ್ ಮೌದ್ಗಿಲ್, ರಶ್ಮಿ ಮಹೇಶ್ ಮತ್ತು ವಿಶಾಲ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರಿಗೆ ಡಿ ಕೆ ಶಿವಕುಮಾರ್ ಅವರು 2023ರ ಜೂನ್ 19ರಂದು ಟಿಪ್ಪಣಿ ಹೊರಡಿಸಿದ್ದರು.
ಆದರೀಗ ನಗರಾಭಿವೃದ್ಧಿ ಇಲಾಖೆಯು 2023ರ ಆಗಸ್ಟ್ 5ರಂದು ಹೊರಡಿಸಿರುವ ಆದೇಶದಲ್ಲಿ ರಾಜೇಂದರ್ ಕುಮಾರ್ ಕಟಾರಿಯಾ, ಹರ್ಷ ಗುಪ್ತ, ಮುನೀಶ್ ಮೌದ್ಗಿಲ್, ರಶ್ಮಿ ಮಹೇಶ್ ಅವರ ಹೆಸರನ್ನು ಕೈಬಿಡಲಾಗಿದೆ. ಬದಲಿಗೆ ಮೊದಲ ಟಿಪ್ಪಣಿಯಲ್ಲಿದ್ದ ಡಾ ವಿಶಾಲ್ ಅವರ ಹೆಸರು ಮಾತ್ರ ಇದೆ. ರಾಜೇಂದರ್ ಕುಮಾರ್ ಕಟಾರಿಯಾ, ಹರ್ಷ ಗುಪ್ತ, ಮುನೀಶ್, ರಶ್ಮಿ ಮಹೇಶ್ ಅವರ ಹೆಸರನ್ನು ಕೈಬಿಟ್ಟಿರುವುದರ ಹಿಂದೆ ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಒತ್ತಡವಿತ್ತು ಎಂದು ಗೊತ್ತಾಗಿದೆ.
ಕಾಮಗಾರಿಗಳಲ್ಲಿ ಅಕ್ರಮ; ಮೊದಲ ಟಿಪ್ಪಣಿಯಲ್ಲಿದ್ದ ಖಡಕ್ ಅಧಿಕಾರಿಗಳ ಕೈಬಿಟ್ಟು ತನಿಖಾ ಸಮಿತಿ ರಚನೆ
ಡಿ ಕೆ ಶಿವಕುಮಾರ್ ಮೊದಲು ಬರೆದಿದ್ದಾರೆ ಎನ್ನಲಾದ ಟಿಪ್ಪಣಿ ಪ್ರಕಾರ ಘನ ತ್ಯಾಜ್ಯ ನಿರ್ವಹಣೆ ಕಾಮಗಾರಿಗಳ ಬಗ್ಗೆ ತನಿಖಾ ಸಮಿತಿಗೆ ವಿ ರಶ್ಮಿ ಮಹೇಶ್, ಐಎಎಸ್, ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಸೂಚಿಸಲಾಗಿತ್ತು.
ಆದರೆ ಆಗಸ್ಟ್ 5ರಂದು ಹೊರಡಿಸಿರುವ ಆದೇಶದಲ್ಲಿ ಉಜ್ವಲ್ ಕುಮಾರ್ ಘೋಷ್ ಅವರನ್ನುಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಉಳಿದಂತೆ ಸಮಿತಿ ಸದಸ್ಯರ ಪಟ್ಟಿಯಲ್ಲಿ ಕ್ಯಾಪ್ಟನ್ ದೊಡ್ಡಿಹಾಳ್, ಲೋಕೋಪಯೋಗಿ ಇಲಾಖೆಯ ನಿವೃತ್ತ ಚೀಫ್ ಇಂಜಿನಿಯರ್., ಬಸವರಾಜ ಕೋಟಿ, ನಿವೃತ್ತ ಮುಖ್ಯ ಇಂಜಿನಿಯರ್ ಅವರನ್ನು ಉಳಿಸಿಕೊಂಡು ನಿವೃತ್ತ ಮುಖ್ಯ ಇಂಜಿನಿಯರ್ ಬೀಸೇಗೌಡ ಅವರನ್ನು ಕೈಬಿಡಲಾಗಿದೆ. ಅವರ ಜಾಗಕ್ಕೆ ಟಿ ಪ್ರಭಾಕರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.