ಬೆಂಗಳೂರು; ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಶೇ. 4ರಷ್ಟು ಮೀಸಲಾತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವ ದಾಖಲೆ ಬಹಿರಂಗವಾಗಿದ್ದರೂ ಸಹ ಇದೊಂದು ಹೊಸ ಸುಳ್ಳು ಎಂದು ಮುಖ್ಯಮಂತ್ರಿ ಸಚಿವಾಲಯದ ಹೆಸರಿನಲ್ಲಿ ಸಿಎಂ ಮೀಡಿಯಾ ಗ್ರೂಪ್ 1 ಸ್ಪಷ್ಟನೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಶೇ.4ರಷ್ಟು ಮೀಸಲಾತಿ ನೀಡುವ ಸಂಬಂಧ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದಾರೆ ಎಂದು ಕಡತದ ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖವಾಗಿದೆ. ಆದರೂ ಮುಖ್ಯಮಂತ್ರಿ ಸಚಿವಾಲಯದ ಹೆಸರಿನಲ್ಲಿ ಸಿಎಂ ಮೀಡಿಯಾ ಗ್ರೂಪ್ 1 ನಲ್ಲಿ ನೀಡಿರುವ ಸ್ಪಷ್ಟನೆಯನ್ನು ಪ್ರತಿಪಕ್ಷ ಆರ್ ಅಶೋಕ್ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದಾರೆ.
ಅಲ್ಲದೇ ಎಡವಟ್ಟು ಮಾಡೋದು, ಆಮೇಲೆ ಸುಳ್ಳು ಹೇಳೋದು… ಇದೇ ಸಿಎಂ ಸಿದ್ದರಾಮಯ್ಯನವರ ದಿನಚರಿ ಎಂದು ಲೇವಡಿ ಮಾಡಿರುವ ಆರ್ ಅಶೋಕ್ ಅವರು ‘ದಿ ಫೈಲ್’ ವರದಿಯಲ್ಲಿರುವ ಟಿಪ್ಪಣಿ ಹಾಳೆಯನ್ನೂ ಟ್ವೀಟ್ ಮಾಡಿದ್ದಾರೆ.
ಸಿಎಂ ಮೀಡಿಯಾ ಗ್ರೂಪ್ 1 ನಲ್ಲಿ ಹಂಚಿಕೆಯಾಗಿದ್ದೇನು?
ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಗಿರೀಶ್ ಕೋಟೆ ಸಿದ್ದರಾಮಯ್ಯ ಎಂಬ ಹೆಸರಿನವರು ಈ ಪೋಸ್ಟ್‌ನ್ನು ಹಂಚಿಕೆ ಮಾಡಿದ್ದಾರೆ.
ಇದನ್ನಾಧರಿಸಿ ಮತ್ತೊಂದು ವೆಬ್‌ಸೈಟ್ ಕೂಡ ವರದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಪಕ್ಷ ಆರ್ ಅಶೋಕ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಆರ್ ಅಶೋಕ್ ಟ್ವೀಟ್‌ನಲ್ಲೇನಿದೆ?
ಎಡವಟ್ಟು ಮಾಡೋದು, ಆಮೇಲೆ ಸುಳ್ಳು ಹೇಳೋದು, ಇದೇ ಸಿಎಂ ಸಿದ್ದರಾಮಯ್ಯನವರ ದಿನಚರಿ! ಸ್ವಾಮಿ ಮುಖ್ಯಮಂತ್ರಿಗಳೇ, ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳುತ್ತೀರಲ್ಲಾ, ತಮ್ಮ ಭಂಡತನಕ್ಕೆ ಏನು ಹೇಳೋಣ ಎಂದು ಪ್ರಶ್ನಿಸಿದ್ದಾರೆ.
ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಕೊಡಬೇಕು ಎಂದು ತಮ್ಮ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಶಾಸಕರು ಆಗಸ್ಟ್ 24, 2024 ರಂದು ತಮಗೆ ಪತ್ರ ಬರೆಯುತ್ತಾರೆ. ತಾವು ಅದೇ ದಿನವೇ ಈ ಪತ್ರವನ್ನ ಪರಿಶೀಲಿಸಿ ಮಂಡಿಸಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದೀರಿ. ಈ ಸಂಬಂಧ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲೂ ಸಹ ತಾವು ಅನುಮೋದನೆ ನೀಡಿದ್ದೀರಿ. ಇಷ್ಟೆಲ್ಲಾ ಪತ್ರ ವ್ಯವಹಾರ ನಡೆದಿದ್ದರೂ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಹಸಿ ಸುಳ್ಳು ಹೇಳುತ್ತಿರಲ್ಲ ಎಂದು ಟೀಕಿಸಿದ್ದಾರೆ.
‘ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ, ನೈತಿಕತೆ ಅನ್ನುವುದೇ ಇಲ್ಲವೇ? ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿ, ಬಾಯಿ ಬಿಟ್ಟರೆ ಬರಿ ಸುಳ್ಳು ಹೇಳುವ ತಮ್ಮನ್ನ ಆ ತಾಯಿ ಚಾಮುಂಡೇಶ್ವರಿ ಮೆಚ್ಚುತ್ತಾಳಾ? ತಮ್ಮನ್ನ ನಂಬಿ ಮತ ಹಾಕಿ ಅಧಿಕಾರ ಕೊಟ್ಟ ಕನ್ನಡಿಗರು ಕ್ಷಮಿಸುತ್ತಾರಾ,’ ಎಂದೂ ಆರ್ ಅಶೋಕ್ ಅವರು ಪ್ರಶ್ನಿಸಿರುವುದು ಟ್ವೀಟ್‌ನಿಂದ ಗೊತ್ತಾಗಿದೆ.
ಇದರ ಜತೆಗೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೂ ಸಹ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಶೇ. 4ಷ್ಟು ಮೀಸಲಾತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (2ನೇ ತಿದ್ದುಪಡಿ) ಕಾಯ್ದೆಗೆ ತಿದ್ದುಪಡಿ ತರಲು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಗೆ ಸೂಚನೆ ನೀಡಿತ್ತು.
ಅಷ್ಟೇ ಅಲ್ಲದೇ ಈ ಕುರಿತು ಸರಣಿ ಟ್ವೀಟ್‌ಗಳನ್ನೂ ಮಾಡಿದ್ದಾರೆ.
ಮುಖ್ಯ ಮಂತ್ರಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಾಗಲಿ ಅಥವಾ ಅವರ ವಯುಕ್ತಿಕ ಟ್ವಿಟ್ಟರ್ ಖಾತೆಯಲ್ಲಾಗಲಿ ಇದರ ಕುರಿತು ಯಾವುದೇ ಸ್ಪಷ್ಟೀಕರಣ ಇಲ್ಲ. ಸರಿಯಾದ ಮಾಹಿತಿಯನ್ನು ಆಧರಿಸಿ ಮಾಧ್ಯಮಗಳು ವರದಿ ಮಾಡಿ ಸರ್ಕಾರದ ದ್ವಂದ್ವ ನೀತಿಗಳನ್ನು, ಅಪಸವ್ಯಗಳನ್ನು, ಆಡಳಿತಾತ್ಮಕ ನಿರ್ಧಾರಗಳನ್ನು ಟೀಕಿಸುವ ಮಾಧ್ಯಮಗಳನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದ್ದಾರೆ.
ಈ ಹಿಂದೆ ದಸರೆಯ ಸಂದರ್ಭದಲ್ಲಿ ಶಾಸ್ತ್ರೀಯ ಸಂಗೀತಗಾರರು ಹಾಗೂ ಸರೋದ್ ಮಾಂತ್ರಿಕ ದಿವಂಗತ ಪಂಡಿತ್ ತಾರಾನಾಥರಿಗೆ ಬರಬೇಕಾದ ಸಂಭಾವನೆಯಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪರ್ಸಂಟೇಜ್ ಕೇಳಿದ್ದರು ಎಂದು ವರದಿ ಮಾಡಿದ್ದ ಮಾಧ್ಯಮಗಳ ಸುದ್ದಿಯನ್ನು ಸರ್ಕಾರ ಸುಳ್ಳೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಜಾಪ್ರಭುತ್ವದ ಕಾವಲು ನಾಯಿ ಆಗಿರುವ ಮಾಧ್ಯಮಗಳನ್ನು ಹತ್ತಿಕುವ ಮೂಲಕ ಸರ್ಕಾರ ಹಾಗೂ ಕಚೇರಿ ಸಾರ್ವಜನಿಕರ ಹಾಗೂ ಮಾಧ್ಯಮಗಳ ಹಕ್ಕುಗಳನ್ನು ನಿಗ್ರಹಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಮತದಾರರಿಗೆ ಉತ್ತರದಾಯಿಗಳಾಗಬೇಕಾಗಿದ್ದ ಸರ್ಕಾರವು ‘ಆನೆ ನಡೆದಿದ್ದೇ ಹಾದಿ’ ಎಂಬಂತೆ ವರ್ತಿಸುತ್ತಿರುವುದು ನಿಜಕ್ಕೂ ಖಂಡನೀಯ. ಮುಖ್ಯ ಮಂತ್ರಿಗಳ ಕಚೇರಿ ಈ ಕುರಿತು ಕೂಡಲೇ ಸ್ಪಷ್ಟೀಕರಣ ನೀಡಬೇಕು ಹಾಗೂ ಪ್ರಸ್ತಾವನೆ ಇಲ್ಲ ಎಂದು ಸುಳ್ಳು ಮಾಹಿತಿ ನೀಡಿದವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ನೈಜ ಮಾಹಿತಿಯನ್ನು ತಿರುಚುವ ಕೆಲಸದಲ್ಲಿ ‘ಸಿದ್ದ’ ಹಸ್ತರಾಗಿರುವರು ಯಾರು ಎಂದು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ fact check unit ಗೆ ಈ ಬಗ್ಗೆ ಮಾಹಿತಿ ಇಲ್ಲವೇ, ಇದರ ಉಸ್ತುವಾರಿ ಹಾಗೂ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇದರ ಬಗ್ಗೆ ಮಾಹಿತಿ ಇಲ್ಲವೇ, ತಮ್ಮ ಫ್ಯಾಕ್ಟ್ ಚೆಕ್ ಯೂನಿಟ್ ಮುಖ್ಯ ಮಂತ್ರಿಗಳ ಮಾಧ್ಯಮ ಗುಂಪಿನಿಂದಲೇ ಸೋರಿಕೆಯಾದ ಈ ಸುದ್ದಿಯ ಬಗ್ಗೆ ಅರಿವಿಲ್ಲವೇ, ಮುಖ್ಯ ಮಂತ್ರಿಗಳ ಕಚೇರಿ ನಿಯಂತ್ರಣವಿಲ್ಲದ ಕುರಿ ದೊಡ್ಡಿಯಾಗಿರುವುದಕ್ಕೆ ಈ ಘಟನೆಗಿಂತಾ ಬೇರೆ ಸಾಕ್ಷಿ ಬೇಕಾಗಿಲ್ಲ ಎಂದೂ ಹೇಳಿದ್ದಾರೆ.
ಹಿರಿಯ ಐ.ಎ.ಎಸ್ ಅಧಿಕಾರಿಗಳು ನೀಡಬೇಕಾಗಿರುವ ಸ್ಪಷ್ಟೀಕರಣವನ್ನು ಯಾವುದೊ ವಾಟ್ಸ್ ಆಪ್ ಗುಂಪಿನಲ್ಲಿ ನೌಕರನೊಬ್ಬ ಕೊಡುತ್ತಾನೆ. ಆಡಳಿತಾತ್ಮಕ ವೈಫಲ್ಯ ಯಾವ ಮಟ್ಟಿಗೆ ಆಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂದಿದ್ದಾರೆ.
ಗುತ್ತಿಗೆ ಕಾಮಗಾರಿಗಳಲ್ಲಿ 2 ಕೋಟಿ ವರೆಗೆ ಎಸ್‌ಸಿ ಮತ್ತು ಎಸ್ ಟಿ ಜನಾಂಗಕ್ಕೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿದ್ದರು. ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ; ಮುಖ್ಯಮಂತ್ರಿ ಅನುಮೋದನೆ, ಕಾಯ್ದೆ ತಿದ್ದುಪಡಿಗೆ ಚಾಲನೆ
‘ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯದ ಪ್ರವರ್ಗ 2 ಬಿ ಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸಿಲ್ಲ. ಈ ಸೌಲಭ್ಯವನ್ನು ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಿ ಸೂಕ್ತ ಆದೇಶ ನೀಡಬೇಕು,’ ಎಂದು ಮನವಿಯಲ್ಲಿ ಕೋರಿದ್ದರು.
ಈ ಪತ್ರವನ್ನು ಪರಿಶೀಲಿಸಿ ಮಂಡಿಸಿ ಎಂದು ಅದೇ ದಿನದಂದು ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಈ ಪತ್ರದ ಕುರಿತು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ
ಈ ಸಂಬಂಧ ಕೆಟಿಪಿಪಿ ಕಾಯ್ದೆಯ 1999ರ 6ನೇಪ್ರಕರಣಕ್ಕೆ ತಿದ್ದುಪಡಿ ಮಾಡಲಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘ಟೆಂಡರ್ ಆಹ್ವಾನಿಸುವ ಪ್ರಾಧಿಕಾರವು ಅಧಿಸೂಚಿತ ಇಲಾಖೆಗಳಿಂದ ನಿಯಮಿಸಿದ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಕೈಗೊಳ್ಳಬೇಕಾದ ಅಗತ್ಯ ನೋಟೀಸ್, ಪತ್ರ ವ್ಯವಹಾರಗಳು ಮತ್ತು ಪ್ರಕಟಣೆಗಳನ್ನು ಹೊರಡಿಸುವಾಗ ನಿರ್ಮಾಣ ಕಾಮಗಾರಿಗಳ ಮೌಲ್ಯ ಒಂದು ಕೋಟಿ ರು.ಗಳಿಗೆ ಮೀರದ ಅಂಥ ಕಾಮಗಾರಿಗಳ ಸಂಖ್ಯೆಯ ಶೇ.4ರಷ್ಟನ್ನು ಮೀರದಂತೆ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ರಲ್ಲಿ ನಿರ್ದಿಷ್ಟಪಡಿಸಿದ ಅಲ್ಪಸಂಖ್ಯಾತರ ಜಾತಿಗಳಿಗೆ ಸೇರಿದ ಟೆಂಡರ್‍ದಾರರುಗಳಿಗೆ ನೀಡಬೇಕು. ಅಲ್ಲದೇ ಎರಡು ಬಾರಿಗಳಲ್ಲಿ ಆಹ್ವಾನಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಸೇರಿದ ವ್ಯಕ್ತಿಗಳಿಂದ ಟೆಂಡರ್ ಸ್ವೀಕರಿಸದಿದ್ದಲ್ಲಿ ಅಂಥ ಕಾಮಗಾರಿಗಳನ್ನು ಇತರರಿಗೆ ಟೆಂಡರ್ ನೀಡಬಹುದು,’ ಎಂದು 6ನೇ ಪ್ರಕರಣದಲ್ಲಿ ತಿದ್ದುಪಡಿ ತರಲಿರುವುದು ಗೊತ್ತಾಗಿದೆ.
ಎಸ್‌ಸಿ ಮತ್ತು ಎಸ್ ಟಿ ಜನಾಂಗಕ್ಕೆ ಗುತ್ತಿಗೆ ಕಾಮಗಾರಿಗಳಲ್ಲಿ 50 ಲಕ್ಷದವರೆಗೆ ಗುತ್ತಿಗೆ ಮೀಸಲಾತಿಯನ್ನು ಕಾಂಗ್ರೆಸ್ ಸರ್ಕಾರವು 2016ರಲ್ಲೇ ಕಲ್ಪಿಸಿತ್ತು. ಇದಾದ ನಂತರ ಇದನ್ನು 1 ಕೋಟಿಗೆ ಹೆಚ್ಚಳ ಮಾಡಲಾಗಿತ್ತು.
50 ಲಕ್ಷದಿಂದವರೆಗಿನ ಟೆಂಡರ್ ಮೀಸಲಾತಿಯನ್ನು 1 ಕೋಟಿವರೆಗೆ ವಿಸ್ತರಿಸುವ ಪ್ರಸ್ತಾವನೆಯು ಬಿಜೆಪಿ ಸರಕಾರದ ಮುಂದಿರಲಿಲ್ಲ. ತಾಂತ್ರಿಕವಾಗಿ ಅರ್ಹಗೊಂಡು ಅತಿಕಡಿಮೆ ದರಗಳನ್ನು ನಮೂದಿಸಿದ ಗುತ್ತಿಗೆದಾರರಿಂದ ದರಪಟ್ಟಿ ದರಗಳಿಗಿಂತ ಕಡಿಮೆಯಿರುವ ಮೊತ್ತಕ್ಕೆ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಪಡೆದುಕೊಂಡು ಗುತ್ತಿಗೆ ಕರಾರನ್ನು ಮಾಡಿಕೊಳ್ಳಲಾಗುತ್ತದೆ.
ಈ ಗುತ್ತಿಗೆದಾರರು ವಿಶಿಷ್ಟ ವಿವರಣೆಯ ಹಾಗೂ ಗುತ್ತಿಗೆ ಕರಾರಿನ ನಿಯಮಾವಳಿಯಂತೆ ಗುಣಮಟ್ಟದ ಕಾಮಗಾರಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ಹೆಚ್ಚುವರಿ ಸೆಕ್ಯೂರಿಟಿ ಡೆಪಾಸಿಟ್ ಮೊತ್ತವನ್ನು ಗುತ್ತಿಗೆದಾರರಿಗೆ ಹಿಂತಿರುಗಿಸಲಾಗುತ್ತಿದೆ.