ಕೆಪಿಎಸ್ಸಿ; ಪ್ರಶ್ನೆಪತ್ರಿಕೆ ಭಾಷಾಂತರಿಸಿದ್ದವರೇ ನೋಡಿರಲಿಲ್ಲ, ಸೋರಿಕೆ ಭೀತಿಯಿಂದ ಅಧಿಕಾರಿಯನ್ನೂ ನಿಯೋಜಿಸಿರಲಿಲ್ಲ

ಬೆಂಗಳೂರು; 384 ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗಾಗಿ ಇತ್ತೀಚಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಭಾಷಾಂತರ ಪ್ರಶ್ನೆಪತ್ರಿಕೆಯನ್ನು ಆಂಗ್ಲ ಪ್ರಶ್ನೆ ಪತ್ರಿಕೆ ತಯಾರಿಸಿದ್ದವರೇ ನೋಡಿರಲಿಲ್ಲ.

 

ಅಷ್ಟೇ ಅಲ್ಲ, ಪ್ರಶ್ನೆ ಪತ್ರಿಕೆ ಸೋರಿಕೆ ಆಗುವ ಭಯದಿಂದ ಯಾವುದೇ ಅಧಿಕಾರಿಯನ್ನೂ ಉಸ್ತುವಾರಿಗಾಗಿ ನೇಮಿಸಿರಲೇ ಇಲ್ಲ.

 

384 ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗಾಗಿ ನಡೆಸಿದ್ದ ಪ್ರಶ್ನೆಪತ್ರಿಕೆಗಳಲ್ಲಿ ಭಾಷಾಂತರದಲ್ಲೇ ಪ್ರಮಾದಗಳಾಗಿದ್ದವು. ಈ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆ ಮತ್ತು ಅಭ್ಯರ್ಥಿಗಳ ಆಕ್ರೋಶಕ್ಕೆ ಸರ್ಕಾರವು ಗುರಿಯಾಗಿತ್ತು. ಇದರ ಬೆನ್ನಲ್ಲೇ ಪ್ರಶ್ನೆ ಪತ್ರಿಕೆಗಳ ಭಾಷಾಂತರ ಮತ್ತು ಇದರ ಉಸ್ತುವಾರಿಗಾಗಿ ಅಧಿಕಾರಿಯನ್ನೇ ನೇಮಿಸಿರಲಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು 2024ರ ಸೆ.2ರಂದು ಕೆಪಿಎಸ್‌ಸಿಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

ರಾಜ್ಯದ ಕೆಪಿಎಸ್‌ಸಿ ನಡೆಸುವ ಪರೀಕ್ಷೆಯಲ್ಲಿ ಕನ್ನಡ ಭಾಷಾಂತರ ಸರಿಯಾಗಿ ಆಗದಿರುವುದು ಅತ್ಯಂತ ವಿಷಾದನೀಯ ಸಂಗತಿ. ಈ ಬಗ್ಗೆ ಆಯೋಗದ ಕಾರ್ಯದರ್ಶಿಯವರನ್ನು ವಿಚಾರಿಸಲಾಗಿತ್ತು. ಭಾಷಾಂತರ ಇಲಾಖೆಯಿಂದ ಕೆಲವು ಭಾಷಾಂತರಕಾರರ ಸೇವೆಯನ್ನು ಪಡೆಯಲಾಗುತ್ತಿದೆ ಮತ್ತು ಕೆಲವು ಕನ್ನಡ ಪರಿಣಿತರಿಗೆ ಭಾಷಾಂತರ ಕೆಲಸವನ್ನು ವಹಿಸಲಾಗುತ್ತಿದೆ ಎಂದು ತಿಳಿಸಿದ್ದರು.

 

 

‘ಆದರೆ ಈಗಾಗಲೇ ಮಾಡಿರುವ ಭಾಷಾಂತರ ಪ್ರಶ್ನೆ ಪತ್ರಿಕೆಯನ್ನು ಸಂಬಂಧಪಟ್ಟ ಆಂಗ್ಲ ಪ್ರಶ್ನೆ ಪತ್ರಿಕೆಯನ್ನು ತಯಾರಿಸಿರುವವರು ನೋಡದೇ ಇರುವುದರಿಂದ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಆಗುವ ಭಯದಿಂದ ಯಾವುದೇ ಅಧಿಕಾರಿಯನ್ನು ಉಸ್ತುವಾರಿಗಾಗಿ ನೇಮಿಸದಿರುವುದರಿಂದ ನೇರವಾಗಿ ಈ ಜವಾಬ್ದಾರಿ ಕಂಟ್ರೋಲರ್‍‌ ಆಫ್‌ ಎಕ್ಸಾಮಿನೇಷನ್ಸ್‌ ಅವರ ಮೇಲೆ ಬರುತ್ತದೆ,’ ಎಂದು ಶಾಲಿನಿ ರಜನೀಶ್‌ ಅವರು ಪತ್ರದಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಮುಖ್ಯಮಂತ್ರಿಗಳ ಆದೇಶದಂತೆ ತಪ್ಪಿತಸ್ಥರ ಬಗ್ಗೆ ವರದಿ ನೀಡಬೇಕು. ಅದರಂತೆ ಅವರ ಬದಲಾಗಿ ಬೇರೆ ವ್ಯವಸ್ಥೆಯನ್ನು ಸಿಆಸುಇ ಇಲಾಖೆಯಿಂದ ಮಾಡಲಾಗುವುದು. ಅಲ್ಲದೇ ಮುಂದಿನ ಎರಡು ತಿಂಗಳಲ್ಲಿ ಭಾನುವಾರದಂದು ಕೆಪಿಎಸ್‌ಸಿ ಮರು ಪರೀಕ್ಷೆ ನಡೆಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ. ಈ ಬಗ್ಗೆ ಅನುಪಾಲನಾ ವರದಿ ನೀಡಬೇಕು ಎಂದೂ ಶಾಲಿನಿ ರಜನೀಶ್‌ ಅವರು ಪತ್ರದಲ್ಲಿ ನಿರ್ದೇಶಿಸಿರುವುದು ತಿಳಿದು ಬಂದಿದೆ.

 

ಈ ಲೋಪಗಳಿಗೆ ಕಾರಣರಾದವರನ್ನು ಕರ್ತವ್ಯದಿಂದ ಮುಕ್ತಗೊಳಿಸಲಾಗಿದೆ. ಮುಂಬರುವ ಪರೀಕ್ಷೆಯನ್ನು ಅತ್ಯಂತ ಜವಾಬ್ದಾರಿ ಮತ್ತು ಹೊಣೆಗಾರಿಕೆಯೊಂದಿಗೆ ನಡೆಸಲಾಗುವುದು. ನೇಮಕಾತಿ ಪ್ರಕ್ರಿಯೆಗಳ ಸಮಗ್ರತೆಯನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

 

ಕೆಎಎಸ್ ಪ್ರಶ್ನೆ ಪತ್ರಿಕೆ ಕನ್ನಡಕ್ಕೆ ಅನುವಾದ ಮಾಡುವಾಗ ಆಗಿರುವ ಎಡವಟ್ಟುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆಗಳಲ್ಲಿನ ತಪ್ಪುಗಳನ್ನು ಉಲ್ಲೇಖಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಮಾಡಿ ಕೆಪಿಎಸ್ ಸಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.

 

ಪತ್ರಿಕೆ -1ರಲ್ಲಿ ‘ಕೆಳಗಿನ ಯಾವ ಘಟ್ಟಗಳು ಮಧ್ಯ, ಹಿಮಾಲಯ/ಕೆಳ ಹಿಮಾಲಯಗಳಲ್ಲಿವೆ?’ ಎಂಬ ಪ್ರಶ್ನೆಗೆ 5 ಉತ್ತರಗಳನ್ನು ನೀಡಲಾಗಿದೆ. ಕನ್ನಡ ಮುದ್ರಣದಲ್ಲಿ ಆಯ್ಕೆ ಸಂಖ್ಯೆ 3ರಲ್ಲಿ ‘4 ಹೇಳಿಕೆಗಳು ಸರಿ ಇವೆ’ ಎಂದು ಇದೆ. ಇಂಗ್ಲೀಷ್‌ನಲ್ಲಿ ‘Only 3 statements are correct’ ಎಂದು ಗೊಂದಲ ಮೂಡಿಸಿದೆ ಎಂಬ ಆರೋಪ ಕೇಳಿ ಬಂದಿತ್ತು.

 

 

ಹೇಳಿಕೆಗಳನ್ನು ಪರಿಗಣಿಸಿ ಸರಿ ಉತ್ತರ ನೀಡಬೇಕಿರುವ ಪ್ರಶ್ನೆಯೊಂದರಲ್ಲಿ, Triennial (ಮೂರು ವರ್ಷಗಳಿಗೊಮ್ಮೆ) ಎಂಬುದನ್ನು, ಕನ್ನಡದಲ್ಲಿ ಅನುವಾದದಲ್ಲಿ ‘ತ್ರೈಮಾಸಿಕ’ ಎಂದು ಗೊಂದಲ ಮೂಡಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಸರಕುಗಳ ರಫ್ತು ಪ್ರಮಾಣ ‘ದ್ವಿಗುಣಗೊಂಡಿದೆ’ (doubled) ಎಂದು ಬರೆಯುವ ಬದಲು, ‘ಎರಡರಷ್ಟಕ್ಕಿಂತ ಹೆಚ್ಚಾಗಿದೆ’ ಎಂದು ಮುದ್ರಿಸಿತ್ತು.

 

 

ಪ್ರಶ್ನೆಯೊಂದರಲ್ಲಿ, ವಿತ್ತೀಯ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್‌ಆರ್‌ಬಿಎಂ) ಕಾಯ್ದೆ ಜಾರಿಗೊಳಿಸಿದ ನಂತರ ಎರಡು ಬಾರಿ ಮಾತ್ರ ಸರ್ಕಾರ ಗುರಿಗಳನ್ನು ಸಾಧಿಸಿದೆ ಎಂದು ಬರೆಯುವ ಬದಲು, ‘ಎಂಆರ್‌ಬಿಎಂ ಅಧಿನಿಯಮದ ಅಧಿನಿಯಮಿತಿಯ ನಂತರ, ಸರ್ಕಾರವು ಇಂದಿನವರೆಗೆ ಎರಡು ಬಾರಿ ಮಾತ್ರ ಗುರಿಗಳನ್ನು ಸಾಧಿಸಲಾಗಿದೆ’ ಎಂದು ಮುದ್ರಿಸಲಾಗಿತ್ತು.

 

 

ಪ್ರಶ್ನೆ ಪತ್ರಿಕೆಯ ಮುಖಪುಟದಲ್ಲಿ ಪ್ರಶ್ನೆಪುಸ್ತಕವನ್ನು ‘ಪ್ರಶ್ನೆಪುಸ್ತಿಕೆ’ ಎಂದು ಬರೆಯಲಾಗಿದೆ. ವಿವರಣಾತ್ಮಕ ಪ್ರಶ್ನೆಯೊಂದರಲ್ಲಿ ನಿರ್ದೇಶನವನ್ನು ‘ನಿರ್ದೇಷನ’ ಎಂದು ಬರೆಯಲಾಗಿದೆ. ಅಸಲಿಗೆ ಇಂಗ್ಲೀಷಿನಲ್ಲಿ Directions ಎಂದು ಇದೆ. ಅದಕ್ಕೆ ಕನ್ನಡದಲ್ಲಿ ಸೂಚನೆಗಳು ಎಂದು ಬರೆಯುವುದು ಅರ್ಥಪೂರ್ಣ ಎನಿಸುತ್ತಿತ್ತು.

 

ಆರ್‌ಟಿಇ ಕಾಯ್ದೆಯ ತಿದ್ದುಪಡಿ ಬಳಿಕ, ವಾರ್ಡ್ ವ್ಯಾಪ್ತಿಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಇದ್ದರೆ ಖಾಸಗಿ ಶಾಲೆಗಳನ್ನು ‘ನೆರೆಹೊರೆಯ ಶಾಲೆಗಳು’ ಎಂದು ಪರಿಗಣಿಸುವುದನ್ನು ಕೈಬಿಡಲಾಗಿದೆ, ಎಂದು ಬರೆಯುವ ಬದಲು, ‘ಯಾವುದೇ ವಾರ್ಡಿನ ಮಿತಿಗಳೊಳಗೆ ಸರ್ಕಾರ ಅಥವಾ ಸರ್ಕಾರಿ ಅನುದಾನಿತ ಶಾಲೆಯಿದ್ದು ನೆರೆಹೊರೆಯ ಶಾಲೆಗಳು ಎಂಬುದಾಗಿ ಮಾನ್ಯತೆ ಪಡೆದುಕೊಳ್ಳುವ ಖಾಸಗಿ ಶಾಲೆಗಳನ್ನು ಸ್ಥಳಾಂತರಿಸಲು ಆರ್‌ಟಿಇ ಅಧಿನಿಯಮದ ತಿದ್ದುಪಡಿಯನ್ನು ಮಾಡಲಾಗಿದೆ’ ಎಂದು ಅಸಂಬದ್ಧವಾಗಿ ಬರೆಯಲಾಗಿತ್ತು.

 

ನದಿಗಳು, ಕಣಿವೆಗಳು, ನದಿ ಹರಿಯುವ ಮಾರ್ಗ, ಕಣಿವೆಗಳ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಹೊಂದಿಸಿ ಬರೆಯಿರಿ ಪ್ರಶ್ನೆಯೊಂದರ ಕನ್ನಡ ಅನುವಾದ ಅರ್ಥಪೂರ್ಣವಾಗಿಲ್ಲ. ಇಂಗ್ಲೀಷ್‌ನಲ್ಲಿ ಓದಿ ಅರ್ಥೈಸಿಕೊಳ್ಳಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳು ಇದೇ ರೀತಿ ಇವೆ. ಎರಡೂ ಪ್ರಶ್ನೆ ಓದುವುದರಿಂದ ಅಭ್ಯರ್ಥಿಗಳ ಸಮಯ ವ್ಯರ್ಥವಾಗುತ್ತದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts